ಬಿಡದ ಮಳೆ ಏರುತ್ತಲೇ ಇದೆ ಸೊಪ್ಪು-ತರಕಾರಿ ಬೆಲೆ

ತುಮಕೂರು:

                   ಕ್ಯಾರೆಟ್, ಬೀಟ್ರೂಟ್, ಸೇಬು ದುಬಾರಿ : ಇಳಿದ ಅಡುಗೆ ಎಣ್ಣೆ, ಡ್ರೈಫ್ರೂಟ್ಸ್ ದರ

ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಬರುತ್ತಿರುವ ಮಳೆಯು ಈಗಾಗಲೇ ದುಬಾರಿಯಾಗಿದ್ದ ಸೊಪ್ಪು-ತರಕಾರಿಗಳ ಬೆಲೆ ಮೇಲೆ ಮತ್ತಷ್ಟು ಕರಿನೆರಳು ಬೀರಿದ್ದು ಸೊಪ್ಪು-ತರಕಾರಿಗಳ ಬೆಲೆ ಗಗನ ಮುಟ್ಟಿದೆ. ಸದ್ಯ ಯಾವುದೇ ಹಬ್ಬಗಳಿಲ್ಲದ ಕಾರಣ ಹೂವಿಗೆ ಬೇಡಿಕೆ ತಗ್ಗಿದ್ದು, ದರ ಕುಸಿತ ಕಂಡಿದೆ. ಕೋಳಿ ಮಾಂಸ, ಮೊಟ್ಟೆ, ಮಟನ್, ಮೀನಿನ ದರ ಯಥಾಸ್ಥಿತಿ ಮುಂದುವರಿದಿದೆ. ಖಾದ್ಯ ತೈಲದ ಬೆಲೆ ಕೊಂಚ ಇಳಿದಿದೆ. ಕೆಲವು ಹಣ್ಣುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಹಣ್ಣುಗಳು ದುಬಾರಿ ಬೆಲೆಯಲ್ಲೆ ಮಾರಟವಾಗುತ್ತಿವೆ.

 

ಏರುತ್ತಲೇ ಇದೆ ನುಗ್ಗೆಕಾಯಿ ಬೆಲೆ :

ಮದುವೆ ಸೀಸನ್‍ನಿಂದಾಗಿ ಬೇಡಿಕೆ ಹೆಚ್ಚಿ, ಕಳೆದ ವಾರದಿಂದಲೇ ಬೆಲೆ ಏರಿ ಕೆಜಿ 200 ರೂ ನಂತೆ ಮಾರಾಟವಾಗುತ್ತಿದ್ದ ನುಗ್ಗೆಕಾಯಿ ಬೆಲೆ ಈ ವಾರ ಕೆಜಿಗೆ ಮತ್ತೆ 50 ರೂ ಏರಿ 250 ರೂ ನಂತೆ ಮಾರಾಟವಾಗುತ್ತಿದೆ. ಕಳೆದವಾರ 50-60 ರೂ ಇದ್ದ ನವಿಲುಕೋಸು ದುಪ್ಪಟ್ಟಾಗಿದ್ದು 100-120 ರೂ ಗೆ ಏರಿಕೆಯಾಗಿದೆ. ಕ್ಯಾಪ್ಸಿಕಂ, ಕ್ಯಾರೆಟ್ ಬೆಲೆಗಳು ಕೆಜಿ 100 ರೂ.ಗೆ ಏರಿವೆ. ಕಳೆದ ವಾರ ಕೊಂಚ ಕಡಿಮೆಯಾಗಿದ್ದ ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ಈ ವಾರ 120 ರೂ ಗೆ ಏರಿಕೆಯಾಗಿದೆ. ಮಿಕ್ಕಂತೆ ಇತರೆ ಸೊಪ್ಪಿನ ಬೆಲೆಗಳು 80-100 ರೂ ನಂತೆ ಮಾರಾಟವಾಗುತ್ತಿದ್ದು ಬೆಲೆಗಳು ಇಳಿದಿಲ್ಲ. ಏರಿಕೆಯಾಗಿದ್ದ ಟೊಮ್ಯಾಟೊ, ಈರುಳ್ಳಿ, ಬೀನ್ಸ್ ಬೆಲೆಗಳು ಈ ವಾರವೂ ಇಳಿದಿಲ್ಲ. ಟೊಮ್ಯಾಟೊ 40-60 ರೂ, ಈರುಳ್ಳಿ-40-50, ಬೀನ್ಸ್-50-60 ರೂ ನಂತೆ ಮಾರಾಟವಾಗುತ್ತಿವೆ.

ಕಿತ್ತಳೆ ಅಗ್ಗ, ಸೇಬು ದುಬಾರಿ :

ಇದು ಚಳಿಗಾಲದ ಕಿತ್ತಳೆ ಹಣ್ಣಿನ ಋತುಮಾನವಾಗಿದ್ದು, ಕೆಜಿ 30-40 ರೂ.ಗೆ ಕಿತ್ತಳೆಹಣ್ಣು ದೊರೆಯುತ್ತಿದೆ. ದುಬಾರಿಯಾಗಿದ್ದ ಏಲಕ್ಕಿ ಬಾಳೆಹಣ್ಣಿನ ದರ ಈ ವಾರವೂ ಇಳಿಯದೇ ಎಂದಿನಂತೆ ಕೆಜಿ 50-60 ರೂ ನಂತೆ ಮಾರಾಟವಾಗುತ್ತಿದೆ. ಕಳೆದವಾರ ಕಲ್ಲಂಗಡಿ ಕೆಜಿ 30 ರೂ, ಕರಬೂಜ 60 ಗೆ ದಿಢೀರನೆ ಏರಿಕೆಯಾಗಿದ್ದು ಈ ವಾರವೂ ದರ ಇಳಿಯದೇ ಹಳೆ ಬೆಲೆಯಲ್ಲೆ ಮಾರಾಟವಾಗುತ್ತಿವೆ. ಸೇಬಿನ ಬೆಲೆ ಕೆಜಿಗೆ 20 ರೂ ಹೆಚ್ಚಾಗಿದ್ದು ಕೆಜಿ 120-160 ರೂ ನಂತೆ ಮಾರಾಟವಾಗುತ್ತಿದೆ. ಸೇಬಿನ ಸೀಸನ್ ಇಲ್ಲದೇ ಇರುವುದು ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್. ಮಿಕ್ಕಂತೆ ಇತರೆ ಹಣ್ಣುಗಳ ಬೆಲೆಗಳು ಕಳೆದ ವಾರದ ದರದಲ್ಲೆ ಮಾರಾಟವಾಗುತ್ತಿವೆ.

ಇಳಿಕೆಯತ್ತ ಅಡುಗೆ ಎಣ್ಣೆ :

ಖಾದ್ಯ ತೈಲದ ಬೆಲೆ ಇಳಿಕೆಯತ್ತ ಸಾಗಿದೆ. ಸೂರ್ಯಕಾಂತಿ ಎಣ್ಣೆ ಕೆಜಿ-140 ರೂ, ಶೇಂಗಾ ಎಣ್ಣೆ-140-145 ರೂ, ತಾಳೆಎಣ್ಣೆ-120-125 ರೂ ನಂತೆ ಮಾರಾಟವಾಗುತ್ತಿದೆ. ಬೇಳೆ-ಕಾಳುಗಳ ಧಾರಣೆಯಲ್ಲಿ ಈ ವಾರ ಸಾಕಷ್ಟು ವ್ಯತ್ಯಾಸಗಳೇನೂ ಆಗಿಲ್ಲ. ಒಣಹಣ್ಣುಗಳ ಬೆಲೆಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಬಾದಾಮಿ ಕೆಜಿ 700 ರೂ, ಒಣ ದ್ರಾಕ್ಷಿ 200 ರೂ, ಗೋಡಂಬಿ 700 ರೂ ಗೆ ಇಳಿಕೆಯಾಗಿವೆ.

ಕೋಳಿ ಬೆಲೆ ಯಥಾಸ್ಥಿತಿ :

ಈ ವಾರ ಕೋಳಿ ಮಾಂಸದ ದರದಲ್ಲಿ ಯಾವುದೇ ವ್ಯತ್ಯಾಸವಾಗದೆ, ಕಳೆದ ವಾರದ ದರದಲ್ಲೆ ಮಾರಾಟವಾಗುತ್ತಿದೆ. ಬ್ರಾಯ್ಲರ್ ಕೋಳಿ ಕೆ.ಜಿ ರೂ 140, ಫಾರಮ್ ಕೋಳಿ 120, ನಾಟಿ ಕೋಳಿ 250-300 ರೂ ನಂತೆ ಮಾರಾಟವಾಗುತ್ತಿದೆ. ಮೀನು ಮತ್ತು ಮಟನ್ ಧಾರಣೆಗಳಲ್ಲೂ ಯಥಾಸ್ಥಿತಿ ಮುಂದುವರಿದಿವೆ. ಮೊಟ್ಟೆ ಧಾರಣೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಸದ್ಯ ಉತ್ತಮ ಮಳೆ ಹಾಗೂ ಹೇಮಾವತಿ ನೀರಿನಿಂದ ಕೆರೆ-ಕಟ್ಟೆಗಳು ತುಂಬುತ್ತಿದ್ದು, ಮುಂದಿನ ದಿನಗಳಲ್ಲಿ ಮೀನು ಅಗ್ಗದ ದರದಲ್ಲಿ ದೊರೆಯುತ್ತದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ವ್ಯಾಪಾರಿ ಕರವೇ ಶ್ರೀನಿವಾಸ್.

 

 

ಪರ್ಯಾಯಕ್ಕೆ ಮುಂದಾದ ಹಳ್ಳಿ ಜನ :

ತರಕಾರಿ, ಹಣ್ಣು, ಸೊಪ್ಪು ಎಲ್ಲಾ ಬೆಲೆಗಳು ಏರಿದ್ದು, ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಳ್ಳಿಯ ಜನರು ಬೆಲೆ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲ ಮಿತವ್ಯಯಕಾರಿ ಪರ್ಯಾಯ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಟೊಮ್ಯಾಟೊ ಬದಲಿಗೆ ಹುಣಸೆಹಣ್ಣು, ಪಲ್ಯಕ್ಕೆ ಕ್ಯಾರೇಟ್, ಬಿಟ್‍ರೂಟ್ ಬದಲು ಪರಂಗಿಕಾಯಿ, ಹಿತ್ತಲು ಹಾಗೂ ಜಮೀನಿನಲ್ಲಿ ಬೆಳೆದ ತುಪ್ಪಿರೆಕಾಯಿ, ಕುಂಬಳಕಾಯಿ, ಪಟ್ಲಿಕಾಯಿಗಳನ್ನು ಬಳಸುತ್ತಿದ್ದಾರೆ. ದುಬಾರಿ ಸೊಪ್ಪುಗಳ ಬದಲಿಗೆ ಹೊಲದ ಸೊಪ್ಪು, ನುಗ್ಗೆಸೊಪ್ಪು, ನುಗ್ಗೆಹೂವು ಬಳಸುತ್ತಿದ್ದು, ಕಾಳುಗಳನ್ನು ಮೊಳಕೆ ಕಟ್ಟಿ ಹಾಗೂ ಹುರಿದು ಸಾಂಬಾರು ತಯಾರಿಸುತ್ತಿದ್ದಾರೆ. ಕೆಲವರು ಊಟಕ್ಕೆ ಮುದ್ದೆ, ಕಾಯಿಬಜ್ಜಿ, ಸಪ್ಪೆಸ್ರು, ಉಪ್ಪೆಸ್ರು, ಮೊಶ್ಶಪ್ಪು, ಹುಳ್ಸೊಪ್ಪು, ಕಿವ್ಶಾಂಬ್ರ, ಮಸ್ಕಾಯಿ ಮಾಡಿಕೊಂಡು ಹುರುಳಿಕಾಳು ಹಪ್ಪಳಕ್ಕೆ ಜೈ ಎಂದು ದಿನ ದೂಡುತ್ತಿದ್ದಾರೆ.

ಹಣ್ಣುಗಳ ಧಾರಣೆ
(ಬೆಲೆ ಕೆ.ಜಿ ರೂ.)
(ಅಂತರಸನಹಳ್ಳಿ ಮಾರುಕÀಟ್ಟೆ)
ಸೇಬು 120-160
ದಾಳಿಂಬೆ 150-200
ಮೊಸಂಬಿ 60-80
ಕಿತ್ತಳೆ 30-60
ಸಪೋಟ 40-60
ಏಲಕ್ಕಿ ಬಾಳೆ 50-60
ಪಚ್ಚ ಬಾಳೆ 20-30
ಪಪ್ಪಾಯ 20-30
ಕಲ್ಲಂಗಡಿ 30-40
ಕರಬೂಜ 50-60
ಸೀಬೆ 60-80
ಪೈನಾಪಲ್ 50-60
ದ್ರಾಕ್ಷಿ 150-200

ತರಕಾರಿ (ಬೆಲೆ ಕೆ.ಜಿ ರೂ.)
(ಅಂತರಸನಹಳ್ಳಿ ಮಾರುಕಟ್ಟೆ)
ಟೊಮ್ಯಾಟೊ 50-60
ಈರುಳ್ಳಿ 35-45
ಆಲೂಗಡ್ಡೆ 36-40
ಬೀನ್ಸ್ 80
ಕ್ಯಾರೆಟ್ 50
ಬೀಟ್ರೂಟ್ 40
ಮೂಲಂಗಿ 40
ಗೆಡ್ಡೆಕೋಸು 100
ನುಗ್ಗೆಕಾಯಿ 250
ಬದನೆಕಾಯಿ 50-50
ಎಲೆಕೋಸು 20
ಹೂಕೋಸು 1ಕ್ಕೆ 50-60
ಹಸಿ ಮೆಣಸಿನಕಾಯಿ 60
ಕ್ಯಾಪ್ಸಿಕಂ 160

ಮೊಟ್ಟೆ/ಮಾಂಸ ಬೆಲೆ (ಕೆ.ಜಿಗೆ)
ಬ್ರಾಯ್ಲರ್ 140
ಫಾರಂ 120
ನಾಟಿ ಕೋಳಿ ಮಾಂಸ 250-300
ಮಟನ್ 600-650
ಮೀನು (ಸಾಮಾನ್ಯ) 150-200
ಮೊಟ್ಟೆ (1 ಡಜನ್) 60-65

 

ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ 15,000
ಗರಿಷ್ಠ 17,311
ಮಾದರಿ 17,000
ಒಟ್ಟು ಆವಕ–1179.49 ಕ್ವಿಂಟಾಲ್
(2743 ಚೀಲ)

-ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link