ಪಾವಗಡ:
ಶಾಸಕರು-ಪುರಸಭಾಧ್ಯಕ್ಷರಿಂದ ಬಾಗಿನ ಅರ್ಪಣೆ
ಪಟ್ಟಣದ ಅಗಸರಕುಂಟೆಯಲ್ಲಿ ನೀರು ತುಂಬಿದ್ದು, ಕೋಡಿ ಹರಿಯುತ್ತಿದೆ. ಕಳೆದ 40 ವರ್ಷಗಳಿಂದ ಈ ಕುಂಟೆ ತುಂಬಿರಲಿಲ್ಲ. ಸಣ್ಣ ನೀರಾವರಿ ಇಲಾಖೆಯಿಂದ ಈ ಕುಂಟೆಯನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಅವರು ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಅಗಸರಕುಂಟೆ ತುಂಬಿ ಕೋಡಿ ಹರಿಯುತ್ತಿರುವ ಹಿನ್ನೆಲೆ ಗುರುವಾರ ಬಾಗಿನ ಅರ್ಪಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ಯಿಂದ 45 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗು ವುದು. ಇಲ್ಲಿರುವ ಅಶ್ವತ್ಥಕಟ್ಟೆಯನ್ನು ಸುಂದರವಾಗಿ ನಿರ್ಮಿಸಿ, ಪ್ರವಾಸಿಗರು ಬಂದು ಕಣ್ ತುಂಬಿಕೊಳ್ಳುವಂತೆ ನಿರ್ಮಾಣ ಮಾಡಲಾಗುವುದು. ನೀತಿ ಸಂಹಿತೆ ಮುಗಿದ ನಂತರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡಲಾಗುವುದು. ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಲ್ಲಿ ತಾಲ್ಲೂಕಿನ ಪಳವಳ್ಳಿ ಕೆರೆಯೂ ಸೇರಿದಂತೆ 38 ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಬಾಗಿನ ಅರ್ಪಿಸಿದ ನಂತರ ಅವರು ಕೆರೆಯ ಏರಿ ಮೇಲೆ ನಡೆದುಕೊಂಡು ಬಂದು, ಕೆರೆಯ ತಗ್ಗುಪ್ರದೇಶಗಳಿಗೆ ನೀರು ಜಿನುಗುತ್ತಿರುವುದನ್ನು ವೀಕ್ಷಿಸಿದರು. ಈ ವೇಳೆ ಯಾದವ ವಸತಿ ನಿಲಯ ಮತ್ತಿತರ ಖಾಸಗಿ ಕಟ್ಟಡಗಳಲ್ಲಿ ನೀರು ತುಂಬಿಕೊಂಡಿರುವುದನ್ನು ವೀಕ್ಷಿಸಿದರು.
ಪಟ್ಟಣದ ಕನುಮನಚೆರುವು ಪ್ರದೇಶದ ಸರ್ಕಾರಿ ಸ್ಥಳದಲ್ಲಿ ಪುರಸಭೆಯ ವತಿಯಿಂದ 17 ಕಾಯಂ ಪೌರಕಾರ್ಮಿಕರಿಗೆ ಅಂಬೇಡ್ಕರ್ ವಸತಿ ನಿಗಮದಿಂದ 1 ಕೋಟಿ 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ವಸತಿ ಸಮುಚ್ಛಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪಟ್ಟಣದ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಜಾಗ ಇಲ್ಲ. ಪಟ್ಟಣದಲ್ಲಿ ರಿಯಲ್ ಎಸ್ಟೆಟ್ ದಂಧೆಯಿಂದ ಪಾವಗಡದ ಬಡವರಿಗೆ ನಿವೇಶನಗಳು ಸಿಗುತ್ತಿಲ್ಲ. ತುಮಕೂರು, ಬೆಂಗಳೂರಿನಲ್ಲಿ ಸಹ ಇಷ್ಟೊಂದು ಬೆಲೆಯಿಲ್ಲ, ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಸರ್ಕಾರಿ ನೌಕರರು ಮತ್ತು ವ್ಯಾಪಾರಸ್ಥರು ಬ್ಯಾಂಕುಗಳಿಂದ ಸಾಲ ಪಡೆದು ನಿವೇಶನಗಳನ್ನು ಕೊಳ್ಳುತ್ತಿರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂದು ಆತಂಕ ವ್ಯಕ್ತ ಪಡಿಸಿದರು. ನಂತರ ಶಿರಾ ರಸ್ತೆಯ ಮಾರ್ಗದಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾದಿಮಹಲ್‍ಗೆ ಭೇಟಿ ನೀಡಿದರು.
ಗಂಗಾ ಪೂಜೆಯನ್ನು ನೆರವೇರಿಸಿದ ಪುರಸಭಾದ್ಯಕ್ಷೆ ಗಂಗಮ್ಮ ಮಾತನಾಡಿ, ಅಗಸರಕುಂಟೆ ಕೆರೆ ತುಂಬಿರುವುದರಿಂದ ಪಟ್ಣಣದ ಕೊಳವೆಬಾವಿಗಳಲ್ಲಿ ಅಂರ್ತಜಲ ಮಟ್ಟ ಹೆಚ್ಚಾಗುತ್ತಿದ್ದು, ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಗೊಚಿಕಾರ್ ಗುರ್ರಪ್ಪ, ಎ.ಶಂಕರರೆಡ್ಡಿ, ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ, ಸದಸ್ಯರುಗಳಾದ ಸುದೇಶ್‍ಬಾಬು, ಪಿ.ಎಚ್.ರಾಜೇಶ್, ತೆಂಗಿನಕಾಯಿರವಿ, ನಾಗಭೂಷಣರೆಡ್ಡಿ, ಮೊಹಮದ್‍ಇಮ್ರಾನ್, ಗೊರ್ತಿನಾಗರಾಜ್, ವೇಲುರಾಜು, ಮುಖಂಡರಾದ ಕೋಳಿಬಾಲಾಜಿ, ಶಾಂತಕುಮಾರ್, ಅಲ್ಪಸಂಖ್ಯಾತ ಮುಖಂಡರಾದ ಷಾಬಾಬು, ಆಲಿ, ರಿಜ್ವಾನ್ ಉಲ್ಲ ಮತ್ತಿತರರು ಇದ್ದರು. ಅಗಸರಕುಂಟೆಗೆ ಬಾಗಿನ ಅರ್ಪಿಸುತ್ತಿರುವ ಶಾಸಕ ವೆಂಕಟರವಣಪ್ಪ, ಪುರಸಭಾಧ್ಯಕ್ಷೆ ಗಂಗಮ್ಮ ಮತ್ತಿತರರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ