ಪೈಪೋಟಿ ಯುಗದಲ್ಲಿ ಕೀಳರಿಮೆ ಬಿಟ್ಟರಷ್ಟೆ ಸಾಧನೆ

ತುಮಕೂರು:

ಶ್ರೀಕನಕಶ್ರೀ ಸೇವಾ ಸಮಿತಿಯಿಂದ ಎಜುಕ್ಯಾನ್ ಕಾರ್ಯಗಾರ ಆಯೋಜನೆ

ವಿದ್ಯಾರ್ಥಿಗಳು ತಮ್ಮ ಜಾತಿ, ಧರ್ಮ, ಹುಟ್ಟಿದ ಊರು, ತಾವಾಡುವ ಭಾಷೆ ಬಗ್ಗೆ ಇರುವ ಕೀಳಿರಿಮೆಯನ್ನು ಬಿಟ್ಟಾಗ ಮಾತ್ರ ಇಂದಿನ ಪೈಪೋಟಿ ಯುಗದಲ್ಲಿ ಸಾಧನೆಯ ಶಿಖರ ಹತ್ತಲು ಸಾಧ್ಯವೆಂದು ಹಿರಿಯ ಪತ್ರಕರ್ತ ಹಾಗೂ ರೆಡ್‍ಕ್ರಾಸ್ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಕರ್ನಾಟಕ ಪ್ರತಿನಿಧಿ ಎಸ್.ನಾಗಣ್ಣ ಅವರು ತಿಳಿಸಿದರು.

ನಗರದ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀಕನಕಶ್ರೀ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಕನಕದಾಸರ 534ನೇ ಜನ್ಮ ಜಯಂತಿ ಹಾಗೂ ಕನಕಶ್ರೀ ಸೇವಾ ಸಮಿತಿ ಆಯೋಜಿಸಿದ್ದ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರದ ಎಜುಕ್ಯಾನ್-2021 (eಜu ಏಂಓ-2021) ಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದಿನ ಪೈಪೋಟಿ ಯುಗದಲ್ಲಿ ಒಂದು ಸಣ್ಣ ಉದ್ಯೋಗ ಪಡೆಯಲು ಸಹ ಅತ್ಯಂತ ಪರಿಶ್ರಮಬೇಕು. ಈ ನಿಟ್ಟಿನಲ್ಲಿ ತಮ್ಮಲ್ಲಿರುವ ಕೀಳಿರಿಮೆಯನ್ನು ತೊರೆದು ಧೈರ್ಯದಿಂದ ಮುನ್ನೆಡೆದರೆ ಮಾತ್ರ ಯಶಸ್ಸು ಸಾಧ್ಯ ಎಂದರು.

ಪರಿಶ್ರಮದಿಂದ ಗೆಲುವು ಸುಲಭ :

ಓರ್ವ ಸರಕಾರಿ ವೈದ್ಯನಾಗಿ 1983ರಲ್ಲಿ ತುಮಕೂರಿಗೆ ಬಂದ ಡಾ.ಎಂ.ಆರ್.ಹುಲಿನಾಯ್ಕರ್ ಅವರು ಇಂದು ಇಷ್ಟು ದೊಡ್ಡ ಸಂಸ್ಥೆಯನ್ನು ಕಟ್ಟಿರುವುದರ ಹಿಂದಿನ ಪರಿಶ್ರಮ ಏನು? ಅದಕ್ಕಾಗಿ ಎಷ್ಟೆಲ್ಲಾ ಪ್ರಯತ್ನ ನಡೆಸಿದ್ದಾರೆ ಎಂಬುದನ್ನು ನಾನು ಹತ್ತಿರದಿಂದ ಬಲ್ಲೆ, ಅವರ ಜೀವನವೇ ನಿಮಗೆ ಸ್ಪೂರ್ತಿಯಾಗಲಿದೆ. ಹಾಗಾಗಿ ಸತತ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವನೆಯಿಂದ ತೊಡಗಿಕೊಂಡರೆ ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆಯುವುದು ಕಷ್ಟವಾಗಲಾರದು. ಪಿಡಿಓ ಹುದ್ದೆಯಿಂದ ಜೀವನ ಆರಂಭಿಸಿದ ವಿನಯ್‍ಕುಮಾರ್ ಅವರು, ಇಂದು ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಯಾದ ಇನ್ಸೈಟ್ಸ್ ಸಂಸ್ಥೆಯನ್ನು ಕಟ್ಟಿದ್ದಾರೆ. ಇವರ ಮಾರ್ಗದರ್ಶನದ ಮೂಲಕ ನೀವು ನಿಮ್ಮ ಜೀವನದಲ್ಲಿ ಅದ್ವಿತೀಯವಾದುದ್ದನ್ನು ಸಾಧಿಸಿ ಎಂದು ಎಸ್.ನಾಗಣ್ಣ ಅವರು ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಪರಾಮರ್ಶೆ, ಬರವಣಿಗೆ ಕೌಶಲ್ಯ ಅಗತ್ಯ :

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಆಕಾಡೆಮಿಯ ನಿರ್ದೇಶಕ ಜಿ.ಬಿ.ವಿನಯ್‍ಕುಮಾರ್ ಮಾತನಾಡಿ, ಸರಿಯಾದ ಮಾರ್ಗದರ್ಶನ ಸಿಕ್ಕರೆ, ಸ್ವಪರಿಶ್ರಮ ಇದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡುವುದು ಕಷ್ಟವಲ್ಲ. ಹಾಗಾಗಿ ಪ್ರತಿಯೊಬ್ಬರೂ ಪ್ರತಿ ದಿನದ ಆಗು ಹೋಗುಗಳ ಜೊತೆಗೆ, ಸಾಮಾಜಿಕ, ರಾಜಕೀಯ, ಆರ್ಥಿಕ ಸ್ಥಿತಿಗತಿ ಹಾಗೂ ಪ್ರಸಕ್ತ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಅದನ್ನು ಪರಾಮರ್ಶಿಸುವ ಮತ್ತು ಅದನ್ನು ಬರವಣಿಗೆಗೆ ಅಳವಡಿಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕಿದೆ ಎಂದರು.

ಸ್ವಂತ ಆಲೋಚನಾ ಸಾಮಥ್ರ್ಯದಿಂದ ಯಶಸ್ಸು :

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ಒಂದು ಅಭಿವೃದ್ದಿ ಶೀಲ ರಾಷ್ಟ್ರದ ಬೆಳವಣಿಗೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು, ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಅಕ್ಷರ ಪಡೆದ ತಳ ಸಮುದಾಯದವರು ಅಧಿಕಾರಿಗಳಾಗುವ ಮೂಲಕ ದೇಶದ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಐಐಟಿ, ಐಐಎಸ್‍ಸಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತರುವ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟವಾಗಿದೆ. ಒಂದು ವಿಚಾರದ ಬಗ್ಗೆ ಸ್ಪಷ್ಟ ಆಲೋಚನೆ ಮತ್ತು ಅಭಿಪ್ರಾಯ ಹೊಂದಲು ಸಾಧ್ಯವಿದ್ದರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು. ಕನಕಶ್ರೀ ಸೇವಾ ಸಮಿತಿ ವತಿಯಿಂದ ಐಎಎಸ್ ಎಜುಕ್ಯಾನ್-2021ರ ಹೆಸರಿನಲ್ಲಿ ಐಎಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ತರಬೇತಿ ನೀಡುತ್ತಿದ್ದಾರೆ. ಇದರ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ತೆಂಗು ಮತ್ತು ನಾರು ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕನಕಶ್ರೀ ಸೇವಾಸಮಿತಿ ಪದಾಧಿಕಾರಿಗಳು, ಪ್ರಜಾಪ್ರಗತಿ ಪತ್ರಿಕೆಯ ಉಪ ಸಂಪಾದಕರು ಹಾಗೂ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಟಿ.ಎನ್.ಮಧುಕರ್ ಶ್ರೀದೇವಿ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಡಾ.ರಮಣ್‍ಹುಲಿನಾಯ್ಕರ್, ಡಾ.ಯೋಗೀಶ್, ಮಹಾಲಿಂಗೇಶ್, ಸುನಿತಾನಟರಾಜ್, ಶ್ರೀದೇವಿ ನರಸಿಂಹಮೂರ್ತಿ, ಕಲ್ಲಪ್ಪ, ಪಾತಾಣ್ಣ, ಚಿಕ್ಕಸ್ವಾಮಿ ಹೆಬ್ಬೂರು, ಲಕ್ಷ್ಮಿನರಸಿಂಹರಾಜು, ಎನ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

 

ಒಬ್ಬ ಐಎಎಸ್ ಪಾಸ್ ಆದರೂ ಶ್ರಮ ಸಾರ್ಥಕ :

ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿ, ಗಣ್ಯರನ್ನು ಸ್ವಾಗತಿಸಿದ ತುಮಕೂರು ವಿವಿ ಸಮಾಜ ಸೇವಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪರುಶುರಾಮ್ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಘೋಷಣೆಗಳ ಮೂಲಕ ತಳ ಸಮುದಾಯಗಳ ವಿದ್ಯಾವಂತರು ಸರಕಾರಿ ಕೆಲಸಗಳನ್ನು ಪಡೆಯಲಿ ಉದ್ದೇಶದಿಂದ ಕಳೆದ ಒಂದು ವರ್ಷದಿಂದಲೂ ಪ್ರಯತ್ನ ನಡೆಸಿ, ವಿವಿಧ ವಲಯಗಳ ಜನರ ಅಭಿಪ್ರಾಯ, ಸಹಕಾರ ಪಡೆದು, ಇಂದು ಶ್ರೀಕನಕಶ್ರೀ ಸೇವಾ ಸಮಿತಿಯ ಮೂಲಕ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿದ್ದೇವೆ. ನಮ್ಮ ಕರೆಗೆ ಒಗೊಟ್ಟು ಸುಮಾರು 25 ಜಿಲ್ಲೆಗಳ 150 ಜನರು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಊಟ, ವಸತಿ ವ್ಯವಸ್ಥೆಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆ ಮಾಡಿದೆ. ಟಿ.ಎನ್.ಮಧುಕರ್, ಡಾ.ರಮಣಹುಲಿನಾಯ್ಕರ್, ಡಾ.ಯೋಗೀಶ್ ಹಾಗೂ ಇನ್ನಿತರರು ಸೇರಿ, ಸಮುದಾಯದ ಹಿರಿಯರ ಮಾರ್ಗದರ್ಶದಲ್ಲಿ ಸಮಾಜಕ್ಕೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ. ಇಲ್ಲಿ ತರಬೇತಿ ಪಡೆದ ಒಬ್ಬರು ಈ ಸಾಲಿನ ಯಪಿಎಸ್ಸಿ ಪರೀಕ್ಷೆಯಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರೂ ನಮ್ಮ ಶ್ರಮ ಸಾರ್ಥಕ ಎಂದರು.

2020ನೇ ಸಾಲಿನಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ 11 ಲಕ್ಷ, ಪೂರ್ವಭಾವಿ ಪರೀಕ್ಷೆ ಬರೆದವರು 5.25 ಲಕ್ಷ, ಮುಖ್ಯ ಪರೀಕ್ಷೆಗೆ ಆಯ್ಕೆಯಾದವರು 10 ಸಾವಿರ ಜನ, ಸಂದರ್ಶನಕ್ಕೆ ಆಯ್ಕೆಯಾದವರು 2,000 ಜನ, ಅಂತಿಮವಾಗಿ ಆಯ್ಕೆಯಾದವರು 750 ಜನ ಮಾತ್ರ. ಅರ್ಜಿ ಸಲ್ಲಿಸಿದವರಲ್ಲಿ, ಆಯ್ಕೆಯಾದವರ ಸರಾಸರಿ ಲೆಕ್ಕ ಹಾಕಿದರೆ 0.0034 ಆಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಅಷ್ಟೊಂದು ಪೈಪೋಟಿಯಿಂದ ಕೂಡಿರುತ್ತವೆ. ಎಲ್ಲವನ್ನು ಒದಿಗೊತ್ತಿದರೇ ಮಾತ್ರ ಇಲ್ಲಿ ಯಶಸ್ಸು ಸಾಧಿಸಬಹುದಯ.

-ಜಿ.ಬಿ.ವಿನಯ್‍ಕುಮಾರ್, ನಿರ್ದೇಶಕರು, ಇನ್ಸೈಟ್ಸ್ ಐಎಎಸ್ ಆಕಾಡೆಮಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

 

 

Recent Articles

spot_img

Related Stories

Share via
Copy link