ತುಮಕೂರು:
ಎದುರಾಳಿ- ಎದುರಾಳಿಯೇ, ಹೆತ್ತತಾಯಿಗೆ(ಪಕ್ಷ) ಮೋಸಮಾಡಲಾದಿತೇ: ಜೆ.ಸಿ.ಮಾಧುಸ್ವಾಮಿ
ನನಗೆ, ಸಂಸದರಿಗೆ, ಮಾಜಿ ಸಚಿವರಿಗೆ ಕೆ.ಎನ್.ರಾಜಣ್ಣ ಸ್ನೇಹಿತರೇ. ಹಿಂದೆ ಅವರು ವಿಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ನಾನು ಬೆಂಬಲಿಸಿದ್ದೆ. ಆಗ ನಾನು ಬಿಜೆಪಿಯಲ್ಲೇ ಇರಲಿಲ್ಲ. ಪ್ರಸ್ತುತ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಲೋಕೇಶ್‍ಗೌಡ ಅವರನ್ನು ಕಣಕ್ಕಿಳಿಸಲಾಗಿದೆ. ಪಕ್ಷವನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಮುಖ್ಯ ಗುರಿಯಾಗಿದ್ದು, ನಾವ್ಯಾರು ಕೆಎನ್‍ಆರ್ ಮಗನನ್ನು ಬೆಂಬಲಿಸುವ ಪ್ರಶ್ನೆಯಿಲ್ಲ. ಅವರು ಸಹ ಬೆಂಬಲಿಸಿ ಎಂದು ಕೋರಿಲ್ಲ. ಹೆತ್ತ ತಾಯಿಗೆ(ಪಕ್ಷಕ್ಕೆ) ಮೋಸ ಮಾಡಲಾದಿತೇ. ಚುನಾವಣಾ ಅಖಾಡದಲ್ಲಿ ಎದುರಾಳಿ ಎದುರಾಳಿಯೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‍ನವರು ಬಿಜೆಪಿಯವರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಧುಗಿರಿಯಲ್ಲಿ ಬಿಜೆಪಿ ಅಧಿಕ ಮತಗಳು ಬಿದ್ದವು ಎಂಬ ಕಾರಣವನ್ನು ಮುಂದು ಮಾಡಿ ಸಂಸದರು, ಮಾಜಿ – ಹಾಲಿ ಶಾಸಕರ ಮೇಲೆ ಕಾಂಗ್ರೆಸ್ ಬೆಂಬಲಿಸುವ ಆರೋಪಗಳನ್ನು ಮಾಡಲಾಗುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ. ಸಂಸದರು, ಮಾಜಿ ಸಚಿವರು ಹತ್ತಿರದ ಬಂಧುಗಳು, ಸಮಾಜದ ಅಧ್ಯಕ್ಷರು ನಿಧನದ ಕಾರಣಕ್ಕೆ ನಿನ್ನೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಾಗಿರಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾವೆಲ್ಲ ಒಗ್ಗಟ್ಟಾಗಿ ಬಿಜೆಪಿ ಅಭ್ಯರ್ಥಿ ಲೋಕೇಶ್‍ಗೌಡ ಗೆಲುವಿಗೆ ಕೆಲಸ ಮಾಡಲಿದ್ದೇವೆಂದರು.
ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು ಜೆಡಿಎಸ್ ಅಭ್ಯರ್ಥಿಯಾಗಿರುವವರು ಇಲ್ಲಿಯವರೆಗೆ ಎಲ್ಲಿದ್ದರು, ಎಲ್ಲಿ ಸಮಾಜಸೇವೆ ಮಾಡಿದ್ದಾರೆ,ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಪರಿಜ್ಞಾನ ಇಲ್ಲ. ಕೆಎಡಿಬಿ ಅಧಿಕಾರಿಯಾಗಿದ್ದವರಿಗೆ ಟಿಕೆಟ್ ನೀಡಿ ಈಗ ನಮ್ಮ ಅಭ್ಯರ್ಥಿ ಬಗ್ಗೆ ವಿಳಾಸವಿಲ್ಲದವರೆಂದು ಮಾತನಾಡುತ್ತಾರೆ ಎಂದು ಹರಿಹಾಯ್ದರು.
ಸಮ್ಮಿಶ್ರ ಸರಕಾರದಲ್ಲಿ ಪರಮೇಶ್ವರ್ ತಾರತಮ್ಯ :
ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾದ ಅನುದಾನವನ್ನು ಬಿಜೆಪಿ ಸರಕಾರ ವಾಪಸ್ ಪಡೆದಿದೆ ಎಂಬ ಮಾಜಿಡಿಸಿಎಂ ಡಾ.ಜಿ.ಪರಮೇಶ್ವರ ಅವರ ಆರೋಪಕ್ಕೆ ಗರಂ ಆದ ಜೆ.ಸಿ.ಮಾಧುಸ್ವಾಮಿ ಅವರು ಕೋವಿಡ್ ನೆರೆ ಪರಿಸ್ಥಿತಿಯ ಕಾರಣ್ಕಕೆ ಅನುದಾನ ವಾಪಸ್ ಆಗಿರುವ ಬಗ್ಗೆ ಸದನದಲ್ಲೇ ಉತ್ತರಿಸಲಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಪರಮೇಶ್ವರ್ ಡಿಸಿಎಂ ಆಗಿದ್ದಾಗ ತಮ್ಮ ಕ್ಷೇತ್ರಕ್ಕೆ ಮನಸೋ ಇಚ್ಚೆ ಅನುದಾನ ಬಿಡುಗಡೆ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವೇ? ಕೊರಟಗೆರೆ, ಮಧುಗಿರಿಗೆ ಹಾಕಿದ ಮನೆಗಳೆಷ್ಟು, ಗುಬ್ಬಿ, ಚಿ.ನಾ.ಹಳ್ಳಿಗೆ ಎಷ್ಟು ಕೊಟ್ಟಿದ್ದಾರೆ ಹೇಳಲಿ. ನಮ್ಮ ಅವಧಿಯಲ್ಲಿ ಆಜಾದಿ ಅಮೃತ ಮಹೋತ್ಸವ ಯೋಜನೆ ಸೇರಿದಂತೆ ಕೇಂದ್ರದ ಎಲ್ಲಾ ಯೋಜನೆಗಳಿಗೆ ಪ್ರತೀ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದೆ.
ಜಲಜೀವನ್ ಮಿಷನ್,15ನೇ ಹಣಕಾಸು ಆಯೋಗದ ಅನುದಾನವನ್ನು ನೇರವಾಗಿ ಪಂಚಾಯ್ತಿಗಳಿಗೆ ನೀಡುವ ಮೂಲಕ ಪ್ರಧಾನಿಗಳು ಗ್ರಾ.ಪಂ.ಬಲಪಡಿಸಿದ್ದಾರೆ. ಪ್ರತೀ ಮನೆಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಮೂಲ ಗ್ರಾ.ಪಂ.ಸಬಲೀಕರಣಕ್ಕೆ ಬಿಜೆಪಿ ಒತ್ತು ನೀಡಿದೆ.ಇವೆಲ್ಲವೂ ಬಿಜೆಪಿ ಗೆಲುವಿಗೆ ಕಾರಣವಾಗಲಿದೆ ಎಂದರು.
ಗ್ರಾಪಂ ಸದಸ್ಯರು ಮಾರಾಟಕ್ಕಿಲ್ಲ: ಗ್ರಾಪಂ ಸದಸ್ಯರು ಪಕ್ಷ ಅಭಿವೃದ್ಧಿಯನ್ನು ಪ್ರಮುಖವಾಗಿ ಪರಿಗಣಿಸುತ್ತಾರೆ. ಯಾರೊಂದಿಗೆ ಇದ್ದರೆ ಅನುಕೂಲ ಅವರಿಗೆ ಇದೆ, ಚುನಾವಣೆಯಲ್ಲಿ ಹಣಬೇಕು ಎಂದು ಹೇಳಿದರೆ ಅದು ಗ್ರಾ.ಪಂ.ಸದಸ್ಯರಿಗೆ ಅವಮಾನ ಮಾಡಿದಂತೆ, ಹಣಕೊಟ್ಟರೆ ಮತ ಬೀಳುತ್ತದೆ ಎಂದರೆ ಅದು ಮೂರ್ಖತನ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವದಲ್ಲಿ ಋಣಭಾರ ಎನ್ನುವುದಿಲ್ಲ: ಸಂಸದ ಜಿ.ಎಸ್.ಬಸವರಾಜು ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಋಣಭಾರ ಇಲ್ಲ. ಹಿಂದೆ ಅವರು ನಮಗೆ ಸಹಾಯ ಮಾಡಿರಬಹುದು. ನಾನು ಅವರಿಗೆ ಸಹಾಯ ಮಾಡಿದ್ದೇನೆ. ಆದರೆ ಈ ವಿಧಾನಪರಿಷತ್ ಚುನಾವಣೆಯಲ್ಲಿ ಯಾರೊಂದಿಗೂ ರಾಜೀ ಇಲ್ಲ. ಲೋಕಸಭೆ ಚುನಾವಣೆ ವೇಳೆ ದೇವೇಗೌಡರು ಸ್ಪರ್ಧಿಸಿದ್ದಾಗ ರಕ್ತ ಕೊಟ್ಟರೆ ಕೊಟ್ಟೇವು ಹೇಮೆ ನೀರು ತುಮಕೂರಿಗೆ ಕೊಡೋಲ್ಲ ಎಂಬ ಜೆಡಿಎಸ್ ನಾಯಕರ ಹಿಂದಿನ ಹೇಳಿಕೆ ಅವರ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಎಂ.ಬಿ.ನಂದೀಶ್ಮಾಜಿ ಸಚಿವ ಶಿವಣ್ಣ,ವಿಭಾಗ ಸಹ-ಪ್ರಭಾರಿ ಲಕ್ಷ್ಮೀಶ, ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೆಬ್ಬಾಕ, ಜಿಲ್ಲಾ ಮಾಧ್ಯಮ ಪ್ರಮುಖ ಕೆ.ಟಿ. ಶಿವಕುಮಾರ್, ಮುಖಂಡರುಗಳಾದ ಓಂಕಾರ್,ವೇದಮೂರ್ತಿ. ಪ್ರಭಾಕರ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಬಿಜೆಪಿ ತಳಮಟ್ಟದ ಸಂಘಟನೆ ಇದೆ. ಇಬ್ಬರು ಸಚಿವರನ್ನೊಳಗೊಂಡರು ಐವರು ಶಾಸಕರು, ಇಬ್ಬರು ಸಂಸದರು ಪಕ್ಷ ಸಂಘಟನೆ ಮಾಡುತ್ತಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ. ಸಾಮಾನ್ಯ ಬೂತ್ ಕಾರ್ಯಕರ್ತನಾಗಿದ್ದ ನನ್ನನ್ನು ಬಿಬಿಎಂಪಿ ಕಾಪೆರ್Çೀರೇಟರ್ ಆಗಿ ಮಾಡಿ,ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷನಾಗಿ ನೇಮಿಸಿತ್ತು. ಸದ್ಯ ನನಗೆ ವಿಧಾನ ಪರಿಷತ್ ಟಿಕೆಟ್ ನೀಡಿರುವುದಕ್ಕೆ ಪಕ್ಷಕ್ಕೆ ಧನ್ಯವಾದ ಸಲ್ಲಿಸುವೆ. ನಾನು ಹೊರಗಿನವನಲ್ಲ ಕೊರಟಗೆರೆ ತಾಲೂಕಿನ ವಡ್ಡಗೆರೆ ಮೂಲದವನು. ಬೆಂಗಳೂರಿನಲ್ಲಿ ರಾಜಕೀಯ ಅವಕಾಶ ಸಿಕ್ಕಿದ್ದರಿಂದ ಅಲ್ಲಿ ನೆಲೆಸಿದ್ದೆ. ಈಗ ಸ್ವಂತ ಜಿಲ್ಲೆಯಲ್ಲಿ ನೆಲೆಸಲು ತೀರ್ಮಾನಿಸಿರುವೆ.
-ಎನ್.ಲೋಕೇಶ್‍ಗೌಡ, ಬಿಜೆಪಿ ಅಭ್ಯರ್ಥಿ
ಶತ್ರುವಿನ ಶತ್ರು ಮಿತ್ರ ಎನ್ನುವುದು ಚುನಾವಣೆಯ ತಂತ್ರ.ಲೋಕಸಭೆ ಚುನಾವಣೆಯಲ್ಲಿ ರಾಜಣ್ಣ ಸ್ನೇಹಿತರಾದ ಕಾರಣಕ್ಕೆ ಮಧುಗಿರಿಯಲ್ಲಿ ಸಹಾಯ ಮಾಡಿರಬಹುದು. ನಮ್ಮ ಪಕ್ಷದ ವಿಚಾರದಲ್ಲಿ ಇದು ಆಗುವುದಿಲ್ಲ. ಪಕ್ಷ ಗೆಲ್ಲುವುದು ಮುಖ್ಯ. ಬಿಜೆಪಿ ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ, ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಉದ್ಭವವಾಗುವುದಿಲ್ಲ. ಐದು ಶಾಸಕರು ಇಬ್ಬರು ಸಂಸದರು, ಇಬ್ಬರು ಎಂಎಲ್ಸಿಗಳಿರುವ ಜಿಲ್ಲೆಯಲ್ಲಿ ಮೈತ್ರಿ ಮಾಡಿಕೊಂಡರೆ ಅವಮಾನವಾಗುವುದಿಲ್ಲವೆ?
–ಜೆ.ಸಿ.ಮಾಧುಸ್ವಾಮಿ, ಸಚಿವ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ