ಬರಗೂರು:
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯದಲ್ಲಿರುವ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದ್ದು, ನೀವುಗಳು ಮತ ಕೊಟ್ಟು ಗೆಲುವು ತಂದುಕೊಟ್ಟರೆ, ನಿಮ್ಮ ಪ್ರತಿನಿಧಿಯಾಗಿ ಗ್ರಾಮಗಳ ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತುಮಕೂರು ವಿಧಾನ ಪರಿಷತ್ ಚುನಾವಣಾ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ಗೌಡ ಮನವಿ ಮಾಡಿದರು.
ಶಿರಾ ತಾಲ್ಲೂಕು ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳ ಸದಸ್ಯರುಗಳನ್ನು ಭೇಟಿ ಮಾಡಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು. ಗ್ರಾಮ ಪಂಚಾಯ್ತಿ ಸದಸ್ಯರ ಗೌರವಧನ ಹೆಚ್ಚಳ ಮಾಡಿಸುವ ಹಾಗೂ 15ನೇ ಹಣಕಾಸಿನಲ್ಲಿ ಹೆಚ್ಚು ಅನುದಾನ ಕಲ್ಪಿಸುವ ಗುರಿ ಹೊಂದಿದ್ದು, ಗ್ರಾಮ ಪಂಚಾಯ್ತಿ ಸದಸ್ಯರು ಮತ ಹಾಕಿ ಗೆಲ್ಲಿಸುವಂತೆ ಕೋರಿದರು.
ಶಾಸಕ ಡಾ.ಸಿ.ಎಂ.ರಾಜೇಶ್ಗೌಡ ಮಾತನಾಡಿ, ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ, ಕೆರೆ ತುಂಬಲು ಸಹಕರಿಸಿದೆ. ಇದರಿಂದ ಹುಲಿಕುಂಟೆ ಹೋಬಳಿ ಹಾಗೂ ಗೌಡಗೆರೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಸಹಕಾರಿಯಾಗಿದೆ. ತಾಲ್ಲೂಕಿನ ಮಹತ್ವಾಕಾಂಕ್ಷಿ ಭದ್ರಾ ಮೇಲ್ದಂಡೆ ನೀರಿನ ಯೋಜನೆ ಕಾಮಗಾರಿ ತ್ವರಿತವಾಗಿ ಮುಗಿದು, ತಾಲ್ಲೂಕಿನ 65 ಕೆರೆಗಳಿಗೆ ನೀರಿನ ಭಾಗ್ಯ ಕಾಣಲಿದೆ. ಇಂತಹ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ನೆರವಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಅವರಿಗೆ ಮತ ನೀಡಬೇಕಿದೆ ಎಂದರು.
ರಾಜ್ಯ ತೆಂಗು ನಾರು ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ್, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಎಸ್.ಆರ್.ಗೌಡ, ತಾ.ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಚಂಗಾವರ ಮಾರಣ್ಣ, ಮೂರ್ತಿ ಮಾಸ್ಟರ್, ಪ್ರಕಾಶ್ ಗೌಡ, ಮದ್ದೇವಳ್ಳಿ ರಾಮಕೃಷ್ಣ, ಮಾಲಿ ಸಿ.ಎಲ್.ಗೌಡ ಸೇರಿದಂತೆ ಹಲವರು ಇದ್ದರು.
ಬರಗೂರು ಹುಲಿಕುಂಟೆ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳ ಸದಸ್ಯರುಗಳನ್ನು ಭೇಟಿ ಮಾಡಿದ ವಿಧಾನ ಪರಿಷತ್ ಚುನಾವಣಾ ಬಿಜೆಪಿ ಅಭ್ಯರ್ಥಿಎನ್.ಲೋಕೇಶ್ಗೌಡ ಮತ ಚಲಾಯಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ