ಇದೊಂಥರ ಇಂಟರೆಸ್ಟಿಂಗ್ ಮದುವೆ

ಶಿರಾ:

ಹುಡುಗನಿಗೆ ಅವೈಜ್ಞಾನಿಕ ರೀತಿ‌ರಿವಾಜುಗಳಲ್ಲಿ ನಂಬಿಕೆ ಇಲ್ಲ. ಆದರೆ ಬಂಧುಬಳಗದ ಎದುರು ತಕ್ಕಮಟ್ಟಿಗೆ ವೈಭವವಾಗಿ ಮದುವೆ ಮಾಡಬೇಕೆಂಬ ಬಯಕೆ ಹುಡುಗ ಮತ್ತು ಹುಡುಗಿಯ ಪೋಷಕರದು. ಕಳೆದ 21ರಂದು ಮದುವೆ, ಹಿಂದಿನ ದಿನ ರಿಸೆಪ್ಷನ್. ಪ್ರೆಸೆಂಟೇಷನ್, ಗಿಫ್ಟು ಏನೂ‌ಬೇಡ ಎಂದಿದ್ದಾನೆ ಹುಡುಗ. ತಂದವರು ಮನೆಯವರ ಕೈಗೆ ಕೊಟ್ಟು ಹೋಗಿದ್ದಾರೆ. ರಿಸೆಪ್ಷನ್ ಮುಗಿದ ಮೇಲೆ ಶಾಸ್ತ್ರಗಳು ಶುರುವಾಗಬೇಕಲ್ಲವೇ? ಹುಡುಗ ಎಲ್ಲ ಸ್ಕಿಪ್ ಮಾಡಿ ಊಟ ಮಾಡಿ‌ ಮಲಗಿಬಿಟ್ಟಿದ್ದಾನೆ. ಮದುವೆಗೆ ಬಂದವರ ನಡುವೆ ಗುಸುಗುಸು. ಈ ಹುಡುಗ ಮದುವೆ ಆಗ್ತಾನೋ ಇಲ್ವೋ ಎಂಬ ಗುಮಾನಿ.

ಮದುವೆಯ ದಿನ ಬೆಳಿಗ್ಗೆ ಒಂಭತ್ತು ಕಾಲು ಗಂಟೆಗೆ ಮುಹೂರ್ತ. ಹೊತ್ತಿಗೆ ಮುಂಚೆ ಬಂದ ಪುರೋಹಿತರಿಗೆ ನಿಮಗೆ ಇಲ್ಲೇನು‌‌ ಕೆಲಸ ಇಲ್ಲ ಹೊರಡಿ ಎಂದಿದ್ದಾನೆ ಹುಡುಗ.‌ ಅವರು ಟಿಎ ಡಿಎ ತಗೊಂದು ಸಪ್ಪೆ ಮುಖಮಾಡಿಕೊಂಡು ಹೊರಟಿದ್ದಾರೆ. ಮುಹೂರ್ತ ಯಾವಾಗ, ಹೇಗೆ ಎಂಬ ಗಲಿಬಿಲಿ‌ ಬಂದ ನೆಂಟರು ಇಷ್ಟರದು. ಮನೆಯವರ ಬಲವಂತಕ್ಕೆ ಪಂಚೆ‌ ಉಟ್ಟಿದ್ದಾನೆ, ಆದರೆ ಬಾಸಿಂಗ ಪೇಟ ಇತ್ಯಾದಿ ಏನೂ ಇಲ್ಲ. ರಿಸೆಪ್ಷನ್ ಗೆ ಹಾಕಿದ್ದ ಬ್ಯಾಕ್ ಡ್ರಾಪ್ ಬಿಟ್ಟರೆ ಮದುವೆ ಮುಹೂರ್ತದ ಲಕ್ಷಣಗಳೂ ಇಲ್ಲ.

ಹುಡುಗ ಒಂಭತ್ತೂವರೆಗೆ ಬಂದು ಸಿನಿಮೀಯ ಶೈಲಿಯಲ್ಲಿ ಮೈಕ್ ಹಿಡಿದು ಮಾತು ಶುರು ಮಾಡಿದ್ದಾನೆ. ಮದುವೆ ಶಾಸ್ತ್ರಗಳ ಅವೈಜ್ಞಾನಿಕತೆ ಕುರಿತು ಸುದೀರ್ಘ ಮಾತಾಡಿದ್ದಾನೆ.‌ ದುಬಾರಿ ಮದುವೆಗಳಿಂದ ಬಡಜನರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಮಾತಾಡಿದ್ದಾನೆ. ಮಾತು ಮುಗಿಸಿ, ಸೀದಾ ಅಪ್ಪ-ಅಮ್ಮ ಅತ್ತೆ-ಮಾವರನ್ನು ಪಕ್ಕ ನಿಲ್ಲಿಸಿಕೊಂಡು ಹುಡುಗಿಗೆ ತಾಳಿ‌ ಕಟ್ಟಿದ್ದಾನೆ. ಮಂತ್ರವಿಲ್ಲ, ವಾದ್ಯವಿಲ್ಲ, ಶಾಸ್ತ್ರವಿಲ್ಲ, ಪುರೋಹಿತನೂ ಇಲ್ಲ. ಅಲ್ಲಿಗೆ ಮದುವೆ ಮುಗಿದುಹೋಗಿದೆ. ನೆರೆದಿದ್ದ ಜನರು ಬೆರಗಾಗಿಹೋಗಿದ್ದಾರೆ. ಕೊನೆಗೂ ತಾಳಿ ಕಟ್ಟಿದನಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಇದು ಬೆಂಗಳೂರಿನಂಥ ನಗರದಲ್ಲಿ ನಡೆದಿರಬಹುದು ಎಂದು ನೀವು ಊಹಿಸಬಹುದು. ಆದರೆ ಇದು ನಡೆದಿರೋದು ತುಮಕೂರು ಜಿಲ್ಲೆ ಶಿರಾದಲ್ಲಿ. ಹುಡುಗ ಹರ್ಷ ಬಿಇ ಪದವೀಧರ. ಹುಡುಗಿ ಕುಸುಮ ಎಂಎಸ್ ಸಿ ಪದವೀಧರೆ. ಹರ್ಷ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿದ್ದವರು. ಉದ್ಯೋಗ ಹಿಡಿಸದೆ ರಾಜೀನಾಮೆ ಕೊಟ್ಟು ಬಂದು ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ತೆರೆದಿದ್ದಾರೆ. ಇಬ್ಬರೂ ಹತ್ತಿರದ ಸಂಬಂಧಿಗಳು, ಹೀಗಾಗಿ ಈ ಹೊಸಬಗೆಯ ಮದುವೆಗೆ ಹುಡುಗಿಯನ್ನು ಒಪ್ಪಿಸಲು ಅವರಿಗೇನು ಕಷ್ಟವಾಗಿಲ್ಲ.

ಮೊದಲೇ ಮನೆಯವರನ್ನೆಲ್ಲ ಒಪ್ಪಿಸಿ ಸರಳ ಮದುವೆಯೇ ಆಗಬಹುದಿತ್ತಲ್ಲ ಎಂಬ ಪ್ರಶ್ನೆ ಸಹಜ. ಎರಡೂ ಮನೆಯವರಿಗೆ ಬಂಧು ಬಳಗ ಕರೆಯುವ,‌ ಮದುವೆ ನೆಪದಲ್ಲಿ ಊಟ ಹಾಕಿಸುವ ಆಸೆ. ಅವರ ಆಸೆಯೂ ಈಡೇರಿದೆ. ಮದುವೆಯ ನೆಪದಲ್ಲಿ ಹರ್ಷ ಮೇಷ್ಟ್ರು ಬಂದವರಿಗೆಲ್ಲ ಪಾಠವನ್ನೂ ಹೇಳಿದಂತಾಗಿದೆ. ಪುರೋಹಿತನ ಹಂಗಿಲ್ಲದೆ,‌ ಶಾಸ್ತ್ರಗಳ ಗೊಡವೆಯಿಲ್ಲದೆ ಮದುವೆಯೂ ನಡೆದುಹೋಗಿದೆ.

ಈ ಜೋಡಿ ಸದಾ ಖುಷಿಖುಷಿಯಾಗಿರಲಿ, ಹೊಸಬಗೆಯಲ್ಲಿ ಯುವ ಜನತೆಗೆ ಸ್ಫೂರ್ತಿ ತುಂಬಲಿ ಎಂಬುದು ನನ್ನ ಹಾರೈಕೆ. ಮದುವೆ ಮಂಪಟದಲ್ಲಿ ಹುಡುಗ ಮೈಕ್ ಹಿಡಿದು ಮಾಡಿದ ಭರ್ಜರಿ ಭಾಷಣದ ಕೆಲವು ವಿಡಿಯೋ ತುಣುಕುಗಳಿವೆ. ಸಾಧ್ಯವಾದರೆ ಆತನ ಮಾತು ಕೇಳಿಸಿಕೊಳ್ಳಿ

https://www.facebook.com/1681227434/posts/10217380979671395/?sfnsn=wiwspwa

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link