ರಸ್ತೆ ಸಮಸ್ಯೆ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರ

ತುಮಕೂರು:

ತಾಲ್ಲೂಕು ಕೋರಾ ಹೋಬಳಿ ಹಿರೇಕೊಡತಕಲ್ಲು ಹಾಗೂ ಮುದ್ದರಾಮಯ್ಯನ ಪಾಳ್ಯ ಗ್ರಾಮಕ್ಕೆ ರಸ್ತೆ ಮತ್ತು ಮೂಲ ಸೌಕರ್ಯವಿಲ್ಲದ ಕಾರಣ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಮುಂಬರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಅವರು, ಹಿರೇಕೊಡತಕಲ್ಲು ಮತ್ತು ಮುದ್ದರಾಯರ ಪಾಳ್ಯ ಗೇಟ್‍ನಿಂದ 8ನೆ ಮೈಲಿ ಗೇಟ್ ವರೆಗೆ ಸುಮಾರು ಮೂರು ಕಿಲೋಮೀಟರ್ ರಸ್ತೆ ಇಲ್ಲದೆ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಹಿರೇಕೊಡತಕಲ್ಲು ಮತ್ತು ಮುದ್ದರಾಯನಪಾಳ್ಯಕ್ಕೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ, ಈಗಿರುವ ರಸ್ತೆಯು ಸರ್ವೆ ನಂಬರ್ ನಲ್ಲಿ ಇದೆ, ಹೀಗಾಗಿ ಇಲ್ಲಿರುವ ರೈತರು ನಾವು ರಸ್ತೆಯನ್ನು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ತಹಸೀಲ್ದಾರ್, ಶಾಸಕರು ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿಗಳನ್ನು ನೀಡುತ್ತಾ ಬಂದಿದ್ದೇವೆ ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಇಂದು ತಹಸೀಲ್ದಾರ್ ಅವರ ನಿರ್ದೇಶನದಂತೆ ಆರ್ ಐ, ಕಾರ್ಯದರ್ಶಿಗಳು, ಸರ್ವೆ ಅಧಿಕಾರಿಗಳು ನಾಮಕಾವಸ್ಥೆಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.

ಮಾಜಿ ಮಂಡಲ ಪಂಚಾಯತಿ ಸದಸ್ಯರಾದ ಮುದ್ದರಾಯಪ್ಪ ಮಾತನಾಡಿ, 1986-87 ರಲ್ಲಿ ಮಂಡಲ ಪಂಚಾಯತಿ ಸದಸ್ಯರಾಗಿದ್ದಾಗ ಇಲ್ಲಿ ರಸ್ತೆ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶದಿಂದ ರೆಸಲ್ಯೂಷನ್ ಹೊರಡಿಸಿ ಜಿಲ್ಲಾ ಪಂಚಾಯಿತಿಯಿಂದ ಜಲ್ಲಿ ರಸ್ತೆ ಮಾಡಿಸಿದ್ದೆವು. ಹೀಗಾಗಿ ರಸ್ತೆ ಮಾಡಿಸಲು ಗ್ರಾಮಸ್ಥರನ್ನು ಕೇಳುವ ಅಗತ್ಯವಿಲ್ಲ, ಈಗಾಗಲೇ ಸರ್ಕಾರದ ಆದೇಶವಾಗಿದೆ. ಈ ಆದೇಶದ ಕಾಪಿ ಹಿಡಿದುಕೊಂಡು ನೇರವಾಗಿ ಬಂದು ರಸ್ತೆಯನ್ನು ಮಾಡಿಸಬಹುದು. ಅದರ ಬಗ್ಗೆ ಗಮನಕೊಡಬೇಕು ಅದನ್ನು ಬಿಟ್ಟು ಸುಮ್ಮನೆ ಬಂದು ಗಲಾಟೆ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಹೆರಿಗೆ ಸಮಸ್ಯೆ ರೋಗಿಗಳ ಸಮಸ್ಯೆ ಉಂಟಾದರೆ, ಹೆಗಲ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇದೆ. ಕೇವಲ ತುಮಕೂರಿಂದ ಈ ಗ್ರಾಮಕ್ಕೆ 12 ಕಿಲೋಮೀಟರ್ ಮಾತ್ರ ಇದೆ. ಇದನ್ನು ಸರಿ ಪಡಿಸಲು ಆಗದೆ ಇದ್ದರೆ ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಊರಿಗೂ ಅವರಿಗೂ ಏನು ಸಂಬಂಧವಿಲ್ಲ ಎಂದು ಬರೆದುಕೊಟ್ಟು ಬಿಡಲಿ ನಾವು ಸುಮ್ಮನಾಗಿ ಬಿಡುತ್ತೇವೆ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ, ರಸ್ತೆ ಮಾಡಬೇಕಾದರೆ ಅಕ್ಕಪಕ್ಕದ ಜಮೀನುಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರಿಗೂ ಒಂದೇ ರೀತಿಯಂತೆ ರಸ್ತೆ ಕಾಮಗಾರಿಯನ್ನು ನಡೆಸಬೇಕಿತ್ತು, ಆದರೆ ಇಲ್ಲಿ ಒಬ್ಬರಿಗೊಂದು ಮತ್ತೊಬ್ಬರಿಗೆ ಒಂದು ಎನ್ನುವಂತೆ ಆಗುತ್ತಿದೆ. ಇದಕ್ಕೆ ಗ್ರಾಮ ಪಂಚಾಯತಿ ಸದಸ್ಯರು ಮುಖ್ಯ ಕಾರಣ.
ಉಮೇಶ್,ಸ್ಥಳೀಯರು

ಸರ್ಕಾರದಿಂದ ಬರುವುದು ಯಾವುದೇ ಸೌಲಭ್ಯಗಳು ಸರಿಯಾಗಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಇಲ್ಲಿರುವಂತಹ ರಸ್ತೆ ಸಮಸ್ಯೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿ ಹರಿದಿತ್ತು. ಇಲ್ಲಿನ ರೈತರು ತರಕಾರಿಯನ್ನು ಬೆಳೆಯುತ್ತಿದ್ದು, ಅದನ್ನು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಲೋಹಿತ್ ಸ್ಥಳೀಯರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

ಅವರು ಮಾತನಾಡಿ,

Recent Articles

spot_img

Related Stories

Share via
Copy link