ತುಮಕೂರು:
ಕನ್ನಡ ನಾಡು, ನುಡಿ ಮತ್ತು ಸಂಸ್ಕøತಿಗೆ ಹಿಂದಿನಿಂದಲೂ ಮಹತ್ವದ ಸ್ಥಾನವಿದ್ದು, ಈಗಿನ ತಾಂತ್ರಿಕ ಮತ್ತು ಮಾಹಿತಿ ತಂತ್ರಜ್ಞಾನ ಕಾಲದ ಅಭಿವೃದ್ಧಿಯ ವೇಗದಲ್ಲಿಯೂ ನಮ್ಮ ಹಿರಿಮೆಯನ್ನು ಉಳಿಸಿಕೊಂಡು ಉನ್ನತೀಕರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.
ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಹಲವಾರು ಭಾಷೆಗಳ ಸಾರವನ್ನು ಅರಗಿಸಿಕೊಂಡು ಕನ್ನಡ ಭಾಷೆ ಶ್ರೀಮಂತವಾಗಿದ್ದು, ಈಗಿನ ಕಂಪ್ಯೂಟರ್ ಯುಗದಲ್ಲಿಯೂ ಕನ್ನಡವನ್ನು ಹೊಸ ತಾಂತ್ರಿಕತೆಗೆ ಒಗ್ಗುವಂತೆ ಪಳಗಿಸಿ. ಜನಜೀವನದ ನಿತ್ಯ ಬಳಕೆಯಲ್ಲಿ, ವ್ಯವಹಾರಗಳಲ್ಲಿ ಕನ್ನಡ ನೆಲೆ ನಿಲ್ಲುವಂತೆ ಮಾಡಬೇಕಾದ ನಿಟ್ಟಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯೋಚಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷೀಯ ಭಾಷಣ ಮಾಡಿದ ಶ್ರೀದೇವಿ ಚ್ಯಾರಿಟೆಬಲ್ ಟ್ರಸ್ಟ್‍ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಈಗಿನ ಕರ್ನಾಟಕವಾಗಿ ಕನ್ನಡ ನಾಡು ರೂಪುಗೊಳ್ಳುವಲ್ಲಿ ಆಲೂರು ವೆಂಕಟರಾಯರು, ಗಳಗನಾಥರು, ಬಿ.ಎಂ.ಶ್ರೀ, ಕುವೆಂಪು ಮುಂತಾದವರ ಹೋರಾಟವನ್ನು ಸ್ಮರಿಸಿ, ನಂತರದ ದಿನಗಳಲ್ಲಿ ಗಡಿಸಮಸ್ಯೆಗಳು ಮತ್ತು ಕನ್ನಡದ ಗೋಕಾಕ್ ಚಳವಳಿಯ ಸ್ಪೂರ್ತಿಗಳನ್ನು ವಿವರಿಸಿ, ಯುವಜನತೆ ನಾಡಿನ ಮತ್ತು ಭಾಷೆಯ ಮೇಲಿನ ಅಭಿಮಾನವನ್ನು ತಾಯಿ-ತಂದೆಯರ ಪ್ರೀತಿ ಮಮತೆಯಂತೆ ಕಾಪಾಡಿಕೊಳ್ಳಬೇಕು ಎಂದರು.
ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್ ಮಾತನಾಡಿ, ಹಾಡಿದ ಮಾತಿನಲ್ಲಿ ಮೇಲ್ಮಟ್ಟದ ಅಭಿಮಾನವನ್ನಷ್ಟೆ ತೋರದೆ ಭಾವನೆಗಳನ್ನು ನಮ್ಮ ನಡೆ, ನುಡಿ, ಪಾರಂಪರಿಕ ಆಚರಣೆಗಳು ಮತ್ತು ವ್ಯವಹಾರಗಳಲ್ಲಿ ಕನ್ನಡತನವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಳಸಿಕೊಂಡರೆ ಕನ್ನಡ ಭಾಷೆ ಸದಾ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ.ಎನ್.ಚಂದ್ರಶೇಖರ್, ಡಾ.ಕೆ.ಎಸ್.ರಾಮಕೃಷ್ಣ, ಪ್ರೊ.ಸಿ.ವಿ.ಷಣ್ಮುಖಸ್ವಾಮಿ, ಪ್ರೊ.ಇಜಾಜ್ ಅಹಮದ್ ಷರೀಫ್, ಪ್ರೊ.ವಾಸುದೇವ ಮೂರ್ತಿ, ಡಾ.ಮಹೇಶ್ ಕುಮಾರ್ ಪ್ರೊ.ಬಿ.ಜೆ.ಸದಾಶಿವಯ್ಯ, ಡಾ.ಸಿ.ನಾಗರಾಜ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ