ತುಮಕೂರು:
ಡಿ.10ರಂದು ನಡೆಯಲಿರುವ ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆ ಸ್ಪರ್ಧಾ ಕಣದಲ್ಲಿ 7 ಮಂದಿಯಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ತ್ರಿಕೋನ ಸಮರ ಏರ್ಪಟ್ಟಿದೆ.
ಕಾಂಗ್ರೆಸ್‍ನಿಂದ ಆರ್.ರಾಜೇಂದ್ರ, ಬಿಜೆಪಿಯಿಂದ ಎನ್.ಲೋಕೇಶ್‍ಗೌಡ ಹಾಗೂ ಜೆಡಿಎಸ್‍ನಿಂದ ಆರ್.ಅನಿಲ್‍ಕುಮಾರ್ ನಡುವೆ ಚುನಾವಣಾ ಅಖಾಡದಲ್ಲಿ ತೀವ್ರ ಹಣಾಹಣಿ ಕಂಡುಬಂದಿದ್ದು, ಚುನಾವಣೆ ಸಮೀಪಿಸುತ್ತಿರುವ ಕಡೇ ದಿನಗಳಲ್ಲಿ ಗೆಲುವಿನ ದಡ ಸೇರಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದಾರೆ.
ಅಭ್ಯರ್ಥಿಗಳ ಗೆಲುವಿಗೆ ಹಣಬಲ, ಜಾತಿಬಲ, ಪಕ್ಷಬಲ ಪ್ರಮುಖ ಮಾನದಂಡವಾಗಿ ತುಮಕೂರು ಚುನಾವಣಾ ಅಖಾಡದಲ್ಲಿ ಕಂಡುಬಂದಿದ್ದು, ಮತದಾರರನ್ನು ಯಾವ ರೀತಿ ಒಲಿಸಿಕೊಳ್ಳಬಹುದೆಂಬ ರಾಜಕೀಯ ಲೆಕ್ಕಚಾರಗಳೊಂದಿಗೆ ಜಾತಿ ನಾಯಕರು, ಧರ್ಮಗುರುಗಳು, ಹಣ, ಪಕ್ಷ ನಿಷ್ಠೆಯನ್ನು ಮುಂದು ಮಾಡಿ ಮತಗಳಿಕೆಗೆ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮುಂದಾಗಿವೆ.
ನಾಯಕ ವರ್ಸಸ್ ನಾಯಕ:
ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಜಿಲ್ಲೆಯ ಮತದಾರರೊಂದಿಗೆ ಹೊಂದಿರುವ ನಿರಂತರ ಒಡನಾಟವನ್ನು ಆಧರಿಸಿ , ಪಕ್ಷದ ಬೆಂಬಲಿತ ಗ್ರಾಪಂ ನಗರಸ್ಥಳೀಯ ಸಂಸ್ಥೆ ಸದಸ್ಯರ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಜಿಲ್ಲೆಯ ಕೈ ನಾಯಕರೊಂದಿಗೆ ನಿರತರಾಗಿದ್ದು, ಅಹಿಂದ ವರ್ಗ ಸೇರಿ ಪಕ್ಷ ನಿಷ್ಟ ಇತರೆ ಸಮುದಾಯದ ಸದಸ್ಯರ ಮತಗಳಿಕೆಯೊಂದಿಗೆ ಗೆಲ್ಲುವ ವಿಶ್ವಾಸವ್ಯಜದ್ದಾರೆ.
ಆದರೆ ಕಾಂಗ್ರೆಸ್ ಅಭ್ಯರ್ಥಿ ಸೇರಿರುವ ನಾಯಕ ಸಮುದಾಯದವರೇ ಆದ ಆರ್.ಅನಿಲ್‍ಕುಮಾರ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಒಕ್ಕಲಿಗ ಸಮುದಾಯ ಬೆಂಬಲಿತ ಸದಸ್ಯರ ಮತಗಳೊಟ್ಟಿಗೆ ಇತರೆ ಸಮುದಾಯಗಳ ಮತಗಳನ್ನು ಪಡೆದು ಈ ಮೂಲಕ ಕಳೆದ ಲೋಕಸಭೆ ಚುನಾವಣೆ ಸೋಲಿಗೂ ಉತ್ತರ ನೀಡುವುದು ಗೌಡರ ತಂತ್ರಗಾರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಜೆಪಿ ಅಭ್ಯರ್ಥಿ ಡಾರ್ಕ್ ಹಾರ್ಸ್ ಎಂಟ್ರಿ:
ಸಂಘ ಪರಿವಾರದ ಹಿನ್ನೆಲೆಯ ಬಿಬಿಎಂಪಿ ಮಾಜಿ ಸದಸ್ಯ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್‍ಗೌಡ ಡಾರ್ಕ್ ಹಾರ್ಸ್ ರೀತಿಯಲ್ಲಿ ತುಮಕೂರಿನ ಪರಿಷತ್ ಚುನಾವಣಾ ಅಖಾಡಕ್ಕೆ ಎಂಟ್ರಿಕೊಟ್ಟಿದ್ದು, ಸ್ಪರ್ಧಾಕಣದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಪೈಪೋಟಿಯೊಡ್ಡಿರುವುದು ಚುನಾವಣಾ ಕಣವನ್ನು ರಂಗೇರಿಸಿದೆ.
ಕುಂಚಿಟಿಗ ಸಮುದಾಯಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ, ಲಿಂಗಾಯಿತ, ಒಕ್ಕಲಿಗ ಮತಗಳ ಹೆಚ್ಚಿನ ನಿರೀಕ್ಷೆಯೊಂದಿಗೆ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಮೌಲ್ಯಯುತ ರಾಜಕಾರಣದ ಆಶಯದೊಂದಿಗೆ ಜೆಡಿಯು ಬೆಂಬಲಿತ ಕೆಆರ್‍ಎಸ್ ಪಾರ್ಟಿಯ ಗಜೇಂದ್ರಕುಮಾರ್, ಪಕ್ಷೇತರರಾಗಿ ನಿವೃತ್ತ ಅಭಿಯಂತರ ಆರ್.ಜಯರಾಮಯ್ಯ, ಆರ್.ಎ.ಪ್ರಕಾಶ್, ಎಂ.ಎಸ್.ವಿಜಯಪ್ರಕಾಶ್ ಕಣಕ್ಕಿಳಿದಿದ್ದು, ಎಷ್ಟು ಪ್ರಾಶಸ್ತ್ಯ ಮತಗಳು ಪಡೆಯುವರೆಂಬುದು ಫಲಿತಾಂಶದ ದಿನ ತಿಳಿಯಲಿದೆ.
ಬಂಡಾಯ, ಒಳೇಟುಗಳ ಚಿಂತೆ:
ಗೆಲುವಿನ ಹುಮ್ಮಸ್ಸಿನಲ್ಲಿರುವ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು, ನಾಯಕರು ನಾವೆಲ್ಲ ಒಟ್ಟಾಗಿದ್ದೇವೆ ಎಂದು ಬಹಿರಂಗವಾಗಿ ತೋರ್ಪಡಿಸಿ ಪ್ರಚಾರ ಮಾಡುತ್ತಿದ್ದರೂ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಈ 3 ಪಕ್ಷಗಳ ನಾಯಕರುಗಳ ಆಂತರ್ಯದ ಅಸಮಾಧಾನಗಳು, ಹಿಂದಿನ ಚುನಾವಣೆ ಅನುಭವಗಳು ಎಲ್ಲಿ ಮತ್ತೆ ಒಳೇಟುಗಳನ್ನು ಕೊಟ್ಟು ಗೆಲುವಿಗೆ ತೊಡಕಾಗುತ್ತಾರೆಂಬ ಚಿಂತೆಗೀಡುಮಾಡಿದೆ. ಇದನ್ನು ಅರಿತೇ ಅಭ್ಯರ್ಥಿಗಳು, ಅವರ ಬೆಂಬಲಿಗರು ಹಣ ಹಂಚಿಕೆಯಲ್ಲೂ ಮುಖಂಡರನ್ನೇ ಹೆಚ್ಚಾಗಿ ನಂಬದೆ ತಮ್ಮದೇ ಸಂಪರ್ಕ ಜಾಲದ ಮೂಲಕ ಖುದ್ದು ಮತದಾರರನ್ನು ಭೇಟಿ ಮಾಡುವ ಕಾರ್ಯ ಮಾಡುತ್ತಿದ್ದಾರೆ.
ಗ್ರಾಪಂ ಸದಸ್ಯರ ಮತಕ್ಕೆ ಹೆಚ್ಚಿದ ಡಿಮ್ಯಾಂಡ್!
ಕ್ಷೇತ್ರದ ಒಟ್ಟು 5559 ಮತದಾರರಲ್ಲಿ ಈ ಬಾರಿ ಜಿಪಂ ತಾಪಂ ಸದಸ್ಯರಿಲ್ಲದೆ ಗ್ರಾಪಂ ಸದಸ್ಯರೇ 5299 ಸಂಖ್ಯೆಯಲ್ಲಿರುವುದು ಪಂಚಾಯಿತಿ ಸದಸ್ಯರಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಸಿದೆ. ಪಂಚಾಯಿತಿ ಸದಸ್ಯರಿಗೆ 50 ಸಾವಿರದವರೆಗೂ ಪ್ರತೀ ಮತಕ್ಕೆ ಡಿಮ್ಯಾಂಡ್ ಇಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ನಗರ ಸ್ಥಳೀಯ ಸಂಸ್ಥೆ ಸದಸ್ಯರು ಇನ್ನೂ ಹೆಚ್ಚಿನ ಹಣದ ಡಿಮ್ಯಾಂಡ್ ಪಟ್ಟಿಯಲ್ಲಿದ್ದಾರೆ. 3 ಪಕ್ಷಗಳಿಂದ ಅನುಕೂಲ ಪಡೆಯಲು ಬಹುತೇಕ ಸದಸ್ಯರು ಮುಂದಾಗಿದ್ದು, ಅಭ್ಯರ್ಥಿಗಳು ಮನೆಬಾಗಿಲಿಗೆ ಬಂದಾಗ ಪಕ್ಷಾತೀತರಂತೆ ನಡವಳಿಕೆ ತೋರಿ, ತಮಗಿಷ್ಟ ಬಂದವರಿಗೆ ಮತಹಾಕಲು ನಿರ್ಧರಿಸಿದ್ದಾರೆಂಬ ಮಾತುಗಳು ಚುನಾವಣಾ ಅಖಾಡದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.
ಜೆಡಿಎಸ್-ಬಿಜೆಪಿಯಲ್ಲಿ ಮೈತ್ರಿ ರಾಜಕಾರಣದ ಗೊಂದಲ
ಜೆಡಿಎಸ್-ಬಿಜೆಪಿ ಮೈತ್ರಿ ವಿಷಯದ ಕುರಿತು ಮಂಗಳವಾರ ತೀರ್ಮಾನ ಪ್ರಕಟಿಸುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಕೊನೆ ಕ್ಷಣದಲ್ಲಿ ಜೆಡಿಎಸ್-ಬಿಜೆಪಿ, ಯಾರು-ಯಾರನ್ನು ಬೆಂಬಲಿಸುತ್ತಾರೆ. ತುಮಕೂರು ಕ್ಷೇತ್ರದಲ್ಲಿ ಮೈತ್ರಿ ರಾಜಕಾರಣ ಕುದುರುತ್ತದೆಯೇ ಎಂಬ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ತುಮಕೂರು ಕ್ಷೇತ್ರದಲ್ಲಿ ಈ ಮೈತ್ರಿಯಾದರೆ ಕೆಎಎಸ್ ಹುದ್ದೆ ತ್ಯಜಿಸಿ ಜೆಡಿಎಸ್ ಅಭ್ಯರ್ಥಿಯಾದ ಆರ್.ಅನಿಲ್‍ಕುಮಾರ್, ಬಿಜೆಪಿ ಅಭ್ಯರ್ಥಿಯಾದ ಎನ್.ಲೋಕೇಶ್‍ಗೌಡ ಅವರ ಪಾಡೇನು? ಹರಕೆಯ ಕುರಿ ಯಾರಾಗುವರು ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ