ತುಮಕೂರು:
ಉತ್ತಮ ಫಸಲು ಬಂದರೂ ಅದನ್ನು ಕೊಯ್ಲು ಮಾಡಲಾಗದೆ ರಾಗಿ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿಬಿಟ್ಟರು. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲವಲ್ಲ ಎಂಬ ನೋವಿನ ಕನವರಿಕೆಯ ನಡುವೆಯೆ ಸಿಕ್ಕಿದಷ್ಟು ರಾಗಿಯನ್ನು ಸಂಗ್ರಹಿಸುವ ಪ್ರಯತ್ನ ಮಾಡಿದ್ದಾರೆ.
ಮಳೆಯಿಲ್ಲದೆ ಬೆಳೆ ಬಾಡಿ ಹೋಗಿದ್ದರೆ ಅಥವಾ ವರುಣನ ಕೃಪೆಯೆ ಆಗದಿದ್ದರೆ ರೈತ ಈ ಪರಿಯ ಚಿಂತನೆಗೆ ಒಳಗಾಗುತ್ತಿರಲಿಲ್ಲ. ಆದರೆ ಎಲ್ಲವೂ ಸಲೀಸಾಗಿಯೆ ನಡೆದು ಕೊನೆಯ ಹಂತದಲ್ಲಿ ರಾಗಿ ಕೈಗೆ ಸಿಗದೆ ಇರುವುದರಿಂದ ರೈತರಲ್ಲಿ ಅಸಹನೆ, ಆಕ್ರೋಶ, ನೋವು, ನಿರಾಸೆ ಎಲ್ಲವೂ ಹೊರಹೊಮ್ಮುತ್ತಿದೆ.
ಕಳೆದ ಒಂದೂವರೆ ತಿಂಗಳಿನಿಂದ ನಿರಂತರವಾಗಿ ಸುರಿದ ಮಳೆ ಇತ್ತೀಚೆಗೆ ವಿರಾಮ ಕೊಟ್ಟಿದೆ. ಆದರೆ ರೈತರಿಗೆ ನೆಮ್ಮದಿಯಂತೂ ಇಲ್ಲ. ಒಂದೆರಡು ದಿನ ಬಿಡುವು ಕೊಟ್ಟು ಕ್ರಮೇಣ ದಿಢೀರ್ ಮಳೆ ಸುರಿಯುವ, ಮೋಡ ಕಟ್ಟುವ ವಾತಾವರಣದಿಂದಾಗಿ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಲೆ ಇದ್ದಾನೆ. ಇನ್ನೇನು ಮಳೆ ಹೋಯಿತು, ಬಿಸಿಲು ಶುರುವಾಗಿದೆ ಎಂದು ರಾಗಿ ಕೊಯ್ಲು, ಬಣವೆ ನಿರ್ಮಾಣಕ್ಕೆ ಹೊರಟರೆ ಮೋಡ ಮುಸುಕಿದ ವಾತಾವರಣ ಎದುರಾಗುತ್ತಿದೆ. ದಿನಬಿಟ್ಟು ದಿನ ಮಳೆಯೂ ಆಗುತ್ತಿದೆ. ಇದ್ದ ಒಂದಿಷ್ಟು ರಾಗಿಯ ಬೆಳೆಯನ್ನು ಕೊಯ್ಲು ಮಾಡಲಾಗದೆ ಸಂಕಟವನ್ನು ಅನುಭವಿಸುತ್ತಿದ್ದಾನೆ.
ರಾಗಿ ಕಟಾವು ಮಾಡಲು ಈ ಬಾರಿ ಕೂಲಿಯಾಳುಗಳಿಗೆ ವಿಪರೀತ ಬೇಡಿಕೆ ಮತ್ತು ಅಭಾವ ಸೃಷ್ಟಿಯಾದ ಕಾರಣ ರಾಗಿ ಕೊಯ್ಲು ಯಂತ್ರಗಳಿಗೆ ಬೇಡಿಕೆ ಹೆಚ್ಚಿತು. ಪ್ರತಿ ಗಂಟೆಗೆ 3 ಸಾವಿರ ರೂ.ಗಳಿಂದ 4 ಸಾವಿರ ರೂ.ಗಳವರೆಗೆ ಏಜೆಂಟರು ದರ ನಿಗದಿಪಡಿಸಿದರು. ಯಂತ್ರಗಳು ಕಡಿಮೆ ಇದ್ದು ಎಲ್ಲ ಕಡೆಯೂ ಏಕಕಾಲಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರೈತರು ಹಿಂದುಮುಂದು ನೋಡದೆ ಯಂತ್ರಗಳ ಹಿಂದೆ ಬಿದ್ದರು. ಏಜೆಂಟರುಗಳಿಗೆ ಇದೇ ಬಂಡವಾಳವಾಯಿತು.
ವಿಪರೀತ ದರ ನಿಗದಿಯಾಗುತ್ತಿರುವುದು ಮಾಧ್ಯಮಗಳ ಮೂಲಕ ಬಯಲಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳು ಒಂದು ಸುತ್ತೋಲೆ ಹೊರಡಿಸಿದರು. ಅದರಂತೆ ಪ್ರತಿ ಗಂಟೆಗೆ 2700 ರೂ. ಮೀರದಂತೆ ಬಾಡಿಗೆ ದರ ನಿಗದಿಪಡಿಸಿದರು. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಕಂಡುಬಂದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇಷ್ಟಾದರೂ ದರ ನಿಯಂತ್ರಣಕ್ಕೆ ಬರಲಿಲ್ಲ. ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ರೈತರು ದರ ನಿಗದಿಯ ಬಗ್ಗೆ ಅಷ್ಟಾಗಿ ಗಮನ ಹರಿಸಲಿಲ್ಲ. ಈಗಾಗಲೇ ಮಳೆ ಬಂದು ಅರ್ಧಕ್ಕೂ ಹೆಚ್ಚು ಬೆಳೆ ಮೊಳಕೆಯೊಡೆದಿದೆ. ಇರುವಷ್ಟು ರಾಗಿ ಮನೆಗೆ ಬಂದರೆ ಸಾಕು ಎಂಬ ಧಾವಂತದಲ್ಲಿ ಕೇಳಿದಷ್ಟು ಹಣ ಕೊಟ್ಟು ರಾಗಿ ಕಟಾವು ಮಾಡಿಸಿ ತಂದು ಮನೆಗೆ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ಯಂತ್ರಗಳನ್ನು ಎದುರು ನೋಡುತ್ತಿದ್ದಾರೆ. ಈ ನಡುವೆ ಮೋಡ ಮುಸುಕಿದ ವಾತಾವರಣ ಹಾಗೂ ಮಳೆ ಬರುವ ಸಾಧ್ಯತೆಗಳು ಇನ್ನೂ ಮುಂದುವರೆದೆ ಇರುವುದು ರೈತರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸಿದೆ.
ತುಮಕೂರು ಜಿಲ್ಲೆಯಲ್ಲಿ 2020-22ನೆ ಸಾಲಿನಲ್ಲಿ 1,53,882 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆದಿರುವುದಾಗಿ ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ. ಜಿಲ್ಲೆಯ 5 ತಾಲ್ಲೂಕುಗಳಲ್ಲಿ ರಾಗಿ ಪ್ರಮುಖ ಬೆಳೆ. ಇತರೆ ತಾಲ್ಲೂಕುಗಳಲ್ಲಿಯೂ ಬೆಳೆಯಲಾಗುತ್ತಿದೆ. ಆದ್ಯತೆಯ ಬೆಳೆಯಾಗಿ ಪರಿಗಣಿಸಿರುವ ತಾಲ್ಲೂಕುಗಳಲ್ಲಿ ಕಟಾವಿನ ಹಂತಕ್ಕೆ ಬಂದಾಗ ಎದುರಾದ ಅತಿವೃಷ್ಟಿ ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಹೀಗಾಗಿ ಮಳೆ ಬಂದರೂ ಬೆಳೆಯನ್ನು ನಿರೀಕ್ಷಿಸಲಾಗದ, ರಾಗಿಯಿಂದ ಉತ್ತಮ ಇಳುವರಿ ಪಡೆಯಲಾಗದ ಸ್ಥಿತಿ ರೈತನದ್ದು.
ಊರು ಸೇರಿದ್ದವರು ಪಟ್ಟಣದತ್ತ
ಕಳೆದ ಎರಡು ವರ್ಷಗಳಿಂದ ನಗರ ಸೇರಿದ್ದ ಗ್ರಾಮೀಣ ಯುವಕರು ಕೊರೊನಾ ಹಿನ್ನೆಲೆಯಲ್ಲಿ ಊರು ಸೇರಿದ್ದರು. ತಮ್ಮ ತಮ್ಮ ಜಮೀನುಗಳನ್ನು ಹಸನುಗೊಳಿಸಿ ಕೃಷಿ ಚಟುವಟಿಕೆಗೆ ಮುಂದಾಗಿದ್ದರು. ಸುಯೋಗವೋ ಎಂಬಂತೆ ಈ ಬಾರಿ ಉತ್ತಮ ಮಳೆಯಾಯಿತು. ಜೂನ್ ಆರಂಭದಲ್ಲೇ ಮುಂಗಾರು ಮಾರುತ ಆಶಾದಾಯಕವಾಗಿದ್ದು, ಬಿತ್ತನೆ ಕಾರ್ಯವೂ ಚುರುಕುಗೊಂಡಿತ್ತು. ಹಳ್ಳಿ ಸೇರಿದ್ದ ನಗರ ವಲಸಿಗರು ಕೃಷಿಯಲ್ಲಿ ಈ ಬಾರಿ ಉತ್ತಮ ಇಳುವರಿ ಸಿಗಲಿದೆ ಎಂದುಕೊಂಡಿದ್ದರು. ಆದರೆ ಅವರೆಲ್ಲರಿಗೆ ಈಗ ನಿರಾಸೆಯಾಗಿದೆ. ಕಷ್ಟಪಟ್ಟು ಬೆಳೆದ ಯಾವುದೇ ಬೆಳೆಯೂ ಸಿಗುತ್ತಿಲ್ಲ. ಟೊಮ್ಯಾಟೊ ನೀರಿನೊಳಗೆ ಮುಳುಗಿ ಹಾಳಾಗಿದೆ. ರಾಗಿ ಕೈಗೆ ಸಿಗುತ್ತಿಲ್ಲ. ಯಾವುದೆ ಬೆಳೆಯೂ ನಿರೀಕ್ಷಿತ ಇಳುವರಿ ತರುತ್ತಿಲ್ಲ. ಆದಾಯಕ್ಕಿಂತ ನಷ್ಟವೆ ಅಧಿಕವಾಗುತ್ತಿದೆ. ಇದೆಲ್ಲವನ್ನು ಮನಗಂಡು ಹಳ್ಳಿ ಸೇರಿದ್ದ ಯುವಕರು ಮತ್ತೆ ನಗರಗಳ ಹಾದಿ ಹಿಡಿಯುತ್ತಿದ್ದಾರೆ.
ಕ್ಷೀಣಿಸುತ್ತಿರುವ ಬಣವೆಗಳು…
ಪ್ರತಿವರ್ಷ ಈ ಸಮಯದಲ್ಲಿ ರಾಗಿಯ ಬಣವೆಗಳು ಕಾಣುತ್ತಿದ್ದವು. ಎಲ್ಲೆಲ್ಲಿ ರಾಗಿ ಬೆಳೆಯನ್ನು ಆದ್ಯತೆಯ ಪ್ರಮುಖ ಬೆಳೆಯಾಗಿ ಬೆಳೆಯಲಾಗುವುದೋ ಅಲ್ಲೆಲ್ಲಾ ದೊಡ್ಡ ದೊಡ್ಡ ಬಣವೆಗಳು ಎದ್ದು ನಿಲ್ಲುತ್ತಿದ್ದವು. ಈ ಬಾರಿ ಅಂತಹ ಬಣವೆಗಳು ಕಾಣುತ್ತಿಲ್ಲ. ರಾಗಿ ಕಟಾವು ಮಾಡಿದ ನಂತರ ಮೂರ್ನಾಲ್ಕು ದಿನ ಹೊಲದಲ್ಲಿಯೇ ನೈಸರ್ಗಿಕವಾಗಿ ಒಣಗಿಸಿ ನಂತರ ಬಣವೆಗೆ ಹಾಕಲಾಗುತ್ತದೆ. ಈ ಬಾರಿ ಈ ಪ್ರಕ್ರಿಯೆಗೆ ಅವಕಾಶವೆ ಸಿಗಲಿಲ್ಲ. ಮೊಳಕೆಯೊಡೆದ ರಾಗಿ ಒಂದು ಕಡೆಯಾದರೆ ಇರುವ ಒಂದಷ್ಟು ರಾಗಿಯನ್ನು ಕೊಯ್ಲು ಮಾಡುವುದೇ ರೈತಾಪಿ ವರ್ಗಕ್ಕೆ ಒಂದು ಸಮಸ್ಯೆ ಮತ್ತು ಸವಾಲಾಗಿ ಪರಿಣಮಿಸಿತು. ಹೀಗಾಗಿ ರಾಗಿ ಕೊಯ್ಲು ಯಂತ್ರಗಳಿಗೆ ಮಾರು ಹೋದ ಕಾರಣ ಬಣವೆಗಳ ಸಂಖ್ಯೆ ಕ್ಷೀಣಿಸಿವೆ. ರಾಗಿ ಬೆಳೆ ಮುಂದಿನ ದಿನಗಳಲ್ಲಿ ಅತ್ಯಂತ ಕಷ್ಟದಾಯಕ ಎಂಬುದನ್ನು ಈಗಿನ ವಾತಾವರಣ ನಿರೂಪಿಸುವಂತಿದೆ.
ರಾಗಿ ಬೆಳೆಗೆ ಹಿನ್ನಡೆಯಾದರೆ ಅಪಾಯ
ಮನುಷ್ಯನಿಗೆ ತರಾವರಿ ಕಾಯಿಲೆಗಳು ಆವರಿಸಿಕೊಳ್ಳುತ್ತಿರುವುದರಿಂದ ಸಿರಿಧಾನ್ಯಗಳಿಗೆ ಮಾರು ಹೋಗುತ್ತಿದ್ದಾರೆ. ಇವೆಲ್ಲ ಹಿಂದೆ ಬೆಳೆಯುತ್ತಿದ್ದ ಸಾಂಪ್ರದಾಯಿಕ ಬೆಳೆಗಳು. ಇದರಲ್ಲಿ ರಾಗಿಯೂ ಸೇರಿ ಹೋಗಿದೆ. ಹಿಂದೆಲ್ಲ ರಾಗಿ ಮುದ್ದೆ, ರೊಟ್ಟಿ ತಿನ್ನುವವರನ್ನು ಕೆಲವರು ಆಡಿಕೊಳ್ಳುತ್ತಿದ್ದರು. ಈಗ ರಾಗಿ ಮುದ್ದೆ ಅನಿವಾರ್ಯ ಎನ್ನುವ ಸ್ಥಿತಿಗೆ ವ್ಯವಸ್ಥೆ ಬಂದು ನಿಂತಿದೆ. ಆದರೆ ರಾಗಿ ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೊಲಕ್ಕೆ ಪೈರು ನಾಟಿ ಮಾಡಿ ಬೆಳೆ ತೆಗೆದು ಕಣ ಮಾಡಿ ರಾಗಿ ಮತ್ತು ಹುಲ್ಲನ್ನು ಬೇರ್ಪಡಿಸುವ ಒಕ್ಕಣೆಯ ಪ್ರಕ್ರಿಯೆಗಳು ಈಗಿನ ಕಾಲಕ್ಕೆ ಹೆಚ್ಚು ದುಬಾರಿಯಾಗುತ್ತಿದೆ. ಇವೆಲ್ಲವನ್ನೂ ಪರಿಗಣಿಸಿ ರಾಗಿ ವ್ಯವಸಾಯದಿಂದ ವಿಮುಖರಾಗುತ್ತಿರುವ ರೈತರು ಹೆಚ್ಚುತ್ತಿದ್ದಾರೆ. ಪರಿಣಾಮವಾಗಿ ರಾಗಿ ಬೆಳೆಯುವವರ ಸಂಖ್ಯೆ ಕ್ಷೀಣಿಸಿ ಈ ಬೆಳೆಯೂ ದುಬಾರಿಯಾಗುವುದರಲ್ಲಿ ಸಂದೇಹವಿಲ್ಲ.
– ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ