ತುಮಕೂರು – ಬೆಂಗಳೂರು ಟೋಲ್

ಬೆಂಗಳೂರು:

ಹೆದ್ದಾರಿಗಳಲ್ಲಿನ ಟೋಲ್‍ಗಳಲ್ಲಿ ಅನವಶ್ಯಕವಾಗಿ ಹಣ ಸಂಗ್ರಹ ಮಾಡಿ ಜನರಿಗೆ ವಂಚಿಸಲು ಅವಕಾಶ ನೀಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನ ಪರಿಷತ್ತಿನಲ್ಲಿ ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಿಂದ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರು ನೆಲಮಂಗಲದ ನಡುವೆ ಆರು ಟೋಲ್‍ಗಳಿವೆ. ಇಲ್ಲಿ ದಿನವೊಂದಕ್ಕೆ 23 ಲಕ್ಷ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ ಎಂದರು.

ಅದನ್ನು ನವದೆಹಲಿಯ ಹೆದ್ದಾರಿ ಪ್ರಾಧಿಕಾರದ ಕೇಂದ್ರ ಸ್ಥಾನದ ಖಾತೆಯಲ್ಲಿ ಇಡಲಾಗಿದೆ. ನೆಲಮಂಗಲದಿಂದ ತುಮಕೂರು ನಡುವಿನ ಕ್ಯಾತಸಂದ್ರ ಮತ್ತು ಕುಲುಮೆಪಾಲ್ಸಿಯ ಟೋಲ್‍ಗಳಿಂದ ದಿನಕ್ಕೆ ಸುಮಾರು 25 ಲಕ್ಷದ 76 ಸಾವಿರ ರೂಪಾಯಿ ಸಂಗ್ರಹವಾಗುತ್ತಿದೆ ಎಂದರು.

ನೆಲಮಂಗಲ ಟೋಲ್ ಮತ್ತು ಕ್ಯಾತ್ಸಂದ್ರ ಟೋಲ್‍ನ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ಸಂಸ್ಥೆಯ ಒಡಂಬಡಿಕೆ ಅವಧಿ ಮುಗಿದಿದ್ದರೂ ಹಾರ್ಬಿಟ್ರೇಶನ್ ಕಮಿಟಿ ಆದೇಶದ ಅನುಸಾರ 474 ದಿನಗಳ ಕಾಲ ಮುಂದುವರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಕಮಿಟಿ ಆದೇಶದ ವಿರುದ್ಧ ನ್ಯಾಯಾಲಯದ ದಾವೆ ಹೂಡಿದ್ದು, ಬರುವ ಆದೇಶದ ಅನುಸಾರ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನಾ ಶಾಸಕ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಮೀತಿ ಮೀರಿ ಹಣ ವಸೂಲಿಯಾಗುತ್ತಿದೆ. ಟೋಲ್ ಅವಧಿ ಮುಗಿದು 6 ತಿಂಗಳಾದರೂ ಇಂದಿಗೂ ಈ ನೆಲಮಂಗಲ ಮತ್ತು ಕ್ಯಾತ್ಸಂದ್ರ ಟೋಲ್‍ಗಳಲ್ಲಿ ಟೋಲ್ ಶುಲ್ಕವನ್ನು ಸಾರ್ವಜನಿಕರಿಗೆ ವಿಧಿಸುವ ಮೂಲಕ ಹಗಲು ದರೋಡೆ ಮಾಡಲಾಗುತ್ತಿದೆ. ಆದರೂ ಖಾಸಗಿ ಕಂಪನಿಗಳು ಹಣ ಸಂಗ್ರಹಿಸುತ್ತಿವೆ ಎಂದು ಆರೋಪಿಸಿದರು.

ಸದಸ್ಯ ಸಿ.ಎಂ.ಇಬ್ರಾಹಿಂ ಹೆದ್ದಾರಿ ರಸ್ತೆಗಳ ಗುಣಮಟ್ಟ ಗ್ರಾಮೀಣ ಭಾಗಕ್ಕಿಂತಲೂ ಕೆಟ್ಟದಾಗಿದೆ. ಆದರು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಸಚಿವ ಸಿ.ಸಿ. ಪಾಟೀಲ್, ಕ್ಯಾತ್ಸಂದ್ರದಿಂದ ತುಮಕೂರುವರೆಗೆ ಹದಗೆಟ್ಟಿರುವ ರಸ್ತೆ ದುರಸ್ತಿಪಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link