ಕಾಗದದಲ್ಲೇ ಉಳಿದ ಕಂದಾಯ ಗ್ರಾಮಗಳ ಭರವಸೆ

ತುಮಕೂರು:

 ಇಚ್ಛಾಶಕ್ತಿಯ ಕೊರತೆ ಅಧಿಸೂಚನೆಗಷ್ಟೇ ಸೀಮಿತವಾದ ಸರ್ಕಾರಿ ಆದೇಶ

       ತಾಂಡಾ, ಗೊಲ್ಲರಹಟ್ಟಿ ಸೇರಿದಂತೆ ರಾಜ್ಯದಲ್ಲಿನ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ವಿಧಾನ ಮಂಡಲದಲ್ಲಿ ಸಚಿವ ಆರ್. ಅಶೋಕ್ ವ್ಯಕ್ತಪಡಿಸಿದ್ದಾರೆ.

ಅಧಿವೇಶನ ನಡೆಯುವಾಗ ಈ ಪ್ರಸ್ತಾಪಗಳು ವ್ಯಕ್ತವಾಗುತ್ತವೆ. ಸಂಬಂಧಿಸಿದ ಸಚಿವರು ಪ್ರಶ್ನೆಗೆ ಉತ್ತರ ನೀಡಿ ಶೀಘ್ರವೇ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತಾರೆ. ಅಲ್ಲಿಗೆ ಆ ವಿಷಯ ಮುಕ್ತಾಯ. 2017 ರಿಂದ ವಿಧಾನ ಮಂಡಲದಲ್ಲಿ ಈ ವಿಷಯ ಚರ್ಚೆಗೆ ಬರುತ್ತಲೇ ಇದೆ. ಆದರೆ ಕಾರ್ಯರೂಪಕ್ಕೆ ಬಾರದೆ ಇರುವುದು ಈ ವ್ಯವಸ್ಥೆಯ ಒಂದು ಅಣಕವಾಗಿದೆ.

ರಾಜ್ಯದಲ್ಲಿ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಹಾಡಿ, ಮಜರೆ ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರಹಟ್ಟಿ, ಕುರುಬರ ಹಟ್ಟಿ, ದೊಡ್ಡಿ, ಪಾಳು, ಕ್ಯಾಂಪ್, ಕಾಲೋನಿ ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುವ ದಾಖಲೆ ರಹಿತ ಜನವಸತಿಗಳನ್ನು 2020ರ ವೇಳೆಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ 2019ರಲ್ಲಿಯೇ ಚಾಲನೆ ಸಿಕ್ಕಿತ್ತು. ಆದರೆ ಕಾರ್ಯರೂಪಕ್ಕೆ ಬರಲೇ ಇಲ್ಲ. ದಶಕದಿಂದ ಚರ್ಚೆಯಾಗುತ್ತಿರುವ ಈ ಧ್ವನಿಗೆ ಇನ್ನೂ ಅಂತ್ಯ ಸಿಕ್ಕಿಲ್ಲ. ಕೇವಲ ಭರವಸೆಗಳೇ ಎದುರಾಗುತ್ತವೆ.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೇ ಕಂದಾಯ ಗ್ರಾಮಗಳ ಪರಿವರ್ತನೆ ಕಾರ್ಯಕ್ಕೆ ಅಧಿಸೂಚನೆ, ಮಾರ್ಗಸೂಚಿ ರಚಿಸಲಾಗಿತ್ತು. 50 ಮತ್ತು ಅದಕ್ಕಿಂತ ಹೆಚ್ಚು ಮನೆ ಅಥವಾ 250ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗುಚ್ಛವನ್ನು ಸ್ವತಂತ್ರ ಕಂದಾಯ ಗ್ರಾಮವೆಂದು ಪರಿವರ್ತಿಸಲು ಸರ್ಕಾರಗಳು ಹೆಣಗಾಡುತ್ತಿರುವುದೇಕೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ.

ದಾಖಲೆರಹಿತ ಜನವಸತಿ ಸರ್ಕಾರಿ ಜಮೀನಿನಲ್ಲಿದ್ದರೆ ಅದನ್ನು ಕಂದಾಯ ಗ್ರಾಮವನ್ನಾಗಿಸುವುದು, ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮ, ಉಪ ಗ್ರಾಮವನ್ನಾಗಿ (ಮಜರೆ) ಪರಿವರ್ತಿಸಲು ಭೂ ಸುಧಾರಣಾ ಕಾಯ್ದೆ 1961 ಕಲಂ 38 ಎ ಪ್ರಕಾರ 2ಇ ಅಧಿಸೂಚನೆಯನ್ನು 2019 ರಲ್ಲಿಯೇ ಹೊರಡಿಸಲಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿತ್ತು. ಆದರೂ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ಯಾವುದೇ ಜನವಸತಿ ಪ್ರದೇಶವು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಬೇಕೆಂದರೆ ಅದಕ್ಕೆ ಸಮಾಜ ಮತ್ತು ಸರ್ಕಾರದ ಅಧಿಕೃತ ಮಾನ್ಯತೆ ಇರಬೇಕು. ರಾಜ್ಯದಲ್ಲಿರುವ ದುರ್ಬಲ ಮತ್ತು ಹಿಂದುಳಿದ ಸಮುದಾಯಗಳು ವಾಸಿಸುವ ಹಲವು ದಾಖಲೆರಹಿತ ಜನವಸತಿ ಪ್ರದೇಶಗಳು ಸರ್ಕಾರದ ಅಧಿಕೃತ ಮಾನ್ಯತೆ ಇಲ್ಲದೆ ಮಜರೆ ಗ್ರಾಮಗಳಾಗಿ ಅಸ್ತಿತ್ವದಲ್ಲಿವೆ. ಇಂತಹ ದಾಖಲೆರಹಿತ ಮಜರೆ ಗ್ರಾಮಗಳನ್ನು ಅಧಿಕೃತವಾಗಿ ಗುರುತಿಸಲು ಕಂದಾಯ ಗ್ರಾಮವೆಂದು ಸರ್ಕಾರದಿಂದ ಘೋಷಿಸಲಾಗುತ್ತದೆ.

ಕಂದಾಯ ಗ್ರಾಮಗಳನ್ನಾಗಿ ರಚನೆಯಾಗುವ ಗ್ರಾಮಗಳನ್ನು ಮೂಲ ಗ್ರಾಮ ಹಾಗೂ ಹೊಸ ಗ್ರಾಮ ಎಂದು ವಿಗಂಡಿಸಿ ಹೊಸದಾದ ನಕ್ಷೆ ತಯಾರಿಸಲಾಗುತ್ತದೆ. ಕೃಷಿ ಇತ್ಯಾದಿ ಭೂಮಿಗಳಿಗೆ ಪ್ರತ್ಯೇಕ ಗ್ರಾಮ ನಕ್ಷೆ, ಆರ್‍ಟಿಸಿ, ಆಕಾರ್ ಬಂದ್, ಭೂ ದಾಖಲೆಗಳು ಸಿದ್ಧಗೊಳ್ಳುತ್ತವೆ. ಅದರಲ್ಲಿ ಗ್ರಾಮಠಾಣವಾಗಿ ಪರಿಗಣಿಸಲ್ಪಡುವ ಪ್ರದೇಶಕ್ಕೆ ಪಂಚಾಯತಿ, ಸ್ಥಳೀಯ ಸಂಸ್ಥೆಗಳ ದಾಖಲೆಗಳು ರೂಪುಗೊಳ್ಳುತ್ತವೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಬಹಳಷ್ಟು ಗ್ರಾಮಗಳಿಗೆ ಕಾನೂನಿನ ಮಾನ್ಯತೆಯೇ ಇಲ್ಲ. 2018ರ ದಾಖಲೆಯ ಪ್ರಕಾರ ತುಮಕೂರು ಜಿಲ್ಲೆಯಲ್ಲಿ 540 ಗ್ರಾಮಗಳನ್ನು ಈ ಪಟ್ಟಿಯೊಳಗೆ ಗುರುತಿಸಲಾಗಿದೆ. ತುಮಕೂರು ತಾಲ್ಲೂಕಿನಲ್ಲಿ 49, ಗುಬ್ಬಿ-65, ಕುಣಿಗಲ್-59, ತಿಪಟೂರು-43, ತುರುವೇಕೆರೆ-42, ಚಿ.ನಾ.ಹಳ್ಳಿ-48, ಮಧುಗಿರಿ-47, ಕೊರಟಗೆರೆ-43, ಶಿರಾ-100, ಪಾವಗಡ ತಾಲ್ಲೂಕಿನಲ್ಲಿ 44 ಗ್ರಾಮಗಳನ್ನು ಅರ್ಹ ದಾಖಲೆರಹಿತ ಜನವಸತಿ ಪ್ರದೇಶಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಕೆಲವು ಗ್ರಾಮಗಳನ್ನು ಈಗಾಗಲೇ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಕಾನೂನಿನ ಮಾನ್ಯತೆ ನೀಡಲು ಅಂತಿಮ ಅಧಿಸೂಚನೆಗೆ ಒಳಪಡಿಸಲಾಗಿದೆ. ಆದರೆ ಮುಂದುವರಿದ ಪ್ರಕ್ರಿಯೆಗಳು ನಡೆಯುತ್ತಿಲ್ಲ.

ಈಗಾಗಲೇ ಅಧಿಸೂಚನೆ ಆಗಿರುವುದರಿಂದ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿದರೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವುದು ಅಷ್ಟು ದೊಡ್ಡ ತ್ರಾಸವೇನಲ್ಲ. ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದರೆ ಅಂತಹ ಪ್ರದೇಶಗಳನ್ನು ಗುರುತಿಸಿ ಬೌಂಡರಿ ನಿಗದಿಪಡಿಸಬೇಕು.

ಆ ಪ್ರದೇಶವನ್ನು ಅಧಿಸೂಚನೆಗೆ ಒಳಪಡಿಸಿ ಹಕ್ಕುಪತ್ರ ನೀಡಬೇಕು. ಖಾಸಗಿ ಹಿಡುವಳಿ ಜಮೀನಾದರೆ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಹದ್ದುಬಸ್ತು ನಿಗದಿ ಮಾಡಿ ವಂಶಸ್ಥರಿಗೆ ಒಂದು ಭಾಗ, ಹಿಡುವಳಿದಾರರಿಗೆ ಒಂದು ಭಾಗ ಹೀಗೆ ಸರ್ವೆ ಮಾಡಿ ಅಧಿಸೂಚನೆ ಹೊರಡಿಸಲಾಗುತ್ತದೆ. ಸರ್ಕಾರಿ ಜಮೀನಾದರೆ ಈ ಎಲ್ಲ ಕಾರ್ಯಗಳು ಸುಲಭವಾಗಿ ನಡೆದು ಹೋಗುತ್ತವೆ. ಆದರೆ ಈ ಕಾರ್ಯ ಮಾಡಲಿಕ್ಕೂ ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುವುದು ಆಶ್ಚರ್ಯ ಮೂಡಿಸಿದೆ.

        – ಸಾ.ಚಿ.ರಾಜಕುಮಾರ 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap