ತುಮಕೂರು:

ಸೇವಾ ಭದ್ರತೆ ಕಲ್ಪಿಸುವವರೆಗೆ ಧರಣಿ ನಿಲ್ಲಿಸೋಲ್ಲ ಸರಕಾರಕ್ಕೆ ಎಚ್ಚರಿಕೆ
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಹಾಗೂ ಸರಕಾರದ ವಿಳಂಬ ನೀತಿಯಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ತೀರ್ಥಹಳ್ಳಿಯ ಅತಿಥಿ ಉಪನ್ಯಾಸಕ ಹರ್ಷ ಶಾನುಭೋಗ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ
ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಅನಿರ್ಧಿಷ್ಟಾವಧಿ ಧರಣಿಗೆ ಮುಂದಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಬಳಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ತಾಲೂಕುವಾರು ಧರಣಿ ನಡೆಸುತ್ತಿದ್ದಾರೆ.
ನಗರದ ಟೌನ್ಹಾಲ್ನಿಂದ -ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿಗಳ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದಡಿಸಿ ವೈ.ಎಸ್.ಪಾಟೀಲ್ ಅವರು ನಿಮ್ಮ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ವೇಳೆ ಮಾತನಾಡಿದ ಅತಿಥಿ ಉಪನ್ಯಾಸಕರು ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ಕಳೆದ20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಯಾವುದೇ ಭದ್ರತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
6 ತಿಂಗಳ ಗೌರವಧನನೀಡಿ 12 ತಿಂಗಳ ಕಾಲ ದುಡಿಸಿಕೊಳ್ಳುತ್ತಿದ್ದು, ಆಧುನಿಕ ಜೀತ ಪದ್ಧತಿಯನ್ನು ಆಚರಿಸಲಾಗುತ್ತಿದೆ. ಅತಿಥಿ ಉಪನ್ಯಾಸಕರಿಗೆ ಯಾವುದೇ ಇಎಸ್ಐ, ಪಿಎಫ್ನಂತಹ ಕನಿಷ್ಠ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದರು.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ನೂತನ ಸಹಾಯಕ ಪ್ರಾಧ್ಯಾಪಕ ನೇಮಕಾತಿಯನ್ನು ತಡೆ ಹಿಡಿಯಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಈಗಾಗಲೇ ತೆಲಂಗಾಣ, ಕೇರಳ, ಹರಿಯಾಣ, ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ಅಲ್ಲಿನ ಸರ್ಕಾರಗಳು ಸೇವಾ ಭದ್ರತೆಯನ್ನು ನೀಡಿದ್ದು, ಕರ್ನಾಟಕ ಸರ್ಕಾರ ಇದೇ ಮಾದರಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು .ಅತಿಥಿ ಉಪನ್ಯಾಸಕರು ನಿವೃತ್ತಿಯಾಗುವವರೆಗೆ ಗರಿಷ್ಠ ವೇತನವನ್ನು ನೀಡಬೇಕು. ಇದುವರೆಗೆ ನೀಡುತ್ತಿದ್ದ 9 ತಿಂಗಳ ವೇತನವನ್ನು 6 ತಿಂಗಳಿಗೆ ಇಳಿಸಿರುವ ಸರ್ಕಾರ ನಿರ್ಧಾರವನ್ನು ಹಿಂಪಡೆಯಬೇಕು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಶಿವಣ್ಣ ತಿಮ್ಲಾಪುರ್, ರಮೇಶ್, ಸುನೀಲ್ಕುಮಾರ್ ಜೆ.ಸಿ, ಶಿವಣ್ಣ, ಅಂಜನ್ಮೂರ್ತಿ, ಚೇತನ್, ಗಂಗಾಧರ್, ಗಂಗಾಬಿಕೆ, ಅಂಬಿಕಾ, ಸುಧಾ, ಡಾ.ಕುಮಾರ್, ಡಾ.ಶಿವಯ್ಯ, ಡಾ.ಸಿದ್ದನಾಯ್ಕ, ಸುರೇಶ್, ಕರಿಯಣ್ಣ, ಜಲಜಾಕ್ಷಿ, ಸುಧಾ ತಿಪಟೂರು, ಡಾ.ವೆಂಕಟೇಶಯ್ಯ, ಪಿ.ಸಿ.ಲೋಕೇಶ್, ರವೀಂದ್ರ, ಮಹದೇವ್, ಚೇತನ್ ಸೇರಿದಂತೆ ಇತರರಿದ್ದರು.
ಅತಿಥಿ ಉಪನ್ಯಾಸಕರ ಖಾಯಾಂತಿಗೆ ಸರಕಾರ ಉಮಾದೇವಿ ಪ್ರಕರಣವನ್ನು ಮುಂದಿಡುತ್ತಿದೆ. ಗುತ್ತಿಗೆ ವೈದ್ಯರು, ಜೆಓಸಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡುವಾಗ ಈಪ್ರಕರಣ ಅಡ್ಡಿಯಾಗಲಿಲ್ಲವೇ? ಅತಿಥಿ ಉಪನ್ಯಾಸಕರನ್ನು ಸೇವಾ ವಿಲೀನ ಮಾಡುವ ಜೊತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
-ರವೀಂದ್ರ, ಅತಿಥಿ ಉಪನ್ಯಾಸಕ.
ಸೆಮಿಸ್ಟರ್ ಪದ್ಧತಿ ಆಧಾರದ ಮೇಲೆ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ವಿದ್ಯಾವಂತರನ್ನು ಕೂಲಿ ಕೆಲಸದವರಿಗಿಂತ ಕಡೆಯಾಗಿ ನೋಡುತ್ತಿದೆ.ಕೇವಲ ಆರು ತಿಂಗಳಿಗೆ ಮಾತ್ರ ಅತಿಥಿ ಉಪನ್ಯಾಸಕರಿಗೆ ಸಂಬಳ ನೀಡಿದರೆ ಉಳಿಕೆ ಅವಧಿಯಲ್ಲಿ ಅತಿಥಿ ಉಪನ್ಯಾಸಕರು ಏನು ಮಾಡಬೇಕು.
-ರಂಗಧಾಮಯ್ಯ, ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ಮುಖಂಡರು.
25 ಲಕ್ಷ ಪರಿಹಾರಕ್ಕೆ ಒತ್ತಾಯ
ರಾಜ್ಯ ಸರ್ಕಾರದ ಮಾರಕ ನೀತಿಗಳಿಂದಾಗಿ ಇದುವರೆಗೆ 70ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸಾವನ್ನಪ್ಪಿದ್ದು, ಅವರನ್ನೇ ನಂಬಿದ ಹೆಂಡತಿ, ಮಕ್ಕಳು, ಪೋಷಕರು ಬೀದಿಗೆ ಬಿದ್ದಿದ್ದಾರೆ. ತಾತ್ಕಾಲಿಕ ನೌಕರಿಯನ್ನೇ ನೆಚ್ಚಿಕೊಂಡಿದ್ದ ತೀರ್ಥಹಳ್ಳಿಯ ಹರ್ಷ ಶಾನುಭೋಗ್ ಅವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








