ಬಸವಣ್ಣನ ತತ್ವಗಳನ್ನು ಅರ್ಥೈಸಿದ್ದು ಕಡಿಮೆ

ತುಮಕೂರು:

   ಮುರುಘಾರಾಜೇಂದ್ರ ಸಭಾಂಗಣ ಉದ್ಘಾಟನೆಯಲ್ಲಿ ಜೆಸಿಎಂ ವ್ಯಾಖ್ಯಾನ

       ಬಸವಣ್ಣನ ತತ್ವಗಳನ್ನು ನಮ್ಮ ಸಮಾಜ ಅರ್ಥ ಮಾಡಿಕೊಂಡಿದ್ದೆ ಕಡಿಮೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಿ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ಮುರುಘಾ ಮಠವು ಬಸವಣ್ಣನ ತತ್ವಗಳನ್ನು ಸಾಕಾರಗೊಳಿಸಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಅವರು ನಗರದ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಶ್ರೀಶಿವಮೂರ್ತಿ ಮುರುಘಾ ರಾಜೇಂದ್ರ ಸಭಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಜೊತೆ ಜೊತೆಗೆ ಸಣ್ಣಪುಟ್ಟ ಸಮುದಾಯಗಳ ಸ್ವಾಮೀಜಿಗಳಿಗೆ ದೀಕ್ಷೆ ನೀಡಿ, ಬಸವಣ್ಣ ತತ್ವವನ್ನು ಅಳವಡಿಸಿಕೊಂಡಿರುವ ನಿಜಯೋಗಿ ಮುರುಘಾ ಶ್ರೀಗಳು ಎಂದು ತಿಳಿಸಿದರು.

ಶರಣ ಧರ್ಮದ ಬಗ್ಗೆ ಉತ್ತಮವಾದ ಕೆಲಸಗಳಾಗುತ್ತಿರುವುದು ಸಿದ್ಧಗಂಗಾ ಮಠ ಮತ್ತು ಮುರುಘಾ ಮಠದಿಂದ. ಇಂತಹ ಇನ್ನಷ್ಟು ಕಾರ್ಯಗಳು ಹೆಚ್ಚಬೇಕಿದೆ. ಮನುಷ್ಯನಿಗೆ ಸಮಾಧಾನವೇ ಅವಶ್ಯಕ. ಸಮಾಧಾನವಿದ್ದರೆ ನೆಮ್ಮದಿ, ಸಂತೋಷ ಸಿಗುತ್ತz. ಅದಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ. ತಂತ್ರಜ್ಞಾನ ಹೆಚ್ಚಾದಂತೆ ಆಧ್ಯಾತ್ಮಿಕ ಚಿಂತನೆಗಳು ಕಡಿಮೆಯಾಗುತ್ತಿವೆ.

ಆಧ್ಯಾತ್ಮಿಕ ಚಿಂತನೆ, ಮನಸ್ಸಿನ ಸಂದಿಗ್ಧತೆ ದೂರವಾಗಿಸುವ ನಿಟ್ಟಿನಲ್ಲಿ ವೇದಿಕೆಯನ್ನು ಮುರುಘಾ ಶರಣರು ಮಾಡಿ ಕೊಟ್ಟಿದ್ದಾರೆ. ಹೊಸತನವನ್ನು ಹುಡುಕಲು ಯೋಗ, ಪ್ರಾರ್ಥನೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ಹೆಚ್ಚಲಿ ಎಂದರು.

ಶ್ರೀಶಿವಮೂರ್ತಿ ಮುರುಘಾ ರಾಜೇಂದ್ರ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಸಿದ್ಧಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗಶ್ರೀಗಳು, ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ಮುರುಘಾ ಮಠವು, ಅನೇಕ ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡಿದೆ. ಇಲ್ಲಿ ಆಶ್ರಯ ಪಡೆದವರು ಉನ್ನತ ಸ್ಥಾನದಲ್ಲಿದ್ದಾರೆ.

ಬಸವ ಕೇಂದ್ರದ ಮೂಲಕ ಬಸವ ತತ್ವವನ್ನು ಪ್ರಸರಿಸುವ ಕಾಯಕ ನಿರಂತರವಾಗಿದೆ. ಬಸವ ಕೇಂದ್ರದ ತಾಯಂದಿರಿಗಾಗಿ ಈ ಸಭಾಂಗಣವನ್ನು ಮುರುಘಾ ಶರಣರು ನಿರ್ಮಿಸಿಕೊಟ್ಟಿದ್ದಾರೆ. ಬಹಿರ್ಮುಖಕ್ಕಿಂತ ಅಂತರಂಗದ ಬದುಕು ಮುಖ್ಯ. ಅದಕ್ಕಾಗಿ ಸತ್ ಚಿಂತನೆ ಮಾಡಬೇಕಿದೆ. ಮನಸ್ಸು ಶುದ್ಧವಾಗಿಟ್ಟುಕೊಳ್ಳಲು ಸತ್ ಚಿಂತನೆಗಳನ್ನು ಮಾಡಲು ಬಸವ ಕೇಂದ್ರ ನೆರವಾಗಲಿದೆ ಎಂದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ವಿದ್ಯಾಭ್ಯಾಸಕ್ಕೆ ಮುರುಘಾಮಠ ಬಹಳಷ್ಟು ಕೊಡುಗೆ ನೀಡಿದೆ. ದಾವಣಗೆರೆಯಿಂದ ತುಮಕೂರಿನವರೆಗೆ ಜಯದೇವ ವಿದ್ಯಾರ್ಥಿ ನಿಲಯದಲ್ಲಿ ಓದಿದವರೆಲ್ಲ ಅಧಿಕಾರಿಗಳಾಗಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಪ್ರಾರಂಭಿಸಿದ್ದೇ ಮುರುಘಾಶ್ರೀಗಳು. ಜಯದೇವವನ್ನು ಉನ್ನತೀಕರಣ ಮಾಡಲು ಶ್ರೀಗಳು ಯೋಜನೆ ರೂಪಿಸಿದರೆ ಜಿಲ್ಲೆಯ ಎಲ್ಲರೂ ಸಹಕಾರ ನೀಡುವುದಾಗಿ ತಿಳಿಸಿದರು.

ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕೆಲವೊಂದು ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಯೌವ್ವನವನ್ನು ವಯಸ್ಸು ನಿರ್ಧರಿಸಲ್ಲ, ಮನಸ್ಸು ನಿರ್ಧರಿಸುತ್ತದೆ. ಅಂತಹ ಮನಸ್ಸು ಔದಾರ್ಯತೆಯಿಂದ ಕೂಡಿರಬೇಕು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಆಧ್ಯಾತ್ಮಿಕ, ಸಾಂಸ್ಕøತಿಕ ಚಟುವಟಿಕೆಗಳು ಬಸವ ಕೇಂದ್ರದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬಸವ ಕೇಂದ್ರದ ಆಧ್ಯಾತ್ಮಿಕತೆಯಲ್ಲಿ ನಗರದ ಎಲ್ಲರೂ ಭಾಗವಹಿಸುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ದೂರದೃಷ್ಟಿ ಮತ್ತು ದಿವ್ಯ ದೃಷ್ಟಿ ಹೊಂದಿದ್ದ ಮುರುಘಾ ರಾಜೇಂದ್ರ ಸ್ವಾಮೀಜಿ ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ. ಶರೀರಕ್ಕೆ ಸಾವಿದೆ, ಮಾಡಿದ ಸಾಧನೆಗಲ್ಲ. ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸತ್ಕಾರ್ಯ, ಪರೋಪಕಾರದ ಕಾರ್ಯ ಮಾಡಿ ಎಂದರು.

ವಿದ್ಯಾರ್ಥಿ ಜೀವನಕ್ಕೆ ಬೇಕಾದ ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಮುರುಘಾ ಮಠದಿಂದ ನೂತನ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು.

ಬಸವ ತತ್ವ ಚಿಂತನೆಗಳ ಮೂಲಕ, ಪ್ರಾರ್ಥನೆ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲು ಇದೊಂದು ಸಾಂಸ್ಕøತಿಕ ಕೇಂದ್ರವಾಗಿ ರೂಪುಗೊಳ್ಳಲಿದೆ. ಸಮುದಾಯವನ್ನು ಸಮುದಾಯದ ಜನರನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು. ಪ್ರಾರ್ಥನೆ ಮಾಡಲು ಸ್ಥಳವಿಲ್ಲವೆಂದು ಬೇರೆ ಕಡೆ ಹೋದವರನ್ನು ಕರೆ ತರುವ ಕೆಲಸ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಮಹೇಶ್, ಬಸವ ಕೇಂದ್ರದ ಸಿದ್ಧಗಂಗಮ್ಮ ಬಿ.ಸಿದ್ದರಾಮಣ್ಣ, ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ರಾಜಶೇಖರ್, ಡಿ.ಬಿ.ಶಿವಾನಂದ್, ಚಂದ್ರಶೇಖರ್, ರಾಮಕೃಷ್ಣಪ್ಪ, ಜಿ.ಆರ್.ರೇಣುಕಾ ಪ್ರಸಾದ್, ಜಿ.ಆರ್.ನೇತ್ರಾಸುರೇಶ್, ಈಶ್ವರಯ್ಯ, ನಾಗರಾಜು, ಜಯಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link