ಕರ್ನಾಟಕದಲ್ಲೂ ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಹಾಜರಿ ನಿಯಮ

ಬೆಂಗಳೂರು:            ಜನವರಿ 04: ಕೊರೊನಾವೈರಸ್ ವಿರುದ್ಧ ನಿರ್ಣಾಯಕ ಹೋರಾಟ ನಡೆಸಿರುವ ಸರ್ಕಾರ, ಲಸಿಕೆ ಅಭಿಯಾನದ ಜೊತೆಗೆ ಮತ್ತೊಮ್ಮೆ ವಾರಾಂತ್ಯದ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

       ಪಾಸಿಟಿವಿಟಿ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕ್ರಮ ಅನಿವಾರ್ಯ ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲೇ ಶೇ 85ರಿಂದ 90ರಷ್ಟು ಪ್ರಕರಣಗಳು ಕಂಡು ಬರುತ್ತಿವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿಯಂತೆ ನಿಯಮ ಅನುಸರಿಸಲಾಗುವುದು ಎಂದು ಹೇಳಿದರು. ಏನಿದು 50: 50 ನಿಯಮ ವಿವರ ಇಲ್ಲಿದೆ.

”ಮೊದಲ ಎರಡು ಅಲೆಗಳಿಗೆ ಹೋಲಿಸಿದರೆ ಇದು ಅಷ್ಟು ಭೀಕರವಾಗಿ ವ್ಯಾಧಿ ಅಂತೂ ಅಲ್ಲ. ವೆಂಟಿಲೇಟರ್ ಮತ್ತು ಆಕ್ಸಿಜನ್ ಅವಶ್ಯಕತೆ ಬಹಳ ಕಡಿಮೆಯಿದೆ. ಅತಿಹೆಚ್ಚು ಸೋಂಕಿತರು ಇಲ್ಲಿ ಆದಾಗ ಆಸ್ಪತ್ರೆಗಳ ಮೇಲೆ ಒತ್ತಡ ಬೀರುತ್ತೆ.

ಪರಿಸ್ಥಿತಿ ನಮ್ಮ ಕೈಮೀರಿ ಹೋಗದಂತೆ ತಡೆಯಲು ಮುಂದಾಲೋಚನೆಯಿಂದ ಈ ಕ್ರಮ ತೆಗೆದುಕೊಂಡಿದ್ದೇವೆ. ಜನರು ಕಡ್ಡಾಯವಾಗಿ ಮಾಸ್ಕ್​ಗಳನ್ನು ಧರಿಸಬೇಕು. ಇಲ್ಲದಿದ್ದರೆ ಫೈನ್ ಕಟ್ಟುನಿಟ್ಟಾಗಿ ವಸೂಲು ಮಾಡುತ್ತೇವೆ” ಎಂದು ಸುಧಾಕರ್ ಹೇಳಿದರು.

ಮುಂದಿನ 2 ವಾರಗಳು ಯಾರೂ ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು. ಪ್ರತಿಯೊಬ್ಬ ವ್ಯಕ್ತಿ, ಸಂಘ-ಸಂಸ್ಥೆಯ ಪದಾಧಿಕಾರಿಗಳು ಜನರ ಆರೋಗ್ಯ ಕಾಪಾಡಲು ಸಹಕರಿಸಬೇಕು ಎಂದು ಕೋರಿದರು.

ಕಚೇರಿಗಳಿಗೆ ನಿಯಮ

ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಧೀನ ಕಾರ್ಯದರ್ಶಿ ಮಟ್ಟಕ್ಕಿಂತ ಕೆಳಗಿನ ಸರ್ಕಾರಿ ನೌಕರರಲ್ಲಿ ಶೇ.50ರಷ್ಟು ಜನರು ಮಾತ್ರ ಕಚೇರಿಗೆ ಹಾಜರಾಗಬೇಕು,

ಉಳಿದ ಶೇ.50ರಷ್ಟು ನೌಕರರು ಮುಂದಿನ ಆದೇಶದವರೆಗೂ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಕೇಂದ್ರ ಸರ್ಕಾರ ಸೋಮವಾರ ಹೊಸ ನಿಯಮಾವಳಿಯನ್ನು ಪ್ರಕಟಿಸಿದೆ. ಇದೇ ನಿಯಮ ಈಗ ಕರ್ನಾಟಕದಲ್ಲಿರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೂ ಅನ್ವಯವಾಗಲಿದೆ.

ಆಸ್ಪತ್ರೆ, ಕೋವಿಡ್ ವಾರಿಯರ್ಸ್, ಅಗತ್ಯ ವಸ್ತು ಪೂರೈಕೆದಾರರು, ಸಾರಿಗೆ ಸಂಪರ್ಕ ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಮತ್ತು ವಿಕಲಚೇತನರು ಮತ್ತು ಗರ್ಭಾವಸ್ಥೆಯಲ್ಲಿ ಇರುವ ಮಹಿಳಾ ಉದ್ಯೋಗಿಗಳು ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ

ಬಯೋಮೆಟ್ರಿಕ್ ಬಂದ್:

ಸರ್ಕಾರಿ ನೌಕರರ ಹಾಜರಾತಿಗಾಗಿ ಬಳಸುವ ಬಯೋಮೆಟ್ರಿಕ್ ಬಳಕೆಯನ್ನು ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು. ಕಳೆದ ವರ್ಷ ನವೆಂಬರ್ 8 ರಿಂದ ಎಲ್ಲಾ ಹಂತದ ಉದ್ಯೋಗಿಗಳಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಪುನರಾರಂಭಿಸಿತ್ತು.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಉದ್ಯೋಗಿಗಳಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಸರ್ಕಾರಿ ನೌಕರರ ಸುರಕ್ಷತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಆದರೆ, ಮುಂಜಾಗ್ರತಾ ಕ್ರಮವಾಗಿ, ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಅದರ ಲಗತ್ತಿಸಲಾದ ಅಧೀನ ಕಚೇರಿಗಳು ಸೇರಿದಂತೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಗುರುತಿಸುವುದನ್ನು ಜನವರಿ 31 ರವರೆಗೆ ತಕ್ಷಣದಿಂದಲೇ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ತಜ್ಞರ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರ ಸಭೆ ಕರೆಯಲಾಗಿತ್ತು.

ರಾಜ್ಯದಲ್ಲಿ ಜಾರಿ ಮಾಡಬೇಕಾದ ಕಠಿಣ ರೂಲ್ಸ್‌ಗಳು, ಬೆಡ್‌ಗಳ ಲಭ್ಯತೆ, ಔಷಧಗಳ ದಾಸ್ತಾನು ಸಹಿತ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಕಂದಾಯ ಸಚಿವ ಆರ್. ಅಶೋಕ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಹಿತ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.

ರಾಜ್ಯದಲ್ಲಿ ಈಗಾಗಲೇ ನೈಟ್‌ ಕರ್ಫ್ಯೂ ಜಾರಿ ಮಾಡಲಾಗಿದೆ. ಇದನ್ನು ಇದೇ ರೀತಿ ಮುಂದುವರಿಸಬೇಕು ಎಂದು ತಜ್ಞರು ಸಭೆಯಲ್ಲಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಜ.7ಕ್ಕೆ ನೈಟ್‌ ಕರ್ಫ್ಯೂ ಮುಗಿಯುತ್ತಿದ್ದು, ಮುಂದಿನ 10 ದಿನಗಳ ಕಾಲ ವಿಸ್ತರಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link