ತುಮಕೂರು:
ಸರಕಾರಿ ಕಚೇರಿ ವಾರದಲ್ಲಿ ೫ ದಿನ ಮಾತ್ರ | ಪ್ರತಿದಿನ ೬೦೦೦ ಕೋವಿಡ್ ಪರೀಕ್ಷೆ ಗುರಿ
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ನೈಟ್ ಕರ್ಫೂ,್ಯ ವೀಕೆಂಡ್ ಕರ್ಫೂ್ಯನ ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿದ್ದು,
ಪ್ರತಿಯೊಬ್ಬರು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಹೊಸ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೊಸ ಮಾರ್ಗಸೂಚಿಯು ಜ.೫ ಬುಧವಾರ ರಾತ್ರಿ ೧೦ ಗಂಟೆಯಿAದ ಪೂರ್ವಾನ್ವಯವಾಗಿ ಜ.೧೯ರ ಬೆಳಿಗ್ಗೆ ೫ ಗಂಟೆಯವರೆಗೆ ಜಾರಿಯಲ್ಲಿದ್ದು, ಸಾರ್ವಜನಿಕರು ಸೇರಿದಂತೆ ಎಲ್ಲಾ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.
ಅವಶ್ಯಕ ಸೇವೆ ಹೊರತುಪಡಿಸಿ ಉಳಿದೆಲ್ಲ ಸರಕಾರಿ ಕಚೇರಿಗಳು ವಾರದಲ್ಲಿ ೫ ದಿನ ಮಾತ್ರ ಕಾರ್ಯನಿರ್ವಹಿಸಲಿವೆ. ಅದೇ ರೀತಿ ಶುಕ್ರವಾರದ ರಾತ್ರಿ ೧೦ ಗಂಟೆಯಿAದ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ಮದುವೆ, ಶುಭ ಸಮಾರಂಭಕ್ಕೆ ನಿರ್ಬಂಧ ಮಿತಿ: ಬೆಂಗಳೂರು ನಗರದಲ್ಲಿ ಮಾತ್ರ ೧೦ ರಿಂದ ೧೨ನೇ ತರಗತಿ ಮೆಡಿಕಲ್ ಕಾಲೇಜು ಹೊರತುಪಡಿಸಿ ಶಾಲೆಗಳನ್ನು ಮುಚ್ಚಲಾಗುವುದು. ಆದರೆ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚುವ ಬಗ್ಗೆ ಯಾವುದೇ ನಿರ್ಣಯವನ್ನು ಈವರೆಗೂ ಕೈಗೊಂಡಿಲ್ಲ.
ಜಿಲ್ಲೆಯಲ್ಲಿರುವ ಎಲ್ಲಾ ಪಬ್/ಬಾರ್/ರೆಸ್ಟೋರೆಂಟ್/ಹೋಟೆಲ್/ ಸಿನಿಮಾ ಮಂದಿರಗಳ ಸಾಮರ್ಥ್ಯದ ಶೇ.೫೦ರಷ್ಟು ಆಸನಗಳಿಗೆ ಅನ್ವಯಿಸುವಂತೆ ಮಾತ್ರ ಕೋವಿಡ್ ನಿಯಮ ಪಾಲನೆಯೊಂದಿಗೆ ಸೇವೆ ಒದಗಿಸಬೇಕು. ಮದುವೆ ಮತ್ತಿತರ ಶುಭ ಸಮಾರಂಭಗಳನ್ನು ನಡೆಸಲು ಹೊರಾಂಗಣ ಪ್ರದೇಶಗಳಲ್ಲಿ ೨೦೦ ಹಾಗೂ ಒಳಾಂಗಣದಲ್ಲಿ ೧೦೦ ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದರು.
ದೇವಸ್ಥಾನ ಸೇರಿದಂತೆ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಪೂಜಾ ಕೈಂಕರ್ಯ ಮತ್ತು ದೇವರ ದರ್ಶನಕ್ಕೆ ಮಾತ್ರ ಅನುಮತಿಸಲಾಗಿದೆ. ಕೋವಿಡ್ ೨ನೇ ಡೋಸ್ ಲಸಿಕೆ ಪಡೆದವರ ಪ್ರಮಾಣ ಪತ್ರ ಖಚಿತಪಡಿಸಿಕೊಂಡ ನಂತರವಷ್ಟೇ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಅನುಮತಿಸಬೇಕು.
ವಿಶೇಷ ಪೂಜಾ ಸೇವೆಗೆ ಅವಕಾಶವಿರುವುದಿಲ್ಲ. ಧಾರ್ಮಿಕ ಸ್ಥಳಗಳಿಗೆ ೫೦ ಮಂದಿ (ಎರಡು ಡೋಸ್ ಲಸಿಕೆ ಪಡೆದ)ಗೆ ಮಾತ್ರ ಪ್ರವೇಶ ಕಲ್ಪಿಸಬೇಕೆಂದು ಸಂಬAಧಿಸಿದವರಿಗೆ ನಿರ್ದೇಶಿಸಲಾಗಿದೆ ಎಂದರು.
ಹೆಚ್ಚಿನ ಜನದಟ್ಟಣೆ ಸೇರುವಂತಿಲ್ಲ:
ದಿನಸಿ ಅಂಗಡಿ, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್ಗಳು, ಮಾಮೂಲಿಯಂತೆ ಸೇವೆ ಒದಗಿಸಲು ಅನುಮತಿಸಲಾಗಿದೆ. ಆದರೆ ಹೆಚ್ಚು ಜನದಟ್ಟಣೆ ಸೇರುವಂತಿಲ್ಲ. ಕ್ರೀಡಾ ಕಾಂಪ್ಲೆಕ್ಸ್/ಈಜು ಕೊಳ/ಜಿಮ್ಗಳಿಗೆ ಅವುಗಳ ಸಾಮರ್ಥ್ಯದ ಶೇ. ೫೦ರಷ್ಟು ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಬೇಕು ಎಂದರಲ್ಲದೆ, ಎಲ್ಲಾ ರೀತಿಯ ರ್ಯಾಲಿ, ಪ್ರತಿಭಟನೆ, ಧರಣಿಗಳನ್ನು ನಿಷೇಧಿಸಲಾಗಿದೆ ಎಂದರು.
೨ನೇ ಡೋಸ್ ಲಸಿಕೆ ಪಡೆದಿರಬೇಕು:
ಕೈಗಾರಿಕೆಗಳು ಮಾಮೂಲಿಯಂತೆ ಕಾರ್ಯನಿರ್ವಹಿಸಲು ಅವಕಾಶವಿದ್ದು, ೨ನೇ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು. ಗುರುತಿನ ಚೀಟಿ, ವ್ಯಾಕ್ಸಿನೇಷನ್ ಪ್ರಮಾಣ ಪತ್ರ ಹಾಜರುಪಡಿಸದೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಒಂದೇ ಪ್ರದೇಶದಲ್ಲಿ ೩ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದರೆ ಹೋಂ ಕ್ವಾರಂಟೈನ್/ಐಸೊಲೇಷನ್ ಮಾಡಬೇಕು. ಮೊದಲ ಹಂತದಲ್ಲಿ ಮನೆಗಳಲ್ಲಿ ಕ್ವಾರಂಟೈನ್ಗೆ ಸೂಚಿಸಲಾಗಿದೆ. ಕೇರಳ, ಗಲ್ಫ್, ದುಬೈ ಸೇರಿದಂತೆ ಹೊರ ದೇಶಗಳಿಂದ ಬರುವವರು ಕಡ್ಡಾಯ ವಾಗಿ ಕ್ವಾರಂಟೈನ್ ಆಗಿ ಇಲಾಖೆಯಿಂದ ಪ್ರಮಾಣೀಕರಿಸಿದ ನಂತರವಷ್ಟೇ ಮನೆಗೆ ಬರಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.
ಸಿದ್ಧರಾಮೇಶ್ವರ ಜಯಂತಿ ರದ್ದು:
ಕೋವಿಡ್ ಹೊಸ ಮಾರ್ಗಸೂಚಿ ಹಿನ್ನೆಲೆಯಲ್ಲಿ ತಿಪಟೂರು ತಾಲ್ಲೂಕಿನ ಕೆರೆಗೋಡಿಯಲ್ಲಿ ಏರ್ಪಡಿಸಿದ್ಧ ಸಿದ್ಧರಾಮೇಶ್ವರ ಜಯಂತಿಯನ್ನು ರದ್ದುಪಡಿಸಲು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಈ ವೇಳೆ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿ.ಪಂ. ಸಿಇಓ ಡಾ: ಕೆ. ವಿದ್ಯಾಕುಮಾರಿ ಮತ್ತಿತರರು ಹಾಜರಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ ೩೫೦೦ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಕೋವಿಡ್ ಪಾಸಿಟೀವ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಪರೀಕ್ಷೆಯನ್ನು ದ್ವಿಗುಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್ ಸೋಂಕು ಇಳಿಮುಖವಾಗಿದ್ದರಿಂದ ೩೫೦೦ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು.
ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಪ್ರತಿದಿನ ೬೦೦೦ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
– ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರು.