ತಿಪಟೂರು:
ಬೆಲೆ ಕುಸಿತ ಶಾಶ್ವತ ತಡೆಗೆ ಜಿಐ ಮಾರ್ಕ್ ಒಂದೇ ಪರಿಹಾರ
ದೀಪ ಏರಿದ ನಂತರ ಮಳೆ ಬರುವುದಿಲ್ಲ ಎಂಬಂತೆ ದೀಪಾವಳಿ ಹಬ್ಬದವರೆಗೂ ಕೊಬ್ಬರಿ ದರ ಏರುತ್ತದೆ ನಂತರ ಕಡಿಮೆಯಾಗುತ್ತದೆ ಎಂಬ ವಾಡಿಕೆ ಕಲ್ಪತರು ನಾಡಿನಲ್ಲಿ ಪ್ರಚಲಿತದದೆ. ಆದರೆ ಈ ಬಾರಿ ದೀಪವೇರಿದ ನಂತರವೂ ಮಳೆ ಬಂತು. ಅದೇ ರೀತಿ ದೀಪಾವಳಿ ಮುಗಿದು 2-3 ತಿಂಗಳು ಕಳೆದರೂ ಕೊಬ್ಬರಿ ದರ ಏರುತ್ತಲೇ ಇತ್ತು.
2022 ರ ಜ. 2 ರಂದು ಒಂದು ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಟ 18,333 ರೂ. ದರ ಲಭಿಸಿತ್ತು. ರೈತರು ಬೆಲೆ ಏರಿಕೆ ಕಂಡು ಸಂತೋಷ ಪಟ್ಟಿದ್ದರು. ದೀಪಾವಳಿಯ ನಂತರ ಕೊಬ್ಬರಿ ದರ ಏರಿಕೆಯಾಗಿ ಆಶ್ಚರ್ಯ ಮೂಡಿಸಿತ್ತು.
ಆದರೆ ಜ. 5 ರಂದು ಗರಿಷ್ಟ 17,800 ರೂ. ನಂತರ ಜ. 8 ರಂದು 17,200 ರೂ. ಗೆ ದರ ಕುಸಿಯುವ ಮೂಲಕ ಒಂದೇ ವಾರದಲ್ಲಿ 1,100 ರೂ. ನಷ್ಟು ಬೆಲೆ ಇಳಿದಿರುವುದು ರೈತರನ್ನು ಹತಾಶರನ್ನಾಗಿ ಮಾಡಿದೆ.
ಅಲ್ಲಿ ದೀಪಾವಳಿ, ಇಲ್ಲಿ ಬೆಳಕು :
ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಣ ಸಂಬಂಧವಯ್ಯಾ ಎಂಬ ಮಾತಿನಂತೆ, ಉತ್ತರ ಭಾರತದಲ್ಲಿ ದೀಪಾವಳಿ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ವಿಜೃಂಭಣೆಯ ಹಬ್ಬಕ್ಕೆ ತಿಪಟೂರಿನ ಕೊಬ್ಬರಿಗೆ ಹೆಚ್ಚು ಬೇಡಿಕೆ ಬರುತ್ತದೆ.
ಇಲ್ಲಿನ ಅತ್ಯಂತ ರುಚಿಯಾದ ಸಿಹಿ ಕೊಬ್ಬರಿಗೆ ಮೊದಲ ಪ್ರಾಶಸ್ತ್ಯವಿದ್ದು, ಕೊಬ್ಬರಿ ಬಳಸಿ ಇಲ್ಲಿನ ಜನ ಹಲವಾರು ಸಿಹಿ ತಿಂಡಿಗಳನ್ನು ತಯಾರಿಸಿ ಬಂಧು-ಬಾಂಧವರಿಗೆಲ್ಲ ಹಂಚುತ್ತಾರೆ. ಹಾಗೂ ಕೊಬ್ಬರಿಯನ್ನು ಫಲ-ತಾಂಬೂಲದ ರೀತಿ ವಿತರಿಸುತ್ತಾರೆ.
ಇದರಿಂದ ಉತ್ತರ ಭಾರತಕ್ಕೂ ತಿಪಟೂರು ಕೊಬ್ಬರಿಗೂ ಉತ್ತಮ ಬಾಂಧವ್ಯವಿದೆ. ಇದಕ್ಕಾಗಿಯೇ ದೀಪಾವಳಿ ಹಬ್ಬದವರೆಗೂ ಕೊಬ್ಬರಿಯ ಬೆಲೆ ಏರುತ್ತಲೇ ಇರುತ್ತದೆ. ಕಳೆದ ಬಾರಿ ದೀಪಾವಳಿ ಹಬ್ಬಕ್ಕೆ ಕಂಟಕವಾಗಿದ್ದ ಲಾಕ್ಡೌನ್, ಕೊಬ್ಬರಿ ಬೆಲೆ ಕುಸಿಯಲು ಕಾರಣವಾಗಿತ್ತು.
ಆದರೆ ಈ ಬಾರಿ ಮಾತ್ರ ದೀಪಾವಳಿಯ ನಂತರವೂ ಕೊಬ್ಬರಿ ಬೆಲೆ ಏರುತ್ತಲೇ ಸಾಗುತ್ತಾ ಒಂದು ವಾರದ ಅಂತರದಲ್ಲಿ 1,100 ರೂ. ಗಳ ದರ ವ್ಯತ್ಯಾಸ ಕಂಡು ರೈತರಿಗೆ ಕೊಂಚ ನಿರಾಸೆ ಮೂಡಿಸಿದೆ.
ಬೆಲೆ ಕುಸಿತಕ್ಕೆ ಜಿಐ ಮಾರ್ಕ್ ಪರಿಹಾರವೆ :
ತಿಪಟೂರು ಕೊಬ್ಬರಿ ವಿಶಿಷ್ಟ ರುಚಿಯನ್ನು ಹೊಂದಿದೆ. ಮೃದು, ಹಿತಕರ ಸಿಹಿ ಹಾಗೂ ಕೊಬ್ಬರಿಯಲ್ಲಿ ಹೆಚ್ಚಿನ ಎಣ್ಣೆ ಅಂಶ ಇರುತ್ತದೆ. ಸ್ಥಳೀಯ ಸಮಶೀತೋಷ್ಣ ವಾಯುಗುಣದ ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ,
ಹಾಸನ ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣದ ಪ್ರದೇಶದ ಕೊಬ್ಬರಿಗೆ ಉತ್ತರ ಭಾರತದಲ್ಲಿ ಉತ್ತಮವಾದ ಬೇಡಿಕೆ ಇದೆ. ಈಗಾಗಲೇ ಪ್ರಸಿದ್ಧ ಶಂಕರಪುರ ಮಲ್ಲಿಗೆ, ತಿರುಪತಿ ಲಡ್ಡು ಹಾಗೂ ಇನ್ನಿತರೆ ವಸ್ತುಗಳಿಗೆ ಜಿಐ ಮಾರ್ಕ್ (ಗ್ಲೋಬಲ್ ಐಡೆಂಟಿಫಿಕೇಷನ್ ಮಾರ್ಕ್ : ಜಾಗತಿಕ ಗುರುತು ಸೂಚಿ) ಪಡೆದುಕೊಂಡರೆ ಉತ್ತಮ ಕೊಬ್ಬರಿಗೆ ಉತ್ತಮ ಬೆಲೆ ಎಂಬಂತೆ ತಿಪಟೂರು ಕೊಬ್ಬರಿ ಎಂದೇ ಲೋಕ ಪ್ರಸಿದ್ಧವಾಗಿರುವ ಸಾಂಪ್ರದಾಯಿಕ ರುಚಿಯನ್ನು ಹೊಂದಿರುವ ಇಲ್ಲಿನ ಕೊಬ್ಬರಿಯ ಬೆಲೆ ಏರಿ ದರ ಕುಸಿತವನ್ನು ತಡೆಯಬಹುದು.
ನಮ್ಮ ಕೊಬ್ಬರಿ ನಮ್ಮ ಹೆಮ್ಮೆ :
ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗನ್ನು ಬೆಳೆಯುತ್ತಿದ್ದು, ಕಡಿಮೆ ದರಕ್ಕೆ ಇಲ್ಲಿನ ಕೊಬ್ಬರಿ ದೊರೆಯುತ್ತದೆ. ಹಣದಾಸೆಗಾಗಿ ಕೆಲವರು ಕೇರಳ ಕೊಬ್ಬರಿಯನ್ನು ಕಡಿಮೆ ಬೆಲೆಗೆ ತಂದು ಸ್ಥಳೀಯ ತಿಪಟೂರು ಕೊಬ್ಬರಿಯ ಜೊತೆಗೆ ಬೆರೆಸುತ್ತಿದ್ದಾರೆ.
ಇದರಿಂದ ತಿಪಟೂರು ಕೊಬ್ಬರಿಗೂ ಕಳಂಕ ಬರುತ್ತಿದೆ. ಇದಕ್ಕಾಗಿ ನಮ್ಮ ಕೊಬ್ಬರಿ ನಮ್ಮ ಹೆಮ್ಮೆ ಎಂಬಂತೆ ಜಿಐ ಮಾರ್ಕ್ ಪಡೆದು ತಿಪಟೂರಿನ ಕೊಬ್ಬರಿಯ ಹೆಸರನ್ನು ಜಗದ್ವಿಖ್ಯಾತಗೊಳಿಸಿ, ಸ್ಥಳೀಯ ಉತ್ಕøಷ್ಟ ತಳಿಯನ್ನು ಉಳಿಸಬೇಕಾಗಿರುವುದು ಕಲ್ಪತರು ನಾಡಿನ ಜನತೆಯ ಜವಾಬ್ದಾರಿಯಾಗಿದೆ.
ನೆಲ ಅಟ್ಟದಿಂದ ವಿಶಿಷ್ಟ ರುಚಿಯಲ್ಲಿ ವ್ಯತ್ಯಾಸ :
ಕೊಬ್ಬರಿ ಮಾಡಲು ಚೆನ್ನಾಗಿ ಬಲಿತ ತೆಂಗಿನ ಕಾಯಿಗಳನ್ನು ಕಿತ್ತು, ಅವುಗಳನ್ನು ಮನೆಯ ಅಟ್ಟದ ಮೇಲೆ 10 ರಿಂದ 12 ತಿಂಗಳು ಬಿಟ್ಟರೆ ಕಾಯಿಯಲ್ಲಿರುವ ನೀರಿನ ಅಂಶವು ಹಾವಿಯಾಗಿ ತೆಂಗಿನಕಾಯಿ ಚಿಪ್ಪನ್ನು ಬಿಟ್ಟು ಉತ್ತಮ ರುಚಿಯನ್ನು ಹೊಂದುತ್ತದೆ.
ಆದರೆ ಈಗ ಎಲ್ಲರ ಮನೆಗಳಲ್ಲಿ ಅಟ್ಟಗಳು ಮಾಯವಾಗಿ, ಮನೆಯ ಮುಂದೆ ನೆಲಟ್ಟಗಳು ಬಂದಿವೆ. ಈ ಅಟ್ಟಗಳಲ್ಲಿ ತೆಂಗಿನಕಾಯಿಗಳು ಗಾಳಿ, ಮಳೆ, ಚಳಿ, ಬಿಸಿಗೆ ತೆರೆದುಕೊಂಡಿರುವುದರಿಂದ ಸಂಪ್ರದಾಯಿಕ ರುಚಿಯಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದು ತೋಟಗಾರಿಕ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
-ರಂಗನಾಥ್ ಪಾರ್ಥಸಾರಥಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ