ತುಮಕೂರು:
ಪ್ರಜಾಪ್ರಗತಿ -ಪ್ರಗತಿ ಟಿವಿಯ ರಂಗಿನ ರಂಗೋಲಿ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪ್ರಜಾಪ್ರಗತಿ -ಪ್ರಗತಿ ಟಿವಿಯಿಂದ ತುಮಕೂರು ವಿವಿ ಪ್ರಾಂಗಣದ ಹೆಲಿಪ್ಯಾಡ್‍ನಲ್ಲಿ ಗುರುವಾರ ಕೋವಿಡ್ ನಿಯಮಪಾಲನೆಯೊಂದಿಗೆ ಆಯೋಜಿಸಿದ್ದ ರಂಗು –ರಂಗಿನ ರಂಗೋಲಿ ಸ್ಪರ್ಧೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ನೋಂದಾಯಿಸಿದ ಗೃಹಿಣಿಯರು, ಯುವತಿಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಕ್ರಾಂತಿ ಹಬ್ಬವನ್ನು ಸಂಕೇತಿಸುವ ಉಗ್ಗಿ, ಕಬ್ಬು, ಧಾನ್ಯಗಳ ಸಿರಿಯನ್ನು ಚುಕ್ಕಿ ರೂಪದಲ್ಲಿ ಬಿಡಿಸಿ ಹಬ್ಬಕ್ಕೂ ಮುನ್ನವೇ ಹಬ್ಬದ ಸಂಭ್ರಮ ಕಳೆಕಟ್ಟುವಂತೆ ಮಾಡಿದರು.
ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದ ಮಹಾನಗರಪಾಲಿಕೆ ಆಯುಕ್ತೆ ರೇಣುಕಾ ಅವರು ಭಾರತೀಯ ಪರಂಪರೆಯಲ್ಲಿ ಹಬ್ಬವೆಂದರೆ ಸಂಭ್ರಮ. ಈ ಸಂಭ್ರಮವನ್ನು ಮೊದಲು ಸಂಕೇತಿಸುವುದೇ ರಂಗೋಲಿ.
ಮನೆಯ ಮುಂದೆ ಚಿತ್ತಾಕರ್ಷಕವಾಗಿ ಮಹಿಳೆಯರು ರಂಗೋಲಿ ಬಿಡಿಸಿದ್ದಾರೆಂದರೆ ಮನೆಯಲ್ಲಿ ವಿಶೇಷತೆ, ಹಬ್ಬದ ಆಚರಣೆಯಿದೆ ಎಂದೇ ಅರ್ಥ. ಎಲ್ಲಾ ಮಹಿಳೆಯರ ಕಲಾಭಿವ್ಯಕ್ತಿ ರಂಗೋಲಿ ಮೂಲಕ ಪ್ರತಿದಿನ ವ್ಯಕ್ತವಾಗುತ್ತದೆ.
ರಂಗೋಲಿ ಬಿಡಿಸುವ ಮೂಲಕವೇ ಆರಂಭವಾಗುವ ಮಹಿಳೆಯರ ದಿನಚರಿಗೆ ಒಂದು ಸ್ಪರ್ಧೆ ಏರ್ಪಡಿಸಿ ಮಹಿಳೆಯರ ಕಲಾಭಿವ್ಯಕ್ತಿಗೆ ಪ್ರೋತ್ಸಾಹಿಸಿದ ಪ್ರಜಾಪ್ರಗತಿ-ಪ್ರಗತಿ ಟಿವಿ ಹಾಗೂ ಸಹಭಾಗಿತ್ವದ ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದರು.
ಪ್ರಶಸ್ತಿ ಹಿಂದೆ ಮಹಿಳೆಯರ ಕೊಡುಗೆ:
ತುಮಕೂರು ಮಹಾನಗರಪಾಲಿಕೆ ಸ್ವಚ್ಛ ಸರ್ವೇಕ್ಷಣೆ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸುವುದರ ಹಿಂದೆ ಮನೆಯ ತ್ಯಾಜ್ಯವನ್ನು ಹಸಿ ಮತ್ತು ಒಣ ಕಸವಾಗಿ ಪ್ರತ್ಯೇಕವಾಗಿ ವಿಂಗಡಿಸಿ ಕಸ ಸಂಗ್ರಹಣೆ ವಾಹನಕ್ಕೆ ಸಮರ್ಪಕವಾಗಿ ಹಾಕುತ್ತಿರುವ ನಗರದ ಮಹಿಳೆಯರ ಕೊಡುಗೆ ಕಾರಣ.
ಇದಕ್ಕಾಗಿ ಪಾಲಿಕೆ ಪರವಾಗಿ ಎಲ್ಲಾ ಮಹಿಳೆಯರಿಗೂ ಅಭಿನಂದಿಸುವೆ. ಪ್ರಸಕ್ತ ತುಮಕೂರು ನಗರದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮಹಿಳೆಯರ ಆರೋಗ್ಯ ಸುರಕ್ಷತೆ ಹೆಚ್ಚು ಮುಖ್ಯವಾಗಿದೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಸೋಂಕಿಗೆ ಒಳಗಾಗದಂತೆ ಎಚ್ಚರವಹಿಸಿ ಎಂದರು.
ಸ್ಪರ್ಧೆಯ ತೀರ್ಪುಗಾರರಾಗಿ 13ಸಾವಿರಕ್ಕೂ ಅಧಿಕ ಚುಕ್ಕಿ ರಂಗೋಲಿ ಬಿಡಿಸಿ ಲಿಮ್ಕಾ ದಾಖಲೆ ಮಾಡಿರುವ ಜಯಭಾಸ್ಕರಚಾರ್, ಪ್ರಾಧ್ಯಾಪಕಿ ವೀಣಾ ಯಾಗಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ.ಟಿ.ಆರ್.ಲೀಲಾವತಿ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಪಾಲ್ಗೊಂಡರು.
ಪ್ರಗತಿ ಟಿವಿ ಸಿಇಒ ಟಿ.ಎನ್.ಶಿಲ್ಪಶ್ರೀ ನೇತೃತ್ವ ವಹಿಸಿದ್ದರು. ಸಮಾರೋಪದ ಅತಿಥಿಗಳಾಗಿ ಶಿಲ್ಪಶ್ರೀ ಆಫ್Àಸೆಟ್ ಪ್ರಿಂಟರ್ಸ್‍ನ ಮಾಲೀಕರಾದ ಶಾರದಾನಾಗಣ್ಣ ಪಾಲ್ಗೊಂಡರು.
ಕಲಾಭಿವ್ಯಕ್ತಿ ಉತ್ತೇಜನಕ್ಕಾಗಿ ವೇದಿಕೆ: ಎಸ್.ನಾಗಣ್ಣ
ಪ್ರಾಸ್ತಾವಿಕ ನುಡಿಗಳನ್ನಾಡಿದ ರಾಜ್ಯ ರೆಡ್‍ಕ್ರಾಸ್ ಸಭಾಪತಿ ಹಾಗೂ ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ನಿರಂತರ ಕೋವಿಡ್ ಅಲೆಗಳ ಹಿನ್ನೆಲೆಯಲ್ಲಿ ಅನೇಕ ಸಾಮಾಜಿಕ, ಕಲೆ, ಸಾಂಸ್ಕøತಿಕ ಚಟುವಟಿಕೆಗಳು ನಗರದಲ್ಲಿ ಸ್ಥಗಿತಗೊಂಡಿವೆ.
ಮಹಿಳೆಯರ ಆಂತರ್ಯದಲ್ಲಿ ಉದುಗಿದ್ದ ಪ್ರತಿಭೆಗಳಿಗೆ ವೇದಿಕೆಯಾಗಲು ಈ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಬಿಸಿಲಲ್ಲೂ ಮಹಿಳೆಯರು ಹೊರಬಂದು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಕಾರ್ಯಕ್ರಮ ಪ್ರಾಯೋಜಿಸಿದ ಎಲ್ಲಾ ಸಹಭಾಗಿ ಸಂಸ್ಥೆಗಳು, ತುಮಕೂರು ವಿವಿ ಸಹಕಾರವನ್ನು ಸ್ಮರಿಸಿದರು.
ರಂಗೋಲಿ ಸ್ಪರ್ಧೆ ವಿಜೇತರು, ಸಹಭಾಗಿತ್ವ
ಪ್ರಗತಿ ರಂಗಿನ ರಂಗೋಲಿ ಸ್ಪರ್ಧೆಯನ್ನು ಎನ್.ಎಸ್.ಸಿಲ್ಕ್ ಅಂಡ್ ಸ್ಯಾರಿಸ್ ಅರ್ಪಿಸಿದ್ದು, ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸಹಯೋಗ ನೀಡಿತ್ತು. ಸೈಡ್ ವೇ 6 ಇವೆಂಟ್ ಪಾರ್ಟನರ್ ಆಗಿದ್ದು, ಅಮೃತಬಿಂದು ಹೆಲ್ತ್ ಪಾರ್ಟನರ್ ಆಗಿ ಸಹಕಾರ ನೀಡಿದ್ದವು. ರಂಗೋಲಿ ಸ್ಪರ್ಧೆಯಲ್ಲಿ ಜಿ.ಎಸ್.ಶ್ವೇತಾ 5000 ರೂ. ಪ್ರಥಮ ಬಹುಮಾನಗಳಿಸಿದ್ದು, ಎನ್.ಎಸ್.ಸಿಲ್ಕ್ಸ್‍ನ ಗೌತಮಿ ಅವರು ಬಹುಮಾನ ವಿತರಿಸಿದರು.
ದ್ವಿತೀಯ ಬಹುಮಾನಗಳಿಸಿದ ಸಿ.ಸೌಮ್ಯ ಅವರಿಗೆ 3500ರೂ. ನಗದು ಬಹುಮಾನವನ್ನು ಜೀನಿ ಮಿಲೆಟ್ ಹೆಲ್ತ್ ಮಿಕ್ಸ್‍ನ ಕರ್ನಾಟಕ ಝೋನಲ್ ಹೆಡ್‍ನ ಜಗದೀಶ್‍ಬಾಬು ಹಾಗೂ
ತೃತೀಯ ಬಹುಮಾನಗಳಿಸಿದ ಆರ್.ಬಿ.ಭಾವನಾ ಅವರಿಗೆ 2000 ರೂ. ನಗದು ಬಹುಮಾನವನ್ನು ಪ್ರಗತಿ ಟಿವಿ ಸಿಇಓ ಟಿ.ಎನ್.ಶಿಲ್ಪಶ್ರೀ ವಿತರಿಸಿದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ, ಜೀನಿ ಹೆಲ್ತ್ ಮಿಕ್ಸ್ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
