ತುಮಕೂರು:
ಅನಿರ್ಧಿಷ್ಟಾವಧಿ ಮುಷ್ಕರದ ಹಾದಿ ಹಿಡಿದಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಿ ಸರಕಾರ ಆದೇಶ ಹೊರಡಿಸಿದರೂ ಸರಕಾರದ ಕ್ರಮ ಅತಿಥಿ ಉಪನ್ಯಾಸಕರಿಗೆ ಸಮಾಧಾನ ತಂದಿಲ್ಲ.
ಸಂಕ್ರಮಣ ಕಳೆದರೂ ಅತಿಥಿ ಉಪನ್ಯಾಸಕರ ಸಂಕಟದ ಹೋರಾಟ ಮುಂದುವರಿದಿದ್ದು, ಇಂದಿನಿಂದ ತೆರೆಯುವ ಆನ್ಲೈನ್ ಪೋರ್ಟಲ್ಗೆ ಅರ್ಜಿ ಹಾಕದಿರಲು ಅತಿಥಿ ಉಪನ್ಯಾಸಕರು ಬಿಗಿ ನಿಲುವು ತಳೆದಿದ್ದು, ಉನ್ನತ ಶಿಕ್ಷಣದಲ್ಲಿ ಶೈಕ್ಷಣಿಕ ಸಂಘರ್ಷಕ್ಕೆ ಎಡೆಮಾಡಿದೆ.
ಸೇವಾ ಭದ್ರತೆ, ಖಾಯಾಂತಿಗೆ ಒತ್ತಾಯಿಸಿ ಡಿ.28ರಿಂದ ರಾಜ್ಯಾದ್ಯಂತ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು,. ಒತ್ತಾಯಕ್ಕೆ ಮಣಿದ ರಾಜ್ಯ ಸರಕಾರ ಸಂಕ್ರಾಂತಿ ಉಡುಗೊರೆಯೆಂಬಂತೆ ಜ.14ರಂದು ಅತಿಥಿ ಉಪನ್ಯಾಸಕರ ವೇತನವನ್ನು ದುಪ್ಪಟ್ಟಿಗಿಂತಲೂ ಅಧಿಕ ಏರಿಕೆ ಮಾಡಿ ಮಹತ್ವದ ನಿರ್ಧಾರ ಪ್ರಕಟಿಸಿತು.
ಯುಜಿಸಿ ನಿಗದಿತ ಅರ್ಹತೆ ಹೊಂದಿ 5ವರ್ಷಕ್ಕಿಂತ ಹೆಚ್ಚು ಸೇವಾನುಭವ ಹೊಂದಿರುವವರಿಗೆ 13 ಸಾವಿರದಿಂದ 32 ಸಾವಿರ, 5 ವರ್ಷಕ್ಕಿಂತ ಕಡಿಮೆ ಸೇವಾನುಭವ ಇರುವವರಿಗೆ ಹಿಂದೆ ಇದ್ದ 11 ಸಾವಿರಕ್ಕೆ ಬದಲಾಗಿ 30 ಸಾವಿರ, 28 ಸಾವಿರ, 26 ಸಾವಿರ(ವಿವಿಧ ಅರ್ಹತೆ ಅನುಸಾರ) ಹೆಚ್ಚಳ ಮಾಡಿ ಜ.14ರಂದು ಆದೇಶ ಹೊರಡಿಸಿತು.
ಅಲ್ಲದೆ ಬೋಧನಾ ಅವಧಿಯನ್ನು ವಾರಕ್ಕೆ 8ಗಂಟೆ ಬದಲಾಗಿ 15ಗಂಟೆಗೆ ಹೆಚ್ಚಳ ಮಾಡಿತು. ಈ ಆದೇಶದ ಆಧಾರದಲ್ಲಿ 2022-23ನೇ ಸಾಲಿಗೆ ನೇಮಕಕ್ಕೆ ಸೋಮವಾರ ಆನ್ಲೈನ್ನಲ್ಲಿ ಅರ್ಜಿ ಹಾಕಿ ತಮ್ಮ ಇಚ್ಚೆಯ 5 ಸರಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿತು.
ಕೇಳಿದ್ದು ಸೇವಾಭದ್ರತೆ, ಮಾಡಿದ್ದು ವೇತನ ಹೆಚ್ಚಳ:
ಆದರೆ ಸರಕಾರದ ಈ ಕ್ರಮ ಪರೋಕ್ಷವಾಗಿ ಅತಿಥಿ ಉಪನ್ಯಾಸಕರ ಕೆಲಸವನ್ನೇ ಕಸಿಯುವ ಕ್ರಮವಾಗಿದೆ ಎಂದು ಆರೋಪಿಸಿರುವ ಅತಿಥಿ ಉಪನ್ಯಾಸಕರು, ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ 14,447 ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ, ಬಹುತೇಕ ಉಪನ್ಯಾಸಕರು ವಯೋಮಿತಿ ಮೀರಿ, ಸೇವಾ ಖಾಯಾಂತಿ ಇಲ್ಲದೆ ಜೀವನದ ಭವಿಷ್ಯವೇ ಅತಂತ್ರವಾಗಿದೆ
,2002ರಿಂದ ಈವರೆಗೆ 72ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಯಿಲ್ಲದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದು, ಈ ಸಮಸ್ಯೆಗೆ ಸರಕಾರ ಇವರಿಗೆ ಸೇವಾ ಭದ್ರತೆ ಒದಗಿಸಿ ಖಾಯಾಂತಿಮಾಡಿಕೊಳ್ಳುವುದೇ ಪರಿಹಾರವಾಗಿದೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಿದ ಸರಕಾರ ಕೇವಲ ವೇತನ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದೆ ಎಂದು ದೂರಿದ್ದಾರೆ.
ಅರ್ಧದಷ್ಟು ಉಪನ್ಯಾಸಕರು ಕೆಲಸದಿಂದ ಹೊರಕ್ಕೆ:
ಬೋಧನಾ ಅವಧಿಯನ್ನು ವಾರದಲ್ಲಿ 8 ಗಂಟೆಯಿಂದ 15ಗಂಟೆ ಹೆಚ್ಚಿಸಿ ಇಬ್ಬರು ಅತಿಥಿ ಉಪನ್ಯಾಸಕರ ಕೆಲಸವನ್ನು ಒಬ್ಬರಿಂದ ಮಾಡಿಸಿಕೊಳ್ಳುವುದು ಸರಕಾರದ ಉದ್ದೇಶವಾಗಿದ್ದು, ಇದರಿಂದ ರಾಜ್ಯದಲ್ಲಿರುವ 14,447 ಮಂದಿ ಅತಿಥಿ ಉಪನ್ಯಾಸಕgುಲ್ಲಿ 7500ಕ್ಕೂ ಅಧಿಕ ಮಂದಿ ಕೆಲಸ ಕಳೆದು ಕೊಳ್ಳಲಿದ್ದಾರೆ.
ಅಲ್ಲದೇ ಶೀಘ್ರದಲ್ಲೇ 1200 ಸಹಾಯಕ ಪ್ರಾಧ್ಯಾಪಕರನ್ನು ಹೊಸದಾಗಿ ನೇಮಕ ಮಾಡಿಕೊಳ್ಳುತ್ತಿದ್ದು, ಖಾಯಂ ಆಗಿ ನೇಮಕವಾದರೆ ಮತ್ತೆ 3000 ಮಂದಿ ಅತಿಥಿ ಉಪನ್ಯಾಸಕರು ಅನಿವಾರ್ಯವಾಗಿ ಕಾಲೇಜಿನಿಂದ ಹೊರದೂಡಲ್ಪಡುತ್ತಾರೆ. ಹಾಗಾಗಿ ಸರಕಾರಿ ಅತಿಥಿ ಉಪನ್ಯಾಸಕರನ್ನು ವೇತನ ಹೆಚ್ಚಳದ ಹೆಸರಲ್ಲಿ ಬಲಿಹಾಕಲು ಹೊರಟಿದೆ ಎಂದು ಮುಷ್ಕರ ನಿರತ ಅತಿಥಿ ಉಪನ್ಯಾಸಕ ರಮೇಶ್ ದೂರುತ್ತಾರೆ.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ:
ಮತ್ತೊಂದೆಡೆ ಅತಿಥಿ ಉಪನ್ಯಾಸಕರಿಗೆ ದುಪ್ಪಟ್ಟಿಗಿಂತಲೂ ಅಧಿಕ ವೇತನ ಹೆಚ್ಚಳ ಮಾಡಿದ್ದು, ಉಪನ್ಯಾಸಕರು ಮುಷ್ಕರ ಕೈ ಬಿಟ್ಟು ತರಗತಿಗೆ ಮರಳಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮನವಿ ಮಾಡಿದ್ದಾರೆ.
ಆದರೆ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಯ ಬಿಗಿ ಪಟ್ಟು ಮುಂದುವರಿಸಿದ್ದು, ಅತಿಥಿ ಉಪನ್ಯಾಸಕರು ಹಾಗೂ ಸರಕಾರದ ನಡುವಿನ ಹಗ್ಗಜಗ್ಗಟಾದಿಂದಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ವರ್ಷಾರಂಭದಲ್ಲೇ ವಿದ್ಯಾರ್ಥಿಗಳ ಪಾಠ-ಪ್ರವಚನಕ್ಕೆ ತೊಂದರೆಯಾಗಿದೆ. ಸರಕಾರ ಈ ಸಮಸ್ಯೆಗೆ ನ್ಯಾಯಸಮ್ಮತ ಪರಿಹಾರ ಕಾಣಿಸದಿದ್ದರೆ ಉನ್ನತ ಶಿಕ್ಷಣ ಹಳ್ಳ ಹಿಡಿಯುವುದು ನಿಶ್ಚಿತವಾಗಲಿದೆ.
ಜೀವನ ಭದ್ರತೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ 14,447 ಅತಿಥಿ ಉಪನ್ಯಾಸಕರು!
ರಾಜ್ಯದಲ್ಲಿರುವ 14447 ಪದವಿ ಕಾಲೇಜು ಅತಿಥಿ ಉಪನ್ಯಾಸಕರಲ್ಲಿ 5 ವರ್ಷದೊಳಗಿನ ಅನುಭವವಿರುವ ಅತಿಥಿ ಉಪನ್ಯಾಸಕರು6256 ಸಂಖ್ಯೆಯಲ್ಲಿದ್ದರೆ, 1 ವರ್ಷದೊಳಗಿನ ಅನುಭವವುಳ್ಳವರು 3130 ಸಂಖ್ಯೆಯಲ್ಲಿದ್ದಾರೆ. 6 ರಿಂದ 10 ವರ್ಷದ ಅನುಭವಿ ಅತಿಥಿ ಉಪನ್ಯಾಸಕರು 4088 ಸಂಖ್ಯೆಯಲ್ಲಿ, 11ರಿಂದ 15 ವರ್ಷ ಸೇವಾನುಭವವುಳ್ಳವರು829 ಮಂದಿ,
16 ರಿಂದ 20 ವರ್ಷ ಸೇವಾನುಭವ ಹೊಂದಿರುವವರು 120 ಮಂದಿ, 21 ರಿಂದ 25 ವರ್ಷ ಸೇವಾನುಭವವುಳ್ಳವರು 19 ಮಂದಿ, 25 ವರ್ಷಕ್ಕೂ ಮೇಲ್ಪಟ್ಟು 5 ಮಂದಿಯಿದ್ದಾರೆ. ಇವರೆಲ್ಲರೂ ಜೀವನದ ಭದ್ರತೆಗಾಗಿ ಹಾತೊರೆಯುತ್ತಿದ್ದು, ರಾಷ್ಟ್ರದ ಪ್ರಗತಿಯ ಸೂಚ್ಯಂಕವಾದ ಉನ್ನತಶಿಕ್ಷಣದ ಅಭ್ಯುದಯಕ್ಕೆ ತನ್ನದೆ ಕೊಡುಗೆ ನೀಡುತ್ತಾ ಬಂದಿರುವವರಾಗಿದ್ದಾರೆ.
ನಮ್ಮ ಬೇಡಿಕೆ ಇದ್ದುದು ಸೇವಾಭದ್ರತೆ, ಸೇವಾವಿಲೀನತೆಗೆ. ಅದಕ್ಕಾಗಿಯೇ 21ದಿನ ಮನೆ, ಕುಟುಂಬ ಎಲ್ಲ ಬಿಟ್ಟು ಮಹಿಳಾ, ಪುರುಷ ಅತಿಥಿ ಉಪನ್ಯಾಸಕರು ಬೀದಿಯಲ್ಲಿದ್ದಾರೆ. ಸರಕಾರ ಮಾತ್ರ ವೇತನ ಹೆಚ್ಚಳ ಮಾಡಿ ಕೈತೊಳೆದುಕೊಂಡಂತೆ ಆನ್ಲೈನ್ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.
ಹೀಗಾಗಿ ನಾವೆಲ್ಲರೂ ಸಭೆ ನಡೆಸಿ ಪ್ರಮುಖ ಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರಿಸಲು ಆನ್ಲೈನ್ ಅಪ್ಲಿಕೇಷನ್ ಹಾಕದಿರಲು ನಿರ್ಧರಿಸಿದ್ದೇವೆ. ನಮ್ಮ ಹೋರಾಟ ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಇಂದು ಸಿಎಂ ಭೇಟಿಯಾಗುತ್ತೇವೆ. ಎರಡು ದಿನ ನೋಡಿ, ಜೈಲ್ಭರೋ ಚಳವಳಿ, ರಾಜ್ಯಪಾಲರಿಗೆ ದಯಾಮರಣಕ್ಕೆ ಎಲ್ಲರೂ ಅರ್ಜಿಹಾಕುತ್ತೇವೆ. ಅತಿಥಿ ಉಪನ್ಯಾಸಕ ವ್ಯವಸ್ಥೆಯೇ ತೆಗೆದುಹಾಕಬೇಕೆಂಬುದು ನಮ್ಮ ಪ್ರಬಲ ಬೇಡಿಕೆ.
-ಶಿವಾನಂದ ಕಲ್ಲೂರ, ಅತಿಥಿ ಉಪನ್ಯಾಸಕರ ರಾಜ್ಯ ಸಮಿತಿ ಮುಖಂಡ.
2002ರಿಂದ ಅತಿಥಿ ಉಪನ್ಯಾಸಕರ ಸಮಸ್ಯೆ ಇದೆ. ನಮ್ಮ ಸರಕಾರ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ವೇತನವನ್ನು ದುಪ್ಪಟ್ಟಿಗಿಂತಲೂ ಅಧಿಕ ಮಾಡಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಅತಿಥಿ ಉಪನ್ಯಾಸಕರು ಹಠ ಮಾಡದೆ ಇಂದಿನಿಂದ ವಾರದವರೆಗೆ ಕಾಲಾವಕಾಸವಿರುವಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಹಾಕಿ ತರಗತಿಗಳಿಗೆ ಹಾಜರಾಗಬೇಕು.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವರು.
-ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ