ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರಸ್ವಾಮಿ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ಖಾಸಗಿ ಕಾರ್ಯಕ್ರಮ ನಿಮಿತ್ತ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಅರಸೀಕೆರೆಯ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ, ಮಸೀದಿ ಮುಂಭಾಗದಲ್ಲೇ ನಿಂತು ವಿವಾದಿತ ಹೇಳಿಕೆ ಉಲ್ಲೇಖಿಸಿ ವಿಡಿಯೋ ಚಿತ್ರೀಕರಣ ನಡೆಸಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಇದೀಗ ಈ ವಿಡಿಯೋ ವೈರಲ್ ಆಗಿದೆ. ಈ ಹಿನ್ನೆಲೆ ಮಸೀದಿಗೆ ಭದ್ರತೆ ಹೆಚ್ಚಿಸುವ ಕುರಿತು ವಕ್ಫ್ ಬೋರ್ಡ್ ಸಮಿತಿ ಹಾಗೂ ಕೇಂದ್ರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಗೆ ಮನವಿ ಮಾಡಿವೆ.
ಮಸೀದಿ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ನೀಡಿರುವ ಲಿಖಿತ ಮಾಹಿತಿ ಪ್ರಕಾರ ವಿಡಿಯೋದಲ್ಲಿ ಮಾತನಾಡಿರುವ ಋಷಿಕುಮಾರಸ್ವಾಮಿ ಹಾಗೂ ವಿಡಿಯೋ ಚಿತ್ರೀಕರಿಸಿದ ಇಬ್ಬರ ಮೇಲೂ ದೂರು ದಾಖಲಾಗಿದೆ.
ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಅಸ್ಥಿ ವಿಸರ್ಜನೆಗೆ ಆಗಮಿಸಿದ್ದ ಋಷಿ ಕುಮಾರಸ್ವಾಮಿ, ವಾರಾಂತ್ಯದ ಕರ್ಫ್ಯೂ ನಡುವೆ ಈ ವಿವಾದಿತ ವಿಡಿಯೋ ಮಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ