ಬೆಂಗಳೂರು:
ತಾಯಿ ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿದ್ದಾರೆ ಎಂಬ ಸುದ್ದಿ ತಿಳಿಸಿದರೂ ನೋಡಲು ಬರದ ಮಗಳು-ಅಳಿಯ, ಕೊನೆಗೆ ಆಕೆ ಸಾವಿಗೀಡಾದರೂ ಬರಲು ತಕರಾರು ತೆಗೆದ ಅಮಾನವೀಯ ಪ್ರಕರಣವೊಂದು ನಡೆದಿದೆ.
ಮಂಡ್ಯ ಮೂಲದ ಭಾಗ್ಯಲಕ್ಷ್ಮಿ (52) ಕೋವಿಡ್ನಿಂದ ಸಾವಿಗೀಡಾದ ಮಹಿಳೆ.
ಈಕೆ ಬೆಂಗಳೂರಿನ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ವಾಸವಿದ್ದರು. ಏರ್ಫೋರ್ಸ್ನಲ್ಲಿ ಉದ್ಯೋಗಿ ಆಗಿದ್ದ ಭಾಗ್ಯಲಕ್ಷ್ಮಿ ಮನೆಯಲ್ಲಿನ ನಾಯಿ-ಬೆಕ್ಕಿಗಾಗಿ ಮಾಂಸ ಕೊಂಡುಕೊಳ್ಳಲು ಗಂಗೇನಹಳ್ಳಿಯಲ್ಲಿರುವ ಚಿಕನ್ ಅಂಗಡಿಗೆ ಆಗಾಗ ಹೋಗುತ್ತಿದ್ದರು.
ಹೀಗಾಗಿ ಶುಕ್ರವಾರ ಅಸ್ವಸ್ಥಗೊಂಡಿದ್ದ ಇವರು ಪರಿಚಿತನಾಗಿದ್ದ ಚಿಕನ್ ಅಂಗಡಿಯ ಸಂಶೀರ್ಗೆ ಕರೆ ಮಾಡಿ ತಿಳಿಸಿದ್ದರು. ನಂತರ ಭಾಗ್ಯಲಕ್ಷ್ಮಿಯನ್ನು ಸಂಶೀರ್ ಆಸ್ಪತ್ರೆಗೆ ದಾಖಲು ಮಾಡಿ, ಮಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಈ ವಿಷಯವನ್ನು ಸಂಜಯನಗರದ ಎಎಸ್‌ಐ ಶ್ರೀನಿವಾಸ್ಗೂ ತಿಳಿಸಿದ್ದ ಸಂಶೀರ್, ಭಾಗ್ಯಲಕ್ಷ್ಮಿಯ ಮಗಳು-ಅಳಿಯನ ಬರುವಿಕೆಗೆ ಕಾಯುತ್ತಿದ್ದರು. ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆಗಿದ್ದಾರೆ ಎಂಬುದನ್ನು ತಿಳಿಸಿದರೂ, ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿ, ಮಗಳು-ಅಳಿಯ ಕರೆ ಕಟ್ ಮಾಡಿದ್ದರು.
ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಭಾಗ್ಯಲಕ್ಷ್ಮಿ ಸಾವಿಗೀಡಾದ ಬಳಿಕವೂ ಎಎಸ್‌ಐ ಶ್ರೀನಿವಾಸ್ ಮತ್ತು ಸಂಶೀರ್, ಭಾಗ್ಯಲಕ್ಷ್ಮಿ ಅಳಿಯನಿಗೆ ಕರೆ ಮಾಡಿ ಹೇಳಿದರೂ, ‘ನೀವೇ ಏನಾದರೂ ಮಾಡಿಕೊಳ್ಳಿ’
ಅಂತ ಹೇಳಿ ಕರೆ ಕಟ್ ಮಾಡಿದ್ದರು. ನಿನ್ನೆ ರಾತ್ರಿಯಿಡೀ ಹೆಬ್ಬಾಳ ಶಾಂತಿಧಾಮದಲ್ಲೇ ಶವವಿಟ್ಟು ಆಯಂಬುಲೆನ್ಸ್ ಡ್ರೈವರ್ ಮಂಜುನಾಥ್, ಸಂಶೀರ್, ಎಎಸ್‌ಐ ನಾಗರಾಜ್ ಕಾದಿದ್ದಾರೆ.
ಇಂದು ಸಂಜಯನಗರ ಇನ್ಸ್ಪೆಕ್ಟರ್ ಬಾಲರಾಜ್, ಭಾಗ್ಯಲಕ್ಷ್ಮಿಯ ಅಳಿಯನಿಗೆ ಕರೆ ಮಾಡಿ, ಠಾಣೆಗೆ ಕರೆಸಿಕೊಂಡು ಬುದ್ಧಿ ಹೇಳಿದ್ದಾರೆ. ಆ ಬಳಿಕವಷ್ಟೇ ಅಂತ್ಯಸಂಸ್ಕಾರ ಮಾಡಲು ಮಗಳು ಮಧುಶ್ರೀ ಮತ್ತು ಅಳಿಯ ಮೋಹನ್ ಕುಮಾರ್ ಒಪ್ಪಿದ್ದಾರೆ.
ನಂತರ ಅವರಿಗೆ ಶವವನ್ನು ಪೊಲೀಸರು-ಸಾರ್ವಜನಿಕರು ಒಪ್ಪಿಸಿದ್ದು, ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ