ತುರುವೇಕೆರೆ:
ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಹಲವು ತಿಂಗಳುಗಳಿಂದ ಬಂದ್ ಮಾಡಿದೆ. ಹಾಗಾಗಿ ದೇಹಬಾಧೆ ತೀರಿಸಿಕೊಳ್ಳಲು ಜನತೆ ಓಡಾಡುವ ಸ್ಥಳಗಳನ್ನೇ ಆಶ್ರಯಿಸುತ್ತಿದ್ದಾರೆ.
ಹಾಗಾಗಿ ಕಛೇರಿಗಳ ಆಜು-ಬಾಜು ಅನೈರ್ಮಲ್ಯದ ತಾಣವಾಗಿ ಪರಿಣಮಿಸಿವೆ. ಇದರ ಬಗ್ಗೆ ಪಟ್ಟಣ ಪಂಚಾಯಿತಿ ಶೀಘ್ರವೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕೆಂದು ಚಿತ್ರಕಲಾ ಸಮಿತಿ ಸದಸ್ಯರುಗಳು ಆಗ್ರಹಿಸಿದ್ದಾರೆ.
ಪಟ್ಟಣಕ್ಕೆ ಪ್ರತಿದಿನ ಸಾವಿರಾರು ಜನ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಭೇಟಿ ನೀಡುತ್ತಾರೆ. ತಾಲ್ಲೂಕು ಕಛೇರಿ ಹಿಂಭಾಗದಲ್ಲಿರುವ ಸಾರ್ವಜನಿಕ ಸುಲಭ ಶೌಚಾಲಯವನ್ನು ಹಲವು ತಾಂತ್ರಿಕ ಕಾರಣಗಳೊಡ್ಡಿ ಪ.ಪಂ. ಪದೆ ಪದೆ ಮುಚ್ಚುವುದರಿಂದ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನರಿಗೆ ಶೌಚಾಲಯವಿಲ್ಲದೆ ತೊಂದರೆಯಾಗುತ್ತಿದೆ.
ಪಟ್ಟಣದ ಯಾವುದೇ ಹೋಟೆಲ್ಗಳಲ್ಲೂ ಸಹಾ ಸುಸಜ್ಜಿತ ಶೌಚಾಲಯಗಳಿಲ್ಲ. ಯುಜಿಡಿ ಸಮಸ್ಯೆ ನೆಪವೊಡ್ಡಿ ತಾಲ್ಲೂಕು ಕಚೇರಿ ಪಕ್ಕದ ಶೌಚಾಲಯ ಹಲವು ದಿನಗಳಿಂದ ಮುಚ್ಚಿರುವುದರಿಂದ ಜನರು ತಾಲ್ಲೂಕು ಕಛೇರಿ ಕಟ್ಟಡದ ಗೋಡೆಗಳನ್ನು ಹಾಗೂ ಗುರುಭವನ ಮೈದಾನದ ಕಾಂಪೌಂಡ್ಗಳನ್ನು ಆಶ್ರಯಿಸುತ್ತಿದ್ದಾರೆ.
ಶೌಚಾಲಯಕ್ಕೆ ಬೀಗ ಜಡಿದಿರುವುದರಿಂದ ಅದರ ಅಕ್ಕಪಕ್ಕದ ವ್ಯಾಪಾರಿಗಳು ಕಸ-ಕಲ್ಮಶ ತಂದು ಶೌಚಾಲಯದ ಮುಂಭಾಗ ಬಿಸಾಕುತ್ತಿದ್ದಾರೆ. ಜನರು ಬೆಳಗಿನ ಛಳಿಗೆ ಬೆಂಕಿ ಕಾಯಿಸಿಕೊಳ್ಳುವ ಸಲುವಾಗಿ ಕಸಕ್ಕೆ ಬೆಂಕಿ ಹಾಕುವುದರಿಂದ ವಾತಾವರಣ ಮಲಿನಗೊಳ್ಳುತ್ತಿದೆ.
ತಹಸೀಲ್ದಾರ್ ನಯೀಂಉನ್ನಿಸಾ ಈ ಸಂಬಂಧ ಪ್ರತಿಕ್ರ್ರಿಯಿಸಿ, ತಾಲ್ಲೂಕು ಕಛೇರಿ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಯುಜಿಡಿ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಹೊರಹೋಗುತ್ತಿದ್ದ ಶೌಚಾಲಯದ ಕಲ್ಮಶ ನೀರು ಬಿಆರ್ಸಿ ಕಚೇರಿ ಮುಂಭಾಗದ ಯುಜಿಡಿ ತುಂಬಿ ಹರಿಯುತ್ತಿತ್ತು.
ಇದನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಯುಜಿಡಿ ಸಂಪರ್ಕ ಮುಚ್ಚಿದ ಪರಿಣಾಮ ಇದೀಗ ಶೌಚಾಲಯ ಕಲ್ಮಷ ಹೊರ ಹೋಗಲು ಜಾಗವಿಲ್ಲದೆ ತುಂಬಿದ್ದು, ಬೇರೆ ಮಾರ್ಗವಿಲ್ಲದೆ ಬಂದ್ ಮಾಡಲಾಗಿದೆ. ಈಗಾಗಲೆ ಇದಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.
ಪರಿಸರ ಪ್ರೇಮಿ ಹಾಗೂ ಚಿತ್ರಕಲಾ ಸಮಿತಿ ಅಧ್ಯಕ್ಷ ಜಿ.ಸಿ.ಶ್ರೀನಿವಾಸ್ ಮಾತನಾಡಿ, ಶೌಚಾಲಯ ಮುಚ್ಚಿ ತಿಂಗಳುಗಳೇ ಕಳೆದರೂ ದಂಡಾಧಿಕಾರಿಗಳಾಗಲಿ ಇಲ್ಲವೇ ಪ.ಪಂ. ಆಗಲೀ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಯುಜಿಡಿ ಸಂಪರ್ಕ ತೆಗೆದರೇನಂತೆ.
ಶೌಚಾಲಯದ ಗುಂಡಿ ತುಂಬಿದರೆ ಪ.ಪಂ. ಸ್ವಂತ ಸೆಪ್ಟಿಕ್ ವಾಹನವಿದೆಯಲ್ಲ. 15 ದಿನಕ್ಕೊಮ್ಮೆ ಶೌಚಗುಂಡಿ ಖಾಲಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬಹುದಲ್ಲವೇ. ಒಟ್ಟಿನಲ್ಲಿ “ಅಪ್ಪ ಅಮ್ಮನ ಜಗಳದಲಿ ಕೂಸು ಬಡವಾಯ್ತು” ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕೂಡಲೇ ಸಂಬಂಧಿಸಿದವರು ಇತ್ತ ಗಮನ ಹರಿಸಿ ಬಂದ್ ಆಗಿರುವ ಶೌಚಾಲಯ ತೆರೆಸಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಅನುವು ಮಾಡಿಕೊಡದಿದ್ದಲ್ಲಿ ಸ್ಥಳೀಯ ಸಂಘಸಂಸ್ಥೆಗಳೊಡಗೂಡಿ ಪಟ್ಟಣ ಪಂಚಾಯಿತಿ ವಿರುದ್ದ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ