ಬೆಂಗಳೂರು:
ಜನವರಿ 21: ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳು ಸೇರಿದಂತೆ ಹಿಂದುಳಿದ ವರ್ಗಗಳ ಶ್ರೇಯೋಭಿವದ್ಧಿಗಾಗಿ ಕರ್ನಾಟಕ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಸರ್ಕಾರದ ಯೋಜನೆಗಳ ಬಗ್ಗೆ ಇಂದಿಗೂ ಬಹುತೇಕರಿಗೆ ಮಾಹಿತಿ ಇರುವುದಿಲ್ಲ.
ಇಂಥ ಯೋಜನೆಗಳ ಸಾಲಿನಲ್ಲಿರುವ ಗಂಗಾ ಕಲ್ಯಾಣ ಯೋಜನೆ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC) ನಿಯಮಿತವು ಈಗ ಗಂಗಾ ಕಲ್ಯಾಣ ಯೋಜನೆ 2022 ಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಆಹ್ವಾನಿಸುತ್ತಿದೆ. ಈ ಯೋಜನೆ ಅಡಿಯಲ್ಲಿ, ಎಲ್ಲಾ ಫಲಾನುಭವಿಗಳು ಕೆಡಿಎಂಸಿ ಅಥವಾ ನೀರಾವರಿ ಸೌಲಭ್ಯದಿಂದ ಪಂಪ್ ಸೆಟ್ನೊಂದಿಗೆ ಒಂದು ಕೊರೆದ ಬೋರ್ವೆಲ್ ಅಥವಾ ತೆರೆದ ಬಾವಿ ಹೊಂದುವುದಕ್ಕೆ ಅನುಕೂಲಕರವಾಗಲಿದೆ.
ಗಂಗಾ ಕಲ್ಯಾಣ ಯೋಜನೆ ಅಡಿ ಪ್ರಯೋಜನ ಪಡೆದುಕೊಳ್ಳುವವವರು ಸಣ್ಣ ಪ್ರಮಾಣದ ರೈತರಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಈ ಯೋಜನೆಗೆ kmdc.karnataka.gov.in ಮೂಲಕ ಆನ್ಲೈನ್ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಕೊರೆಸುವುದಕ್ಕೆ ಕರ್ನಾಟಕ ಸರ್ಕಾರ ನೀಡುವ ಆರ್ಥಿಕ ನೆರವು ಎಷ್ಟು?, ರೈತರು ಈ ಪೈಕಿ ಎಷ್ಟು ಹಣವನ್ನು ವಾಪಸ್ ಪಾವತಿ ಮಾಡಬೇಕು?, ಎಷ್ಟು ಅವಧಿಯಲ್ಲಿ ಹಣವನ್ನು ವಾಪಸ್ ನೀಡಬೇಕು?,
ಈ ಯೋಜನೆ ಅಡಿಯಲ್ಲಿ ರೈತರಿಗೆ ನೀಡುವ ಸಬ್ಸಿಡಿ ಹಣ ಎಷ್ಟು?, ಫಲಾನುಭವಿಗಳು ಈ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂಬುದರ ಕುರಿತು ಸಂಪೂರ್ಣ ಚಿತ್ರಣಕ್ಕಾಗಿ ಮುಂದೆ ಓದಿ.
ಯಾವುದಕ್ಕೆ ಈ ಗಂಗಾ ಕಲ್ಯಾಣ ಯೋಜನೆ
ಒಂದು ವೇಳೆ ದೀರ್ಘಕಾಲಿಕ ನೀರಿನ ಮೂಲಗಳು ಲಭ್ಯವಿಲ್ಲದಿದ್ದರೆ, ತಜ್ಞ ಭೂವಿಜ್ಞಾನಿಗಳು ಶಿಫಾರಸು ಮಾಡಿದ ನೀರಿನ ಬಿಂದುಗಳಲ್ಲಿ ವೈಯಕ್ತಿಕ ಬೋರ್ವೆಲ್ ನಿರ್ಮಾಣಕ್ಕೆ ಕೆಡಿಎಂಸಿ ಸಾಲ ನೀಡುತ್ತದೆ. ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೋರ್ವೆಲ್ಗಳ ನಿರ್ಮಾಣಕ್ಕಾಗಿ ಕೆಎಂಡಿಸಿ ಒಟ್ಟು 1.5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಿದೆ.
ಗಂಗಾ ಕಲ್ಯಾಣ ಯೋಜನೆ 2022ರ ಬಗ್ಗೆ ತಿಳಿಯಿರಿ
ಕರ್ನಾಟಕದಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಬೋರ್ವೆಲ್ ಕೊರೆಸುವುದು ಅಥವಾ ತೆರೆದ ಬಾವಿಗಳನ್ನು ತೋಡಿಸುವುದು. ತದನಂತರ ಅವುಗಳಿಗೆ ಪಂಪ್ ಸೆಟ್ಗಳು ಮತ್ತು ಇತರೆ ಸಾಮಗ್ರಿಗಳನ್ನು ಅಳವಡಿಸಲಾಗುತ್ತದೆ.
ಅಂತರ್ಜಲ ಕುಸಿದಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದು ಘಟಕಕ್ಕೆ 4.50 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಇತರೆ ಜಿಲ್ಲೆಗಳಲ್ಲಿ ಒಂದು ಘಟಕಕ್ಕೆ 3.50 ಲಕ್ಷ ರೂಪಾಯಿ ಅನ್ನು ನಿಗದಿಪಡಿಸಲಾಗಿದೆ.
ಈ ಪೈಕಿ ಒಂದು ಘಟಕದ ವೆಚ್ಚದ 50,000 ರೂಪಾಯಿಗಳಲ್ಲಿ ಪಂಪ್ ಸೆಟ್ಗಳು ಮತ್ತು ಇತರೆ ಸಾಮಗ್ರಿಗಳ ವೆಚ್ಚವೂ ಸೇರಿರುತ್ತದೆ. 50,000 ರೂಪಾಯಿ ಸಾಲದ ಮೊತ್ತವಾಗಿರುತ್ತದೆ. ರೈತರಿಗೆ ನೀಡುವ ಈ ಹಣದಲ್ಲಿ ವಾರ್ಷಿಕ ಶೇ.6ರ ಬಡ್ಡಿದರದಂತೆ 50,000 ರೂಪಾಯಿ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಒಂದು ವರ್ಷದಲ್ಲಿ ಎರಡು ಕಂತುಗಳಂತೆ ಒಟ್ಟು 12 ಕಂತುಗಳನ್ನು ಪಾವತಿ ಮಾಡಬೇಕಾಗುತ್ತದೆ.
ಇದರ ಹೊರತಾಗಿ ಉಳಿದ ಹಣವು ಸರ್ಕಾರದಿಂದ ಫಲಾನುಭವಿಗಳಿಗೆ ನೀಡುವ ಸಹಾಯಧನ ಆಗುತ್ತದೆ. ಅಂದರೆ ಅಂತರ್ಜಲ ಕುಸಿದ ಜಿಲ್ಲೆಗಳಲ್ಲಿ 3.50 ಲಕ್ಷ ರೂಪಾಯಿ ಮತ್ತು ಇತರೆ ಜಿಲ್ಲೆಗಳಲ್ಲಿ 2.50 ಲಕ್ಷ ರೂಪಾಯಿ ಅನ್ನು ಸರ್ಕಾರವು ಸಬ್ಸಿಡಿಯಾಗಿ ನೀಡುತ್ತದೆ.
ರೈತರ ಭೂಮಿಗೆ ನದಿ ಮತ್ತು ನಾಲೆಗಳಿಂದ ನೀರಾವರಿ ಸೌಲಭ್ಯ
ರೈತರ ಭೂಮಿಗೆ ಹತ್ತಿರದಲ್ಲಿ ಇರುವ ನದಿ ಮತ್ತು ನಾಲೆಗಳಿಂದ ಪಂಪ್ ಮೋಟಾರ್ ಮತ್ತು ಪರಿಕರಗಳನ್ನು ಅಳವಡಿಸುವ ಮೂಲಕ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಎಂಟು ಎಕರೆ ಭೂಮಿಗಾಗಿ ನೀರಾವರಿ ಸೌಲಭ್ಯವನ್ನು ಒದಗಿಸುವುದಕ್ಕೆ 4 ಲಕ್ಷ ರೂಪಾಯಿ ಮತ್ತು 15 ಎಕರೆಗಿಂತ ಹೆಚ್ಚು ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು 6 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಹೀಗೆ ಬಳಸುವ ಅಷ್ಟೂ ಹಣವನ್ನು ಸಹಾಯಧನ (ಸಬ್ಸಿಡಿ) ಎಂದು ಪರಿಗಣಿಸಲಾಗುತ್ತದೆ.
ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿಧಾನವನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.
– ಹಂತ 1: ಮೊದಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್https://kmdc.karnataka.gov.in/ಗೆ ಹೋಗಿರಿ
– ಹಂತ 2: ಮುಖಪುಟದಲ್ಲಿ, “ಆನ್ಲೈನ್ ಸರ್ವಿಸಸ್” ಟ್ಯಾಬ್ ಮೇಲೆ ಸ್ಕ್ರಾಲ್ ಮಾಡಿ ಮತ್ತು ಕೆಳಗೆ ತೋರಿಸುವ “ಆನ್ಲೈನ್ ಅಪ್ಲಿಕೇಶನ್” ಲಿಂಕ್ ಅನ್ನು ಕ್ಲಿಕ್ ಮಾಡಿ
– ಹಂತ 3: ನಂತರhttps://kmdc.karnataka.gov.in/info-3/ONLINE+APPLICATION/knನೊಂದಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆನ್ಲೈನ್ ಅಪ್ಲಿಕೇಶನ್ ಪುಟವು ತೆರೆಯುತ್ತದೆ. “ಗಂಗಾ ಕಲ್ಯಾಣ ಯೋಜನೆ – ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ” ಎಂಬ ಸಾಲಿನ ಮೇಲೆ ಒತ್ತಿರಿ.
– ಹಂತ 4: ನೇರ ಲಿಂಕ್ –https://kmdc.kar.nic.in/loan/Login.aspx
– ಹಂತ 5: ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, KMDC ಕರ್ನಾಟಕ ಲೋನ್ ಲಾಗಿನ್ ಪುಟವು ಕಾಣಿಸಿಕೊಳ್ಳುತ್ತದೆ
– ಹಂತ 6: ಈ ಪುಟದಲ್ಲಿ, ಕರ್ನಾಟಕ ಗಂಗಾ ಕಲ್ಯಾಣ ಯೋಜನೆ ಆನ್ಲೈನ್ ಅರ್ಜಿ ನಮೂನೆಯನ್ನು ತೆರೆಯಲು “ಗಂಗಾ ಕಲ್ಯಾಣ ಯೋಜನೆ” ಲಿಂಕ್ ಅನ್ನು ಕ್ಲಿಕ್ ಮಾಡಿ.
ಆನ್ಲೈನ್ ಅರ್ಜಿ ಸಲ್ಲಿಸಲು ಗೊತ್ತಿಲ್ಲವೇ ಹೀಗೆ ಮಾಡಿ
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ತೆರೆದ ಬಾವಿಗಳು, ಬೋರ್ವೆಲ್ಗಳು ಅಥವಾ ಇತರ ನೀರಾವರಿ ಯೋಜನೆಗಳ ಮೂಲಕ ಒಣ ಭೂಮಿಗೆ ಸರಿಯಾದ ನೀರಾವರಿ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಎಲ್ಲಾ ಫಲಾನುಭವಿಗಳು ಬೋರ್ವೆಲ್ಗಾಗಿ ಸಾಲ ಪಡೆಯಲು ಗಂಗಾ ಕಲ್ಯಾಣ ಯೋಜನೆಯ ಅರ್ಜಿ ನಮೂನೆಯನ್ನು ಕನ್ನಡ ಭಾಷೆಯಲ್ಲಿ PDF ರೂಪದಲ್ಲೂ ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ಗಂಗಾ ಕಲ್ಯಾಣ ಯೋಜನೆಯ ಅರ್ಜಿ ನಮೂನೆಯನ್ನು PDF ರೂಪದಲ್ಲಿ ಡೌನ್ಲೋಡ್ ಮಾಡಿ, ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಂತಿಮವಾಗಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವುದಕ್ಕೂ ಅವಕಾಶವಿದೆ.
ಯಾರು ಗಂಗಾ ಕಲ್ಯಾಣ ಯೋಜನೆ ಪಡೆದುಕೊಳ್ಳಬಹುದು?
ದೀರ್ಘಕಾಲಿಕ ನೀರಿನ ಮೂಲಗಳಾದ ನದಿಗಳಿಂದ ನೀರಾವರಿಗಾಗಿ ಸಾಕಷ್ಟು ನೀರು ಸರಬರಾಜು ಮಾಡಲು, ಪೈಪ್ ಲೈನ್ ಮೂಲಕ ನೀರು ಎತ್ತಿದರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿದಂತೆ ಆಗುತ್ತದೆ. ಗಂಗಾ ಕಲ್ಯಾಣ ಯೋಜನೆ 2022 ಅಡಿಯಲ್ಲಿ ಈ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
– ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಫಲಾನುಭವಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು.
– ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
– ಅಭ್ಯರ್ಥಿಗಳು ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.
– ರೈತ ಕುಟುಂಬದ ವಾರ್ಷಿಕ ಆದಾಯವು 22,000ಕ್ಕಿಂತ ಹೆಚ್ಚು ಇರಬಾರದು
ವೈಯಕ್ತಿಕ ಬೋರ್ವೆಲ್ಗಾಗಿ ಗಂಗಾ ಕಲ್ಯಾಣ ಯೋಜನೆ
– ಭೂಮಿಗೆ ನೀರುಣಿಸಲು ದೀರ್ಘಕಾಲಿಕ ನೀರಿನ ಮೂಲಗಳು ಲಭ್ಯವಿಲ್ಲದಿದ್ದಲ್ಲಿ, ಕೆಡಿಎಂಸಿ ವೈಯಕ್ತಿಕ ಬೋರ್ವೆಲ್ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತದೆ.
– ತಜ್ಞ ಭೂವಿಜ್ಞಾನಿಗಳು ಬೋರ್ವೆಲ್ ನಿರ್ಮಾಣಕ್ಕೆ ಸೂಕ್ತವಾದ ನೆಲದೊಳಗಿನ ನೀರಿನ ಬಿಂದುಗಳನ್ನು ಗುರುತಿಸುತ್ತಾರೆ.
– ಕೆಡಿಎಂಸಿ ನಂತರ 5 ವರ್ಷಗಳ ಕಾಲ ಈ ಬೋರ್ವೆಲ್ಗಳನ್ನು ನಿರ್ವಹಿಸುತ್ತದೆ, ನಂತರ ಅವುಗಳನ್ನು ಫಲಾನುಭವಿಗಳಿಗೆ ವರ್ಗಾಯಿಸುತ್ತದೆ.
– 2 ರಿಂದ 5 ಎಕರೆ ಜಮೀನು ಹೊಂದಿರುವ ರೈತರಿಗೆ, ಕೆಡಿಎಂಸಿ ಒಂದೇ ಬೋರ್ವೆಲ್ / ತೆರೆದ ಬಾವಿಯನ್ನು ಕೊರೆದು ಪಂಪ್ ಸೆಟ್ಗಳನ್ನು ಪೂರೈಸುತ್ತದೆ.
– ಈ ಯೋಜನೆಯಡಿ ಪ್ರತಿ ಫಲಾನುಭವಿಗೆ 1,50,000 ರೂಪಾಯಿ ವೆಚ್ಚವಾಗುತ್ತದೆ, ಇದರಲ್ಲಿ ಪಂಪ್ ಮತ್ತು ಸಾಮಗ್ರಿಗಳ ವೆಚ್ಚವೂ ಸೇರಿರುತ್ತದೆ. ಅರ್ಹತಾ ಮಾನದಂಡವು ಈ ಮೊದಲು ಮೇಲೆ ತಿಳಿಸಿದಂತೆಯೇ ಇರುತ್ತದೆ.
ಗಂಗಾ ಕಲ್ಯಾಣ ಬೋರ್ವೆಲ್ ಆಯ್ಕೆ ಪಟ್ಟಿ ಮತ್ತು ಕಾರ್ಯವಿಧಾನ ಹೇಗೆ?
ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ದಿನಪತ್ರಿಕೆಗಳ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಆಹ್ವಾನ ನೀಡಲಾಗುತ್ತದೆ. ನಂತರ ಜಿಲ್ಲಾ ವ್ಯವಸ್ಥಾಪಕರು ಸ್ವೀಕರಿಸಿದ ಅರ್ಜಿದಾರರ ಮರುಪರೀಕ್ಷೆಗೆ ಪಟ್ಟಿಯನ್ನು ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ರವಾನಿಸಲಾಗುತ್ತದೆ. ತದನಂತರದಲ್ಲಿ ಸಮಿತಿಯು ಪ್ರಸ್ತಾವನೆಯನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ