ತುಮಕೂರು:
2020ರಲ್ಲಿ ಇಡೀ ಜಗತ್ತನ್ನು ಆಕ್ರಮಿಸಿಕೊಂಡ ಕೊರೊನಾ ವೈರಸ್ ಸಾಂಕ್ರಾಮಿಕ ವಿಪತ್ತಿನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಆರ್ಥಿಕ ಹೊಡೆತದಿಂದ ಜನಜೀವನ ತತ್ತರಿಸಿ ಹೋಗಿದೆ. ಇಂತಹ ಹಲವು ಆತಂಕ ಮತ್ತು ತಳಮಳದ ನಡುವೆ ನಾವಿಂದು 73ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ.
ರೈತರು, ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಕೈಗಾರಿಕೆಗಳು, ಖಾಸಗಿ ವರ್ತಕರಾದಿಯಾಗಿ ಸಮಾಜದ ಬಹುಪಾಲು ಜನ ಕೊರೊನಾ ಸಂದರ್ಭದಲ್ಲಿನ ಈ ವಿಷಮ ಪರಿಸ್ಥಿತಿಯಲ್ಲಿ ಹೈರಾಣಾಗಿ ಹೋಗಿದ್ದಾರೆ. ಕೈಗಾರಿಕೆಗಳ ಪರಿಸ್ಥಿತಿಯಂತೂ ಹದಗೆಟ್ಟು ಹೋಗಿದೆ. ಹಲವು ಕೈಗಾರಿಕೆಗಳು ಬೀಗ ಜಡಿದುಕೊಂಡಿವೆ.
ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಉದ್ಯೋಗ ಕಳೆದುಕೊಂಡವರೇ ಹೆಚ್ಚು. ನಿರುದ್ಯೋಗ ಸಮಸ್ಯೆ ಮತ್ತಷ್ಟು ಭೀಕರವಾಗುತ್ತಿದೆ. ಕೈಗೆ ದುಡಿಮೆ ಇಲ್ಲದ ಯುವ ಸಮೂಹ ಅನ್ಯ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ.
ದೇಶದಲ್ಲಿಂದು ನವ ವಸಾಹತುಶಾಹಿ ಜನ್ಮತಾಳಿರುವಂತೆ ಗೋಚರಿಸುತ್ತಿದೆ.
ಸಾಮಾನ್ಯ ಜನ ನಲುಗಿ ಹೋಗುತ್ತಿರುವಾಗ ಕೆಲವೆ ದೊಡ್ಡ ಉದ್ದಿಮೆದಾರರು ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳುತ್ತಿದ್ದಾರೆ. ಅವರ ನಾಗಾಲೋಟಕ್ಕೆ ಸರ್ಕಾರಗಳು ರತ್ನಗಂಬಳಿ ಹಾಸಿ ಪ್ರೋತ್ಸಾಹ ನೀಡುತ್ತಿವೆ. ಇಂತಹ ಕೆಲವೇ ಮಂದಿಗೆ ನೀಡುವ ಪ್ರೋತ್ಸಾಹವನ್ನು ಇತರೆ ಕ್ಷೇತ್ರಗಳಿಗೂ ನೀಡಿದ್ದರೆ ಬದಲಾವಣೆಯ ಪರ್ವ ಕಾಣಬಹುದಿತ್ತು. ಆದರೆ ಹಾಗಾಗಲಿಲ್ಲ. ಇಡೀ ಆರ್ಥಿಕ ವ್ಯವಸ್ಥೆ ಮಂಕು ಕವಿದಿದೆ. ಕೆಲವೆ ಮಂದಿಯ ಕೈಲಿ ಹಣಕಾಸಿನ ಹಿಡಿತವಿದ್ದು, ಖಾಸಗೀಕರಣದತ್ತ ಸರ್ಕಾರದ ಸೇವಾ ವಲಯ ಮುಖ ಮಾಡಿದೆ.
ಇಂದು ಸೇವೆ ಎಂಬುದು ಕ್ಲೀಷೆಯ ಪದವಾಗಿಬಿಟ್ಟಿದೆ. ಆ ಕ್ಷೇತ್ರ ಸೇವೆಗೆ ಬದಲಾಗಿ ವ್ಯಾಪಾರಿಕರಣವಾಗಿ ಪರಿವರ್ತಿತವಾಗಿದೆ. ನೋಟು ಅಮಾನ್ಯೀಕರಣ, ಜಿ.ಎಸ್.ಟಿ. ಮೊದಲಾದ ಹೊಸ ಹೊಸ ನಿಯಮಗಳು ಜಾರಿಗೆ ಬಂದಂತೆಲ್ಲ ದಾನ-ಧರ್ಮದ ಹಾದಿಯಲ್ಲಿದ್ದವರು ಸಂಪೂರ್ಣ ಬದಲಾಗಿಬಿಟ್ಟಿದ್ದಾರೆ.
ಸೇವಾ ಕ್ಷೇತ್ರಕ್ಕೆ ಒಂದಷ್ಟು ಪಾಲು ಮೀಸಲಿಡುತ್ತಿದ್ದವರಿಗೆ ತನ್ನ ರಕ್ಷಣೆಯಾದರೆ ಸಾಕೆಂಬ ಮನಸ್ಥಿತಿಗೆ ಬಂದುಬಿಟ್ಟಿದ್ದಾರೆ. ಜಿ.ಎಸ್.ಟಿ. ನಿಯಮಗಳಂತೂ ವ್ಯಾಪಾರಿಗಳನ್ನು, ತೆರಿಗೆದಾರರನ್ನು ಹೈರಾಣಾಗಿಸಿವೆ. ದಿನಕ್ಕೊಂದು ಸುತ್ತೋಲೆ, ಬದಲಾವಣೆಗಳು ಜಿ.ಎಸ್.ಟಿ. ವ್ಯಾಪ್ತಿಯೊಳಗೆ ಬರುತ್ತಿದ್ದು, ಆ ಕ್ಷೇತ್ರದ ತೆರಿಗೆ ಸಮಾಲೋಚಕರಿಗೆ ಅರ್ಥವಾಗುತ್ತಿಲ್ಲ. ಇನ್ನು ವರ್ತಕರು, ವ್ಯಾಪಾರಸ್ಥರು ಹೇಗೆ ಅರ್ಥ ಮಾಡಿಕೊಳ್ಳಬೇಕು.
ಇದನ್ನು ಪರಿಚಯಿಸಿ ಅರ್ಥ ಮಾಡಿಸಬೇಕಿರುವ ತೆರಿಗೆ ಇಲಾಖೆಯಲ್ಲಿರುವ ಅಧಿಕಾರಿಗಳು ಗಾಜಿನ ಮನೆಯಲ್ಲಿ ಕುಳಿತು ಅಟ್ಟಹಾಸ ಮೆರೆಯುತ್ತಿದ್ದಾರೆ. ಅವರನ್ನು ಪ್ರಶ್ನಿಸುವವರೆ ಇಲ್ಲ ಎಂಬಂತೆ ಸರ್ವಾಧಿಕಾರಿಗಳಾಗಿದ್ದಾರೆ. ಯಾವುವುದು ಮುಖತಃ ನೇರ ನಡೆಯುತ್ತಿಲ್ಲ ಮತ್ತು ಜಾಲತಾಣಗಳಲ್ಲೇ ವ್ಯವಹರಿಸಬೇಕಾಗಿದೆ. ಅಹವಾಲುಗಳನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲ
ಕೊರೊನಾದೊಂದಿಗೆ ಬದುಕು ಅನಿವಾರ್ಯ ಎಂದು ಸರ್ಕಾರಗಳೇನೋ ಹೇಳಿಬಿಟ್ಟವು.
ಆದರೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರದ ಕ್ರಮಗಳು ಪರಿಣಾಮಕಾರಿಯಾಗಿರಲಿಲ್ಲ ಎಂಬುದನ್ನು ಸಾಮಾನ್ಯ ಜನ ಮಾತ್ರವಲ್ಲ, ರಾಷ್ಟ್ರದ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯೇ ಹೇಳಿದ್ದುಂಟು. ಕೋವಿಡ್ ನಿರ್ಮೂಲನಾ ಕ್ರಮಗಳ ಭಾಗವಾಗಿ ಖರೀದಿಸಲಾದ ಸಾವಿರಾರು ಕೋಟಿ ರೂ. ಮೌಲ್ಯದ ಉಪಕರಣಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿವೆ.
ಅವುಗಳನ್ನು ಬಳಕೆ ಮಾಡುವ ಸಿಬ್ಬಂದಿ, ತಜ್ಞರು ಇನ್ನೂ ಹುಟ್ಟಿಕೊಂಡಿಲ್ಲವೆಂದರೆ ದೂರದೃಷ್ಟಿಯ ಅಗತ್ಯವೂ ಇರಲಿಲ್ಲ ನಮ್ಮ ವ್ಯವಸ್ಥೆ ಹೇಗಿದೆ ಎಂಬುದನ್ನು ಊಹಿಸಿಕೊಳ್ಳಬಹುದು. ಉಪಕರಣಗಳ ಖರೀದಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕರ್ನಾಟಕ ಮಾತ್ರವಲ್ಲ, ರಾಷ್ಟ್ರದ ಉದ್ದಗಲಕ್ಕೂ ಕೇಳಿಬಂದವು. ಒಂದಷ್ಟು ದಿನಗಳ ಕಾಲ ಈ ವಿಷಯ ಭಾರೀ ಸದ್ದು ಮಾಡಿತು. ಇದಾವುದೂ ತಾರ್ಕಿಕ ಅಂತ್ಯ ಕಾಣಲೇ ಇಲ್ಲ. ನಮ್ಮ ವ್ಯವಸ್ಥೆಯೇ ಹಾಗಲ್ಲವೆ..?
ಸರ್ಕಾರದ ಯೋಜನೆಗಳು, ಪರಿಹಾರಾತ್ಮಕ ಕ್ರಮಗಳು ಫಲಾನುಭವಿಗಳಿಗೆ-ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ತಲುಪುತ್ತಿವೆ ಎಂಬುದನ್ನು ನೋಡುತ್ತಿದ್ದೇವೆ. ಆದರೆ ಈ ಪರಿಹಾರಾತ್ಮಕ ಯೋಜನೆಗಳಿಂದ ಲಾಭ ಮಾಡಿಕೊಳ್ಳುವವರು ಮಾತ್ರ ಸುಶಿಕ್ಷಿತ ವಲಯದಲ್ಲಿದ್ದಾರೆ.
ಒಂದು ಕಡೆ ಪರಿಹಾರಗಳ ಹೆಸರಿನಲ್ಲಿ ಅಧಿಕಾರಿಗಳು ಜನರನ್ನು ಪ್ರತಿನಿಧಿಸುವವರು ಜೇಬು ದುಂಡಗೆ ಮಾಡಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಇದೇ ಪರಿಹಾರಕ್ಕೆ ಅರ್ಜಿ ಹಾಕಿದವರು ಚಾತಕಪಕ್ಷಿಗಳಂತೆ ಕಾಯುತ್ತಲೇ ಇದ್ದಾರೆ. ಈ ಎಲ್ಲ ಯೋಜನೆಗಳು ಸಿಕ್ಕಿದವರಿಗೆ ಸೀರುಂಡೆ ಎನ್ನುವಂತಾಗಿರುವುದು ವಿಚಿತ್ರವಾದರೂ ಸತ್ಯ.
ಆಡಳಿತದ ಕ್ರಮಗಳು ಜನಸಾಮಾನ್ಯರನ್ನು ಮೇಲೆತ್ತುವ ಬದಲು ಅಡಕತ್ತರಿಯಲ್ಲಿ ಸಿಲುಕಿಸುತ್ತಿವೆ. ಅಂತಿಮವಾಗಿ ಆತನೇ ಬಲಿಪಶು. ಆಡಳಿತದ ಸುಧಾರಣಾ ಕ್ರಮಗಳು ಎಲ್ಲಿ ಎಡವುತ್ತಿವೆ ಎಂಬುದನ್ನು ಪರಿಶೀಲಿಸುವ, ಅವಲೋಕಿಸುವ ಅಧಿಕಾರಸ್ಥರು ಇಲ್ಲವಾಗುತ್ತಿರುವುದು ಅತ್ಯಂತ ಶೋಚನೀಯ. ಕೋವಿಡ್ ಅಂಕಿ ಅಂಶಗಳನ್ನೇ ಗಮನಿಸಿದರೆ ಯಾವುವೂ ವಾಸ್ತವದಿಂದ ಕೂಡಿಯೇ ಇಲ್ಲ. ಎಲ್ಲವೂ ಊಹೆಯ ಮೇಲೆ ನಿಂತಿರುವಂತಿದೆ. ಪೊಳ್ಳು ಮತ್ತು ಸುಳ್ಳಿನ ಕಂತೆಗಳನ್ನೇ ಜನರ ಮುಂದಿಡಲಾಗುತ್ತಿದೆ.
ಮೂರನೇ ಅಲೆ ಎದುರಾಗುವ ಸಂದರ್ಭದಲ್ಲಿಯೂ ಹಲವು ಆತಂಕಗಳನ್ನು ಸೃಷ್ಟಿಸಲಾಯಿತು. ಕಳೆದ ಎರಡು ವರ್ಷಗಳಿಂದಲೂ ಕೋವಿಡ್ ವೈರಾಣುವನ್ನು ಅತಿ ಭಯಂಕರವಾಗಿ ಬಿಂಬಿಸಿಕೊಂಡು ಬಂದ ದೃಶ್ಯ ಮಾಧ್ಯಮಗಳು ಮೂರನೇ ಅಲೆಯ ಆರಂಭದಲ್ಲಿ ಮತ್ತದೆ ವರದಿಗೆ ಮುಂದಾದವು. ಆದರೆ ಎರಡನೇ ಅಲೆಯಂತೆ ಮೂರನೇ ಅಲೆ ವಿಷಮಸ್ಥಿತಿಗೆ ತಲುಪಲಿಲ್ಲ. ವಾಸ್ತವಿಕತೆ ಏನೆಂಬುದು ಈಗ ಅರ್ಥವಾಗುತ್ತಿದೆ.
ಕರ್ನಾಟಕದಲ್ಲಿ ಕಳೆದ ಒಂದೆರಡು ತಿಂಗಳಿನಲ್ಲಿ ಭ್ರಷ್ಟಾಚಾರದ ವಿಷಯ ಹೆಚ್ಚು ಪ್ರಚಲಿತ ಪಡೆದುಕೊಂಡಿತು. ವಿವಿಧ ಇಲಾಖೆಗಳಲ್ಲಿ ನಡೆಯುವ ಕಾಮಗಾರಿಗಳಿಗೆ ಶೇ.40 ರಷ್ಟು ಲಂಚ ನೀಡಬೇಕೆಂಬ ವಿಷಯ ಗುತ್ತಿಗೆದಾರರಿಂದ ಪ್ರಸ್ತಾಪವಾಯಿತು. ಪ್ರಧಾನಿಯವರೆಗೂ ಕೋರಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ನೇರ ಮತ್ತು ಗಂಭೀರ ಆರೋಪ ಮಾಡುವ ಮೂಲಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಹಗರಣಗಳನ್ನು ಬಟಾಬಯಲು ಮಾಡಿದರು. ವಿರೋಧ ಪಕ್ಷಗಳು ಇದರ ತನಿಖೆಗೆ ಒತ್ತಾಯಿಸಿದವು.
ಆದರೆ ಇದೂ ಸಹ ಒಂದೆರಡು ದಿನ ಸುದ್ದಿಯಾಗಿ ಜನಮಾನಸದಿಂದ ಮರೆಯಾಗಿ ಹೋಯಿತು.
ಈ ಬಾರಿ ಕರ್ನಾಟಕದಲ್ಲಿ ಉತ್ತಮ ಮಳೆಯಾದದ್ದು ಸಂತಸದ ವಿಷಯ. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ರೈತಾಪಿ ವರ್ಗ ಒಂದಷ್ಟು ಬೆಳೆ ತೆಗೆಯಲು, ಜೀವನ ನಿರ್ವಹಣೆಗೆ ಸಹಕಾರಿಯಾಯಿತು. ಆದರೆ ಅತಿವೃಷ್ಠಿಯಿಂದಾಗಿ ಬೆಳೆ ಹಾನಿಗೊಳಗಾದ ರೈತ ಮಮ್ಮಲ ಮರುಗಿದ. ಸರ್ಕಾರದ ಬೆಳೆಹಾನಿ ಪರಿಹಾರಾತ್ಮಕ ಕ್ರಮಗಳು ಬರೀ ಭರವಸೆಯಾಗಿಯೇ ಉಳಿದವು.
ಹಲವು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ರೈತರೆಲ್ಲರಿಗೆ ಬೆಳೆಹಾನಿ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೈತೊಳೆದುಕೊಂಡರೆ ಅರ್ಹ ಫಲಾನುಭವಿಗಳಿಗೂ ಈವರೆಗೆ ಪರಿಹಾರ ಸಿಗದಿರುವುದು ಈ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ.
ಪತ್ರಿಕೆಗೆ 35ರ ಸಂಭ್ರಮ
`ಪ್ರಜಾಪ್ರಗತಿ’ ದಿನಪತ್ರಿಕೆಯು 34 ವರ್ಷಗಳನ್ನು ಪೂರೈಸಿ ಇಂದಿಗೆ 35ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. 2021ರ ಡಿಸೆಂಬರ್ ತಿಂಗಳಿನಿಂದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೂ ಪ್ರಸಾರ ವಿಸ್ತರಿಸಿದೆ. ಚಿತ್ರದುರ್ಗ ಆವೃತ್ತಿ 22 ವರ್ಷ ಪೂರೈಸಿ 23ನೇ ವರ್ಷಕ್ಕೆ, ದಾವಣಗೆರೆ ಆವೃತ್ತಿ 19ನೇ ವರ್ಷಕ್ಕೆ ಅಡಿಯಿಟ್ಟಿದೆ.
ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ 9ನೇ ವರ್ಷದಲ್ಲಿ ಪತ್ರಿಕೆ ಮುನ್ನಡೆದಿದೆ. ಒಟ್ಟು 8 ಜಿಲ್ಲೆಗಳಲ್ಲಿ ಪತ್ರಿಕೆಯ ಪ್ರಸಾರ ವ್ಯಾಪ್ತಿ ವಿಸ್ತರಣೆಗೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ. `ಪ್ರಗತಿ ಟಿವಿ’ ದೃಶ್ಯ ಮಾಧ್ಯಮ ಹಾಗೂ ಪತ್ರಿಕೆಯನ್ನು ಬೆಳೆಸಿ ಪ್ರೋತ್ಸಾಹಿಸುತ್ತಿರುವ ಚಂದಾದಾರರು, ಜಾಹಿರಾತುದಾರರು, ಪತ್ರಿಕಾ ವಿತರಕರು ಹಾಗೂ ಸಮಸ್ತ ಓದುಗ ಸಮೂಹಕ್ಕೆ ಗಣರಾಜ್ಯೋತ್ಸವ ಹಾಗೂ ಪತ್ರಿಕೆಯ 35ನೇ ವರ್ಷದ ಸಂಭ್ರಮದ ಶುಭಾಶಯಗಳು.
– ಸಂಪಾದಕರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ