ಬೆಂಗಳೂರು:
ಕಾಂಗ್ರೆಸ್ಗೆ ಬರಲು ಇಚ್ಛಿಸಿರುವ ಶಾಸಕರು -ಸಚಿವರ ಬಳಿ ನಾನು ನಾನಾಗಿಯೇ ಮಾತನಾಡುವುದಿಲ್ಲ. ಅವರಾಗಿ ಬಂದರೆ ಮಾತನಾಡುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿ, ಹೌದು ಹೇಳಿದ್ದೆ.ಆ ಮಾತಿಗೆ ಈಗಲೂ ಬದ್ಧ.
ಅವರನ್ನು ಸೇರಿಸಿಕೊಳ್ಳುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಯಾವುದೇ ಷರತ್ತು ಇಲ್ಲದೆ ಬಂದರೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಹತ್ತು ಕಡೆ ಆಹ್ವಾನ ಇದೆ
ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದುಕೊಂಡಿದ್ದೇನೆ. ಬಾದಾಮಿ, ವರುಣಾ ಸೇರಿ ಹತ್ತು ಕ್ಷೇತ್ರಗಳಿಂದ ಸ್ಪರ್ಧೆಗೆ ಆಹ್ವಾನ ಇದೆ. ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನಿಸಿಲ್ಲ. ಹೈಕಮಾಂಡ್ ಹೇಳಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.
ಕೊಪ್ಪಳ, ಕೋಲಾರ, ಹೆಬ್ಟಾಳ, ವರುಣ, ಚಾಮರಾಜಪೇಟೆ, ಬಾದಾಮಿ, ಚಾಮುಂಡೇಶ್ವರಿ ಸೇರಿ ಹತ್ತು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವಂತೆ ಒತ್ತಡ ಬಂದಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ