ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯನವರ ನಡುವಿನ ಆರೋಪ/ಪ್ರತ್ಯಾರೋಪ ತಾರಕಕ್ಕೇರುತ್ತಿದೆ. ಸಿದ್ದರಾಮಯ್ಯನವರ ಸರಕಾರ ನಾಡು ಕಂಡ ಅತಿಭ್ರಷ್ಟ ಸರಕಾರವಾಗಿತ್ತು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಸಿದ್ದರಾಮಯ್ಯ, “ಅವನ ಹೇಳಿಕೆಗೆಲ್ಲಾ ಉತ್ತರ ಕೊಡೋಕೆ ಆಗುತ್ತಾ, ನಮಗೇನಿದ್ದರೂ ಜನರು ನೀಡುವ ತೀರ್ಪೇ ಅಂತಿಮ” ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರ ಮೇಲೆ ಹಣ ಪಡೆದಿದ್ದ ಆರೋಪವನ್ನು ಕುಮಾರಸ್ವಾಮಿ ಹೊರಿಸಿದ್ದಾರೆ.
ಯಡಿಯೂರಪ್ಪ ಅವರಿಂದ ಹಣ ಪಡೆದ ಬಗ್ಗೆ ಜನಕ್ಕೆ ಸತ್ಯ ಹೇಳಿ ಎಂದು ಟಾಂಗ್ ಕೊಟ್ಟಿರುವ ಕುಮಾರಸ್ವಾಮಿ, ಅರ್ಕಾವತಿ ಕರ್ಮಕಾಂಡ ಬಿಜೆಪಿ ಸರಕಾರದ ಕಮೀಷನ್ ವ್ಯವಹಾರಕ್ಕಿಂತ ದೊಡ್ಡ ಹಗರಣ ಎನ್ನುವ ಗುರುತರ ಆರೋಪವನ್ನು ಎಚ್ಡಿಕೆ ಮಾಡಿದ್ದಾರೆ.
ಜೆಡಿಎಸ್ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಸಿದ್ದರಾಮಯ್ಯ ಒಬ್ಬ ಸುಳ್ಳು ರಾಮಯ್ಯ ಎಂದು ನಾನು ಹೇಳಲು ಹಲವಾರು ಕಾರಣಗಳಿವೆ”ಎಂದು ಸಿದ್ದರಾಮಯ್ಯನವರ ವಿರುದ್ದ ಆರೋಪಗಳ ಸುರಿಮಳೆಯನ್ನು ಕುಮಾರಸ್ವಾಮಿ ಮಾಡಿದ್ದಾರೆ.
ದೇವೇಗೌಡರು ಹಾಗೂ ಕಾರ್ಯಕರ್ತರು, ಸಿದ್ದರಾಮಯ್ಯ ಕೊಡುಗೆ ಏನೂ ಇರಲಿಲ್ಲ
ವಿರೋಧ ಲೆಕ್ಕಿಸದೇ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದೆ. ಮಲ್ಲಿಕಾರ್ಜುನ ಖರ್ಗೆ ಅವರಂಥ ನಿಷ್ಠಾವಂತರನ್ನೆಲ್ಲ ಮೂಲೆಗುಂಪು ಮಾಡಿದ್ದು, ನಿಷ್ಠರನ್ನು ಪಕ್ಕಕ್ಕೆ ಸರಿಸಿದ ಕ್ರೆಡಿಟ್ ಸಿದ್ದರಾಮಯ್ಯನವರಿಗೆ ಸಲ್ಲಬೇಕು” ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡರು?
“ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪ್ರಥಮ ಆಪರೇಷನ್ ಕಮಲ ನಡೆದ ಸಂದರ್ಭದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ ತಾವಿದ್ದ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲಿಕ್ಕೆ,
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕೆ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡರು? ಆ ಹಣವನ್ನು ಯಾರಿಂದ ತರಿಸಿಕೊಂಡರು? ಹಣ ತಂದು ಕೊಟ್ಟವರು ಯಾರು? ಎಂದು ಕೇಳಿದ್ದೆ. ಇವತ್ತಿಗೂ ಅವರಿಂದ ಉತ್ತರವಿಲ್ಲ. ಹಾಗಾದರೆ ಸಿದ್ದರಾಮಯ್ಯ ಯಾವ ಪಕ್ಷದ ಬಾಲಂಗೋಚಿ” ಎಂದು ಕುಮಾರಸ್ವಾಮಿ ಗುರುತರ ಆರೋಪವನ್ನು ಮಾಡಿದ್ದಾರೆ.
ಸಿದ್ದರಾಮಯ್ಯ ಜನರ ಮುಂದೆ ಸತ್ಯ ಹರಿಶ್ಚಂದ್ರನ ಪೋಸು ನೀಡುತ್ತಾರೆ
“ಕಾಂಗ್ರೆಸ್ ಪಕ್ಷದ ನಾಯಕರನ್ನು ಮುಗಿಸಲು ಏನೆಲ್ಲಾ ಮಾಡಿದಿರಿ? ಎಷ್ಟೆಲ್ಲ ಹಣ ಬಂತು. ನನ್ನ ಪ್ರಶ್ನೆಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ. ಅದಕ್ಕೆ ನಾನು ಸುಳ್ಳು ರಾಮಯ್ಯ ಅನ್ನೋದು. ಅವರೇನು ಸತ್ಯಹರಿಶ್ಚಂದ್ರರಲ್ಲ, ಅದು ನನಗೆ ಗೊತ್ತಿದೆ. ಹಣ ತಂದ ವ್ಯಕ್ತಿಯೇ ಸ್ವತಃ ನನ್ನ ಬಳಿಯೇ ಯಡಿಯೂರಪ್ಪ ಅವರಿಂದ ಎಷ್ಟು ಹಣ ತೆಗೆದುಕೊಂಡು ಬಂದೆ ಎಂದು ಹೇಳಿದ್ದಾರೆ.
ಅರ್ಕಾವತಿ ದೊಡ್ಡ ಕರ್ಮಕಾಂಡ, ಇನ್ನು ಆ ಸರಕಾರದಲ್ಲಿ ನಡೆದಷ್ಟು ಕಮಿಷನ್ ವ್ಯವಹಾರ ಬೇರೆ ಯಾವ ಸರಕಾರದಲ್ಲೂ ನಡೆದಿಲ್ಲ. ಆದರೆ, ಸಿದ್ದರಾಮಯ್ಯ ಜನರ ಮುಂದೆ ಸತ್ಯ ಹರಿಶ್ಚಂದ್ರನ ಪೋಸು ನೀಡುತ್ತಾರೆ” ಎಂದು ಕುಮಾರಸ್ವಾಮಿ ಟೀಕಿಸಿದರು.
ರಮೇಶ್ ಜಾರಕಿಹೊಳಿಗೆ ಕಾರ್ಯಕರ್ತರ ಪರವಾಗಿ ಧನ್ಯವಾದ
“ರಮೇಶ್ ಜಾರಕಿಹೊಳಿ ಅವರು 16 ಮಂದಿಯನ್ನು ಸಿದ್ಧ ಮಾಡಿದ್ದೇವೆ ಎಂದು ಹೇಳಿದ್ದಾರೆ. ಜೆಡಿಎಸ್ಸಿಗೆ ನಾವು ಕೈಹಾಕಲ್ಲ ಎಂದಿದ್ದಾರೆ. ನಮ್ಮ ಮೇಲೆ ಅಷ್ಟಾದರೂ ಅವರು ಕನಿಕರ, ಗೌರವ ಇಟ್ಟಿದ್ದಾರೆ.
ಅವರಿಗೆ ವಿಶೇಷವಾಗಿ ನಮ್ಮ ಪಕ್ಷ, ಕಾರ್ಯಕರ್ತರ ಪರವಾಗಿ ಧನ್ಯವಾದ ಹೇಳುತ್ತೇನೆ. ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕದಲ್ಲಿ ಇಲ್ಲ. ನಮ್ಮದು ಸಣ್ಣ ಪಕ್ಷ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಯಾವಾಗ ಯಾರು ಬರುತ್ತಾರೋ ಗೊತ್ತಿಲ್ಲ. ಆ ಸಮಯ ಬಂದಾಗ ಅದರ ಬಗ್ಗೆ ಮಾತನಾಡೋಣ” ಎಂದು ಕುಮಾರಸ್ವಾಮಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ