ಮಗ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಂತೆ, ಈ ಮಹಾತಾಯಿ ಸೊಸೆಯನ್ನೇ ಮಗಳೆಂದು ಭಾವಿಸಿ ನೋಡಿಕೊಂಡಿದ್ದಾರೆ.
ಅಲ್ಲದೇ, ಸೊಸೆಗೆ ಉನ್ನತ ವ್ಯಾಸಂಗ ಕೊಡಿಸಿ, ಶಿಕ್ಷಕಿಯಾಗುವಂತೆ ಮಾಡಿದ್ದಾರೆ. ಕೊನೆಗೆ ತಾವೇ ಮುಂದೆ ನಿಂತು ಮದುವೆ ಕೂಡ ಮಾಡಿದ್ದಾರೆ.
ಅತ್ತೆಯ ಈ ಮಾದರಿ ಕಾರ್ಯ ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿ ಬೆಳಕಿಗೆ ಬಂದಿದ್ದು, ಕಮಲಾ ದೇವಿ ಎಂಬುವವರೇ ಈ ರೀತಿಯ ಮಾದರಿ ಅತ್ತೆ ಎನ್ನಲಾಗಿದೆ. ಇವರ ಕಿರಿಯ ಮಗ ಶುಭಂ ಎಂಬುವವರು 2016ರಲ್ಲಿ ವಿವಾಹವಾಗಿದ್ದರು. ಕಿರ್ಗಿಸ್ತಾನ್ ದಲ್ಲಿ ಎಂಬಿಬಿಎಸ್ ಓದಲು ತೆರಳಿದ್ದಾಗ ಬ್ರೈನ್ ಸ್ಟ್ರೋಕ್ ನಿಂದಾಗಿ ಸಾವನ್ನಪ್ಪಿದ್ದರು. ಅಷ್ಟರಲ್ಲಿ ವಿವಾಹವಾಗಿ ಕೆಲವೇ ತಿಂಗಳು ಕಳೆದಿದ್ದವು.
ಆಗ ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದರೂ ತಾಯಿ ಮಾತ್ರ ಸೊಸೆಯ ಕೈ ಬಿಟ್ಟಿಲ್ಲ. ಮಗಳಂತೆ ನೋಡಿಕೊಂಡು ಸೊಸೆ ಸುನೀತಾರಿಗೆ ಉನ್ನತ ವ್ಯಾಸಂಗ ಕೊಡಿಸಿದ್ದಾರೆ.
ಅತ್ತೆಯ ಮಾರ್ಗದರ್ಶನದಲ್ಲಿಯೇ ಮುಂದುವರೆದ ಸೊಸೆ ಕೂಡ ಉತ್ತಮವಾಗಿ ವ್ಯಾಸಂಗ ಮಾಡಿದ್ದಾರೆ. ಸುನೀತಾ ಅವರು ಬಡತನದ ಮನೆಯಲ್ಲಿ ಬೆಳೆದಿದ್ದವರು. ಮಗನಿಗೆ ಮದುವೆ ಮಾಡಿದರೆ, ಈ ಯುವತಿಗೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿಯೇ ತಾಯಿ ಕಮಲಾದೇವಿ ಅವರು, ಬಡ ಮನೆತನದ ಸುನೀತಾರೊಂದಿಗೆ ಮಗನ ವಿವಾಹ ನೆರವೇರಿಸಿದ್ದರು.
ಈಗ ಸುನೀತ್ ಚುರು ಜಿಲ್ಲೆಯ ಸರ್ದಾರ್ ನಗರದ ನೈನಾಸರ್ ಸುಮೇರಿಯಾದಲ್ಲಿ ಶಿಕ್ಷಕಿಯಾಗಿದ್ದಾರೆ. ಕಮಲಾದೇವಿ ಅವರು ಕೂಡ ಅನಕ್ಷರಸ್ಥರಲ್ಲ, ಅವರು ಕೂಡ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಸೊಸೆಗೆ ಕೆಲಸ ಸಿಗುತ್ತಿದ್ದಂತೆ ಈಗ ತಾವೇ ಮುಂದೆ ನಿಂತು ಮುಖೇಶ್ ಎಂಬ ವ್ಯಕ್ತಿಯೊಂದಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅತ್ತೆಯ ಈ ಕಾರ್ಯಕ್ಕೆ ಸದ್ಯ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.