ತುಮಕೂರು:
ಮೂಲಸೌಕರ್ಯ ಹೆಚ್ಚಳ, ಬೀದಿನಾಯಿ, ಹಂದಿ ಹಾವಳಿ ತಡೆಗೆ ನಾಗರಿಕರ ಸಲಹೆ
ಮಹಾನಗರಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ 2022-23ನೇ ಸಾಲಿನ ಬಜೆಟ್ ಪೂರ್ವಭಾವಿ ಸಾರ್ವಜನಿಕ ಸಲಹಾ ಸಭೆ ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆನಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ನಾಗರಿಕ ಸಂಘಟನೆಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ನಗರದ ಹೊರವರ್ತುಲ ವ್ಯಾಪ್ತಿಗೆ ಬರುವ ವಾರ್ಡ್‍ಗಳು ಸೇರಿದಂತೆ ವಿವಿಧ ವಾರ್ಡ್‍ಗಳಲ್ಲಿ ಕೊರತೆಯಿರುವ ಮೂಲಸೌಲಭ್ಯವನ್ನು ಹೆಚ್ಚಿಸಬೇಕು. ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಡಬೇಕು, ಬೀದಿನಾಯಿ, ಹಂದಿ ಹಾವಳಿ ತಡೆಗೆ ತ್ವರಿತ ಕ್ರಮವಾಗಬೇಕು.
ಟ್ರೇಡಿಂಗ್ ಲೈಸೆನ್ಸ್ ನವೀಕರಣದ ಸರಳ ಪ್ರಕ್ರಿಯೆ ಜಾರಿ, ತುಮಕೂರು ನಗರ ಪ್ರವೇಶಿಸುವೆಡೆ ಸೂಕ್ತ ಸ್ವಾಗತಫಲಕ, ನಗರದ ಸಂಕೇತವಾದ ಐಕಾನ್ ಅನಾವರಣಗೊಳಿಸುವುದು, ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸರಕಾರದ ಆದೇಶದ ಅನುಸಾರ ವಾಪಾರಿ ತೆರಿಗೆ ಮುಕ್ತಗೊಳಿಸುವುದು, ಸ್ಮಶಾನ, ಸಾರ್ವಜನಿಕ ಶೌಚಾಲಯ, ಸಮರ್ಪಕವಾಗಿ ಗುಂಡಿಮುಚ್ಚುವುದು, ಅಂಡರ್‍ಪಾಸ್ ತ್ವರಿತ ಕಾಮಗಾರಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸಲಹೆಗಳನ್ನು ನೀಡಿದರು.
ಸಭೆ ಆರಂಭದಲ್ಲಿ ಮಾತನಾಡಿದ ಮೇಯರ್ ಬಿ.ಜಿ.ಕೃಷ್ಣಪ್ಪ ಈಗಾಗಲೇ ಬಟವಾಡಿ ರಸ್ತೆ, ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ ಅಗಲೀಕರಣ ಮಾಡಿದ್ದು, ನಗರದ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಜೊತೆಗೆ ನಗರದ ಎಲ್ಲಾ ವಾರ್ಡ್‍ಗಳಲ್ಲೂ ರಸ್ತೆಗಳಿಗೆ ಹೊಸ ನಾಮಫಲಕ ಅಳವಡಿಸಲಾಗುವುದು.
ಈ ಸಂಬಂಧ 5 ಕೋಟಿ ವೆಚ್ಚದ ಟೆಂಡರ್ ಮುಗಿದು ಕಾರ್ಯಾದೇಶ ಪ್ರಕ್ರಿಯೆಯಲ್ಲಿದೆ. ಸ್ವಚ್ಛ ಸರ್ವೇಕ್ಷಣಾ ವಿಭಾಗದಲ್ಲಿ ರಾಷ್ಟ್ರಮಟ್ಟದ ಪುರಸ್ಕಾರ ದೊರೆತಿದ್ದು, ತೆರಿಗೆ ವಿಧಾನದಲ್ಲೂ ರಾಜ್ಯಸರಕಾರದ ಪ್ರಶಂಸೆಗೆ ಪಾಲಿಕೆ ಭಾಜನವಾಗಿದೆ. ಆಡಳಿತ ಸರಳೀಕರಣ ಮಾಡಲಾಗಿದೆ. ನೀವು ವ್ಯಕ್ತಪಡಿಸುವ ಸಲಹೆಗಳನ್ನೂ ಆದ್ಯತೆ ಮೇರೆಗೆ ಬಜೆಟ್‍ನಲ್ಲಿ ಅಳವಡಿಸಲಾಗುವುದು ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಉದ್ಯಾನವನಗಳ ಒತ್ತುವರಿ ತಡೆಗೆ ಡಿಜಿಟಲ್ ಲೇಯರ್ ವ್ಯವಸ್ಥೆ ಜಾರಿಗೆ ತಂದಿದ್ದು, ಸ್ಮಾರ್ಟ್‍ಸಿಟಿ ಯೋಜನೆಯಡಿ ಎಲ್‍ಇಡಿ ದೀಪಗಳ ಬಳಕೆಯಿಂದ ಪಾಲಿಕೆಗೆ 4 ಕೋಟಿ 65 ಲಕ್ಷ ಉಳಿತಾಯವಾಗಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮ ವಹಿಸಿದ್ದು, ತ್ಯಾಜ್ಯ ಸಂಗ್ರಹಣೆಯಲ್ಲಿ ಶೇಖರಣೆಯಾದ 200 ಟನ್ ಪ್ಲಾಸ್ಟಿಕ್ ಅನ್ನು ಸಿಮೆಂಟ್ ಫ್ಯಾಕ್ಟರಿಗೆ ಕಳುಹಿಸಿಕೊಡಲಾಗಿದೆ. ಪಾಲಿಕೆ ಆಡಳಿತ ಜನಪ್ರತಿನಿಧಿಗಳು, ಸಾರ್ವಜನಿಕರ ದೂರು, ಸಲಹೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದರು.
ದಸಂಸ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ವಾರ್ಡ್‍ಗಳಲ್ಲಿ ವಿಶ್ರಾಂತಿ ಕೊಠಡಿಗಳಿಲ್ಲ. ಜಾತಿವಾರು ಸ್ಮಶಾನಗಳು ನಗರದಲ್ಲಿವೆ ಹೊರತಾಗಿ ಸಾರ್ವಜನಿಕ ಸ್ಮಶಾನಗಳ ಸಂಖ್ಯೆಯ ಕಡಿಮೆ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಕೊರತೆ ಇದ್ದು, ಹಿಂದಿನ ಬಜೆಟ್‍ಗಳ ಮುನ್ನ ಸಲಹೆಗಳನ್ನು ನಡೆದರೂ ಕಾರ್ಯಾನುಷ್ಠಾನವಾಗಿಲ್ಲ. ನಗರದ ನಾಲ್ಕು ಕಡೆ ವಿದ್ಯುತ್ ಚಿತಾಗಾರ, ಗ್ರಂಥಾಲಯಗಳನ್ನು ನಿರ್ಮಿಸುವುದು ಸೇರಿದಂತೆ ಬಡವರ ಆರೋಗ್ಯ, ವಿದ್ಯಾಭ್ಯಾಸ ಶುಲ್ಕ ಭರಿಸುವಂತೆ ಸಲಹೆ ನೀಡಿದರು.
ಕೊಳಗೇರಿ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ಕೊಡಲು ಮೊದಲು ಕ್ರಮ ವಹಿಸಬೇಕು. ಕೊಳಗೇರಿಗಳು ಮೂಲಸೌಕರ್ಯ ವಂಚಿತವಾಗಿದ್ದು, ವಿಶೇಷಪ್ಯಾಕೇಜ್ ಘೋಷಿಸಿ ಅಭಿವೃದ್ಧಿ ಪಡಿಸಬೇಕು. ಮನೆ ಅಲಾಟ್ ಮಾಡುವ ಸಂದರ್ಭದಲ್ಲಿ ಕೊಳಗೇರಿನಿವಾಸಿಗಳಿಂದ ಕಟ್ಟಿಸಿಕೊಳ್ಳುತ್ತಿರುವ 65 ಸಾವಿರ ಇಡುಗಂಟನ್ನು ಪಾಲಿಕೆಯೆ ಭರಿಸಿ ಸರಳ ಖಾತೆ ಆಂದೋಲನ ನಡೆಸುವಂತೆ ಸಲಹೆ ನೀಡಿದರು.
ಸಾಮಾಜಿಕ ಕಾರ್ಯಕರ್ತ ರಂಜನ್ ಮಾತನಾಡಿ ಖಾಸಗಿ ಬಸ್‍ಸ್ಟ್ಯಾಂಡ್, ಕೋಡಿ ಬಸವೇಶ್ವರ ವೃತ್ತದ ಮಳಿಗೆಗಳು ಬಹುತೇಕ ಖಾಲಿಯಿದ್ದು, ಪಾಲಿಕೆ ಆದಾಯ ಕಡಿತವಾಗಿದೆ. ಬಾಡಿಗೆ ಕಡಿಮೆ ಮಾಡಿ ವರ್ತಕರು ಬಾಡಿಗೆ ಪಡೆಯುವಂತೆ ಮಾಡಬೇಕು. ಶೇ.24.10ರ ಪ. ಜಾತಿ., ಪ.ಪಂಗಡದ ಹಣ ಶೇ.50ರಷ್ಟು ಖರ್ಚಾಗಿಲ್ಲ. ತುಮಕೂರು ಒನ್ ಸೇವೆಗಳ್ಯಾವುದು ಎಂಬುದು ಫಲಕದ ಮೂಲಕ ಜನರ ಗಮನಕ್ಕೆ ತನ್ನಿ ಎಂದರು. ಆರೋಗ್ಯ ವೆಚ್ಚಕ್ಕೆ ಸಂಬಂಧಿಸಿದ ಅರ್ಜಿಗೆ ಬಿಲ್ ಒದಗಿಸಿದ ತಕ್ಷಣ ಕ್ಲಿಯರ್ ಮಾಡಲಾಗುತ್ತಿದೆ ಎಂದು ಆಯುಕ್ತೆ ರೇಣುಕಾ ಸಮಾಜಾಯಿಷಿ ನೀಡಿದರು.
ಸಾಕು ನಾಯಿಗಳು ರಸ್ತೆ ಬದಿ ಮಲವಿಸರ್ಜನೆ ಮಾಡಿದರೆ ನಾಯಿ ಮಾಲೀಕರಿಗೆ ದಂಡ, ರಸ್ತೆಬದಿ ಸಾಕುನಾಯಿ ತ್ಯಾಜ್ಯ ಹಾಕಲೆಂದು ಡಬ್ಬ ಹಿಡಬೇಕೆಂಬ ಸಲಹೆಯನ್ನು ಡಾ.ಅಜಯ್ ನೀಡಿದರು. ಹೋಟೆಲ್‍ಅಸೋಸಿಯೇಷನ್ ಶ್ರೀನಿಧಿ ರಾಜಣ್ಣ, ರಸ್ತೆ ಗುಂಡಿಗಳನ್ನು ಜಲ್ಲಿಬದಲಾಗಿ ಟಾರ್ ಹಾಕಿ ಮುಚ್ಚುವಂತೆ ಸಲಹೆ ನೀಡಿದರೆ, ಬಸವೇಶ್ವರ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿಯವರು ಕ್ಯಾತ್ಸಂದ್ರ ಅಂಡರ್‍ಪಾಸ್ ದುಃಸ್ಥಿತಿಯ ಬಗ್ಗೆ ಸಭೆಯ ಗಮನ ಸೆಳೆದರು.
ಅಂಡರ್‍ಪಾಸ್ ಜಾಗದ ವಿವಾದ ಕೋರ್ಟ್ ಅಂಗಳದಲ್ಲಿದ್ದು, ಸದ್ಯಕ್ಕೆ ದ್ವಿಚಕ್ರ ವಾಹನ, ಸಣ್ಣ ಕಾರು ಓಡಾಡಲು ವ್ಯವಸ್ಥೆ ಮಾಡುವುದಾಗಿ ಆಯುಕ್ತರು, ಆರೋಗ್ಯಾಧಿಕಾರಿ ತಿಳಿಸಿದರು. ಸಭೆಯಲ್ಲಿ ಸದಸ್ಯ ಮೆಸ್‍ಮಹೇಶ್, ಮುಖ್ಯ ಲೆಕ್ಕಾಧಿಕಾರಿ ಗುರುಬಸಯ್ಯಗೌಡ, ಆಡಳಿತ ಉಪಆಯುಕ್ತ ಗಿರೀಶ್ ಹಾಜರಿದ್ದರು.
ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾದರೆ ಮೇನಕಾಗಾಂಧಿ ಕರೆ ಮಾಡ್ತಾರೆ…!
ಐಎಂಎ ಜಿಲ್ಲಾಧ್ಯಕ್ಷ ಡಾ.ಸಂಜಯ್ ಅವರು ಬೀದಿ ನಾಯಿಗಳ ನಿಯಂತ್ರಣವಾಗುತ್ತಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದಾಗ ಪ್ರತಿಕ್ರಿಯಿಸಿದ ಮೇಯರ್, ಬೀದಿನಾಯಿಗಳ ಉಪಟಳ ಜಾಸ್ತಿಯಾಗಿದ್ದು, ಅವನ್ನು ಕಸವಿಲೇವಾರಿ ಘಟಕದ ಬಳಿ 2 ಎಕರೆ ಜಾಗದಲ್ಲಿ ಬಿಟ್ಟು, ಸಂತತಿ ನಿಯಂತ್ರಣಕ್ಕೆ ಕಡಿವಾಣಹಾಕಲು ತೀರ್ಮಾನಿಸಲಾಯಿತು.
ಈ ಕ್ರಮಕ್ಕೆ ಮುಂದಾದ ಕೂಡಲೇ ದೆಹಲಿಯಿಂದ ಮೇನಕಾಗಾಂಧಿ ಅವರು ಕರೆ ಮಾಡಿ ಹಾಗೆ ಮಾಡಿದರೆ ನಿಮ್ಮನ್ನು ಜೈಲಿಗೆ ಹಾಕಿಸಬೇಕಾಗುತ್ತದೆ. ಸಿಎಂ ಜೊತೆ ಮಾತನಾಡುವೆ ಎಂದೆಲ್ಲ ಹೇಳುತ್ತಾರೆ. ಪ್ರಾಣಿದಯಾ ಸಂಘದಿಂದ ನೋಟಿಸ್ ಸಹ ನೀಡಲಾಗಿದೆ.
ಅವರದ್ದು ಸೇರಿದಂತೆ ಎಲ್ಲರ ಅಭಿಪ್ರಾಯ ಆಲಿಸಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆಯನ್ನು ಕರಾರುವಕ್ಕಾಗಿ ಮಾಡಲು ಬೇರೆಯವರಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ಹಂದಿಗಳ ನಿಯಂತ್ರಣಕ್ಕೆ ಹೆಬ್ಬಾಳ ಸರ್ವೆ ನಂ.74ರಲ್ಲಿ ಹಂದಿಸಾಕಾಣಿಕೆದಾರರಿಗೆ ಪ್ರತ್ಯೇಕ ಜಾಗ ಮಂಜೂರು ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ.ರವೀಶ್ ತಿಳಿಸಿದರು.
ತುಮಕೂರಿಗೆ ಬ್ರ್ಯಾಂಡ್ ಪರಿಕಲ್ಪನೆ ಕೊಡಿ
ಪರಿಸರವಾದಿ ಟಿ.ವಿ.ಎನ್ ಮೂರ್ತಿ ಮಾತನಾಡಿ ತುಮಕೂರು ನಗರ ಪ್ರವೇಶಕ್ಕೆ ಸ್ವಾಗತ ಕಮಾನು ನಿರ್ಮಾಣವಾಗಬೇಕಿದ್ದು, ತುಮಕೂರು ನಗರವನ್ನು ಸಂಕೇತಿಸುವ ಐಕಾನ್‍ಅನ್ನು ಧರ್ಮಾತೀತವಾಗಿ ಗುರುತಿಸಿ, ತುಮಕೂರು ಬ್ರ್ಯಾಂಡ್ ಪರಿಕಲ್ಪನೆ ಕೊಡಿ.
ಟ್ರೇಡ್ ಲೈಸೆನ್ಸ್ ರಿನೀವಲ್‍ನಲ್ಲಿ ಆನ್‍ಲೈನ್ ಜಾರಿಗೆ ತನ್ನಿ, ಆಲದ ಮರ ಪಾರ್ಕ್ ಕುಡುಕರ ಅಡ್ಡೆಯಾಗುತ್ತಿದ್ದು, ಕಾವಲು ಹಾಕಿ. ಅಮಾನಿಕೆರೆ ಅಂತರಗಂಗೆ ತೆಗೆಸದಿದ್ದರೆ ಅಂತರಗಂಗೆ ಸಂಪೂರ್ಣ ನೀರು ಕುಡಿದು ಬಿಡುತ್ತದೆ ಎಂದರು.
ವೈದ್ಯಕೀಯ ಸೇವೆ ಟ್ರೇಡ್ ಅಲ್ಲ., ಲೈಸೆನ್ಸ್ ಶುಲ್ಕ ಕಟ್ಟಿಸಿಕೊಳ್ಳಬೇಡಿ.!
ಹಾಗಾದರೆ ಖಾಸಗಿ ಆಸ್ಪತ್ರೆಗಳ ಸಾಮಾಜಿಕ ಸೇವೆ ಏನು? ಮೇಯರ್ ಪ್ರಶ್ನೆ
ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಸಂಘಟನೆಯ ಡಾ.ಲಕ್ಷ್ಮೀಕಾಂತ್ ಅವರು ಮಾತನಾಡಿ ಖಾಸಗಿ ವೈದ್ಯಕೀಯ ಆಸ್ಪತ್ರೆ, ಕ್ಲಿನಿಕಲ್ ಪ್ರಾಕ್ಟೀಸ್‍ಅನ್ನು ಆರೋಗ್ಯ ಇಲಾಖೆ ಆಯುಕ್ತರು ಟ್ರೇಡ್ ಅಲ್ಲ ಎಂಬುದಾಗಿ ಸ್ಪಷ್ಟ ಆದೇಶ ನೀಡಿದ್ದಾರೆ. ಕೋರ್ಟ್ ಸಹ ಇದೇರೀತಿ ಹೇಳಿದೆ.
ಹೀಗಿರುವಾಗ ಟ್ರೇಡ್ ಲೈಸೆನ್ಸ್‍ನಿಂದ ಖಾಸಗಿ ಆಸ್ಪತ್ರೆಗಳನ್ನು ಹೊರತುಪಡಿಸಬೇಕು ಎಂದಾಗ ಪ್ರತಿಕ್ರಿಯಸಿದ ಮೇಯರ್ ಅವರು ಖಾಸಗಿ ಆಸ್ಪತ್ರೆಗಳು ಈ ರಿಯಾಯಿತಿ ಕೇಳುವುದರ ಹಿಂದೆ ಅವುಗಳ ಸಾಮಾಜಿಕ ಸೇವೆಯ ಆಧಾರಬೇಕಾಗುತ್ತದೆ ಎಂದರು. ಕೋವಿಡ್ ಸಂದರ್ಭದಲ್ಲಿ ಎಬಿಆರ್‍ಕೆಯಡಿ ಕಡಿಮೆ ಶುಲ್ಕದಲ್ಲಿ ಚಿಕಿತ್ಸೆ ನೀಡಿದ್ದೇವೆಂದರು.
ಸರಕಾರದ ಆದೇಶವಿದ್ದರೆ ತಾವೂ ಕೇಳಲೇಬೇಕಿಲ್ಲ ಅನುಷ್ಟಾನಗೊಳ್ಳಲಿದೆ ಎಂದು ಮೇಯರ್ ಪ್ರತಿಕ್ರಿಯಿಸಿದರು. ಮಧ್ಯ ಪ್ರವೇಶಿಸಿದ ಆಯುಕ್ತರು ಈ ಸಂಬಂಧ ನಗರಾಭಿವೃದ್ಧಿ ನಿರ್ದೇಶನಾಲಯದಿಂದ ಆದೇಶ ಬರುವವರೆಗೆ ಟ್ರೇಡ್‍ಲೈಸನ್ಸ್ ವಿಮುಕ್ತಿಗೊಳಿಸಲು ಬರುವುದಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ