ಬೆಂಗಳೂರು:
ಈಗಾಗಲೇ ಕೊರೋನಾ ಸಂಕಷ್ಟ ( Coronavirus ) ತಂದಿಟ್ಟಂತ ಸಂಕಷ್ಟದಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಳೆದಂತ ಬೆಳೆಗೆ ಸರಿಯಾಗಿ ಬೆಂಬಲ ಬೆಲೆ ಸಿಗದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ಕಂದಾಯ ಇಲಾಖೆಯಿಂದ ( Revenue Department ) ಮೋಜಿಣಿ ವ್ಯವಸ್ಥೆಯಡಿಯಲ್ಲಿ ಹದ್ದುಬಸ್ತು ಅರ್ಜಿಗಳ ಶುಲ್ಕವನ್ನು ಏಕಾಏಕಿ 43 ರಿಂದ 57 ಪಟ್ಟು ಹೆಚ್ಚಳ ಮಾಡಲಾಗಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಹದ್ದುಬಸ್ತು ಸೇವೆಗಳಿಗೆ ವಿಧಿಸುತ್ತಿರುವ ಅರ್ಜಿ ಶುಲ್ಕವನ್ನು ಸುಮಾರು 45 ವರ್ಷಗಳಿಂದ ಪರಿಷ್ಕರಿಸಿರುವುದಿಲ್ಲ. ಅಲ್ಲದೇ ಪ್ರಸ್ತುತ ಮೋಜಿಣಿ ವ್ಯವಸ್ಥೆಯ ನಿರ್ವಹಣಾ ವೆಚ್ಚವೂ ಅಧಿಕವಾಗಿರುವುದರಿಂದ, ಸಾರ್ವಜನಿಕರಿಗೆ ಭೂಮಾಪನ ಇಲಾಖೆಯಿಂದ ( Survey Department ) ಒದಗಿಸಲಾಗುತ್ತಿರುವ ಹದ್ದುಬಸ್ತು ಸೇವೆಗಳಿಗೆ ವಿಧಿಸುತ್ತಿರುವ ಅರ್ಜಿ ಶುಲ್ಕ ( Application Fee ) ಪರಿಷ್ಕರಿಸೋದಕ್ಕೆ ನಿರ್ಣಯಿಸಲಾಗಿದೆ.
ಈ ಹಿನ್ನಲೆಯಲ್ಲಿ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿಧಿಸಲಾಗುತ್ತಿರೋ ಶುಲ್ಕವನ್ನು, ಕರ್ನಾಟಕ ಭೂ ಕಂದಾಯ ಅಧಿನಿಯಮದಂತೆ ಈ ಕೆಳಕಂಡಂತೆ ದರ ಪರಿಷ್ಕರಿಸಿ ಆದೇಶಿಸಿದ್ದಾರೆ.
ಹೀಗಿದೆ ನೂತನ ಹದ್ದು ಬಸ್ತು ಅರ್ಜಿ ಶುಲ್ಕ
- ಗ್ರಾಮೀಣ ಪ್ರದೇಶದಲ್ಲಿ 2 ಎಕರೆವರೆಗೂ ರೂ.1,500 ಶುಲ್ಕವನ್ನು ವಿಧಿಸಲಾಗಿದೆ. 2 ಎಕರೆಗಿಂತ ಹೆಚ್ಚು ವಿಸ್ತೀರ್ಣಕ್ಕೆ ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ರೂ.300ರಿಂದ ಗರಿಷ್ಠ್ಟ ಶುಲ್ಕ ರೂ.3000ಕ್ಕೆ ಮಿತಿಗೊಳಿಸಲಾಗಿದೆ.
- ನಗರ ಪ್ರದೇಶದಲ್ಲಿ 2 ಎಕರೆವರೆಗೂ ರೂ.2000 ವಿಧಿಸಲಾಗಿದೆ. ಇನ್ನೂ 2 ಎಕರೆಗಿಂತ ಹೆಚ್ಚಿದ್ದರೇ, ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ರೂ.400 ರಿಂದ ಗರಿಷ್ಟ ಶುಲ್ಕ ರೂ.4000ಕ್ಕೆ ಮಿತಿಗೊಳಿಸಲಾಗಿದೆ.
- ಇದಲ್ಲದೇ ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಬಾಜೂದಾರರಿಗೆ ನೋಟಿಸ್ ಶುಲ್ಕವಾಗಿ ರೂ.25 ವಿಧಿಸಿದೆ.
ಈ ಮೇಲ್ಕಂಡ ಪರಿಷ್ಕೃತ ನೂತನ ದರಗಳು ದಿನಾಂಕ 01-02-2022ರಿಂದ ಜಾರಿಗೊಳ್ಳಲಿದೆ. ಆದ್ರೇ ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಈ ದರ ಅನ್ವಯಿಸೋದಿಲ್ಲ ಎಂಬುದಾಗಿ ಕಂದಾಯ ಇಲಾಖೆಯ ಭೂಮಾಪನ ವಿಭಾಗದ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ