ಇಲ್ಲಿನ ಜನಕ್ಕೆ ಮನೆಯಿಲ್ಲ, ಯುವಕರಿಗೆ ಮದುವೆಯೂ ಇಲ್ಲ! ಈ ವಿಚಿತ್ರ ಸಮಸ್ಯೆಗೆ ಕಾರಣವೇನು?

ಗದಗ:

        ಅವರದ್ದು ಮದುವೆ ಮಾಡ್ಕೊಂಡು ಹೆಂಡತಿ ಮಕ್ಕಳ  ಜೊತೆ ಹಾಯಾಗಿರಬೇಕಾಗಿರೋ ವಯಸ್ಸು. ಆದರೆ, ಮದುವೆ ಮಾಡ್ಕೊಂಡು ಸುಂದರ ಸಾಂಸಾರಿಕ ಜೀವನ ನಡೆಸಬೇಕಂದ್ರೆ ಹಣೆಬರಹಕ್ಕೊಂದು ಕನ್ಯೆ ಸಿಗುತ್ತಿಲ್ಲ. ಕನ್ಯೆ ಕೊಡೋಕೆ ಅಂತಾ ಬಂದ್ರೆ, ಬಂದ ಬೀಗರೆಲ್ಲಾ ಅವರ ಅವಸ್ಥೆ ನೋಡಿ ಓಡಿ ಹೋಗ್ತಿದ್ದಾರೆ.
         ಹೀಗಾಗಿ ಈ ಗ್ರಾಮದಲ್ಲಿ ಮದುವೆಯಾಗ್ಬೇಕಾಗಿರೋ ಯುವಕರದ್ದೊಂದು ದೊಡ್ಡ ಬಟಾಲಿಯನ್ನೇ ಇದೆ. 2007, 2009 ಹಾಗೂ 2019ರಲ್ಲಿ ಮಲಪ್ರಭಾ ನದಿಯ  ಪ್ರವಾಹಕ್ಕೆ ತುತ್ತಾಗಿ ಮನೆ ಮಠ ಕಳೆದುಕೊಂಡಿರುವ ಗದಗ  ಜಿಲ್ಲೆಯ ರೋಣ  ತಾಲ್ಲೂಕಿನ ಗಾಡಗೋಳಿ ನವಗ್ರಾಮದ ನೆರೆ ಸಂತ್ರಸ್ತರ ಗೋಳಾಟವಿದು.
 
 ಸರ್ಕಾರ ಮನೆ ಏನೋ ನಿರ್ಮಾಣ ಮಾಡಿಕೊಟ್ಟು ಕೈ ತೊಳೆದುಕೊಂಡಿತು. ಆದರೆ, ಮನೆಗಳ ಹಕ್ಕುಪತ್ರ ನೀಡದೇ ಸತಾಯಿಸುತ್ತಿದೆ. ಹಕ್ಕುಪತ್ರ ಸಿಗದೇ ನೆರೆ ಸಂತ್ರಸ್ತರು ಇಂದಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೋರಾಟ ನಡೆಸಿದರೂ ಸಿಗಲಿಲ್ಲ ಗೆಲುವು

ಮನೆ ಬೀಳುವ ಹಂತಕ್ಕೆ ಬಂದಿದ್ದರೂ, ಹಕ್ಕುಪತ್ರ ವಿತರಿಸದಕ್ಕಾಗಿ ಸ್ವಂತದ್ದಲ್ಲವೆಂಬ ಕಾರಣಕ್ಕೆ ಮನೆ ದುರಸ್ಥಿಗೂ ಮುಂದಾಗದ ಹಾಗೆ ಆಗಿದೆ. ಮನೆಗಳ ಹಕ್ಕುಪತ್ರಕ್ಕಾಗಿ ಗಾಡಗೋಳಿ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ಅನೇಕ ಬಾರಿ ಹೋರಾಟಗಳನ್ನು ಮಾಡಿದ್ದರೂ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ.

           ಪ್ರತಿಭಟನೆ ನಡೆಸಿದಾಗೊಮ್ಮೆ ಮೂಗಿಗೆ ತುಪ್ಪವರೆಸುತ್ತಿರುವ ಅಧಿಕಾರಿಗಳಿಗೆ ಸಂತ್ರಸ್ತರ ಗೋಳು ಕೇಳದಾಗಿದೆ ಎಂದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ಅದರಂತೆ, ಮಲಪ್ರಭಾ ನದಿಯ ಪ್ರವಾಹಕ್ಕೆ ಸಿಲುಕಿದ್ದ ಹಲವು ಗ್ರಾಮಗಳ ನೆರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನೂ ವಿತರಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಗಾಡಗೋಳಿ ಗ್ರಾಮದ ಜನರಿಗೆ ಮಾತ್ರ ಮನೆ ಹಂಚಿಕೆ ಮಾಡಿರುವ ಸರ್ಕಾರ ಹಕ್ಕುಪತ್ರ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ. ಇದಕ್ಕೆ ರಾಜಕೀಯ ತಿಕ್ಕಾಟವೂ ಕಾರಣ ಎಂದು ಹೇಳಲಾಗುತ್ತಿದೆ.

ಇನ್ನು ಕೆಲ ಗ್ರಾಮಸ್ಥರು ನಮಗೆ ಸಣ್ಣ ಮನೆ ಬೇಡ ದೊಡ್ಡದು ಬೇಕು, ಹಳೇ ಗ್ರಾಮದಲ್ಲಿರುವಂತೆ ಮನೆ ಹಂಚಿಕೆ ಮಾಡಬೇಕು, ನಮ್ಮ ಆಸ್ತಿ ಬಹಳ ಇದೆ. ಆದರೆ, ನಮ್ಮ ಕುಟುಂಬಕ್ಕೆ ಒಂದೇ ಮನೆ ಬಂದಿದೆ ಎಂಬಿತ್ಯಾದಿ ಆಕ್ಷೇಪಣೆಗಳ ಕಾರಣಕ್ಕೂ ಹಕ್ಕುಪತ್ರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಳು ಮನೆಯಲ್ಲೇ ಕಷ್ಟಕರ ಜೀವನ

2009ರಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರವಿದ್ದಾಗ ಗಾಡಗೋಳಿ ನವಗ್ರಾಮದಲ್ಲಿ ಒಟ್ಟು 504 ಮನೆಗಳ ನಿರ್ಮಾಣವಾಗಿವೆ. ಈ ಪೈಕಿ 450ಕ್ಕೂ ಅಧಿಕ ಮನೆಗಳಲ್ಲಿ ಮೂರು ವರ್ಷಗಳಿಂದ 800 ಜನರು ವಾಸವಾಗಿದ್ದಾರೆ. ಇದರಲ್ಲಿ 100ಕ್ಕೂ ಹೆಚ್ಚು ಯುವಕರಿದ್ದಾರೆಂಬುವುದು ವಿಶೇಷ.

       ಆದರೆ, ವಾಸವಿರುವ ಮನೆಗೆ ಬಾಗಿಲಿದ್ದರೆ ಕಿಟಕಿ ಇಲ್ಲ, ಕಿಟಕಿ ಇದ್ದರೆ ಬಾಗಿಲಿಲ್ಲದೇ ಜೀವನ ನಡೆಸುತ್ತಿದ್ದಾರೆ. ಇಂತಹ ಪಾಳು ಬಿದ್ದ ಮನೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದು ವಾಸಿಸುತ್ತಿರುವ ಜಾಗದಲ್ಲಿ ವಿಷಜಂತುಗಳ ಕಾಟ ಹೆಚ್ಚಾಗಿದೆ. ಅಲ್ಲದೇ, ಮೂಲಭೂತ ಸೌಲಭ್ಯಗಳಿಂದ ಗ್ರಾಮ ವಂಚಿತವಾಗಿದೆ.

ಮನೆಯೂ ಇಲ್ಲ, ಮದುವೆಯೂ ಇಲ್ಲ!

ಗಾಡಗೋಳಿ ನವಗ್ರಾಮದಲ್ಲಿ ವಾಸವಿರುವ ಕುಟುಂಬಗಳಲ್ಲಿನ 100ಕ್ಕೂ ಅಧಿಕ ಸಂಖ್ಯೆಯ ಯುವಕರಿಗೆ ಇನ್ನೂವರೆಗೂ ಮದುವೆ ಭಾಗ್ಯ ಕೂಡಿ ಬಂದಿಲ್ಲ. ಕಂಕಣ ಭಾಗ್ಯ ಕೂಡಿ ಬಂದರೂ ಕನ್ಯೆ ಸಿಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ಇಲ್ಲಿ ಯಾವುದೇ ಒಬ್ಬ ಯುವಕನ ಮದುವೆಯಾಗಿಲ್ಲವಂತೆ.

      ಇನ್ನು ವಿವಾಹಬೇಕೆಂಬ ಮಹದಾಸೆಯಿಂದ ಇಲ್ಲಿನ ಯುವಕರು ಕನ್ಯೆ ನೋಡಿ ಬರುತ್ತಾರೆ. ಆದರೆ, ಹುಡುಗನ ಮನೆತನ ನೋಡಲು ಬರುವ ಬೀಗರು ಮನೆಯನ್ನು ನೋಡಿ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರಂತೆ. ಹೀಗಾಗಿ 100ಕ್ಕೂ ಅಧಿಕ ಯುವಕರಿರುವ ಗ್ರಾಮದಲ್ಲಿ ಮೂರು ವರ್ಷಗಳಿಂದ ಯಾವೊಬ್ಬರದ್ದೂ ಮದುವೆಯಾಗಿಲ್ಲ ಎಂಬುವುದು ಇಲ್ಲಿನ ನಿವಾಸಿಗಳ ಅಳಲು.

ಹಕ್ಕುಪತ್ರ ಕೊಡದೇ ಸತಾಯಿಸುತ್ತಿರುವ ಅಧಿಕಾರಿಗಳು

ಮನೆಗಳ ಹಕ್ಕು ಪತ್ರ ವಿತರಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎದುರಿಸುತ್ತಿದ್ದಾರೆ. ಮನೆಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು ಇವತ್ತೋ ನಾಳೆ ಬೀಳುವ ಹಂತಕ್ಕೆ ಬಂದಿವೆ. ಗ್ರಾಮಕ್ಕೆ ಬರುವ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಬರೀ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಮತ ಕೇಳಲು ಬರಲಿ ಸರಿಯಾಗಿ ಪಾಠ ಕಲಿಸುತ್ತೇವೆ ಅಂತಿದ್ದಾರೆ ಗ್ರಾಮಸ್ಥರು. 2009ರಲ್ಲಿ ಭಾರೀ ಪ್ರಮಾಣದ ನೀರು ಬಂದಿತ್ತು.

    ಹೀಗಾಗಿ ಅಧಿಕಾರಿಗಳು ಊರು ಬಿಟ್ಟು ನಿಮ್ಮ ಜೀವ ಕಾಪಾಡಿಕೊಳ್ಳಿ ಅಂದಿದ್ದಕ್ಕೆ ಊರು ಬಿಟ್ಟು ಬಂದೀವಿ. ಮನೆಗೆ ಕಲ್ಲು, ಮಣ್ಣೋ ಹಾಕಿಕೊಳ್ಳಬೇಕೆಂದರೆ, ಇನ್ನುವರೆಗೂ ಹಕ್ಕುಪತ್ರ ನೀಡಿಲ್ಲ. ಈ ಹಿಂದೆ ಹಕ್ಕುಪತ್ರ ಕೊಟ್ಟು ನಂಬರ್ ಬದಲಾಯಿಸಬೇಕು ಕೊಡುತ್ತೇವೆ ಅಂತ ಮರಳಿ ಪಡೆದಿದ್ದಾರೆ.

ಇದರಿಂದಾಗಿ ಗ್ರಾಮಕ್ಕೆ ಕನ್ಯೆನೂ ಕೊಡ್ತಿಲ್ಲ, ತೆಗೆದುಕೊಳ್ತಿಲ್ಲ. ಹೀಗಾಗಿ ದಯವಿಟ್ಟು ನಮಗೆ ಹಕ್ಕುಪತ್ರ ನೀಡಿ ಪುಣ್ಯ ಕಟ್ಟಿಕೊಳ್ಳಿ ಅಂತಿದ್ದಾರೆ ಸ್ಥಳೀಯರು. ಮನೆಯ ಹಕ್ಕುಪತ್ರಗಳನ್ನು ವಿತರಿಸಲು ಗ್ರಾಮ ಪಂಚಾಯತಿಗೆ ಕೊಟ್ಟಿದ್ದು, ಅಲ್ಲಿ ವಾಸವಿರುವ ಕುಟುಂಬಗಳಿಗೆ ಅವರೇ ಹಕ್ಕುಪತ್ರ ವಿತರಿಸುತ್ತಾರೆ ಅಂತಿದ್ದಾರೆ ರೋಣ ತಹಶೀಲ್ದಾರ ಜಕ್ಕನಗೌಡರ ಅವರು.

140 ಕುಟುಂಬಗಳಿಗೆ ಹಕ್ಕುಪತ್ರ

ಗಾಡಗೋಳಿ ಗ್ರಾಮದ 140 ನೆರೆ ಸಂತ್ರಸ್ತ ಕುಟುಂಬಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸಲಾಗಿದೆ. ಆದರೆ, ಕೆಲ ಗ್ರಾಮಸ್ಥರಿಂದ ಆಕ್ಷೇಪಣೆ ಬಂದಿರುವುದರಿಂದ ಇನ್ನುಳಿದ ಕುಟುಂಬಗಳಿಗೆ ಹಕ್ಕಪತ್ರ ವಿತರಿಸಿಲ್ಲ. ಈ ಬಗ್ಗೆ ಉಪವಿಭಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಆಕ್ಷೇಪಣೆಗಳ ಬಗ್ಗೆ ಚರ್ಚಿಸಿ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಅಂತಿದ್ದಾರೆ ಪಿಡಿಓ ಅವರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link