ಹಿಜಾಬ್ ಧಾರಣೆ ಧಾರ್ಮಿಕ ಆಚರಣೆಯಲ್ಲ, ವಿನಾಯ್ತಿ ನೀಡಲಾಗದು: ಹೈಕೋರ್ಟ್‌ನಲ್ಲಿ ಸರಕಾರದ ವಾದ

ಬೆಂಗಳೂರು:

 ಬೆಂಗಳೂರು, ಫೆ.10: ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಹಾಗಾಗಿ ಅದನ್ನು ಧರಿಸಲು ವಿನಾಯ್ತಿ ನೀಡಲಾಗದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಪ್ರಬಲವಾಗಿ ಪ್ರತಿಪಾದಿಸಿದೆ.

ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವ ಅರ್ಜಿ ಗಳ ಕುರಿತಂತೆ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ, ಇದೀಗ ಹೈಕೋರ್ಟ್ ಮೊರೆ ಹೋಗಿರುವ ಉಡುಪಿಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಅರ್ಜಿದಾರ ಮುಸ್ಲಿಂ ವಿದ್ಯಾರ್ಥಿನಿಯರು ಆಗಸ್ಟ್ 2020 ರಲ್ಲಿ ಕಾಲೇಜಿಗೆ ಪ್ರವೇಶ ಪಡೆದಾಗ ಎಲ್ಲಾ ಇತರ ವಿದ್ಯಾರ್ಥಿಗಳಂತೆ ವಸ್ತ್ರ ಸಂಹಿತೆ ಪಾಲನೆಗೆ ಸ್ವಯಂಪ್ರೇರಣೆಯಿಂದ ಸಹಿ ಹಾಕಿದ್ದಾರೆ ಎಂದು ಹೇಳಿದೆ.

     ಆ ಮೂಲಕ ಸರ್ಕಾರ, ವಿದ್ಯಾರ್ಥಿನಿಯರು ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲನೆ ಮಾಡಬೇಕು. ಹಾಗೆ ಅವರು ಸಂಹಿತೆ ಪಾಲನೆ ಮಾಡದಿದ್ದರೆ ಅದರಿಂದ ಇತರೆ ಮಕ್ಕಳ ಹಕ್ಕೂ ಸಹ ಉಲ್ಲಂಘನೆಯಾಗಲಿದೆ ಎಂದು ತಿಳಿಸಿದೆ.

“ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಕಾಲೇಜಿಗೆ ಸೇರಿದಾಗಿನಿಂದಲೂ ವಸ್ತ್ರ ಸಂಹಿತೆ ಪಾಲಿಸುತ್ತಿದ್ದಾರೆ ಮತ್ತು ಅವರು 2021 ರ ಡಿಸೆಂಬರ್ ವರೆಗೆ ಯಾವುದೇ ವಿನಾಯ್ತಿ ಕೋರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಮಾತ್ರ ಅವರು ಅನಗತ್ಯ ಆಕ್ಷೇಪ ಎತ್ತಿದ್ದಾರೆ” ಎಂದು ಸರ್ಕಾರವು ತನ್ನ ಲಿಖಿತ ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ ಇತ್ಯಾದಿ) ನಿಯಮ 1995 ರ ನಿಯಮ 11 ರಂತೆ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ಆದ ಸಮವಸ್ತ್ರವನ್ನು ನಿರ್ದಿಷ್ಟಪಡಿಸಲು ಸರ್ಕಾರ ಅಧಿಕಾರ ನೀಡಿದೆ. ಉಡುಪಿಯ ಬಾಲಕಿಯರ ಪಿಯು ಕಾಲೇಜಿನಲ್ಲೂ ಸಹ ಸಮವಸ್ತ್ರ ಕಡ್ಡಾಯವಾಗಿದ್ದು, ಅದು ಮೊದಲೇ ವಿದ್ಯಾರ್ಥಿಗಳು ಮತ್ತು ಪಾಲಕರು ತಿಳಿದ ವಿಚಾರವಾಗಿದೆ ಎಂದು ಹೇಳಿದೆ.

ಸರ್ಕಾರ ಸಮರ್ಥನೆ:

ಫೆ. 5ರಂದು ಸರ್ಕಾರ ಎಲ್ಲಾ ಶಾಲಾ ಮತ್ತು ಕಾಲೇಜುಗಳಿಗೆ ವಸ್ತ್ರ ಸಂಹಿತೆಯನ್ನು ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಸಮರ್ಥಿಸಿಕೊಂಡಿದ್ದು, “ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಪರಿಗಣಿಸಲು, ಶಿಕ್ಷಣ ಸಂಸ್ಥೆಯಲ್ಲಿ ಅನಗತ್ಯ ವಿವಾದಗಳನ್ನು ತಪ್ಪಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಜಾತ್ಯತೀತತೆ ಭಾವನೆ ಬೆಳೆಸಲು ಆದೇಶ ಅತ್ಯಗತ್ಯವಾಗಿದೆ”ಎಂದು ಪ್ರತಿಪಾದಿಸಿದೆ.

ಅರ್ಜಿದಾರ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ತಮ್ಮ ನಂಬಿಕೆಗಳು ಮತ್ತು ಮಾದರಿಯ ಉಡುಪುಗಳನ್ನು ಧರಿಸುವ ಹಕ್ಕಿನ ಬಗ್ಗೆ ವಿವಾದವನ್ನು ಎತ್ತಿರುವ ಕಾರಣ ಸರಕಾರದ ಆದೇಶವನ್ನು ನೀಡುವುದು ಅನಿವಾರ್ಯವಾಗಿತ್ತು ಎಂದು ಸರ್ಕಾರ ಹೇಳಿದೆ.

ವಿನಾಯ್ತಿ ನೀಡಲಾಗದು:

ಸಮುದಾಯ, ಜಾತಿ, ಧರ್ಮ, ಸಮುದಾಯದ ಹೆಸರಿನಲ್ಲಿ ಕೆಲವು ಜನರಿಗೆ ವಿನಾಯಿತಿಗಳನ್ನು ನೀಡಿದರೆ ಅದು ಸಮಾಜದಲ್ಲಿ ಅವ್ಯವಸ್ಥೆ ಮತ್ತು ಗೊಂದಲ ಹಾಗೂ ಸಂಘರ್ಷದ ಹಿತಾಸಕ್ತಿಯು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಕಾರಣವಾಗಬಹುದು. ಒಬ್ಬರಿಗೆ ವಿನಾಯ್ತಿ ನೀಡಿದರೆ ಇತರರೂ ಸಹ ಅದೇ ಹಕ್ಕು ಮಂಡಿಸಲಿದ್ದಾರೆ ಎಂದು ಸರ್ಕಾರ ಆಕ್ಷೇಪಣೆಯಲ್ಲಿ ತಿಳಿಸಿದೆ.

ಅಲ್ಲದೆ, ಅನೇಕ ದೇಶಗಳಲ್ಲಿ ಇದೇ ನಿಲುವನ್ನು ಪಾಲನೆ ಮಾಡುತ್ತಿವೆ. ಕೆಲವು ದೇಶಗಳು ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧಾರಣೆಯನ್ನು ನಿಷೇಧಿಸಿವೆ. ಅಂತಹ ನಿರ್ಧಾರಗಳನ್ನು ಪ್ರಪಂಚದಾದ್ಯಂತ ಸ್ವಾಗತಿಸಲಾಗುತ್ತಿದೆ ಮತ್ತು ಅಂತಹ ದೇಶಗಳ ನ್ಯಾಯಾಲಯಗಳೂ ಕೂಡ ನಿರ್ಧಾರಗಳನ್ನು ಎತ್ತಿ ಹಿಡಿದಿವೆ ಎಂದು ಸರ್ಕಾರ ತನ್ನ ನಿಲುವವನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link