ತುಮಕೂರು:
ಜಿಲ್ಲೆಯಾದ್ಯಂತ ಕೇವಲ 193 ಇಂಟರ್ನೆಟ್ ಸಂಪರ್ಕಕ್ಕೆ ಸೀಮಿತವಾದ ರಾಷ್ಟ್ರೀಯ ಸಂಸ್ಥೆ
ತುಮಕೂರು ಜಿಲ್ಲೆಯಲ್ಲಿ ಅಂತರ್ಜಾಲ(ಇಂಟರ್ನೆಟ್) ಸಂಪರ್ಕ ಕಲ್ಪಿಸುವಲ್ಲಿ ಬಿಎಸ್ಎನ್ಎಲ್ ಹಿಡಿತ ಕಳೆದುಕೊಂಡಿದ್ದು, ಜಿಲ್ಲೆಯಾದ್ಯಂತ ಕೇವಲ 193 ಇಂಟರ್ನೆಟ್ ಸಂಪರ್ಕಕ್ಕೆ ರಾಷ್ಟ್ರೀಯ ಸಂಸ್ಥೆ ಸೀಮಿತವಾಗಿರುವುದು, ಡಿಜಿಟಲ್ ಇಂಡಿಯಾದಲ್ಲಿ ಬಿಎಸ್ಎನ್ಎಲ್ ಹಿಡಿತ ಸಡಿಲಗೊಂಡು ಅವಸಾನದ ಹಾದಿ ತಲುಪುತ್ತಿರುವುದರ ದ್ಯೋತಕವೆನಿಸಿದೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಇತ್ತೀಚೆಗೆ ನಡೆಸಿದ ದಿಶಾಸಮಿತಿ ಸಭೆಯಲ್ಲಿ ಈ ಅಂಕಿ-ಅಂಶ ಬೆಳಕಿಗೆ ಬಂದಿದ್ದು, ತುಮಕೂರು ಜಿಲ್ಲೆಯಾದ್ಯಂತ ಕೇವಲ 193 ಇಂಟರ್ನೆಟ್ ಸಂಪರ್ಕ ಮಾತ್ರ ಚಾಲ್ತಿಯಲ್ಲಿದೆ. ತಾಲೂಕುವಾರು ಚಾಲ್ತಿ ಸಂಪರ್ಕದ ಪೈಕಿ ಗುಬ್ಬಿಯಲ್ಲಿ 24, ಕುಣಿಗಲ್ 6, ಚಿ.ನಾ.ಹಳ್ಳಿ 21, ತಿಪಟೂರು 20, ಸಿರಾ 25, ಪಾವಗಡ 5, ಮಧುಗಿರಿ 16, ಕೊರಟಗೆರೆ 14, ತುರುವೇಕೆರೆ 24, ತುಮಕೂರಲ್ಲಿ 38 ಇಂಟರ್ನೆಂಟ್ಸಂಪರ್ಕ ಮಾತ್ರ ಚಾಲ್ತಿಯಲ್ಲಿದೆ.
332ರಲ್ಲಿ 139 ಸಂಪರ್ಕ ಕಟ್: ಜಿಲ್ಲೆಯಲ್ಲಿ ಪ್ರಸಕ್ತ 332 ಇಂಟರ್ನೆಟ್ ಸಂಪರ್ಕ ಕಲ್ಪಿಸಿದ್ದ ಬಿಎಸ್ಎನ್ಎಲ್ನಿಂದ 139 ಮಂದಿ ಗ್ರಾಹಕರು ಸಂಪರ್ಕ ಕಡಿತಗೊಳಿಸಿಕೊಂಡಿದ್ದು, 4ಜಿಗೆ ಹೋದರೂ ಬಿಎಸ್ಎನ್ಎಲ್ ಹಮ್ಕೋ ನಹೀ ಜೀ…, ಎಂದು ಗ್ರಾಹಕರು ಹಿಂದೆ ಸರಿಯುತ್ತಿರುವ ಹಿಂದೆ ಬಿಎಸ್ಎನ್ಎಲ್ನ ವೈಫಲ್ಯಗಳು ಎದ್ದು ಕಾಣುತ್ತಿವೆ.
ಪಸ್ತುತ ಗುಬ್ಬಿಯಲ್ಲಿ 10, ಕುಣಿಗಲ್ 30, ಚಿ.ನಾ.ಹಳ್ಳಿ 07, ತಿಪಟೂರು 06, ಸಿರಾ 17, ಪಾವಗಡ 30, ಮಧುಗಿರಿ 23, ಕೊರಟಗೆರೆ 10, ತುರುವೇಕೆರೆ 3, ತುಮಕೂರಲ್ಲಿ 3 ಇಂಟರ್ನೆಂಟ್ಸಂಪರ್ಕಗಳನ್ನು ಕಡಿತ ಮಾಡಿಕೊಳ್ಳಲಾಗಿದೆ.
ಏರ್ಟೆಲ್, ಜಿಯೋಗೆ ಹೆಚ್ಚಿನ ಬೇಡಿಕೆ:
ಬಿಎಸ್ಎನ್ಎಲ್ನ ತಾಂತ್ರಿಕ ಅಡಚಣೆಗಳು, ಪದೇ ಪದೇ ಎದುರಾಗುವ ಸರ್ವರ್ ಸಮಸ್ಯೆ, ದುರಸ್ತಿಗೆ ಸಿಬ್ಬಂದಿ ಕೊರತೆ, ಗ್ರಾಹಕರನ್ನು ಆಕರ್ಷಿಸದ ಪ್ಯಾಕೇಜ್ಗಳು,
ಸರಕಾರದ ಪ್ರೋತ್ಸಾಹ ಕೊರತೆ ಗ್ರಾಹಕರು ರಾಷ್ಟ್ರೀಯ ಸಂಸ್ಥೆಯ ಸಹವಾಸವೇ ಬೇಡ ಎನ್ನುವ ತೀರ್ಮಾನಕ್ಕೆ ಬರುವಂತಾಗಿದ್ದು, ವೇಗದ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಖಾಸಗಿ ಏರ್ಟೆಲ್, ಜಿಯೋಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಸರಕಾರಿ ಸಂಸ್ಥೆಯ ಹಿಡಿತದಿಂದ ಅಂತರ್ಜಾಲವೇ ಕೈ ತಪ್ಪುವ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ.
ಬಿಎಸ್ಎನ್ಎಲ್ ಮಾರುವ ಕಾಲ ದೂರವಿಲ್ಲ
ದೂರ ಸಂಪರ್ಕ ಕ್ಷೇತ್ರದಲ್ಲಿ ದಶಕಗಳ ಕಾಲ ಅನಭಿಷಕ್ತ ರಾಜನಂತೆ ಮೆರೆದ ಬಿಎಸ್ಎನ್ಎಲ್ ಪ್ರಸ್ತುತ ನಷ್ಟದ ಹಾದಿ, ಖಾಸಗಿ ಟೆಲಿಕಾಂ ಕಂಪನಿಗಳ ಪ್ರಬಲ ಪೈಪೋಟಿ, ಸರಕಾರದ ಖಾಸಗೀಕರಣ ನೀತಿಯಿಂದ ಅವಸಾನಕ್ಕೆ ತಲುಪಿದ್ದು, ದೂರವಾಣಿ ಸಂಪರ್ಕ,
ಅಂತರ್ಜಾಲ ಸಂಪರ್ಕದಲ್ಲಿ ಒಟ್ಟಾರೆ ಸಂಪರ್ಕ ಸಂಖ್ಯೆಯ ಶೇ5ರಷ್ಟು ಪಾಲು ಹೊಂದಿರದಿರುವುದು ಸರಕಾರಿ ಸಂಸ್ಥೆಗಳು ಮುಚ್ಚುತ್ತಿರುವುದಕ್ಕೆ ಜ್ವಲಂತ ಉದಾಹರಣೆ ಎನಿಸಿದೆ. ಈ ಸ್ಥಿತಿ ಇನ್ನೂ ಕೆಲವು ಸಮಯ ಮುಂದುವರಿದರೆ ಏರ್ಇಂಡಿಯಾ ಮಾರಿದಂತೆ ಬಿಎಸ್ಎನ್ಎಲ್ ಸಹ ಮಾರಾಟ ಮಾಡುವ ಕಾಲ ದೂರವಿಲ್ಲ.
ಅಂತರ್ಜಾಲದ ಮೇಲೆ ಹಿಡಿತವಿಲ್ಲದೆ ಜಾಲತಾಣ ನಿಯಂತ್ರಿಸಲು ಸಾಧ್ಯವೇ?
ಸರಕಾರ, ಸರಕಾರಿ ಸಂಸ್ಥೆಗಳು ಅಂತರ್ಜಾಲದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಳ್ಳುತ್ತಿದ್ದು, ಅಂತರ್ಜಲದ ಮೇಲೆ ತನ್ನ ಸಾರ್ವಭೌಮತೆ ಕಳೆದುಕೊಂಡಮೇಲೆ ಖಾಸಗಿ ಜಾಲತಾಣಗಳನ್ನು ನಿಯಂತ್ರಣ ಹೇರಲು ಸರಕಾರಕ್ಕೆ ಸಾಧ್ಯವೇ? ಎಂಬ ಪ್ರಶ್ನೆ ಉದ್ಬವಿಸಿದೆ.
ಖಾಸಗಿಯವರಿಗೆ ಟೆಲಿಕಾಂ, ಇಂಟರ್ನೆಟ್ ಹಿಡಿತ ಸಂಪೂರ್ಣ ಹೋದರೆ ರಾಷ್ಟ್ರೀಯ ಭದ್ರತೆಗೂ ಅಪಾಯವಾಗುವುದನ್ನು ತಳ್ಳಿಹಾಕುವಂತಿಲ್ಲ. ಫೆಗಾಸಿಸ್ ನಂತಹ ಬೇಹುಗಾರಿಕೆ ಪ್ರಕರಣಗಳು ನಡೆಯಲು ಹೆಚ್ಚುತ್ತಿರುವ ಈ ರೀತಿಯ ಖಾಸಗೀಕರಣವೇ ಕಾರಣ ಎಂದು ಹೇಳಿದರೂ ತಪ್ಪಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ