ತುರುವೇಕೆರೆ:
ತಹಸೀಲ್ದಾರ್ ಮನವಿಗೆ ಓಗೊಟ್ಟು ಪ್ರತಿಭಟನೆ ಹಿಂಪಡೆತ
ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸಲು ಆಗ್ರಹಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯ ಕಂಡಿದೆ.
ಶಾಸಕ ಮಸಾಲ ಜಯರಾಮ್ ಅವರು ಕಲ್ಲುಗಣಿಗಾರಿಕೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ ಬೆನ್ನಲ್ಲೆ ಗಣಿಗಾರಿಕೆ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ನಿಂತಿತ್ತು. ಆದರೆ ರೈತಪರ ಸಂಘಟನೆಯ ಪದಾಧಿಕಾರಿಗಳು ಸ್ವತಃ ಶಾಸಕರೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಈ ವಿಚಾರ ಘೋಷಿಸಬೇಕು ಎಂದು ಆಗ್ರಹಿಸಿ ಪುನಃ ಪ್ರತಿಭಟನೆ ಮುಂದುವರೆಸಿದ್ದರು.
ಹಾಗಾಗಿ ಪ್ರತಿಭಟನೆಯು ಸೋಮವಾರಕ್ಕೆ ಏಳನೇ ದಿನಕ್ಕೆ ಕಾಲಿಟ್ಟಿತ್ತು. ಭಾನುವಾರ ರಾತ್ರಿ ತಹಸೀಲ್ದಾರ್ ನಯೀಮ್ ಉನ್ನಿಸ್ಸಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಶಾಸಕರ ಸೂಚನೆಯಂತೆ ಕಲ್ಲುಗಣಿಗಾರಿಕೆ ನಿಂತಿದೆ,
ಹಾಗಾಗಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರತಿಭಟನಾ ನಿರತರಲ್ಲಿ ವಿನಂತಿಸಿಕೊಂಡು ಮುಂದೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ಕಳೆದ ಏಳು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹವು ಅಂತ್ಯಕಂಡಿದೆ.
ಹಲವು ರೈತ ಸಂಘಟನೆಗಳು ಮತ್ತು ಕೋಳಘಟ್ಟ ಗ್ರಾಮದ ಜನರು ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳು, ಮಹಿಳೆಯರು, ವಯೋ ವೃದ್ಧರು, ಮಕ್ಕಳು ವಯೋಬೇಧವಿಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ