ಗಾಳಿಯ ಉತ್ತಮ ಗುಣಮಟ್ಟ: ಭಾರತದಲ್ಲಿಯೇ ಚಾಮರಾಜನಗರಕ್ಕೆ ಮೊದಲ ಸ್ಥಾನ!

ಚಾಮರಾಜನಗರ: 

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಕಟಿಸುವ ಗಾಳಿಯ ಗುಣಮಟ್ಟದ ಸೂಚ್ಯಂಕದಲ್ಲಿ ಶುಕ್ರವಾರ ಚಾಮರಾಜನಗರ ಮೊದಲ ಸ್ಥಾನದಲ್ಲಿದೆ.

ನಿನ್ನೆ ಅಂದರೆ ಫೆಬ್ರವರಿ 17, 20222ರಂದು ಉತ್ತಮ ವಾಯು ಗುಣಮಟ್ಟ ಹೊಂದಿರುವ ನಗರಗಳ ಪಟ್ಟಿಯನ್ನು ‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದೆ.

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿಡುಗಡೆ ಮಾಡಿರುವ ವಾಯು ಗುಣಮಟ್ಟ ಸೂಚ್ಯಂಕ ಡೇಟಾದ ಪ್ರಕಾರ ಕರ್ನಾಟಕದ ಚಾಮರಾಜನಗರ ಮೊದಲ ಸ್ಥಾನದಲ್ಲಿದೆ. ವಿಜಯಪುರ ಹಾಗೂ ಬಾಗಲಕೋಟೆ ನಂತರದ ಸ್ಥಾನದಲ್ಲಿವೆ.

ಸೂಚ್ಯಂಕದಲ್ಲಿ 132 ನಗರಗಳನ್ನು ಪಟ್ಟಿ ಮಾಡಲಾಗಿದ್ದು, ವಾಯುಮಾಲಿನ್ಯದ ಪ್ರಮಾಣಕ್ಕೆ ಅನುಸಾರವಾಗಿ ನಗರಗಳ ಸ್ಥಾನ ಬದಲಾಗುತ್ತಿರುತ್ತದೆ. ಚಾಮರಾಜನಗರವು ಶುಕ್ರವಾರ ಮೊದಲ ಸ್ಥಾನಕ್ಕೆ ಬಂದಿದೆ. ನಗರದ ಗಾಳಿಯ ಗುಣಮಟ್ಟ ಸೂಚ್ಯಂಕದ ಮೌಲ್ಯ (ಎಕ್ಯುಐ ವಾಲ್ಯು) 36 ಇದೆ.

39 ಎಕ್ಯುಐ ವಾಲ್ಯು ಪಡೆದಿರುವ ತಮಿಳುನಾಡಿನ ತೂತುಕುಡಿ ಎರಡನೇ ಸ್ಥಾನದಲ್ಲಿದೆ. 46 ಎಕ್ಯುಐ ವಾಲ್ಯು ಹೊಂದಿರುವ ರಾಜ್ಯದ ವಿಜಯಪುರ ಮೂರು, 50 ಎಕ್ಯುಐ ವಾಲ್ಯು ಗಳಿಸಿರುವ ಬಾಗಲಕೋಟೆ ನಾಲ್ಕನೇ ಸ್ಥಾನದಲ್ಲಿದೆ.

ಅಂಕಿ ಅಂಶಗಳ ಪ್ರಕಾರ, 56 ನಗರಗಳ ಗಾಳಿಯ ಗುಣಮಟ್ಟವು ತೃಪ್ತಿಕರವಾಗಿದೆ, 48 ಮಧ್ಯಮ, 26 ನಗರಗಳ ಗುಣಮಟ್ಟ ಕಳಪೆಯಾಗಿದೆ, ಗಾಜಿಯಾಬಾದ್ ಮತ್ತು ಬಲ್ಲಬಾಗ್ ನ ಗಾಳಿಯ ಗುಣಮಟ್ಟವು ತುಂಬಾ ಕಳಪೆಯಾಗಿದೆ, ಇದು ದೀರ್ಘಾವಧಿಯ ಉಸಿರಾಟ ಸಮಸ್ಯೆ ಮತ್ತು ಆರೋಗ್ಯವಂತ ಜನರಲ್ಲಿ ಉಸಿರಾಟದ ಕಾಯಿಲೆಗೆ ಕಾರಣವಾಗುತ್ತದೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಮಾಪಕ ಅಳವಡಿಸಿದ್ದು, ಅದರ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತದೆ. ಎಕ್ಯುಐ ವಾಲ್ಯು 50ರ ಒಳಗಡೆ ಇದ್ದರೆ ಗಾಳಿಯ ಗುಣಮಟ್ಟ ಉತ್ತಮ, 51ರಿಂದ 100ರೊಳಗಿದ್ದರೆ ತೃಪ್ತಿದಾಯಕ, 101ರಿಂದ 200ರವರೆಗೆ ಮಧ್ಯಮ, 201-300 ಅಂಕಗಳಿದ್ದರೆ ಕಳಪೆ, 301ರಿಂದ 400 ತೀರಾ ಕಳಪೆ ಎಂದು ಗುರುತಿಸಲಾಗಿದೆ.

ಶೇ. 51 ರಷ್ಟು ಅರಣ್ಯ ಪ್ರದೇಶ, ಮೂರು ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ತಮಿಳುನಾಡು ಮತ್ತು ಕೇರಳ ಗಡಿಗಳನ್ನು ಸಂಪರ್ಕಿಸುವ ದಟ್ಟ ಅರಣ್ಯವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ವಾಯು ಗುಣಮಟ್ಟ ಉತ್ತಮವಾಗಿದೆ.

ತಮಿಳುನಾಡು ಮತ್ತು ಕೇರಳವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆಯು ಹೆಚ್ಚಿದ್ದರೂ, ಕೆರೆ ತುಂಬಿಸುವ ಯೋಜನೆಗಳು ಮತ್ತು ಅಂತರ್ಜಲದ ಮರುಪೂರಣವು ತೋಟಗಾರಿಕೆ ಬೆಳೆಗಳನ್ನು ಹೆಚ್ಚಿಸಿ ಹಸಿರಿನ ಪ್ರಮಾಣ ಹೆಚ್ಚಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap