ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ವಹಿಸದ ಶಿಕ್ಷಣ ಇಲಾಖೆ

ಶಿರಾ:

             ಸೀಮೆಸುಣ್ಣ ಹಿಡಿಯದೆ ಕಛೇರಿ ಸುತ್ತ ಗಿರಕಿ ಹೊಡೆಯುವ ಶಿಕ್ಷಕರಿಗೆ ತಿದ್ದಿತೀಡುವವರಾರು….?

ತಾಲ್ಲೂಕಿನ ಇನ್ನೂ ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದು ಉದಾಹರಣೆಗೆ ದ್ವಾರನಕುಂಟೆ ಕ್ಲಸ್ಟರ್ ವ್ಯಾಪ್ತಿಯಲ್ಲಿ 13 ಶಾಲೆಗಳಿದ್ದು ಈ ಶಾಲಾ ಮಕ್ಕಳ ಹಾಜರಾತಿಯಂತೆ ಈ ವ್ಯಾಪ್ತಿಯಲ್ಲಿ 37 ಮಂದಿ ಶಿಕ್ಷಕರಿರಬೇಕು ಆದರೆ ಕೇವಲ 13 ಮಂದಿ ಶಿಕ್ಷಕರು ಮಾತ್ರಾ ಈ ಕ್ಲಸ್ಟರ್‍ನ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸೋಜಿಗದ ಸಂಗತಿಯೇ ಸರಿ.

ಈ ಹಿಂದೆ 2016ರಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳನ್ನು ಗುರುತಿಸಿಕೊಂಡು ಅಂತಹ ಖಾಲಿ ಇರುವ ಶಾಲೆಗಳಿಗೆ ಶಿಕ್ಷಣ ಇಲಾಖೆಯು ಮರು ನಿಯೋಜನೆಯ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಂಡಿತ್ತು. ಇದೀಗ ಖಾಯಂ ಶಿಕ್ಷಕರಿಲ್ಲದ ಶಾಲೆಗಳು ಅಥಿತಿ ಶಿಕ್ಷಕರನ್ನೇ ನೆಚ್ಚಿಕೊಂಡು ಬದುಕುತ್ತಿವೆ.

ಕಳೆದ ಎರಡು ವರ್ಷಗಳ ಕೋವಿಡ್ ಹಿನ್ನೆಲೆಯಲ್ಲಿ ಇಂತಹ ಕ್ಲಿಷ್ಟಕರ ಸಂದರ್ಬದಲ್ಲೂ ವರ್ಗಾವಣೆಯ ಪ್ರಕ್ರಿಯೆಗಳು ತಾಲ್ಲೂಕಿನಲ್ಲಿ ನಡೆದವು.

 

ಮಾರ್ಚ್ ತಿಂಗಳವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ತಾತ್ಕಾಲಿಕವಾಗಿ ಮಕ್ಕಳ ಭವಿಷ್ಯದ ದೃಷ್ಠಿಯಿಂದ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳುವ ಕೆಲಸವನ್ನು ಇಲಾಖೆ ಹಾಗೂ ಜನಪ್ರತಿನಿಧಿಗಳು ಮಾಡಬಹುದಿತ್ತು ಆದರೆ ವರ್ಗಾವಣೆಗೊಂಡ 14 ದಿನದೊಳಗೆ ಅಂತಹ ಶಿಕ್ಷಕರು ಬಿಡುಗಡೆಗೊಳ್ಳುವುದು ಕೂಡಾ ಅನಿವಾರ್ಯವಾಗಿತ್ತು.

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದವರೆಗಾದರೂ ವರ್ಗಾವಣೆಗೊಂಡ ಖಾಯಂ ಶಿಕ್ಷಕರನ್ನು ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳುವಂತೆ ಶಾಲೆಗಳ ಪೋಷಕರು ಮಾಡಿಕೊಂಡ ಮನವಿಗೂ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಯಿತು. ನಿಯಮಾನುಸಾರ ವರ್ಗಗೊಂಡ ಶಿಕ್ಷಕರು ಹೊರ ಹೋಗುವುದು ಅನಿವಾರ್ಯವಾಗಿತ್ತು.

ಯಾವುದೇ ಶಿಕ್ಷಕರು ನಗರಕ್ಕೆ ಸಮೀಪದ ಶಾಲೆಗಳನ್ನು ಕೌನ್ಸಿಲಿಂಗ್‍ನಲ್ಲಿ ಆಯ್ಕೆ ಮಾಡಿಕೊಳ್ಳುವುದು ಸಹಜವಾಗಿದ್ದು ಈ ರೀತಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಬಹುತೇಕ ಶಿಕ್ಷಕರು ಹುಲಿಕುಂಟೆ ಹೋಬಳಿಯ ಶಾಲೆಗಳು ಖಾಲಿ ಇದ್ದರೂ ಅಂತಹ ಶಾಲೆಗಳ ಆಯ್ಕೆಗೆ ಹಿಂಜರಿಯುತ್ತಾರೆ.

ತಮಗೆ ಅಗತ್ಯವಾದ ಶಾಲೆಗಳನ್ನು ಕೌನ್ಸಿಲಿಂಗ್‍ನಲ್ಲಿ ಆಯ್ಕೆ ಮಾಡಿಕೊಳ್ಳುವುದು ಆಯಾ ಶಿಕ್ಷಕರ ವೈಯಕತಿಕ ವಿಚಾರವಾಗಿದ್ದು ಅದು ಅವರ ಅನುಕೂಲಕ್ಕೆ ತಕ್ಕಂತೆ ಇರುತ್ತದೆ. ಈ ನಡುವೆ ಕಾಯಂ ಶಿಕ್ಷಕರ ನೇಮಕಾತಿಯು ರಾಜ್ಯ ಸರ್ಕಾರದಿಂದಲೇ ಹೊಸ ಆದೇಶವಾಗಬೇಕಿದೆ. ಈ ಕೆಲಸವನ್ನು ಈ ಕ್ಷೇತ್ರದ ಶಾಸಕರು ಹಾಗೂ ಜನಪ್ರತಿನಿಧಿಗಳು ಸರ್ಕಾರದ ಬೆನ್ನುಹತ್ತಿ ಮಾಡಬೇಕಿದೆ.

ಇದೆಲ್ಲಕ್ಕಿಂತಲೂ ಮಿಗಿಲಾಗಿ ಗಡಿನಾಡ ಹುಲಿಕುಂಟೆ ಹೋಬಳಿಗೆ ಕಾಯಂ ಶಿಕ್ಷಕರ ವರ್ಗಾವಣೆ ಸಂಬಂಧ ಸರ್ಕಾರದಿಂದ ಶಾಸಕರು ಹೊಸ ಆದೇಶ ತಂದು ಅಗತ್ಯ ಶಿಕ್ಷಕರನ್ನು ಈ ಕೂಡಲೇ ನೇಮಕ ಮಾಡಿಕೊಳ್ಳದೇ ಹೋದರೆ ಶಾಸಕರು ತಮ್ಮದೇ ಸ್ವಂತ ಹೋಬಳಿಯ ಶಾಲಾ ಮಕ್ಕಳ ಪೋಷಕರ ಶಾಪಕ್ಕೆ ಗುರುಯಾಗಬೇಕಾಗುತ್ತದೆ. ಏಕೆಂದರೆ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಈ ಹೋಬಳಿಯ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಾಗಿಬಿಡುತ್ತಾರೆ.

ತಾಲ್ಲೂಕಿನ ಬಹುತೇಕ ಶಾಲೆಗಳಿಗೆ ಮೇಲಾಧಿಕಾರಿಗಳು ಭೇಟಿ ನೀಡುವುದೇ ಕಷ್ಟವಾಗಿದೆ. ಪ್ರತೀ ತಿಂಗಳಿಗೊಮ್ಮೆ ಅನುಷ್ಠಾನಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆ ಮತ್ತು ಅ ಶಾಲೆಯ ಸಮಸ್ಯೆಯ ಬಗ್ಗೆ ಗಮನಹರಿಸಬೇಕು ಆದರೆ ಅನುಷ್ಠಾನಾಧಿಕಾರಿಗಳೆನಿಸಿಕೊಂಡವರು ನಗರಲ್ಲಿಯೇ ಬೇರು ಇಟ್ಟುಕೊಂಡಿರುತ್ತಾರೆಂಬ ಆರೋಪಗಳಿವೆ.

ಗಡಿಭಾಗವಾದ ಈ ಹುಲಿಕುಂಟೆ ಹೋಬಳಿಯ ಶಾಲೆಗಳು ಖಾಯಂ ಶಿಕ್ಷಕರಿಲ್ಲದೆ ಪ್ರತಿ ವರ್ಷವೂ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕುಂದುಂಟಾಗುತ್ತಿದ್ದರೂ ಕ್ಷೇತ್ರದ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಕೂಡಾ ಈ ಹೋಬಳಿಯ ಮೂಲ ಸಮಸ್ಯೆಯತ್ತ ಕಣ್ಣಾಯಿಸದೇ ಇರುವುದು ಸೋಜಿಗದ ಸಂಗತಿಯೇ ಸರಿ.

10 ಮಂದಿ ಶಾಲಾ ಮಕ್ಕಳಿರುವ ಶಾಲೆಗೆ ಒಬ್ಬರು ಶಿಕ್ಷಕರು, 11ಕ್ಕಿಂತಲೂ ಹೆಚ್ಚು ಮಕ್ಕಳಿರುವ ಶಾಲೆಗೆ ಇಬ್ಬರು ಶಿಕ್ಷಕರಿರುವುದು ನಿಯಮವಷ್ಟೆ ಆದರೆ 10ಕ್ಕಿಂತಲೂ ಕಡಿಮೆ ಇರುವ ಶಾಲೆಗಳಲ್ಲಿ ಇಬ್ಬರು ಶಿಕ್ಷಕರು ನಗರದ ಕೆಲ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಇಂತಹ ಶಿಕ್ಷಕರನ್ನು ನಿಯೋಜನೆ ಮಾಡುವ ಕೆಲಸಕ್ಕೆ ಅಧಿಕಾರಿಗಳು ಎಳ್ಳೂ ನೀರು ಬಿಟ್ಟಿದ್ದಾರೆ ಎನ್ನಲಾಗಿದೆ.

ತಾಲ್ಲೂಕಿನ ಅಂಗವಿಕಲ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಸಲುವಾಗಿ ಬಿ.ಐ.ಇ.ಆರ್.ಟಿ. ಯೋಜನೆಯಡಿಯಲ್ಲಿ ಈ ಹಿಂದೆ ನಾಲ್ಕು ಮಂದಿ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಈ ಪೈಕಿ 3 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು ಈ ಮೂವರ ಪೈಕಿ ಓರ್ವ ಶಿಕ್ಷಕರನ್ನು ಉಪ ನಿರ್ದೇಶಕರ ಸೂಚನೆಯ ಮೇರೆಗೆ ಮಧುಗಿರಿ ತಾಲ್ಲೂಕಿಗೆ ನಿಯೋಜನೆ ಮಾಡಲಾಗಿದೆ.

ಉಳಿದ ಇಬ್ಬರು ಶಿಕ್ಷಕರ ಪೈಕಿ ಒಬ್ಬರನ್ನು ಸಿ.ಆರ್.ಪಿ.ಯಾಗಿ ನಿಯೋಜನೆ ಮಾಡಲಾಗಿದ್ದು ಈಗ ಅಂಗವಿಕಲ ಮಕ್ಕಳಿಗೆ ಬೋಧಿಸಲು ಕೇವಲ ಒಬ್ಬ ಶಿಕ್ಷಕರು ಮಾತ್ರಾ ನಿಯೋಜನೆಗೊಂಡಿದ್ದು ಇವರು ಯಾವ ಅಂಗವಿಕಲ ಮಕ್ಕಳಿಗೆ ಬೋಧಿಸುತ್ತಿದ್ದಾರೆಂಬ ಮಾಹಿತಿಯನ್ನು ಶಿಕ್ಷಣ ಇಲಾಖೆಯೇ ಹೇಳಬೇಕಿದೆ.

ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಕಾಣುವ ಶಿಕ್ಷಕರ ಸಮಸ್ಯೆಯ ಕೊರತೆ ಒಂದು ಕಡೆಯಾದರೆ ಇನ್ನು ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಿಗಿ ಕ್ರಮಗಳ ದೌರ್ಬಲ್ಯದಿಂದಾಗಿ ತಾಲ್ಲೂಕಿನ ಬಹುತೇಕ ಶಿಕ್ಷಕರು ಶಾಲೆಗಳಿಗೆ ತೆರಳಿ ಸೀಮೆಸುಣ್ಣ ಹಿಡಿದು ಪಾಠ ಮಾಡಲು ಹೋಗದೆ ಇಲಾಖೆಯ ಸುತ್ತಲೂ ಗಿರಕಿ ಹೊಡೆದುಕೊಂಡಿರುವುದು ಅತ್ಯಂತ ಪ್ರಾಮಾಣಿಕ ಶಿಕ್ಷಕರ ಕರುಳನ್ನು ಕಿವುಚುವಂತೆ ಮಾಡುತ್ತಿದೆ.

ಇಲ್ಲಿನ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಅನೇಕ ಬಿ.ಇ.ಓ.ಗಳು ಇಲಾಖೆಯ ಸುತ್ತಲೂ ಗಿರಕಿ ಹೊಡೆದುಕೊಂಡಿರುವವರಿಗೆ ಕಡಿವಾಣ ಹಾಕಿ ಶಾಲೆಯ ವೇಳೆಯಲ್ಲಿ ನಗರದಲ್ಲಿ ಕಂಡ ಶಿಕ್ಷಕರ ಶಾಲೆಗೆ ದಿಢೀರ್ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡಿದ್ದು, ಶಾಲೆಗೆ ಗೈರು ಹಾಜರಾಗಿರುವ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದ ಪ್ರಕರಣಗಳೂ ಕೂಡಾ ಈ ಹಿಂದೆ ಇದ್ದವು.

ಆದರೆ ಈಗ ಕೆಲ ಶಿಕ್ಷಕರು ಶಾಲೆಗೆ ಹೋಗಿ ಹಾಜರಾತಿ ತೋರಿಸಿಕೊಂಡು ನಗರದ ಕಡೆ ಬಂದವರು ಇಲಾಖೆಯ ಸುತ್ತಮುತ್ತಲೂ ಓಡಾಡಿಕೊಂಡಿರುವುದು ಸಹಜವಾಗಿದೆ. ಇನ್ನೂ ಕೆಲ ಶಿಕ್ಷಕರು ಶಾಲೆಯ ವೇಳೆಯಲ್ಲಿಯೂ ತಮ್ಮದೇ ಖಾಸಗಿ ವೃತ್ತಿಯಲ್ಲಿ ತೊಡಗಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಈ ರೀತಿ ಕಛೇರಿಯ ಬಳಿಯೇ ಓಡಾಡಿಕೊಂಡಿರುವ ಶಿಕ್ಷಕರನ್ನು ಇಲಾಖೆಯ ಅಧಿಕಾರಿಗಳು ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿಯೋ ದೇವರೇಬಲ್ಲ….!.

ತಾಲ್ಲೂಕಿನಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದವರಿಗೆ 6 ತಿಂಗಳಿಂದ ಒಂದು ವರ್ಷದೊಳಗೆ ಮುಖ್ಯ ಶಿಕ್ಷಕರಾಗಿ ಪದನೋನ್ನತಿ ನೀಡಬೇಕೆಂಬ ನಿಯಮಗಳಿದ್ದರೂ ಕಳೆದ ಹಲವು ವರ್ಷಗಳಿಂದಲೂ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ ಅನೇಕ ಶಿಕ್ಷಕರು ಪದನೋನ್ನತಿಯನ್ನು ಕಾಣದೆ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುತ್ತಿದ್ದಾರೆ.

ಅಂತಹ ಅನೇಕ ಶಿಕ್ಷಕರು ಉಪ ನಿರ್ದೇಶಕರ ಕಛೇರಿಯ ಬೇಜವಾಬ್ದಾರಿಯಿಂದಾಗಿ ಇದೀಗ ನಿವೃತ್ತಿ ಹೊಂದುವ ಹಂತವನ್ನೂ ತಲುಪಿರುವುದು ವಿಷಾಧದದ ಸಂಗತಿಯೇ ಸರಿ.

ನಿರಂತರವಾಗಿ ಮಕ್ಕಳಿಗೆ ಬೋಧನೆ ಮಾಡಿ ನಿವೃತ್ತಿಗೊಂಡ ನಂತರ ಪಿಂಚಣಿಗಾಗಿ ಇಲಾಖೆಗೆ ಅರ್ಜಿ ಹಾಕಿದ ಅನೇಕ ನಿವೃತ್ತ ಶಿಕ್ಷಕರು ಪಿಂಚಣಿಗಾಗಿ ಬಿ.ಇ.ಓ. ಇಲಾಖೆಯನ್ನು ಎಡತಾಕುತ್ತಲೇ ಇದ್ದಾರೆ. ವರ್ಷಗಳೇ ಉರುಳಿದರೂ ಅನೇಕ ಮಂದಿ ಪಿಂಚಣಿ ಪಡೆಯಲು ಸಾದ್ಯವಾಗದೆ ಸಂಕಟಪಡುವಂತಾಗಿದೆ.

ನಿವೃತ್ತರಾದ ಯಾವುದೇ ಶಿಕ್ಷಕರ ಕಡತಗಳನ್ನು ಸ್ಥಳೀಯ ಶಿಕ್ಷಣ ಇಲಾಖೆಯಿಂದ ಶಿಕ್ಷಕರು ನಿವೃತ್ತಿಗೊಳ್ಳುವ ಮೂರು ತಿಂಗಳ ಮುಂಚೆಯೇ ಸದರಿ ಶಿಕ್ಷಕರ ಕಡತಗಳನ್ನು ಮಹಾಲೇಖಪಾಲಕರ ಕಛೇರಿಗೆ ಕಳುಹಿಸಿಕೊಡಬೇಕೆಂಬ ನಿಯಮವಿದೆ. ಆದರೆ ನಿವೃತ್ತಿಗೊಂಡು ವರ್ಷಗಳೇ ಉರುಳಿದರೂ ಸ್ಥಳೀಯ ಇಲಾಖೆಯಿಂದಲೇ ನಿವೃತ್ತ ಶಿಕ್ಷಕರ ಕಡತಗಳು ಮುಂದಕ್ಕೆ ಚಲಿಸದೆ ದಿಮ್ಮಗೆ ಕುಂತುಬಿಟ್ಟಿವೆ.

ಸಂಬಂಧಿಸಿದ ನಿವೃತ್ತ ಶಿಕ್ಷಕರು ಕಛೇರಿಗೆ ಪದೇ ಪದೇ ಎಡತಾಕಿ, ಅಲೆದಾಡಿ ಚಪ್ಪಲಿ ಸವೆಸಿಕೊಂಡರೂ ಪಿಂಚಣಿಯ ಕಡತಗಳನ್ನು ಮಹಾಲೇಖ ಪಾಲಕರ ಕಛೇರಿಗೆ ಕಳುಹಿಸಿಕೊಳ್ಳುವಷ್ಟರ ಹೊತ್ತಿಗೆ ಸಾಕು ಸಾಕಾಗಿ ಹೋಗಿರುತ್ತದೆ.

ನಿವೃತ್ತಿಯ ಕಿಸೆಯೊಳಗಿನ ಒಂದಿಷ್ಟು ಕಾಸು ಖರ್ಚಾಗುವವರೆಗೂ ದಿಮ್ಮಗೆ ಕೂತ ಕಡತಗಳಿಗೆ ಜೀವ ಬರುವುದೇ ಇಲ್ಲ. ಅದೆಷ್ಟು ನಿವೃತ್ತರ ಕಡತಗಳು ಬಾಕಿ ಇವೆಯೋ ಸಂಬಂಧಿಸಿದ ಅಧಿಕಾರಿಗಳೇ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಿದೆ.

ಒಟ್ಟಾರೆ ತಾಲ್ಲೂಕಿನಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆಯು ಸಂಪೂರ್ಣವಾಗಿ ನೊಗ ತಪ್ಪಿ ನಡೆಯುವ ಮುನ್ನವೇ ಕ್ಷೇತ್ರದ ಶಾಸಕರು, ವಿ.ಪ. ಸದಸ್ಯರು ಹಾಗೂ ಸಂಸದರು ಯಾವ ರೀತಿಯ ಬಿಗಿ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಿದೆ.

ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದವರಿಗೆ 6 ತಿಂಗಳಿಂದ ಒಂದು ವರ್ಷದೊಳಗೆ ಮುಖ್ಯ ಶಿಕ್ಷಕರಾಗಿ ಪದನೋನ್ನತಿ ನೀಡಬೇಕೆಂಬ ನಿಯಮಗಳಿದ್ದರೂ ಕಳೆದ ಹಲವು ವರ್ಷಗಳಿಂದಲೂ

ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿದ ಅನೇಕ ಶಿಕ್ಷಕರು ಪದನೋನ್ನತಿಯನ್ನು ಕಾಣದೆ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಅಂತಹ ಅನೇಕ ಶಿಕ್ಷಕರು ಉಪ ನಿರ್ದೇಶಕರ ಕಛೇರಿಯ ಬೇಜವಾಬ್ದಾರಿಯಿಂದಾಗಿ ಇದೀಗ ನಿವೃತ್ತಿ ಹೊಂದುವ ಹಂತವನ್ನೂ ತಲುಪಿರುವುದು ವಿಷಾಧದದ ಸಂಗತಿಯೇ ಸರಿ.

ನಿವೃತ್ತರಾದ ಯಾವುದೇ ಶಿಕ್ಷಕರ ಕಡತಗಳನ್ನು ಸ್ಥಳೀಯ ಶಿಕ್ಷಣ ಇಲಾಖೆಯಿಂದ ನಿವೃತ್ತಿಗೊಳ್ಳುವ ಮೂರು ತಿಂಗಳ ಮುಂಚೆಯೇ ಸದರಿ ಶಿಕ್ಷಕರ ಕಡತಗಳನ್ನು ಮಹಾಲೇಖಪಾಲಕರ ಕಛೇರಿಗೆ ಕಳುಹಿಸಿಕೊಡಬೇಕೆಂಬ ನಿಯಮವಿದೆ.

ಆದರೆ ನಿವೃತ್ತಿಗೊಂಡು ವರ್ಷಗಳೇ ಉರುಳಿದರೂ ಸ್ಥಳೀಯ ಇಲಾಖೆಯಿಂದಲೇ ನಿವೃತ್ತ ಶಿಕ್ಷಕರ ಕಡತಗಳು ಮುಂದಕ್ಕೆ ಚಲಿಸದೆ ದಿಮ್ಮಗೆ ಕುಂತುಬಿಟ್ಟಿವೆ.

ಗಡಿನಾಡ ಹುಲಿಕುಂಟೆ ಹೋಬಳಿಗೆ ಕಾಯಂ ಶಿಕ್ಷಕರ ವರ್ಗಾವಣೆ ಸಂಬಂಧ ಸರ್ಕಾರದಿಂದ ಶಾಸಕರು ಹೊಸ ಆದೇಶ ತಂದು ಅಗತ್ಯ ಶಿಕ್ಷಕರನ್ನು ಈ ಕೂಡಲೇ ನೇಮಕ ಮಾಡಿಕೊಳ್ಳದೇ ಹೋದರೆ ಶಾಸಕರು ತಮ್ಮದೇ ಸ್ವಂತ ಹೋಬಳಿಯ ಶಾಲಾ ಮಕ್ಕಳ ಪೋಷಕರ ಶಾಪಕ್ಕೆ ಗುರುಯಾಗಬೇಕಾಗುತ್ತದೆ.

ಏಕೆಂದರೆ ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಈ ಹೋಬಳಿಯ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲವಾಗಿಬಿಡುತ್ತಾರೆ.

 

–  ಬರಗೂರು ವಿರೂಪಾಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link