ಪಾವಗಡ:
ಪಾವಗಡ-ಕಲ್ಯಾಣದುರ್ಗ ಮುಖ್ಯ ರಸ್ತೆಯಲ್ಲಿರುವ ಪ್ರಯಾಣಿಕರ ತಂಗುದಾಣಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಪಾವಗಡ – ಕಲ್ಯಾಣದುರ್ಗ ರಸ್ತೆಯನ್ನು ಕೆ-ಶಿಪ್ ಇಲಾಖೆ ವತಿಯಿಂದ ಕೊಟ್ಯಂತರ ರೂ.ಗಳನ್ನು ವ್ಯಯಿಸಿ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳನ್ನು ನಿರ್ಮಾಣ ಮಾಡಲಾಗಿದೆ.
ಆದರೆ ಅವುಗಳಿಂದ ಪ್ರಯಾಣಿಕರಿಗೆ ಲವಲೇಶವೂ ಉಪಯೋಗವಿಲ್ಲದಾಗಿದೆ. ಬದಲಾಗಿ ಇವುಗಳು ಮದ್ಯದಂಗಡಿಗಳ ಪಾಲಾಗಿದ್ದು, ಇವುಗಳನ್ನು ಮದ್ಯದಂಗಡಿಗಳಿಂದ ಮುಕ್ತಿಗೊಳಿಸಿ ಪ್ರಯಾಣಿಕರಿಗೆ ನೀಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ.
ಪಾವಗಡ-ಕಲ್ಯಾಣದುರ್ಗ ಮಾರ್ಗದ ವೀರಮ್ಮನಹಳ್ಳಿ ಬಸ್ ನಿಲ್ದಾಣದಲ್ಲಿರುವ ತಂಗುದಾಣವನ್ನು ಅಂಗಡಿ ಮಾಲೀಕರು ಅತಿಕ್ರಮಿಸಿಕೊಂಡು ಸಾರ್ವಜನಿಕರು ಕೂರಲು ಕೂಡ ಅವಕಾಶ ಇಲ್ಲವಾಗಿದ್ದು, ಪ್ರಯಾಣಿಕರಿಗೆ ಅನನುಕೂಲವಾಗಿದೆ. ತಂಗುದಾಣದ ಮುಂದೆಯೆ ಅಂಗಡಿ ನಿರ್ಮಿಸಿಕೊಂಡು, ಪ್ರಯಾಣಿಕರ ತಂಗುದಾಣವನ್ನು ಅಂಗಡಿ ವ್ಯಾಪಾರಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ.
ಸಂಬಂಧÀಪಟ್ಟವರು ಅಂಗಡಿಯನ್ನು ತೆರವುಗೊಳಿಸಲಿ ಇಲ್ಲವೆ ಅಂಗಡಿ ಮಾಲೀಕರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಲ್ಯಾಣದುರ್ಗ ಮಾರ್ಗದಲ್ಲಿ ಹಲವು ಪ್ರಯಾಣಿಕರ ತಂಗುದಾಣಗಳು ಮದ್ಯ ಮಾರಾಟದ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಕೂಡಲೆ ಅಂತಹ ಅಂಗಡಿ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅಂಗಡಿ ತೆರವು ಮಾಡುವಂತೆ ಖುದ್ದು ನಾವೇ ಸ್ಥಳ ಪರಿಶೀಲನೆ ನಡೆಸಿ ಸೂಚನೆ ನೀಡಿದ್ದು, ಇದುವರೆಗೂ ಅಂಗಡಿ ತೆರವು ಮಾಡಿಲ್ಲ. ಪೋಲೀಸ್ ಇಲಾಖೆಗೆ ಅಂಗಡಿ ತೆರವು ಮಾಡಿಸುವಂತೆ ಪತ್ರದ ಮೂಲಕ ತಿಳಿಸಲಾಗಿದೆ. ಆದರೆ ಇಂದಿಗೂ ತೆರವು ಮಾಡಿಲ್ಲ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ.
-ಅನಿಲ್‍ಕುಮಾರ್, ಪಿಡಬ್ಯೂಡಿ ಎಇಇ, ಪಾವಗಡ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ