ಉಕ್ರೇನ್:
ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಪಡಿಸಿಕೊಳ್ಳಲು ರಷ್ಯಾ ಸೇನೆ ನಿರಂತರವಾಗಿ ದಾಳಿ ನಡೆಸುತ್ತಿದೆ. ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸುವ ಸಲುವಾಗಿ ಉಕ್ರೇನ್‌ನ ಜನಸಾಮಾನ್ಯರೂ ಸೇನೆಯೊಂದಿಗೆ ಸೇರಿ ಹೋರಾಟ ನಡೆಸುತ್ತಿದ್ದಾರೆ.
ಇದೀಗ ಉಕ್ರೇನ್‌ನ ಬ್ಯೂಟಿ ಕ್ವೀನ್, ‘ಮಿಸ್ ಗ್ರಾಂಡ್ ಉಕ್ರೇನ್’ ಸ್ಪರ್ಧೆ ವಿಜೇತೆ ಅನಸ್ಟಾಸಿಯಾ ಲೆನ್ನಾ ಅವರು ರಷ್ಯಾ ಸೇನೆ ವಿರುದ್ಧ ಸೆಣಸಲು ಉಕ್ರೇನ್ ಯೋಧರೊಂದಿಗೆ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಶಸ್ತ್ರಸಜ್ಜಿತ ಸೈನಿಕರು ರಸ್ತೆಗಳನ್ನು ಮುಚ್ಚುತ್ತಿರುವ ಚಿತ್ರವೊಂದರನ್ನು ಶನಿವಾರ ಹಂಚಿಕೊಂಡಿದ್ದ ಅವರು, ‘ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನ್ ಗಡಿ ದಾಟಿ ಬರುವ ಪ್ರತಿಯೊಬ್ಬರೂ ಹತ್ಯೆಯಾಗಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು, ಉಕ್ರೇನ್ ಸಂಸತ್ ಸದಸ್ಯೆ ಕಿರಾ ರುಡಿಕ್ ಅವರು ಸೇನೆಯೊಂದಿಗೆ ಕೈಜೋಡಿಸಿದ್ದರು. ಗನ್ ಹಿಡಿದ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, ‘ಮಹಿಳೆಯರೂ ಪುರುಷರಂತೆಯೇ ನಮ್ಮ ನೆಲವನ್ನು ಕಾಯಲಿದ್ದಾರೆ’ ಎಂದು ಬರೆದುಕೊಂಡಿದ್ದರು.
ಉಕ್ರೇನ್‌ನ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್‌ಸ್ಕಿ ಅವರೂ ಯೋಧರೊಂದಿಗೆ ಸೇರಿ ಹೋರಾಟ ನಡೆಸುತ್ತಿದ್ದಾರೆ. ಇದು, ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್ ಸೇನೆ ಹಾಗೂ ನಾಗರಿಕರಿಗೆ ಸ್ಫೂರ್ತಿ ತುಂಬಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ