ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬಂಡವಾಳ ಹಾಕಿ

ತುಮಕೂರು:

ಹಿಂದೂ ಸಾದರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕೆಎನ್‍ಆರ್ ಕಿವಿಮಾತು

ವಿದ್ಯೆ ಸಾಧಕರ ಸ್ವತ್ತು- ಸೋಮಾರಿಗಳಿಗೆ ವಿದ್ಯೆ ಒಲಿಯುವುದಿಲ್ಲ, ಮಕ್ಕಳ ಶಿಕ್ಷಣಕ್ಕೆ ಮಾಡುವ ವೆಚ್ಚವನ್ನು ವ್ಯಯ ಎಂದು ತಿಳಿಯದೇ ಅವರ ಉತ್ತಮ ಭವಿಷ್ಯಕ್ಕೆ ಹೂಡುವ ಬಂಡವಾಳ ಎಂದು ಭಾವಿಸಿ ಸೌಲಭ್ಯಗಳನ್ನು ಕಲ್ಪಿಸಿ, ಉತ್ತೇಜಿಸಿ ಎಂದು ಮಧುಗಿರಿ ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೆ.ಎನ್.ರಾಜಣ್ಣನವರು ಪೋಷಕರಿಗೆ ಕಿವಿಮಾತು ಹೇಳಿದರು.

ನಗರದ ಬಟವಾಡಿ ವೃತ್ತದಲ್ಲಿ ಲಕ್ಷ್ಮೀನರಸಿಂಹಯ್ಯ ಸ್ಮಾರಕ ಭವನದಲ್ಲಿರುವ ಹಿಂದೂ ಸಾದರ ಸಮುದಾಯ ಭವನದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಟ್ರಸ್ಟ್ ವತಿಯಿಂದ ತುಮಕೂರು ಜಿಲ್ಲೆಯ ಹಿಂದೂ ಸಾದರ ಸಮುದಾಯದ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹುಟ್ಟುವ ಮಕ್ಕಳ ಬುದ್ಧಿ ಮತ್ತೆ ಏಕರೂಪವಾಗಿದ್ದು ಬೆಳೆಯುವ ಪರಿಸರ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ, ಒದಗಿಸುವ ಪೋಷಣೆ, ಶಿಕ್ಷಣದ ಗುಣಮಟ್ಟ ಆಧರಿಸಿ ಪ್ರತಿಭೆ ಬೆಳಕಿಗೆ ಬರುತ್ತದೆಯಾದ್ದರಿಂದ ಎಲ್ಲ ಪೋಷಕರೂ ಮಕ್ಕಳಿಗೆ ಸೂಕ್ತ ಶಿಕ್ಷಣ ಕೊಡಿಸಲು ಶ್ರಮಿಸಬೇಕು ಎಂದರು ಕೆಎನ್‍ಆರ್.ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮೂಲಕ ಸ್ವಾಮಿ ವಿವೇಕಾನಂದ ಟ್ರಸ್ಟ್ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ ಎಂದು ಕೆ.ಎನ್.ರಾಜಣ್ಣನವರು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎ.ಡಿ.ಬಲರಾಮಯ್ಯನವರು ಮಾತನಾಡಿ, ರಷ್ಯಾ ದಾಳಿಯಿಂದಾಗಿ ಉಕ್ರೇನ್‍ನಂಥಾ ಪುಟ್ಟ ದೇಶದಲ್ಲೂ ಕರ್ನಾಟಕದ ಹಾಗೂ ಭಾರತದ ಸಾವಿರಾರು ವಿದ್ಯಾರ್ಥಿಗಳು ವೈದ್ಯಕೀಯದಂಥ ಮಹತ್ವದ ಶಿಕ್ಷಣ ಪಡೆಯುತ್ತಿದ್ದಾರೆಂಬ ಸಂಗತಿ ಬೆಳಕಿಗೆ ಬಂತು, ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈಗಿನ ಪೀಳಿಗೆಯ ಮಕ್ಕಳು ಹೆಚ್ಚು ಜ್ಞಾನವನ್ನು ಪಡೆಯಲು ಸಾಧ್ಯವಾಗಿದ್ದು ಸಮುದಾಯದ 93 ಮಕ್ಕಳನ್ನು ಪುರಸ್ಕರಿಸಲಾಗುತ್ತಿದೆ, ಇವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳೇ ಇದ್ದಾರೆ ಎಂದರು.

ಮಧುಗಿರಿ ಕಾರ್ಡಿಯಲ್ ಇಂಗ್ಲಿಷ್ ಶಾಲೆ ಕಾರ್ಯದರ್ಶಿ ಹಾಗೂ ಅಲ್ಲಿನ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ(ರಾಜು) ಮಾತನಾಡಿ, ಅನ್ಯ ಸಮುದಾಯದವರಿಗೆ ಐಎಎಸ್ ಹಾಗೂ ಐಪಿಎಸ್‍ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಂಸ್ಥೆಗಳನ್ನು ನಡೆಸುತ್ತಿದ್ದು ನಮ್ಮ ಸಮುದಾಯಕ್ಕೂ ಅಂಥ ವ್ಯವಸ್ಥೆ ಆಗಬೇಕು ಎಂದರು.

ತುಮಕೂರು ತಾಲೂಕು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಣ್ಣೇನಹಳ್ಳಿ ಶಿವಕುಮಾರ್ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳ ಪೈಕಿ ವಿದ್ಯಾರ್ಥಿನಿಯರ ನಿಲಯದಲ್ಲಿ 60 ಮಂದಿ ಇದ್ದು ಸ್ಥಳದ ಕೊರತೆಯಿಂದ ಇನ್ನೂ ಐವತ್ತು ಮಂದಿಗೆ ಪ್ರವೇಶ ನಿರಾಕರಿಸಲಾಗಿದೆ,

ಕ್ಯಾತಸಂದ್ರದಲ್ಲಿ 10 ಸಾವಿರ ಚದರಡಿಯ ನಿವೇಶನವನ್ನು ಟೂಡಾ ಮಂಜೂರು ಮಾಡಿದ್ದು, ಮುಂದೆ ಆ ನಿವೇಶನದಲ್ಲಿ ವಿಸ್ತಾರವಾದ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು ಎಂದರು.

ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಮೂರ್ತಿಯವರು ಸ್ವಾಗತಿಸಿ, ಪ್ರಸ್ತಾವನಾ ಭಾಷಣ ಮಾಡಿದರು. ಉಪನ್ಯಾಸಕ ಬಿ.ಎನ್.ನಾಗರಾಜು ನಿರೂಪಿಸಿ, ವಂದಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ತುಮಕೂರು ಶಾಖೆಯ ಗೌರವಾಧ್ಯಕ್ಷರಾದ ಉದ್ಯಮಿ ಹಾಗೂ ದಾನಿ ಸಿ.ರವಿಶಂಕರ್, ಟ್ರಸ್ಟ್ ಗೌರವಾಧ್ಯಕ್ಷ ಬಿ.ಆರ್.ರಮೇಶ್,

ಟ್ರಸ್ಟ್ ನಿರ್ದೇಶಕರು ಹಾಗೂ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಉಪಾಧ್ಯಕ್ಷರಾದ ಬಿ.ಹೆಚ್.ನಂಜುಂಡಯ್ಯ, ನಿರ್ದೇಶಕರಾದ ರಾಮಚಂದ್ರಪ್ಪ, ಶ್ರೀಹರ್ಷ, ಕೆ.ಜಿ.ಶಿವಕುಮಾರ್, ತಿಮ್ಮಾರೆಡ್ಡಿ, ನಂಜೇಗೌಡರು, ಪರಮಹಂಸ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್ (ಡೆಲ್ಟಾ) ಹಾಗೂ ಉಪಾಧ್ಯಕ್ಷ ರವಿಕೀರ್ತಿ ವೇದಿಕೆಯಲ್ಲಿದ್ದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link