ಪೊಲೀಸರ ಸರ್ಪಗಾವಲಿನಲ್ಲಿ ನಡೆದ ಶಿರಾ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ

ಶಿರಾ:

ಅಧ್ಯಕ್ಷರಾಗಿ ಜೆಡಿಎಸ್‍ನ ಆಂಜಿನಪ್ಪ, ಉಪಾಧ್ಯಕ್ಷರಾಗಿ ಬಿಜೆಪಿಯ ಅಂಬುಜಾ ಆಯ್ಕೆ

ಅತ್ಯಂತ ಕುತೂಹಲವನ್ನು ಕೆರಳಿಸುವ ಮೂಲಕ ಚುನಾವಣೆಯ ಅಂತ್ಯದವರೆಗೂ ಉಸಿರುಗಟ್ಟಿಸುವಂತಹ ವಾತಾವರಣದಲ್ಲಿ ಅದರಲ್ಲೂ ಪೊಲೀಸರ ಸರ್ಪಗಾವಲಿನಲ್ಲಿ ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಜೆ.ಡಿ.ಎಸ್. ಪಕ್ಷದ ಆಂಜಿನಪ್ಪ ಮತ್ತು ಉಪಾಧ್ಯಕ್ಷರಾಗಿ ಬಿ.ಜೆ.ಪಿ. ಪಕ್ಷದ ಅಂಬುಜಾ ನಟರಾಜ್ ಆಯ್ಕೆಯಾದರು.

ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷದ ಆಂಜಿನಪ್ಪ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕಾಗಿ ಪೂಜಾ ನಾಮಪತ್ರ ಸಲ್ಲಿಸಿದರು. ಸಾಮಾನ್ಯ ವರ್ಗಕ್ಕೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಉಮಾ ವಿಜಯರಾಜ್ ಹಾಗೂ ಅಂಬುಜಾ ನಟರಾಜ್ ಈ ಇಬ್ಬರು ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷದಿಂದ ಪೂಜಾ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸಮ್ರೀನ್ ಖಾನಂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಪೂಜಾ ಹಾಗೂ ಜೆಡಿಎಸ್ ಪಕ್ಷದ ಆಂಜಿನಪ್ಪ ಅಧ್ಯಕ್ಷ ಸ್ಥಾನದ ಸ್ಪರ್ಧಾಳುಗಳಾಗಿ ಕಣದಲ್ಲಿ ಉಳಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ಜೆ.ಪಿ.ಯ ಉಮಾ ಅವರು ಅಂತಿಮ ಕ್ಷಣದಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ತಮ್ಮ ನಾಮಪತ್ರವನ್ನು ಹಿಂಪಡೆದ ಪರಿಣಾಮ ಅಂಬುಜ ಉಪಾಧ್ಯಕ್ಷ ಸ್ಥಾನಕ್ಕೆ ಕಣದಲ್ಲಿ ಉಳಿದರು.

30 ವಾರ್ಡುಗಳ ಸದಸ್ಯರೊಟ್ಟಿಗೆ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ, ಸಂಸದ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿ.ಪ. ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಚಿದಾನಂದ್ ಎಂ.ಗೌಡರ ಮತವೂ ಸೇರಿದಂತೆ ಒಟ್ಟು 34 ಮತದಾರರು ಕಣದಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕಿತ್ತು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮತದಾನ ನಡೆಸಲಾಗಿ ಸದರಿ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಕೂಟದಿಂದ ಅಭ್ಯರ್ಥಿಯಾಗಿ ಉಳಿದಿದ್ದ ಜೆಡಿಎಸ್ ಪಕ್ಷದ ಅಂಜಿನಪ್ಪ 18 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಪೂಜಾ 16 ಮತಗಳನ್ನು ಪಡೆದರು. 18 ಮತಗಳನ್ನು ಪಡೆದ ಜೆಡಿಎಸ್ ಪಕ್ಷದ ಆಂಜಿನಪ್ಪ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಉಪಾಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷದ ಸಮ್ರಿನ್ ಖಾನಂ ಹಾಗೂ ಬಿಜೆಪಿಯ ಅಂಬುಜಾ ನಟರಾಜ್ ಅವರಿಗೆ ಮತದಾನ ನಡೆಸಲಾಗಿ ಅಂಬುಜ 18 ಮತಗಳನ್ನು ಪಡೆದರೆ, ಸಮ್ರಿನ್ ಖಾನಂ 16 ಮತಗಳನ್ನು ಪಡೆದರು. 18 ಮತಗಳನ್ನು ಪಡೆದ ಬಿಜೆಪಿ ಪಕ್ಷದ ಅಂಬುಜಾ ನಟರಾಜ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನಗರಸಭೆಯ ಒಟ್ಟು 30 ಸದಸ್ಯರಿದ್ದ ಮತದಾರರ ಪೈಕಿ ಶಾಸಕ ರಾಜೇಶ್‍ಗೌಡ, ಸಂಸದ ನಾರಾಯಣಸ್ವಾಮಿ. ವಿಧಾನಪರಿಷತ್ ಸದಸ್ಯರಾದ ಚಿದಾನಂದಗೌಡ, ಕೆ.ಎ.ತಿಪ್ಪೇಸ್ವಾಮಿ ಅವರಿಗೂ ಕೂಡ ಮತದಾನ ಮಾಡುವ ಹಕ್ಕು ಲಭ್ಯವಾಗಿತ್ತು. ಇದರಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಬಂದಂತಾಯಿತು.ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಪಕ್ಷದ ಆಂಜನಪ್ಪ ಅಧ್ಯಕ್ಷರಾಗಿ, ಬಿಜೆಪಿ ಪಕ್ಷದ ಅಂಬುಜಾ ನಟರಾಜ್ ಉಪಾಧ್ಯಕ್ಷ ರಾಗಿ ಆಯ್ಕೆಗೊಂಡ ಕೂಡಲೆ ನಗರಸಭೆಯ ಮುಂಭಾಗ ನೆರೆದಿದ್ದ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಕಾರ್ಯಕರ್ತ-ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನಗರಸಭೆಯ ಅಧ್ಯಕ್ಷ ಸ್ಥಾನವು ಜೆ.ಡಿ.ಎಸ್. ಪಕ್ಷಕ್ಕೆ ಲಭಿಸುವುದನ್ನು ಖಚಿತ ಮಾಡಿಕೊಂಡಿದ್ದ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಅಂಜಿನಪ್ಪ, ತಾಲ್ಲೂಕು ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ ತಮ್ಮ ಬೆಂಬಲಿಗರೊಂದಿಗೆ ಮತದಾನ ಸ್ಥಳಕ್ಕೆ ಆಗಮಿಸಿದರು.

ನಗರಸಭೆಯ ಉಪಾಧ್ಯಕ್ಷ ಸ್ಥಾನವು ಬಿ.ಜೆ.ಪಿ. ಪರ ಲಭಿಸುವುದನ್ನು ಖಾತರಿ ಮಾಡಿಕೊಂಡಿದ್ದ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಆರ್.ಗೌಡ, ತೆಂಗು ಮತ್ತು ನಾರು ನಿಗಮ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್ ಸೇರಿದಂತೆ ಬಿ.ಜೆ.ಪಿ. ಪಕ್ಷದ ಅನೇಕ ಮುಖಂಡರು ಮತದಾನ ಸ್ಥಳದಲ್ಲಿ ಜಮಾಯಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯಲ್ಲಿ ಹೈಡ್ರಾಮಾ…..!

11 ಸ್ಥಾನಗಳನ್ನು ಪಡೆದು 5 ಮಂದಿ ಸ್ವತಂತ್ರ ಅಭ್ಯರ್ಥಿಗಳನ್ನು ಒಟ್ಟುಗೂಡಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡುವ ಉದ್ದೇಶದಿಂದ ಬಿ.ಜೆ.ಪಿ. ಪಕ್ಷದ ವರಿಷ್ಠರು 7 ಮಂದಿ ಸದಸ್ಯರು ಹಾಗೂ ಒಬ್ಬರು ವಿ.ಪ. ಸದಸ್ಯರ ಮತವನ್ನು ಹೊಂದಿದ್ದ ಜೆ.ಡಿ.ಎಸ್. ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತೀರ್ಮಾನಿಸಿದ್ದರು. ಈ ತಂತ್ರದ ಜೊತೆಗೆ ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ಉಳಿಸಿಕೊಳ್ಳಲು ಕ್ಷೇತ್ರದ ಬಿ.ಜೆ.ಪಿ. ಮುಖಂಡರು ತೀರ್ಮಾನಿಸಿಕೊಂಡಿದ್ದರು.ಉಮಾವಿಜಯರಾಜ್ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಬಹುದೆಂಬ ನಿರ್ಧಾರವೂ ಈ ಪಕ್ಷದಲ್ಲಿತ್ತು. ಆದರೆ ನಡೆದದ್ದೇ ಬೇರೆಯಾಯಿತು. ಉಪಾಧ್ಯಕ್ಷ ಸ್ಥಾನಕ್ಕಾಗಿ ಉಮಾ ವಿಜಯರಾಜ್ ಅಷ್ಟೇ ಅಲ್ಲದೆ, ಇದೇ ಬಿ.ಜೆ.ಪಿ. ಪಕ್ಷದ ಅಂಬುಜಾ ನಟರಾಜ್ ಕೂಡ ನಾಮಪತ್ರ ಸಲ್ಲಿಸಿದರು. ಒಂದೇ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದಾಗ ಆ ಪಕ್ಷದಲ್ಲಿನ ಮುಖಂಡರಿಗೂ ಅಚ್ಚರಿಯಾಗಿತ್ತು.

ಈ ನಡುವೆ ಮತದಾನದ ಸ್ಥಳವಾದ ನಗರಸಭೆಗೆ ಎಲ್ಲರೂ ಆಗಮಿಸುವ ಮುನ್ನವೇ ನಗರದ ಪ್ರವಾಸಿ ಮಂದಿರದಲ್ಲಿ ಶಾಸಕರು, ಸಂಸದರು, ವಿ.ಪ. ಸದಸ್ಯರ ಸಮ್ಮುಖದಲ್ಲಿಯೇ ಬಿ.ಜೆ.ಪಿ. ಕಾರ್ಯಕರ್ತರ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಹೈಡ್ರಾಮಾವೊಂದು ನಡೆದೇಬಿಟ್ಟಿತು.

ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಉಮಾ ವಿಜಯರಾಜ್ ಅವರ ಪತಿಗೆ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದ್ದೀರಿ, ಪಕ್ಷದಲ್ಲಿನ ಎಲ್ಲಾ ಸ್ಥಾನಮಾನಗಳು ಅವರಿಗೆ ಲಭ್ಯವಾಗಬೇಕೆ? ಬೇರೆ ಯಾರೂ ಈ ಪಕ್ಷದಲ್ಲಿ ಸ್ಥಾನಮಾನ ಹೊಂದಬಾರದೆ ಎಂದು ಆರೋಪಿಸಿದ ಪಕ್ಷದ ಕೆಲ ಮುಖಂಡರು ಶಾಸಕರನ್ನು ತರಾಟೆಗೂ ತೆಗೆದುಕೊಂಡರಲ್ಲದೆ ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು

ಅಂತಿಮವಾಗಿ ಉಪಾಧ್ಯಕ್ಷ ಸ್ಥಾನವನ್ನು ಅಂಬುಜಾ ನಟರಾಜ್ ಅವರಿಗೆ ನೀಡುವಂತೆ ಕೆಲ ಮುಖಂಡರು ಶಾಸಕರು, ಸಂಸದರಿಗೆ ಒತ್ತಡ ಹೇರಿದರು. ಈ ಎಲ್ಲಾ ಹೈಡ್ರಾಮಾ ನಡುವೆ ಉಮಾ ವಿಜಯರಾಜ್ ತಾವು ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯುವುದು ಅನಿವಾರ್ಯ ಆಯಿತು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link