ಪಾವಗಡ:
200 ಕ್ಕೂ ಹೆಚ್ಚು ಗರ್ಭಿಣಿಯರು ತಿಂಗಳ ಸ್ಕ್ಯಾನಿಂಗ್ಗಾಗಿ ಸ್ಕ್ಯಾನಿಂಗ್ ಕೇಂದ್ರದ ಮುಂದೆ ಬರೀ ಕಾದು ಕೂತಿದ್ದೇ ಬಂತು. ಆದರೆ ವೈದ್ಯರೆ ಇಲ್ಲ. ದಿನಗಳು ತುಂಬಿದ ಗರ್ಭಿಣಿಯರ ಪಾಡಂತು ಹೇಳತೀರದಾಗಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಕಂಡು ಬಂದ ಮನಕಲಕಿದ ದೃಶ್ಯ ಇದಾಗಿತ್ತು.
ಹೌದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಯಂ ರೇಡಿಯಾಲಜಿಸ್ಟ್ ಇಲ್ಲದ ಕಾರಣ, ಶಿರಾದಿಂದ ವಾರಕ್ಕೆ ಎರಡು ದಿನ ಮಂಗಳವಾರ ಮತ್ತು ಗುರುವಾರ ತಾಲ್ಲೂಕು ಕೇಂದ್ರದ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಆಗಮಿಸಿ, ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡುವ ದುಸ್ಥಿತಿ ಸಾರ್ವಜನಿಕ ಆಸ್ಪತ್ರೆಗೆ ಎದುರಾಗಿದೆ. ದಿನಕ್ಕೆ 40 ಗರ್ಭಿಣಿಯರಿಗೆ ಮಾತ್ರ ಸ್ಕ್ಯಾನಿಂಗ್ ಮಾಡಲು ಸಾಧ್ಯವಾಗಲಿದ್ದು, ಉಳಿದ ನೂರಾರು ಗರ್ಭಿಣಿಯರ ಪಾಡೇನು ಎಂಬುದಕ್ಕೆ ಇಲ್ಲಿ ಉತ್ತರವೇ ಇಲ್ಲವಾಗಿದೆ.
ಪಾವಗಡ ಸಾರ್ವನಿಕ ಆಸ್ಪತ್ರೆಗೆ ಮಂಗಳವಾರ ಮತ್ತು ಗುರುವಾರ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಟೋಕನ್ ಪಡೆದು ಸುಮಾರು 200 ಕ್ಕೂ ಹೆಚ್ಚು ಗರ್ಭಿಣಿಯರು ಬಂದು, ಬೆಳಗ್ಗೆ 9 ಗಂಟೆಯಿಂದಲೆ ಸರತಿ ಸಾಲಿನಲ್ಲಿ ಕಾದು ಕೂತಿದ್ದರು. ಸಕಾಲದಲ್ಲಿ ತಪಾಸಣೆ ಮತ್ತು ಫಲಿತಾಂಶ ತಿಲಿಯಲಾಗದ ಗರ್ಭಿಣಿಯರು ಜೀವ ಭಯದಿಂದ ಇರುವಂತಾಗಿದೆ. ಈ ಕುರಿತು ಗರ್ಭಿಣಿಯರ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪಳವಳ್ಳಿ ಗ್ರಾಮದ ಬಳಿಯ ತಾಂಡದ ವೆಂಕಟೇಶ್ ನಾಯ್ಕ್ ಮಾತನಾಡಿ, ಸಕಾಲದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆಗಳು ಗರ್ಭಿಣಿಯರಿಗೆ ಸಿಗದ ಪರಿಣಾಮ ಹಲವು ಮಕ್ಕಳು ಆಪೌಷ್ಟಿಕತೆ ಮತ್ತು ಅಂಗವಿಕಲತೆಯಿಂದ ಹುಟ್ಟುವಂತಾಗಿದೆ. ಜೊತೆಗೆ ತುಂಬು ಗರ್ಭಿಣಿಯರು ಕೂತಲ್ಲೆ ಗಂಟೆಗಟ್ಟಲೇ ಕೂತರೆ ಗರ್ಭದಲ್ಲಿನ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗಬಹುದು.
ಇಲ್ಲವೆ ಗರ್ಭಿಣಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹೆರಿಗೆ ಸಮಯದಲ್ಲಿ ಮಗು ಸಾಯುವ ಪರಿಸ್ಥಿತಿ ಕೂಡ ಉದ್ಭ್ಬವಿಸುತ್ತದೆ. ಇದರಿಂದ ತಾಯಿಯ ಜೀವಕ್ಕೂ ತೊಂದರೆಯಾಗಬಹುದು. ಸರಕಾರಿ ಆಸ್ಪತ್ರೆಯಲ್ಲಿ ಏಕೆ ಇಷ್ಟು ನಿರ್ಲಕ್ಷ್ಯ ಎಂದು ನೋವು ವ್ಯಕ್ತಪಡಿಸಿದರು.
ದಿನಕ್ಕೆ 40 ಜನತೆಗೆ ಮಾತ್ರ ಸ್ಕ್ಯಾನಿಂಗ್ ಟೆಸ್ಟ್ ಮಾಡಲು ಸಾಧ್ಯ. ಒಂದೇ ದಿನ ಹೆಚ್ಚು ಗರ್ಭಿಣಿಯರು ಆಗಮಿಸುವುದರಿಂದ ಒತ್ತಡವೂ ಕೂಡ ಹೆಚ್ಚಾಗುತ್ತ್ತಿದೆ. ಜೊತೆಗೆ ನಾವು ಕೆಲಸ ಮಾಡಲು ಕೂಡ ಆಗುವುದಿಲ್ಲ. ಒತ್ತಡ ಹೆಚ್ಚಾದರೆ ನಾನು ರಾಜಿನಾಮೆ ನೀಡುತ್ತೇನೆ.
-ಮಹೇಶ್, ಶಿರಾದಿಂದ ನಿಯೋಜಿತ ರೇಡಿಯಾಲಜಿಸ್ಟ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
