ನವದೆಹಲಿ:

ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನಿನ್ನೆ (ಮಾರ್ಚ್ 15ರಂದು) ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ನಿಬಾ ನಾಜ್ ಎಂಬ ವಿದ್ಯಾರ್ಥಿನಿ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು ಇಂದು ಅವರ ಪರ ವಕೀಲರು ಓಪನ್ ಕೋರ್ಟಿನಲ್ಲಿ ಮೆನ್ಷನ್ ಕೂಡ ಮಾಡಲಿದ್ದಾರೆ.
ಇದೇ ರೀತಿ ಇಂದು ಇನ್ನೂ ಹಲವು ಅರ್ಜಿಗಳು ಸಲ್ಲಿಕೆಯಾಗುವ ಮತ್ತು ನ್ಯಾಯಾಲಯದಲ್ಲಿ ಮೆನ್ಷನ್ ಆಗುವ ಸಾಧ್ಯತೆ ಇದೆ. ಈ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಏನು ನಿಲುವು ತೆಳೆಯುತ್ತದೆ ಎಂಬ ಕುತೂಹಲವೂ ನಿರ್ಮಾಣವಾಗಿದೆ.
ವಿದ್ಯಾರ್ಥಿನಿ ನಿಬಾ ನಾಜ್ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು ಇಂದು ಅವರ ಪರ ವಕೀಲ ಅನಸ್ ತನ್ವೀರ್ ಮೂಲಕ ಮೆನ್ಷನ್ ಮಾಡಲಿದ್ದಾರೆ. ಉಡುಪಿಯಲ್ಲಿ ಪ್ರತಿಭಟನೆ ಮಾಡಿದ ಆರು ವಿದ್ಯಾರ್ಥಿನಿಯರ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದ ವಕೀಲ ದೇವದತ್ ಕಾಮತ್ ಇಂದು ಸುಪ್ರೀಂ ಕೋರ್ಟಿನಲ್ಲೂ ಅರ್ಜಿ ಸಲ್ಲಿಸಲಿದ್ದಾರೆ. ಅರ್ಜಿ ಸಲ್ಲಿಕೆಯ ಬಳಿಕ ಓಪನ್ ಕೋರ್ಟಿನಲ್ಲಿ ಮೆನ್ಷನ್ ಮಾಡಲಿದ್ದಾರೆ ಎಂದು ತಿಳಿದುಬಂದಿ.
ಅಖಿಲ ಭಾರತ ಯುವ ಕಾಂಗ್ರೆಸ್ ಈ ಹಿಂದೆಯೇ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈಗ ರಾಜ್ಯ ಹೈಕೋರ್ಟ್ ತೀರ್ಪು ಹೊರಬಿದ್ದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಥವಾ ಓಪನ್ ಕೋರ್ಟಿನಲ್ಲಿ ಮೆನ್ಷನ್ ಮಾಡುವ ಸಾಧ್ಯತೆ ಇದೆ.
ಇದೇ ರೀತಿ ಹಿಂದೆ ಅರ್ಜಿ ಸಲ್ಲಿಸಿದ್ದ ರಾಜ್ಯದ ವಕ್ಫ್ ಬೋರ್ಡ್, ಡಾ. ಜೆ ಹಳ್ಳಿ ಫೆಡರೇಷನ್ ಆಫ್ ಮಸೀದ್, ಮದ್ರಾಸ್ ಅಯಂಡ್ ವಕ್ಫ್ ಇನ್ಸ್ಟಿಟ್ಯೂಟಿಷನ್ ಗಳು ಕೂಡ ಇಂದು ಪ್ರತ್ಯೇಕವಾದ ಅರ್ಜಿಗಳನ್ನು ಸಲ್ಲಿಸುವ ಅಥವಾ ನ್ಯಾಯಾಧೀಶರ ಎದುರು ಮೆನ್ಷನ್ ಸಾಧ್ಯತೆಗಳು ಗೋಚರಿಸುತ್ತಿವೆ.
ಏಕರೂಪ ಸಮವಸ್ತ್ರ ಕುರಿತು ಕೇಳುವ ಸಾಧ್ಯತೆ
ಹಿಜಾಬ್ ಪ್ರಕರಣ ಶುರುವಾಗುತ್ತಿದ್ದಂತೆ ಇಡೀ ದೇಶಾದ್ಯಂತ ಏಕರೂಪದ ಸಮವಸ್ತ್ರ ಇರುವಂತಹ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ವಕೀಲ ನಿಖೀಲ್ ಉಪಾಧ್ಯಾಯ ಕೂಡ ಇಂದು ಪ್ರತ್ಯೇಕವಾಗಿ ಮೆನ್ಷನ್ ಮಾಡುವ ಸಾಧ್ಯತೆ ಇದೆ.
ರಾಜ್ಯ ಹೈಕೋರ್ಟಿನ ತೀರ್ಪು ಎಲ್ಲಾ ಶಾಲೆಗಳಿಗೂ ಏಕರೂಪವಾಗಿ ಅನ್ವಯ ಆಗುತ್ತದೆ ಎಂಬ ರೀತಿಯಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಖಾಸಗಿ ಶಾಲಾ ಆಡಳಿತ ಮಂಡಳಿ ಪರ ವಕೀಲರು ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಕೆ ಮಾಡುವ ಅಥವಾ ಮೆನ್ಷನ್ ಮಾಡುವ ಸಾಧ್ಯತೆ ಇದೆ.
ಕುತೂಹಲ ಮೂಡಿಸಿರುವ ಸುಪ್ರೀಂ ಕೋರ್ಟ್ ನಡೆಕರ್ನಾಟಕದಲ್ಲಿ ಹಿಜಾಬ್ ವಿವಾದ ಆರಂಭ ಆದಾಗಲೇ ಸುಪ್ರೀಂ ಕೋರ್ಟಿನಲ್ಲಿ ಹಲವು ಅರ್ಜಿಗಳು ದಾಖಲಾಗಿದ್ದವು. ಆಗ ಪ್ರಕರಣದ ವಿಚಾರಣೆ ರಾಜ್ಯ ಹೈಕೋರ್ಟಿನಲ್ಲಿ ನಡೆಯುತ್ತಿದ್ದುದರಿಂದ ಸುಪ್ರೀಂ ಕೋರ್ಟ್ ಯಾವುದೇ ಅರ್ಜಿಯನ್ನು ಮಾನ್ಯ ಮಾಡಿರಲಿಲ್ಲ.








