ಬೆಂಗಳೂರು:
ಶಾಸಕರಾಗಿ ಆಯ್ಕೆಯಾದಾಗಿನಿಂದ ಅಧಿಕಾರ ವಿಷಯದಲ್ಲಿ ಹಾವು ಏಣಿ ಆಟದಂತಾಗಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಎಚ್. ನಾಗೇಶ್ `ನನಗೆ ಟೈಮು ಇಲ್ಲ, ಈಗ ಟೈಮ್ ಸರಿ ಇಲ್ಲ ಹೋಗಿ’ ಎಂದು ಹೇಳುವ ಮೂಲಕ ನಾನಾ ಅರ್ಥಕ್ಕೆ ಆಸ್ಪದ ನೀಡಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರವಾಗಿ ಆಯ್ಕೆಗೊಂಡ ಎಚ್.ನಾಗೇಶ್, ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಥಮ ಬಾರಿ ಶಾಸಕರಾದರೂ ಅಧಿಕಾರ ದೊರಕಿತ್ತು. ಸಮ್ಮಿಶ್ರ ಸರ್ಕಾರ ಪತನದ ಬಳಿಕ ಬಿಜೆಪಿ ಆಡಿದ ಆಪರೇಷನ್ ಕಮಲ ಆಟದಲ್ಲೂ ಮೇಲುಗೈ ಸಾಧಿಸಿ, ಬಿಜೆಪಿ ಸರ್ಕಾರದಲ್ಲೂ ಸಚಿವರಾದರು. ಆದರೆ, ಆ ಸ್ಥಾನ ಹೆಚ್ಚುಕಾಲ ಉಳಿಯಲಿಲ್ಲವಾದರೂ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷಗಾದಿಗೇರುವ ಅದೃಷ್ಟ ಒಲಿಯಿತು. ಆದರೆ ಮಂಗಳವಾರ ಭೇಟಿ ಮಾಡಿದ ಕೆಲವರಿಗೆ ಅವರು ನೀಡಿದ ನನಗೆ ಟೈಮಿಲ್ಲ, ಟೈಮು ಸರಿ ಇಲ್ಲ ಎಂಬ ಹೇಳಿಕೆ ಕುತೂಹಲ ಮೂಡಿಸಿತು. ಅಲ್ಲದೇ, ಮತ್ತೇನು ಏರುಪೇರಾಗುವುದೋ ಎಂದು ಎದುರು ನೋಡುವಂತಾಗಿದೆ.
ನಿಗಮದ ಬೆಂಗಳೂರಿನಲ್ಲಿರುವ ಕಚೇರಿಯಲ್ಲಿ ನಾಗೇಶ್‌ರನ್ನು ಏ.14ರಂದು ನಡೆಯುವ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಸಂದರ್ಶನಕ್ಕೆAದು ಕೆಲವರು ಭೇಟಿ ಮಾಡಿದರು. ಆದರೆ, ಅವರೊಂದಿಗೆ ಒಂದು ನಿಮಿಷ ಮಾತನಾಡುವ ಸೌಜನ್ಯ ತೋರಲಿಲ್ಲ. ನಿಗಮದಿಂದ ದೊರಕುವ ಸೌಲಭ್ಯಗಳ ಕುರಿತಂತೆ ಮಾಹಿತಿಯನ್ನು ಒಳಗೊಂಡ ವಿಶೇಷ ಲೇಖನಕ್ಕಾಗಿ ಸಂದರ್ಶನಕ್ಕೆ ಕ್ಷಣಕಾಲ ಆಸ್ಪದ ನೀಡದ ಅಧ್ಯಕ್ಷರು, ಗಡಿಬಿಡಿಯಲ್ಲೇ ಇದ್ದರು. ಜಯಂತಿ ಆಚರಣೆ ಮಾಡಬೇಕು. ನನಗೆ ಈಗ ಸಮಯವೇ ಇಲ್ಲ. ಟೈಮು ಸರಿ ಇಲ್ಲ ಹೋಗಿ ಎಂದು ತಿಳಿಸುವ ಮೂಲಕ ತಮಗಾಗಿ ಕಚೇರಿ ಹೊರಗೆ ಕಾದಿದ್ದವರನ್ನು ಆತುರಾತುರದಲ್ಲಿ ಬರಮಾಡಿಕೊಂಡು ಕಳುಹಿಸಿಕೊಡುವ ತವಕದಲ್ಲಿದ್ದರು.
