ಸ್ಥಿತಿಗತಿ ಪರಿಶೀಲಿಸಿ ಪರಿಹಾರಕ್ಕೆ ಸೂಕ್ತ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು : ರಾಜ್ಯದಲ್ಲಿ ಕಳೆದ 10 ದಿನಗಳಿಂದ ಅತಿವೃಷ್ಟಿ ಯಿಂದ ಹಾನಿಗೊಳಗಾದ ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಎರಡು ದಿನಗಳ ಪ್ರವಾಸ ಕೈಗೊಳ್ಳುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿ ಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ಹಾಗೂ ನೇರವಾಗಿಯೂ ಮಾತನಾಡಿದ್ದು, ಮಳೆ ಕಡಿಮೆಯಾಗಿರುವುದರಿಂದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಿತಿಗತಿಯನ್ನು ಅವಲಂಬಿಸಿ ಪರಿಹಾರಕ್ಕೆ ಸೂಚನೆ ನೀಡಲಾಗುವುದು ಎಂದರು.
ಸಿಎಂ ಪ್ರವಾಸ ಕಾರ್ಯಕ್ರಮದ ವಿವರ :
ಸಿಎಂ ಬಸವರಾಜ ಬೊಮ್ಮಾಯಿ ರವರು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಂಟಾದ ಸಮಸ್ಯೆಗಳನ್ನು ಅವಲೋಕಿಸಲು ಪ್ರವಾಸ ಕೂಗೊಂಡಿದ್ದಾರೆ.
ಮಂಗಳವಾರ ಕೊಡಗು, ಮಡಿಕೇರಿ, ದಕ್ಷಿಣ ಕನ್ನಡ, ಮಂಗಳವಾರ, ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಭೇಟಿ ಮತ್ತು ವೀಕ್ಷಣೆ ಮಾಡಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಬುಧವಾರ ಉಡುಪಿ ಜಿಲ್ಲೆಯ, ಉತ್ತರ ಕನ್ನಡ ಜಿಲ್ಲೆಯ ಬಟ್ಕಳದಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ಮಾಡಿ ವೀಕ್ಷಣೆ ಮಾಡಲಿದ್ದಾರೆ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿಲದ್ದಾರೆ.
ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ : ರಾಜ್ಯಾದ್ಯಂತ ಮುಂದಿನ ನಾಲ್ಕುದಿನಗಳು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಮುಂದುವರೆದಿದ್ದು, ಉಳಿದಂತೆ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ನಾಲ್ಕು ದಿನ ಮಳೆ ಮುಂದುವರೆಯಲಿದ್ದು ಮೊದಕವಿದ ವಾತಾವರಣ, ಹಾಗೂ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಚ್ಚರಿಕೆ ನೀಡಿದೆ.
ಉಸ್ತುವಾರಿ ಸಚಿವರು ಎಲ್ಲಿ ಕಾಂಗ್ರೆಸ್ ಟೀಕೆ :
ರಾಜ್ಯದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದರು ಉಸ್ತುವಾರಿ ಸಚಿವರುಗಳು ಮಾತ್ರ ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ರಾಜ್ಯದಲ್ಲಿ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ. ಸಿಎಂ ಕೇವಲ ಆನ್ ಲೈನ್ ಮೀಟಿಂಗ್‌ಗೆ ಸೀಮಿತರಾಗಿದ್ದಾರೆ. 2019ರ ಪ್ರವಾಹ ಸಂದರ್ಭದಲ್ಲಿ ಸಂಪುಟವೇ ಇರಲಿಲ್ಲ. 2020ರ ಪ್ರವಾಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ತಿಕ್ಕಾಟ ನಡೆಯುತ್ತಿತ್ತು. 2021ರಲ್ಲಿ ಸಮರ್ಪಕ ನೆರೆ ಪರಿಹಾರ ನೀಡಲಿಲ್ಲ. ಈಗ ಮತ್ತೊಮ್ಮೆ ರಾಜ್ಯದಲ್ಲಿ ಮಳೆ ಹಾನಿಯಾಗಿದೆ. ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ನಾಪತ್ತೆಯಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ರಾಜ್ಯದಲ್ಲಿ ಮಳೆ ಅಬ್ಬರದಿಂದ ಪ್ರವಾಹದ ಸ್ಥಿತಿ ಉಂಟಾಗಿದೆ, 40%BJPಸರ್ಕಾರ ಕೇಂದ್ರ ಸರ್ಕಾರದ ನೆರವು ಕೇಳಲು ಮೀನಾಮೇಷ ಎಣಿಸುತ್ತಿರುವುದೇಕೆ? ಕೈಗೊಂಡ ರಕ್ಷಣಾ ಕ್ರಮಗಳೇನು? ಆಶ್ರಯ ಕೇಂದ್ರಗಳನ್ನು ತೆರೆಯದಿರುವುದೇಕೆ? ಮನೆ ಹಾನಿಗೆ ಕೇವಲ ₹10,000 ಪರಿಹಾರ ಸಾಕೇ?
ಪ್ರಾಣ ಕಳೆದುಕೊಂಡ ಜನ, ಜಾನುವಾರಿಗೆ ನೀಡಿದ ಪರಿಹಾರವೇನು? ಎಂದು ಕಾಂಗ್ರೆಸ್ ನೇರವಾಗಿ ಸರ್ಕಾರವನ್ನು ಪ್ರಶ್ನೆ ಮಾಡಿದೆ.
ಪ್ರಮುಖ ಅಂಶಗಳು :
ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಮತ್ತು ಬುಧವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ವೀಕ್ಷಣೆ
ಜಿಲ್ಲಾ ಮಟದ ಅಧಿಕಾರಿಗಳ ಜೊತೆಗೆ ಸಭೆ ಮಾಡಿ ಚರ್ಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ.? ಕಾಂಗ್ರೆಸ್ ಟೀಕೆ
ಮುಂದಿನ 4 ದಿನ ಭಾರಿ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರಿನಲ್ಲಿ ನಾಲ್ಕು ದಿನ ಮಳೆ ಮುಂದುವರೆಯಲಿದೆ