ಬೆಂಗಳೂರು : ರದ್ದು ಪಡಿಸಿರುವ ಪಿ ಎಸ್ ಐ ಪರೀಕ್ಷೆಯ ಮರುಪರೀಕ್ಷೆ ಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.
ಬುಧವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಪಿಎಸ್ ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ, ಈ ಕುರಿತು ಭರವಸೆ ನೀಡಿದ್ದು, ಮರು ಪರೀಕ್ಷೆ ನಡೆಸಲು ಶೀಘ್ರದಲ್ಲಿಯೇ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಪಿ ಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಮರು ಪರೀಕ್ಷೆ ನಡೆಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು, ಎಂದರು.
ರದ್ದಾದ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿದ್ದ ಎಲ್ಲಾ 56000 ಅಭ್ಯರ್ಥಿ ಗಳು ಮರು ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಹೊಂದಿದ್ದು, ಯಾವುದೇ ಆತಂಕ ಬೇಡ ಎಂದು ಸಚಿವರು ಭರವಸೆ ನೀಡಿದರು
ಮರು ಪರೀಕ್ಷೆ ನಡೆಸುವುದು ತಡವಾದರೆ, ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ ಪರೀಕ್ಷೆ ತಯಾರಿ ಮುಂದುವರೆಸಿ, ಎಂದು ಸಚಿವರು ಕಿವಿಮಾತು ಹೇಳಿದರು.