ಪರಿಸರ ಉಳಿಸುವ ನೈತಿಕ ಬಾಧ್ಯತೆ ಯಾರದು..?

 

      ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಸ.ನಂ.137 ಸರ್ಕಾರೀ ಖರಾಬು ಜಾಗದ 3 ಎಕರೆ 32 ಗುಂಟೆ ಪ್ರದೇಶದ ಗುಡ್ಡಕ್ಕೆ “ಪಿಂಕ್ ಗ್ರಾನೈಟ್ ಗಣಿಗಾರಿಕೆಗೆ ಯಾವ ಪರಿಸರ ಪುರಾವೆಗಳಡಿಯಲ್ಲಿ ಅಧಿಕೃತ ಅನುಮತಿ ನೀಡಲಾಗಿದೆ? ಈ ನಿಗದಿತ ಸ್ಥಳದ ಪರಿಸರ ಆಘಾತ ಅಧ್ಯಯನ ಮಾಡಿಸಿದ್ದರ ಸುದೀರ್ಘ ವರದಿ ಮಾಧ್ಯಮಗಳ ಮೂಲಕ ಬಹಿರಂಗಪಡಿಸಲಿ. ಇಂತಹ ಪ್ರಕ್ರಿಯೆಗಳಿಗೆ ಅನುಮೋದನೆ ನೀಡುವಲ್ಲಿ, ಪರಿಸರ ಸಂರಕ್ಷಣೆಯ ಯೋಜನೆಗಳಡಿಯಲ್ಲಿ ನಿಮ್ಮ ಪರಿಣತೆಯೇನು?

     ತುಮಕೂರು-ಬೆಂಗಳೂರು ಅವಳಿ ನಗರಗಳಾಗುವ ಕ್ಷಣಗಣನೆಯಲ್ಲಿದೆ. ಪರಿಸರದಲ್ಲಾಗುತ್ತಿರುವ ಬದಲಾವಣೆಗಳಿಗೆ ಮೂಲಕಾರಣ ನೈಸರ್ಗಿಕ ಬಳವಳಿಗಳಿಗೆ ಜವರಾಯನ ಕೊಡಲಿ ಬೀಸುತ್ತಿರುವುದನ್ನು ಕಡೆಗಣಿಸುವಂತಿಲ್ಲ.

      ಎಲ್ಲೆಂದರಲ್ಲೇ ಕಲ್ಲುಗಣಿಗಾರಿಕೆಗೆ ಅಧಿಕೃತ ಅನುಮೋದನೆ ಕೊಡಲು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸಾಧ್ಯವಿಲ್ಲ. ಅದರಲ್ಲೂ ಅರಣ್ಯ ಪ್ರದೇಶಗಳಲ್ಲಿ, ವ್ಯವಸಾಯೀಕರಣಗಳ ಜಾಗಗಳಲ್ಲಿ, ಜಲಾಶಯಗಳ ಸಮೀಪಗಳಲ್ಲಿ, ಸಮೀಪದ ಸಾರ್ವಜನಿಕ ವಸಾಹತುಗಳ ಪ್ರದೇಶಗಳಲ್ಲಿ ಪರಿಸರ ಕಾನೂನಿನಲ್ಲಿ ಕಲ್ಲುಗಣಿಗಾರಿಕೆಗೆ ನಿಷೇಧವಿದೆ.

     ಒಂದು ರಾಜ್ಯಕ್ಕೆ ಪರಿಸರದ ನಿಟ್ಟಿನಲ್ಲಿ ಇರಬೇಕಾದಷ್ಟು ಅರಣ್ಯ ಸಂಪತ್ತು ಪ್ರಸ್ತುತದಲ್ಲಿ ಇಲ್ಲ. ಅರಣ್ಯ ಇಲಾಖೆ ಕೂಡ ಇದನ್ನು ಅಲ್ಲಗಳೆಯುವಂತಿಲ್ಲ. ನಗರೀಕರಣಕ್ಕಾಗಿ ವೃಕ್ಷ ಸಂಪತ್ತನ್ನು ಅವ್ಯಾಹತವಾಗಿ ಬಲಿಕೊಡಲಾಗುತ್ತಿದ್ದು, ನಾಳಿನ ಬದುಕಿಗೆ ಕಂಠಕಪ್ರಾಯವಾಗಿದೆ. ಇದರ ಬಗ್ಗೆ ಯೋಚಿಸುವ ವಿವೇಚನಾ ಯುಕ್ತರು ಕೇವಲ ಬೆರಳೆಣಿಕೆಯಷ್ಟು.

      ತಿಂಗಳ ಸಂಬಳಕ್ಕಾಗಿ ಸಿಂಬಳವರಸಿಕೊಂಡು ಅಧಿಕೃತ ಕುರ್ಚಿಗಳಿಗೆ ಅಂಟಿಕೊಂಡ ಅಧಿಕಾರಗಣಕ್ಕೆ ಹಾಗೂ ಕೇವಲ ಗೊಡ್ಡು ರಾಜಕೀಯವೇ ಸರ್ವಸ್ವ ಎಂದರಿತ ಊಸರವಳ್ಳಿ ರಾಜಕೀಯ ಧುರೀಣರಿಗೆ, ಪರಿಸರ ಸಂರಕ್ಷಣೆಯ ಬಗ್ಗೆ ಗುಲಗಂಜಿ ಗಾತ್ರದಷ್ಟೂ ಬುದ್ಧಿ ಇಲ್ಲದೆ ಇರುವುದು ನಾಡಿನ ದೊಡ್ಡ ದುರಂತ.
ನಾಗರೀಕ ಹಿತಾಕಸ್ತಿಯ ಬಗ್ಗೆ ಯೋಚಿಸುವ ಸಂವೇದನಾಶೀಲ ಬುದ್ಧಿಮತ್ತೆ ಅಧಿಕಾರಿಗಣಕ್ಕೆ ಇಲ್ಲದೆ ಇರುವುದು ಏಳೇಳು ಜನ್ಮದ ಪಾಪದ ಶೇಷವೆಂದರೆ ತಪ್ಪಲ್ಲ.

     ಯಾವುದೇ ಜಾಗದಲ್ಲಿ ಕಲ್ಲುಗಣಿಗಾರಿಕೆ ಪ್ರಾರಂಭಿಸುವ ಮೊದಲು ಇದರ ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಹಾಗೂ ಆಕ್ಷೇಪಣಾ ಸಂಗ್ರಹಣಕ್ಕೆ ಪತ್ರಿಕೆಗಳಲ್ಲಿ ಪ್ರಕಟಣೆ ಕೊಡಬೇಕಾಗುತ್ತದೆ. ಪ್ರಸ್ತುತ ಪಿಂಕ್ ಗ್ರಾನೈಟ್ ಗಣಿಗಾರಿಕೆಯ ಬಗ್ಗೆ ಆಕ್ಷೇಪಣಾ ಪ್ರಕಟಣೆ ಕೊಟ್ಟಿದ್ದರೆ, ಯಾವ ಯಾವ ಪತ್ರಿಕೆಗಳಲ್ಲಿ ಯಾವ ಯಾವ ದಿನಾಂಕದAದು ಪ್ರಕಟಣೆ ಪ್ರಕಟವಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕಾಗಿದೆ ಸಂಪೂರ್ಣ ದಾಖಲೆಗಳೊಂದಿಗೆ.

   ಕಲ್ಲುಗಣಿಗಾರಿಕೆಗೆ ಸಮ್ಮತಿ ಅರ್ಹತಾ ಪತ್ರ ಪಡೆಯುವ ಮೊದಲು ಈ ನಿಗದಿತ ಜಾಗದಲ್ಲಿ ಪರಿಸರ ಆಘಾತ ಅಧ್ಯಯನ   ಪರಿಸರ ಕಾನೂನಿನಡಿಯಲ್ಲಿ ಕಡ್ಡಾಯವಾಗಿ ಮೂಡಿಸಬೇಕಾಗುತ್ತದೆ. ಒಂದು ವೇಳೆ ಈ ಕಡ್ಡಾಯ ಪ್ರಕ್ರಿಯೆ ಮಾಡಿಸಿದ್ದರೆ, ಇದನ್ನು ಮಾಡಿದರ‍್ಯಾರು? ಅಧ್ಯಯನದ ಸುದೀರ್ಘ ವರದಿ ಏನು? ಈ ವರದಿಯನ್ನು ಪತ್ರಿಕೆಗಳಲ್ಲಿ ಬಹಿರಂಗ ಪಡಿಸಿ ಮುಕ್ತ ಚರ್ಚೆ ನಡೆಸಲಿ.

    ಈ ಯಾವ ಕಾರ್ಯಗಳನ್ನೂ ನಡೆಸದೆ ಗಣಿಗಾರಿಕೆಗೆ ಆಸ್ಪದ ಕೊಟ್ಟಿದ್ದರೆ ಅದು ಅಕ್ಷಮ್ಯ ಅಪರಾಧವಾಗಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳೂ ತಪ್ಪಿತಸ್ಥರಾಗುತ್ತಾರೆ.

    ಈಗಾಗಲೇ ಅವ್ಯಾಹತವಾಗಿ ಕಾಡುಪ್ರಾಣಿಗಳು ನಾಡಿನ ಪ್ರಾಣಿಗಳಾಗುತ್ತಿವೆ. ಬೆಂಗಳೂರು, ಮೈಸೂರು ನಗರಗಳ ಒಳಗೆ ಚರಿತೆಗಳ ಕಾಟ ಹೆಚ್ಚಾಗುತ್ತಲೇ ಇದೆ. ತುಮಕೂರಿನ ಜಯನಗರದಲ್ಲೂ ಕೂಡ ಚಿರತೆ ಕಂಡು ಬಂದಿದ್ದನ್ನು ಜನ ಇನ್ನೂ ಮರೆತಿಲ್ಲ. ದೇವರಾಯನದುರ್ಗದ ಬುಡದಲ್ಲೇ ಇರುವ ಊರ್ಡಿಗೆರೆ ಗ್ರಾಮದಲ್ಲಿ 15 ದಿನಗಳ ಹಿಂದೆ 4 ಚಿರತೆಗಳು ಗದ್ದೆಯೊಂದರಲ್ಲಿ ಕಂಡು ಬಂದಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗಂಭೀರ ಚಿಂತನೆ ಅತ್ಯಗತ್ಯವಾಗಿದೆ.

    ಅರಣ್ಯಪ್ರದೇಶಗಳಲ್ಲಿನ ಗಣಿಗಾರಿಕೆಯಿಂದ ಕಾಡಿನ ಪ್ರಾಣಿಗಳಿಗೆ ಹೃದಯಸ್ತಂಭನವಾಗುವುದರೊಂದಿಗೆ ಅವುಗಳ ಸಂತಾನ ಕ್ರಿಯೆಗಳಿಗೂ ಮಾರಕವಾಗುತ್ತಿದೆ. ಹೀಗಾಗಿ ಹತ್ತಿರದ ಪ್ರದೇಶಗಳಿಗೆ ಅವುಗಳ ವಲಸೆ ಸರ್ವೇಸಾಮಾನ್ಯ. ದೇವರಾಯನದುರ್ಗ ಅರಣ್ಯ ಪ್ರದೇಶ ಹಲವಾರು ಪ್ರಾಣಿ ಸಂಕುಲಗಳಿಗೆ ವರಪ್ರದಾನವಾಗಿದ್ದು, ಅವುಗಳ ಏಳಿಗೆಗೆ ಶ್ರಮಿಸಬೇಕಾಗಿದೆ.

    ಇಲ್ಲಿನ ಗಣಿಗಾರಿಕೆಯಿಂದ ಅರಣ್ಯದ ವೃಕ್ಷ ಸಂಪತ್ತಿಗೂ ಮಾರಕವಾಗುತ್ತಿದೆ. ಇಲ್ಲಿನ ಧೂಳಿನ ಸೂಕ್ಷ ಕಣಗಳು ಮರ-ಗಿಡಗಳ ಎಲೆಗಳ ಮೇಲೆ ಶೇಖರವಾಗುವುದರಿಂದ ದ್ಯುತಿಸಂಶ್ಲೇಷಣಾ ಕ್ರಿಯೆಗೆ  ತೊಂದರೆ ಯಾಗುವುದರಿಂದ ಮರ-ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಇದರಿಂದಾಗಿ ಅರಣ್ಯ ನಾಶ ಆನಂತರ ಅರಣ್ಯದಲ್ಲಿ ಅರಣ್ಯೀಕರಣಕ್ಕೆ ಒತ್ತು ಕೊಡುವ ದೀನ ಪರಿಸ್ಥಿತಿಯ ಅವತರಣಿಕೆ ಪ್ರಸ್ತುತದಲ್ಲಿ ನಡೆಯುತ್ತಿರುವ ಗಣಿಗಾರಿಕೆ.

     ಈ ಗಣಿಗಾರಿಕೆಯಿಂದ ಅರಣ್ಯನಾಶದ ಜೊತೆಗೆ ಅಲ್ಲಿನ ಜೀವವೈವಿಧ್ಯಗಳಿಗೂ ಕಂಠಕ. ಬೆನ್ನಿಗೆ ಹೊಟ್ಟೆ ಅಂಟಿಸಿಕೊಂಡು ಮೂರು ತುತ್ತಿನ ಜೀವನ ನಡೆಸುತ್ತಿರುವ ಸಣ್ಣ ಪ್ರಮಾಣದ ರೈತರ ಬದುಕಿಗೂ ಕಂಠಕ. ಅವರು ಬೆಳೆಯುವ ಬೆಳೆಗಳಲ್ಲಿ ದ್ಯುತಿಸಂಶ್ಲೇಷಣಾ ಕ್ರಿಯೆ ಕುಂದುವುದರಿಂದ ಇಳುವಳಿ ಕಮ್ಮಿಯಾಗುತ್ತದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾನಿಲಯಗಳಲ್ಲಿನ ಸಸ್ಯಶಾಸ್ತç ವಿಭಾಗದಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದು ಗಣಿಗಾರಿಕೆಗೆ ಅನುಮೋದನೆ ಕೊಟ್ಟಿರುವ ಮಹೋದಯರಿಗೆ ಈ ಅಂಶ ಅರಿವಿದೆಯೇ?

     ಇನ್ನು ಇಲ್ಲಿ ವಾಸಿಸುತ್ತಿರುವವರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಆಗುವ ಸಂಭವ ತಳ್ಳಿಹಾಕುವಂತಿಲ್ಲ. ಕಣ್ಣಿನ ವ್ಯಾಧಿಗಳೊಂದಿಗೆ ದೃಷ್ಟಿದೋಶ ಉಂಟಾಗುತ್ತದೆ. ಕಿವುಡುತನ ಜೊತೆಗೆ ಸೀನಿದಾಗ ರಕ್ತಸಿಕ್ತ ಸಿಂಬಳ, ಕೆಮ್ಮಿದಾಗ ರಕ್ತಸಿಕ್ತ ಕಫ ಆನಂತರದಲ್ಲಿ ಶ್ವಾಸಕೋಶಗಳಲ್ಲಿ ತೊಂದರೆ ಇವು ಅವೈಜ್ಞಾನಿಕ ಗಣಿಕಾರಿಕೆಯ ವರ ಶ್ರೇಷ್ಠತೆಗಳು.

     ಗಣಿಗಾರಿಕೆಯ ಜಾಗದಲ್ಲಿ ಸಂಪರ್ಕ ರಸ್ತೆಯ ನಿರ್ಮಾಣ ಮತ್ತಷ್ಟು ಪರಿಸರ ವಿಕೋಪತೆಗೆ ಕಾರಣವಾಗುತ್ತದೆ. ಈಗಾಗಲೇ ಸಾಕಷ್ಟು ಬೆಟ್ಟಗುಡ್ಡಗಳು ಸಾರಾಸಗಟಾಗಿ ನಾಶವಾಗಿವೆ. ಬೆಳಗುಂಬ, ಮಾರನಾಯ್ಕನಪಾಳ್ಯ, ವಿಟ್ಟರಾವುತನಹಳ್ಳಿ, ಆಲಮರದ ಪಾಳ್ಯಗಳಲ್ಲಿ ಇವುಗಳ ನಾಶ ಪ್ರತ್ಯಕ್ಷ ದರ್ಶನವಾಗುತ್ತದೆ. ಮೈದಾಣದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಮುಂದೊಂದು ದಿನ ಮುಂದಿನ ಪೀಳಿಗೆಗೆ ಬೆಟ್ಟಗುಡ್ಡಗಳ ಅಸ್ತಿತ್ವವನ್ನು ಕೇವಲ ಮುದ್ರಿತ ಚಿತ್ರಗಳ ಮೂಲಕ ವೇದ್ಯಪಡಿಸಬೇಕಾದ ಕಾಲ ಸನ್ನಿಹಿತವಾಗುವುದರಲ್ಲಿ ಸಂಶಯವಿಲ್ಲ.

   `ಜಯ’ ಹಾಗೂ `ಮಂಗಳ’ ಈ ಎರಡೂ ಉಪನದಿಗಳ ಉಗಮಸ್ಥಾನ ದೇವರಾಯನದುರ್ಗ. ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕಿನ ಇರಕಸಂದ್ರದಿಂದ ಕೂಡುನದಿ ಜಯಮಂಗಲಿಯಾಗಿ ಹರಿದು, ವ್ಯವಸಾಯೀಕರಣಕ್ಕೆ ವರಪ್ರದಾನವಾಗಿದೆ. ಕಳೆದ 27 ವರ್ಷಗಳಿಂದ ಒಣಗಿದ್ದ ಈ ನದಿ ಕಳೆದ ವರ್ಷ ಅತಿಯಾದ ವರುಣದೇವನ ಕೃಪೆಯಿಂದ ಮೈದುಂಬಿ ಹರಿದಿದ್ದು, ರೈತಾಪಿಗಳ ವ್ಯವಸಾಯೀಕರಣಕ್ಕೆ ಸಹಾಯ ಹಸ್ತ ನೀಡಿ ಊರುಗೋಲಾಗಿದೆ.

     ದೇವರಾಯನದುರ್ಗದಲ್ಲೇ ಹುಟ್ಟುವ `ಗರುಡಾಚಲ’ ನದಿ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಜಯಮಂಗಲಿಯನ್ನು ಸೇರಿ ಹರಿಯುತ್ತದೆ. ಮುಂದೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದ ಹತ್ತಿರ `ಪೆನ್ನ’ ನದಿಗೆ ಒಟ್ಟು 241.5 ಕಿ.ಮೀ. ಹರಿದು ಸೇರುತ್ತದೆ. ಈ ಜಯಮಂಗಲಿ ನದಿಯನ್ನು ದೀರ್ಘಸುಮಂಗಲಿ ಮಾಡಬೇಕೆಂದರೆ ಈ ನದಿಯ ಉದ್ದಗಲಕ್ಕೂ ಅರಣ್ಯೀಕರಣಕ್ಕೆ ಒತ್ತು ಕೊಡಬೇಕು.

      ಬೆಟ್ಟಯ್ಯನತೋಟ, ಬೆಳ್ಳಿಬೆಟ್ಟನಹಳ್ಳಿ, ಆಚಾರಗುಡ್ಲು, ಹನುಮಯ್ಯನತೋಟ, ಒಡ್ಡರಹಳ್ಳಿ, ದುರ್ಗದ ನಾಗೇನಹಳ್ಳಿ, ಸೇಟುಪಾಳ್ಯ, ಇರಕಸಂದ್ರ ಕಾಲೋನಿ, ತಿಮ್ಮನಾಯಕನಹಳ್ಳಿ, ಹಳೇಕೋಟೆ, ದುರ್ಗದಹಳ್ಳಿ, ಅನುಪನಹಳ್ಳಿ ರೈತಾಪಿ ವರ್ಗಕ್ಕೆ ಜಯಮಂಗಲಿ ನದಿಯನ್ನು ಸದಾ ಪುನಃ ಹರಿಯುವಂತೆ ಮಾಡಬೇಕಾಗಿದೆ. ಗಣಿಗಾರಿಕೆ ನಡೆಸಿ ಕೃಷಿಕರ ಜಮೀನುಗಳನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳುವುದನ್ನು ಸಂಘಟಿತ ಶಕ್ತಿಯೊಂದಿಗೆ ವಿರೋಧಿಸಬೇಕು. ಈ ಭಾಗದ ಶಾಸಕರು ಮುಂಚೂಣಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದ್ದು, ಪೂರಕವಾದ ಮಾನವೀಯ ಪ್ರೇರಣೆ ಅತ್ಯಗತ್ಯವಾಗಿದೆ. ಇದು ಸಾಮಾಜಿಕ ಕಳಕಳಿ.

    ಕೇವಲ ಆದಾಯದ ದೃಷ್ಟಿಯಲ್ಲಿ ನೈಸರ್ಗಿಕ ಬಳುವಳಿಗಳನ್ನು ಕಳೆದುಕೊಳ್ಳುತ್ತಾ ಬಂದಲ್ಲಿ, ಕಳೆದುಕೊಂಡ ನೈಸರ್ಗಿಕ ಸಂಪತ್ತು ಮತ್ತೆ ವಾಪಸ್ ಬರುವುದಿಲ್ಲ. ಹೀಗಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಮುಂದೆ ಕೂಡ ಅರಣ್ಯ ಪ್ರದೇಶಗಳಲ್ಲಿ ಅನುಮೋದನೆ ಕೊಡಬಾರದು.

    ಸ್ವಾಮಿ ನೇವೇ ಹತ್ತಿರಕುಳಿತಿರುವ ಮರದ ಕೊಂಬೆಯನ್ನು ನೀವೇ ಕಡಿದುರುಳಿಸಿದರೆ ಇದು ನಿಮಗೆ ಆಸ್ತಿಯಾಗುವ ಬದಲು ನಿಮ್ಮ “ಅಸ್ತಿ’’ಯಾಗುತ್ತೆ. ಮಹನೀಯರುಗಳು ಅರ್ಥ ಮಾಡಿಕೊಂಡರೆ ನಮ್ಮ ಪೂರ್ವಜನ್ಮದ ಪುಣ್ಯ.

-ಡಾ.ಡಿ.ಜೆ.ಮೋಹನ್, ಪರಿಸರ ವಿಜ್ಞಾನಿಗಳು, ಮೊ:9712949955.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap