ತುಮಕೂರು
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗರಹಿತ ಕೃಷಿ ಕೂಲಿ ಕಾರ್ಮಿಕರಿಗೆ ಜೀವನಾಧಾರ ಉದ್ಯೋಗ ದೊರಕಿಸಿಕೊಡುವ ಒಂದು ಮಹತ್ವಾಕಾಂಕ್ಷಿ ಯೋಜನೆ ನರೇಗಾ ಹಳ್ಳ ಹಿಡಿಯುತ್ತಿದೆಯಾ..
ಇತ್ತೀಚಿನ ಬಜೆಟ್ ಅಂಕಿ ಅಂಶಗಳನ್ನು ನೋಡಿದಾಗ ಇಂಥದ್ದೊಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ವರ್ಷದಿಂದ ವರ್ಷಕ್ಕೆ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ಇಳಿಕೆ ಪ್ರಮಾಣ ಗಮನಿಸಿದರೆ ನರೇಗಾ ಯೋಜನೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಸ್ಪಷ್ಟವಾಗುತ್ತಿದೆ.
ಇದನ್ನು ಗಮನಿಸಿದರೆ ಈ ದೇಶದ ಮಹತ್ವದ ಯೋಜನೆಯೊಂದುಮೂಲೆ ಗುಂಪಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಸೆಪ್ಟೆಂಬರ್ 7, 2005 ರಲ್ಲಿ ಘೋಷಣೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ದೇಶದ 200 ಜಿಲ್ಲೆಗಳಲ್ಲಿ ಫೆಬ್ರುವರಿ 2006 ರಿಂದ ಅನುಷ್ಠಾನಗೊಂಡಿತು.
ನಂತರ ರಾಷ್ಟçದ ಎಲ್ಲ ರಾಜ್ಯಗಳ ಎಲ್ಲ ಜಿಲ್ಲೆಗಳಿಗೂ ಈ ಯೋಜನೆ ವಿಸ್ತಾರಗೊಂಡಿತು . ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಒಂದು ಗ್ರಾಮೀಣ ಜನರ ಕಲ್ಯಾಣ ಯೋಜನೆ ಯಾಗಿ ಈ ಯೋಜನೆ ಹೆಗ್ಗಳಿಕೆ ಪಡೆದಿದೆ. ಬಹಳಷ್ಟು ರಾಷ್ಟçಗಳು ಭಾರತದ ಈ ಯೋಜನೆಯನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿವೆ. ಹೀಗಿರುವಾಗ ಈ ಯೋಜನೆ ನಿರ್ಲಕ್ಷö್ಯಕ್ಕೊಳಗಾಗುತ್ತಿರುವುದೇಕೆ..
ಕೆಳಗಿನ ಅಂಕಿ ಅಂಶಗಳನ್ನು ಗಮನಿಸಿದರೆ ಇಂತಹ ಅನುಮಾನಗಳಿಗೆ ಪುಷ್ಟಿ ಸಿಗುತ್ತದೆ. 2019-20 ನೇಸಾಲಿನಲ್ಲಿ ಜಾಬ್ ಕಾರ್ಡ ಮೂಲಕ ನೋದಾಯಿತರಾಗಿರುವ ಕೂಲಿ ಕಾರ್ಮಿಕರಿಗೆ 48.4 ಮಾನವ ದಿನಗಳನ್ನು ಸೃಜಿಸಲಾಗಿತ್ತು. 2020-21 ಸಾಲಿನಲ್ಲಿ 51.52 ಮಾನವ ದಿನಗಳನ್ನು ಸೃಜಿಸಲಾಗಿತ್ತು.
[ಕೊರೋನಾ ವರ್ಷ] 2021-22 ನೇ ಸಾಲಿಗೆ 50.7 ಮಾನವ ದಿನಗಳು, 2022-23 ನೇಸಾಲಿನಲ್ಲಿ 43.4 ಕ್ಕೆ ಇಳಿಸುವ ಮೂಲಕ ಮಾನವ ದಿನಗಳನ್ನು ಮತ್ತಷ್ಟು ಕಡಿತ ಮಾಡಲಾಯಿತು. ಇದಕ್ಕೂ ಮಿಗಿಲಾದ ಆತಂಕ ಪಡುವ ವಿಚಾರವೆಂದರೆ 2023-24 ನೇ ಸಾಲಿನಲ್ಲಿ ಬಜೆಟ್ ಆಯವ್ಯಯದಲ್ಲಿ ನರೇಗಾ ಯೋಜನೆಗೆ ಕೇವಲ 60,000 ಕೋಟಿ ರೂ.ಗಳನ್ನು ನಿಗದಿಪಡಿಸಿರುವುದು. ಅಂದರೆ ಜಿಡಿಪಿಯ ಶೇ. 0.2 ಕೂಡಾ ಇಲ್ಲದಷ್ಟು ಅನುದಾನವನ್ನು ಈ ಯೋಜನೆಗೆ ನಿಗದಿಪಡಿಸಾಗಿದ್ದು ಇದರಿಂದಾಗಿ ನರೇಗಾ ಯೋಜನೆ ನಂಬಿ ಜಾಬ್ ಕಾರ್ಡ ಹೊಂದಿದವರಿಗೆ ವರ್ಷದಲ್ಲಿ ಕೇವಲ 20 ದಿನಗಳು ಮಾತ್ರ ಕೆಲಸ ಮಾಡಲು ಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವರ್ಷವೊಂದಕ್ಕೆ 100 ದಿನಗಳ ಕಾಲ ಉದ್ಯೋಗ ದೊರಕಿಸಿಕೊಟ್ಟು ಅವರ ಬದುಕಿಗೆ ಆಸರೆಯಾಗುವ ಮಹತ್ವದ ಯೋಜನೆಯೊಂದು ಸದ್ದಿಲ್ಲದೆ ಮೂಲೆ ಸೇರುತ್ತಿರುವ ಭಾಸವಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಅದನ್ನು ಪುನರ್ ನಿರ್ಮಿಸುವ, ಪುನಃಶ್ಚೇತನಗೊಳಿಸುವ, ನೂರು ದಿನಗಳ ಮಾನವ ದಿನಗಳ ಯೋಜನೆಯೊಂದುೆ ನಿಧಾನವಾಗಿ ಇತಿಹಾಸದ ಪುಟ ಸೇರುತ್ತಿರುವುದು ಪ್ರಜನಾವಂತರಲ್ಲಿ ಆತಂಕ ಉಂಟು ಮಾಡಿದೆ.
2008-2011ರವರೆಗೆ ಜಿಡಿಪಿಯ ಸುಮಾರು 0.4ರಷ್ಟು ಅನುದಾನವನ್ನು ವಾರ್ಷಿಕ ಬಜೆಟ್‌ನಲ್ಲಿ ನಿಗಧಿಪಡಿಸಿ ಅಗತ್ಯಬಿದ್ದರೆ ಕಾಲಾನುಕಾಲಕ್ಕೆ ಇನ್ನೂ ಮುಂದುವರೆಸಲು ಹೆಚ್ಚಿನ ಅನುದಾನವನ್ನು ಎತ್ತಿಡಲಾಗುತ್ತಿತ್ತು. 2023-24ನೇ ಸಾಲಿನ ಬಜೆಟ್ ಅಂಕಿ ಅಂಶಗಳನ್ನು 2020-21ಕ್ಕೆ ಹೋಲಿಸಿದರೆ ಸರಿ ಸುಮಾರು ಅರ್ಧದಷ್ಟು ಮಾvವೇ ಅನುದಾನ ನಿಗದಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮೇಲೆ ಹೇಳಿದ ಇಷ್ಟು ವರ್ಷಗಳಲ್ಲಿ ನರೇಗಾ ಯೋಜನೆಗಾಗಿ ನಿಗದಿಪಡಿಸಿದ ಮೊತ್ತದಲ್ಲಿ ವರ್ಷ ಮುಗಿಯುವುದರ ಒಳಗೆ ಸಾವಿರಾರು ಕೋಟಿ ರೂಗಳ ಬಾಕಿ ಉಳಿಸಿಕೊಂಡು ಆಯಾ ವರ್ಷದ ಅವಧಿಗೆ ಮುಗಿಸಲಾಗುತ್ತಿದ್ದು, ಬಾಕಿ ಹಣವನ್ನು ಮುಂದಿನ ವರ್ಷದ ಬಜೆಟ್‌ನಿಂದ ಪಾವತಿಸಲಾಗುತ್ತದೆ.
ಕರೋನಾ ಮಹಾಮಾರಿ ಹೊಡೆತದಿಂದ ಹಳ್ಳಿಗಳಿಂದ ನಗರಗಳಿಗೆ ಗುಳೆ ಹೋದ ಕೋಟ್ಯಾಂತರ ಸಂಖ್ಯೆಯ ಕಾರ್ಮಿಕರು ಹಳ್ಳಿಗಳಿಗೆ ಹಿಂದಿರುಗಿದರು. ನರೇಗಾ ಯೋಜನೆಯಡಿ ನೋಂದಾಯಿತರಾಗುವ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಅಲ್ಪ ಪ್ರಮಾಣದ ಕಾರ್ಮಿಕರು ನಗರಗಳಿಗೆ ಹಿಂದಿರುಗಿರಬಹುದು. ಆದರೆ ಗ್ರಾಮೀಣ ಪ್ರದೇಶದ ವಿದ್ಯಾವಂತರು ನಗರಗಳಲ್ಲಿನ ಪರಿಸ್ಥಿತಿ ಮತ್ತು ಭವಿಷ್ಯ ಅವಲೋಕಿಸಿ ತಮ್ಮ ತಮ್ಮ ಗ್ರಾಮಗಳಲ್ಲಿಯೇ ಉಳಿದುಬಿಟ್ಟಿದ್ದಾರೆ.
ಕೊರೋನಾ ನಂತರದ ದಿನಗಳನ್ನು ಗಮನಿಸಿದರೆ ಈ ಬೆಳವಣಿಗೆ ಗೋಚರಿಸುತ್ತದೆ. ಮನೆ ಬಿಟ್ಟು ಎಲ್ಲಿಯೂ ಹೊರಗೆ ಹೋಗಲಾಗದ ಕೊರೋನಾ ಸಂಕಷ್ಟದಲ್ಲಿ ಬಹಳಷ್ಟು ಜನ ಹೈರಾಣಾಗಿ ಹೋಗಿದ್ದನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ಹಣ ಗಳಿಸಿ ಹೊಟ್ಟೆ ಹೊರೆಯಲು ಈ ಯೋಜನೆ ಒಂದು ಸಮತೋಲಿತ, ಸಮಾಧಾನಕರ ದಾರಿದೀಪವಾಗಿ ಗೋಚರಿಸಿತು.
ಅಷ್ಟೇ ಅಲ್ಲ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಅಸಮತೋಲನ ನಿವಾರಿಸುವ, ಪುನಃಚ್ಛೇತನ ರೂಪಿಸುವ, ಗ್ರಾಮೀಣ ಆರ್ಥಿಕತೆ ಮತ್ತು ಮಾರುಕಟ್ಟೆಯನ್ನು ಸುಸುಸ್ಥಿತಿಯಲ್ಲಿ ಇಡಲು ಮಹತ್ತರ ಕಾರ್ಯ ಯೋಜನೆಯೂ ಆಯಿತು.
ಈ ಯೋಜನೆ ಕಾಂಗ್ರೆಸ್‌ನ ವಿನಾಶಕಾರಿ ಯೋಜನೆ, ಕೆಲಸಕ್ಕೆ ಬಾರದ ಜನರಿಂದ ಹಳ್ಳ ತೋಡಿಸುವ ಯೋಜನೆ ಎಂದೆಲ್ಲ ಪ್ರಧಾನಿ ನರೇಂದ್ರಮೋದಿಯವರು ಈ ಯೋಜನೆಯ ಬಗ್ಗೆ ವ್ಯಂಗ್ಯವಾಡಿದ್ದುಂಟು. ಯಾರು ಏನೇ ಹೇಳಲಿ ಅಂದಿನ ಸರ್ಕಾರ ಜಾರಿಗೆ ತಂದAತಹ ಮನೆರೇಗಾ ಹಾಗೂ ಆಹಾರ ಸುರಕ್ಷತಾ ಕಾಯ್ದೆ ಕೊರೋನಾ ಕಾಲದಿಂದ ಹಿಡಿದು ಇಲ್ಲಿಯತನಕವೂ ಜನರ ಹಸಿದ ಹೊಟ್ಟೆ ತಣಿಸುವ ಕೆಲಸ ಮಾಡುತ್ತಿರುವುದಂತು ಸತ್ಯ. ಈ ಯೋಜನೆ ಗ್ರಾಮೀಣ ಜನರಿಗೆ ಕೇವಲ ಉದ್ಯೋಗ ದೊರಕಿಸುವ, ಹೊಟ್ಟೆ ತುಂಬಿಸುವ ಕೆಲಸವಾಗಿ ಮಾತ್ರವೇ ಉಳಿಯದೆ ದೇಶಕ್ಕೆ ಸಂಪನ್ಮೂಲ ಹುಟ್ಟಿಹಾಕುವ ಮಹತ್ವದ ಸಾಧನೆ ಮಾಡಿ ತೋರಿಸಿದೆ.
ಇಷ್ಟು ಬೃಹತ್ ಜನ ಸಂಖ್ಯೆ ಇರುವ ಈ ದೇಶದಲ್ಲಿ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ಸಿಗುತ್ತಿಲ್ಲ. ಸರ್ಕಾರವು ಉದ್ಯೋಗ ಸೃಷ್ಟಿಸುವ ಯೋಜನೆಗಳ ಕಡೆಗೆ ಗಮನ ಹರಿಸುತ್ತಿಲ. ಬಹಳಷ್ಟು ಜನ ಇರುವ ಉದ್ಯೋಗ ಕಳೆದುಕೊಂಡು ಅತಂತ್ರರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರಲ್ಲಿ ಒಂದು ಉದ್ಯೋಗಪರ್ವ ಸೃಷ್ಟಿ ಮಾಡುವುದರಲ್ಲಿ ನರೇಗಾ ಯೋಜನೆಯದ್ದು ಬಹುದೊಡ್ಡ ಪಾಲು.
ಸುಮ್ಮನೆ ಕೂರಿಸಿ ಆಹಾರ ಹಾಗೂ ಇತರೆ ಸೌಲಭ್ಯ ಕೊಡುತ್ತಾ ಬಂದಿದ್ದರೆ ದೇಶದ ಅಭಿವೃದ್ಧಿಗಾಗಿ ಇಂತಹ ಉದ್ಯೋಗ ಶಕ್ತಿಯ ಸೃಷ್ಟಿ ಸಾಧ್ಯವಾಗುತ್ತಿರಲಿಲ್ಲ. ನರೇಗಾ ಯೋಜನೆಯಲ್ಲಿ ಭ್ರಷ್ಟಚಾರ, ಅಕ್ರಮಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಈ ದೇಶದಲ್ಲಿ ಅಕ್ರಮಗಳು ನಡೆಯದ, ಭ್ರಷ್ಟಚಾರವಿಲ್ಲದ ಯಾವ ಇಲಾಖೆಗಳು, ಯೋಜನೆಗಳು ಇವೆ.
ಕೋಟಿಗಟ್ಟಲೆ ಅನುದಾನವನ್ನು ಸದ್ದಿಲ್ಲದೆ ನುಂಗಿ ನೀರು ಕುಡಿಯುವ ಇಲಾಖೆಗಳು, ರಾಜಕಾರಣಿಗಳು, ಅಧಿಕಾರಿಗಳು ಇರುವಾಗ ಈ ಯೋಜನೆಯೊಂದರಲ್ಲಿಯೇ ಅಕ್ರಮಗಳು ನಡೆಯುತ್ತಿವೆಯೇ? ಇಂತಹ ಅಕ್ರಮಗಳನ್ನು ತಡೆಯಲು ಕೈಗೊಂಡ ಕ್ರಮಗಳೇನು ಎಂಬುದು ಸಹ ಇಲ್ಲಿ ಮುಖ್ಯ ಅಲ್ಲವೇ? ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಬದಲು ಕೋಟ್ಯಂತರ ಕಾರ್ಮಿಕರ ಶ್ರಮವನ್ನೇ ಹಿಯಾಳಿಸುವುದು,
ಅಲ್ಲಗಳೆಯುವುದು ಸರಿಯೇ?
ಈ ಯೋಜನೆಯನ್ನು ಹೀಗೆ ಹಳ್ಳಹಿಡಿಸಿ ಪರ್ಯಾಯವಾದ ಮತ್ಯಾವ ಯೋಜನೆಯನ್ನು ಸರ್ಕಾರ ಜಾರಿಗೆ ತರಲಿದೆ ಎಂಬುದನ್ನು ಕಾಣೆವು. ಬಡವರಿಗೆ, ದೀನದಲಿತರಿಗೆ ಅನುಕೂಲ ಕರವಾಗಿರುವ ಈ ಯೋಜನೆಯನ್ನು ಹಾಳುಗೆಡವುವ ಹುನ್ನಾರ ಇಲ್ಲಿ ಸ್ಪಷ್ಟವಾಗಿ ಭಾಸವಾಗುತ್ತಿದೆ. ಉದ್ಯೋಗಗಳು ಕ್ಷೀಣಿಸುತ್ತಿರುವ ಈ ದಿನಮಾನಗಳಲ್ಲಿ ವಿಶ್ವಾದ್ಯಂತ ಉದ್ಯೋಗ ಕಳೆದುಕೊಳ್ಳುವವರು ಹೆಚ್ಚುತ್ತಿದ್ದಾರೆ. ದಿನ ಬೆಳಗ್ಗೆ ಮಾಧ್ಯಮಗಳಲ್ಲಿ ಇದೇ ಸುದ್ದಿಯನ್ನು ಓದುತ್ತಿದ್ದೇವೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಈ ಆಘಾತಕಾರಿ ನಡೆ ಮತ್ತಷ್ಟು ಆತಂಕವನ್ನು ಸೃಷ್ಟಿಸದೇ ಇರಲಾರದು.ನರೇಗಾ ಯೋಜನೆಯಿಂದ ದುಡಿಯುವ ಕೈಗಳಿಗೆ ಕೇವಲ ಹೊಟ್ಟೆ ಬಟ್ಟೆಗೆ ವ್ಯವಸ್ಥೆಯಾಗಲಿದೆಯೇ ಹೊರೆತು ಅವರ ದುಬಾರಿ ಆಸ್ಪತ್ರೆ, ಆರೋಗ್ಯ ಖರ್ಚುಗಳಿಗಾಗಲಿ ಸಾಕಾಗದು. ನರೇಗಾ ಯೋಜನೆಯ ಹಣದಿಂದ ಯಾವ ಆಸ್ತಿ ಇತ್ಯಾದಿ ಖರೀದಿಗಳು ಸಾಧ್ಯವಿದೆಯೇ,,ಈ ಬಡ ವರ್ಗ ಕನಿಷ್ಠಪಕ್ಷ ಹೊಟ್ಟೆ ಬಟ್ಟೆಯ ಸೌಲಭ್ಯಕ್ಕೂ ಅರ್ಹರಲ್ಲವೇ? ಅವರ ಹಕ್ಕುಗಳನ್ನೇ ಕಿತ್ತುಕೊಳ್ಳುವಂತಹ ವ್ಯವಸ್ಥೆಗೆ ಇಳಿದರೆ ಈ ಜನರ ಬವಣೆಯನ್ನು ಯಾರು ಕೇಳಬೇಕು.
ಒಂದುಕಡೆ ಇಂತಹ ಜನಕಲ್ಯಾಣ ಯೋಜನೆಗಳಿಗೆ ಕೊಕ್ಕೆ ಬೀಳುತ್ತಿದೆ. ಮತ್ತೊಂದು ಕಡೆ ಕಾರ್ಪೋರೇಟ್ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಘೋಷಿಸಲಾಗುತ್ತದೆ. ಸಾಲಮನ್ನಾ, ಸೌಲಭ್ಯಗಳು ಹೊಟ್ಟೆ ತುಂಬಿದ ಕೆಲವೆ ವ್ಯಕ್ತಿಗಳಿಗೆ ಸೀಮಿತವಾಗುತ್ತಿವೆಯೇ ಹೊರತು ಇಂತಹ ಬಡ ಜನರಿಗೆ ಅನುಕೂಲವಾಗುತ್ತಿಲ್ಲ.
ಸರ್ಕಾರದ ಸೌಲಭ್ಯಗಳು ಹೊಟ್ಟೆ ತುಂಬಿದವರಿಗೆ ಇನ್ನೂ ಹೊಟ್ಟೆ ತುಂಬಿಸುವ ಯೋಜನೆಗಳಾಗಿ ಪರಿವರ್ತಿತವಾಗುತ್ತಿವೆ. ಸರ್ಕಾರ ಕಾರ್ಪೋರೇಟ್ ಕುಳಗಳಾದ ಅದಾನಿಯಂತಹವರು ಹತ್ತಾರು ಹಗರಣಗಳಲ್ಲಿ ಸಿಲುಕಿ ಸರ್ಕಾರದ ನೆರಳಿನಲ್ಲೇ ಬದುಕುತ್ತಿದ್ದಾರೆ. ದೇಶದ ಜನರ ಹೂಡಿಕೆಯನ್ನು ಕರಗಿಸುತ್ತಿದ್ದಾರೆ. ಹಾಗಿದ್ದರೂ ಸರ್ಕಾರಗಳು ಮಾತ್ರ ಇಂತಹವರನ್ನು ಸಂರಕ್ಷಿಸಿಕೊಂಡೆ ಬಂದಿದೆ.
ಬಡವರು ಕಡುಬಡವರಾಗಲು, ಶ್ರೀಮಂತರು ಅತಿಶ್ರೀಮಂತರಾಗುವ ವಾತಾವರಣ ಸೃಷ್ಟಿಸಲಾಗುತ್ತಿದೆಯೇ? ಒಟ್ಟಾರೆ ಹೇಳುವುದಾದರೆ ದೇಶದಲ್ಲಿ ಒಂದು ದೊಡ್ಡ ಪ್ರಮಾಣದಲ್ಲಿರುವ ಶ್ರಮಿಕ ವರ್ಗಕ್ಕೆ ಉದ್ಯೋಗ ನೀಡುವ ಇದಕ್ಕಿಂತ ಮಹತ್ವದ ಯೋಜನೆ ಮತ್ತೊಂದಿಲ್ಲ. ಒಂದು ಕಲ್ಯಾಣ ಯೋಜನೆಯಾಗಿ ರೂಪುಗೊಂಡ ಯೋಜನೆಯನ್ನು ಇನ್ನಿಲ್ಲದಂತೆ ಮುಗಿಸುವ ಹುನ್ನಾರ ನಡೆಯುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ