ಬೆಂಗಳೂರು :
ಕೋವಿಡ್, ಪ್ರವಾಹದಂತಹ ಸವಾಲುಗಳ ನಡುವೆಯೂ ಕರ್ನಾಟಕ ಸರ್ಕಾರ ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ 15 ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹಿಸಿರುವುದು ರಾಜ್ಯದ ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ತೆರಿಗೆ ದಕ್ಷತೆ, ತೆರಿಗೆ ವಂಚಕರನ್ನು ಪತ್ತೆ ಮಾಡುವುದರ ಜತೆಗೆ ಎಲ್ಲ ಬಾಬ್ತುಗಳಿಂದ ಬರಬೇಕಾದ ತೆರಿಗೆ ಸಂಗ್ರಹಕ್ಕೆ ವಿಶೇಷ ಗಮನ ಹರಿಸಿದ್ದರಿಂದ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ತಿಳಿಸಿದರು.
ರಾಜ್ಯಪಾಲರ ಭಾಷಣದಲ್ಲಿ ತಿಳಿಸಿರುವ ಸಂಗತಿಗಳನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ರಾಜ್ಯಪಾಲರು ಸತ್ಯ ಮತ್ತು ವಾಸ್ತವಾಂಶದ ಆಧಾರದ ಮೇಲೆ ಭಾಷಣ ಮಾಡಿದ್ದಾರೆ. ರಾಜಕಾರಣ ಇದರಲ್ಲಿ ಇಲ್ಲ ಎಂದು ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.
ಕಳೆದ ಐದು ವರ್ಷಗಳಲ್ಲಿ ಎರಡು ಸರ್ಕಾರಗಳು ಆಡಳಿತ ನಡೆಸಿದವು. ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲಾಯಿತು. ಆರ್ಥಿಕ ಹಿಂಜರಿತ, ಆರೋಗ್ಯದ ಸವಾಲು, ಎರಡು ಬಾರಿ ಪ್ರವಾಹ. ಹೀಗೆ, ಒಂದು ರೀತಿಯ ಸವಾಲುಗಳ ಮಧ್ಯೆ ನಾನು ಮುಖ್ಯಮಂತ್ರಿಯಾದೆ ಎಂದರು.
ಆರ್ಥಿಕ ಮತ್ತು ಸಾಮಾಜಿಕ ಚಕ್ರ ನಿರಂತರವಾಗಿ ತಿರುಗುತ್ತಿರಬೇಕು. ಇದು ನಿಂತರೆ ಮರು ಆರಂಭಕ್ಕೆ ಬಹಳ ಯತ್ನ ಮಾಡಬೇಕಾಗುತ್ತದೆ. ಶಾಲೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯ ಗತಿ ನಾಡಿಗೆ ಬರುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ತಮ್ಮ ಸರ್ಕಾರ ಕೋವಿಡ್‌ನಿಂದಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದವು. ಆಮ್ಲಜನಕದ ಆಕ್ಸಿಜನ್ ಬೇರೆ ಬೇರೆ ರಾಜ್ಯಗಳಲ್ಲಿ ಬಹಳ ಕಷ್ಟವಿತ್ತು. ಜನ ರಸ್ತೆಯ ಮೇಲೆ ಪರದಾಡುತ್ತಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ಸಿಜನ್ ತಯಾರಕರನ್ನು ಕರೆಸಿ ಉತ್ಪಾದನೆ ಹೆಚ್ಚಿಸಿದರು. ಕರ್ನಾಟಕಕ್ಕೆ ಗರಿಷ್ಟ ಮಿತಿಯಲ್ಲಿ ಆಕ್ಸಿಜನ್ ಕೊಟ್ಟೆವು. ಆನೇಕರು ಸಂಕಷ್ಟದಲ್ಲಿದ್ದಾಗ ಸ್ಪಂಧಿಸಿದಾಗಲೇ ಸರ್ಕಾರದ ಜೀವಂತಿಕೆ ಗೊತ್ತಾಗುವುದು. ಆರೋಗ್ಯ ಸಿಬ್ಬಂದಿ, ಪೊಲೀಸ್ ಸೇರಿದಂತೆ ಎಲ್ಲರೂ ತ್ವರಿತವಾಗಿ ಕೆಲಸ ಮಾಡಿದರು. ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಲಸಿಕಾಕರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು. ಹೀಗಾಗಿ ನಾಲ್ಕನೇ ಅಲೆಯಿಂದ ನಮ್ಮ ದೇಶಕ್ಕೆ ಯಾವುದೇ ಧಕ್ಕೆಯಾಗಲಿಲ್ಲ. ನಮ್ಮ ವಿಜ್ಞಾನಿಗಳ ಸಾಧನೆಯ ಮೇಲೆ ನಂಬಿಕೆ ಇಟ್ಟು ಮೋದಿ ಹುರಿದುಂಬಿಸಿದ್ದು ಶ್ರೇಯಸ್ಸಿನ ಕೆಲಸ.ಜಿಎಸ್‌ಟಿ ಪರಿಹಾರ ಧನವಾಗಿ ಹದಿನೆಂಟು ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡಿದೆ.
ರೈತ ಶಕ್ತಿ ಯೋಜನೆಯಿಂದ 53 ಲಕ್ಷ ರೈತರಿಗೆ 383 ಕೋಟಿ ರೂ. ವಿವಿಧ ರೂಪದ ಪರಿಹಾರ ಒದಗಿಸಲಾಗಿದೆ. ಕಳೆದ ವರ್ಷ 20 ಸಾವಿರ ರೈತರಿಗೆ ಸಾಲ ನೀಡಿದ್ದೇವೆ. ಮಾರ್ಚ್ ಅಂತ್ಯದ ಒಳಗೆ 30 ಸಾವಿರ ರೈತರಿಗೆ ಸಾಲ ವಿತರಣೆ ಮಾಡುವ ಗುರಿ ಇದೆ ಎಂದರು.
ಯಶಸ್ವಿನಿ ಯೋಜನೆಗೆ 300 ಕೋಟಿ ಮೀಸಲಿಟ್ಟು, ರೈತರಿಗಾಗಿ ಈ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ. ಆಹಾರ ಉತ್ಪಾದನಾ ಘಟಕಗಳಿಗೆ ಉತ್ತೇಜಿಸಲು ಸರಿಯಾದ ಮಾರುಕಟ್ಟೆ ಕಲ್ಪಿಸಲಾಗಿದೆ. ರೈತರಿಗೋಸ್ಕರ, ರೈತರಿಂದ ದೊಡ್ಡ ಪ್ರಮಾಣದ ಮಾರುಕಟ್ಟೆ ಈ ವಲಯದಲ್ಲಿ ಸೃಜನೆಯಾಗಿದ್ದು, ಸರ್ಕಾರದ ಪ್ರೋತ್ಸಾಹದಿಂದ ಇದು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿದೆ ಎಂದು ಅಂಕಿ- ಅಂಶ ಸಹಿತ ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ