ಚಿಕ್ಕಬಳ್ಳಾಪುರ: ಇಳಿದ ರೇಷ್ಮೆ ಗೂಡಿನ ದರ, ಸಂಕಷ್ಟದಲ್ಲಿ ಬೆಳೆಗಾರ

ಚಿಕ್ಕಬಳ್ಳಾಪುರ:

ಕೆಂಪೇಗೌಡ ಎನ್ ವೆಂಕಟೇನಹಳ್ಳಿ

    ಕಚ್ಚಾ ರೇಷ್ಮೆ ದರ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ದರವು ಕುಸಿತಕ್ಕೆ ಕಾರಣವಾಗಿ ರುವುದರಿಂದ ರೇಷ್ಮೆ ಕೃಷಿಯನ್ನು ನಂಬಿದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

   ಕೋವಿಡ್ ನಂತರದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಬೆಲೆ ಸ್ಥಿರವಾಗಿದ್ದರಿಂದ ರೇಷ್ಮೆ ಕೃಷಿ ಲಾಭದಾಯಕ ಬೆಳೆ ಎನಿಸಿಕೊಂಡಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಇದೀಗ ರೇಷ್ಮೆ ಗೂಡಿನ ದರವು ಇಳಿಕೆಯಾಗಿರುವುದರಿಂದ ಬೆಳೆಗಾರರ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.

ಇಳಿಕೆಯತ್ತ ಗೂಡಿನ ದರ:

    ಕಳೆದ ಹದಿನೈದು ದಿನಗಳ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಬೇಡಿಕೆಯ ಜೊತೆಗೆ ಬಂಪರ್ ಬೆಲೆ ಇತ್ತು. ಪ್ರತಿ ಕೆ.ಜಿ ಗೂಡು 700 ರಿಂದ 850 ರೂ.ವರೆಗೆ ಆಸುಪಾಸು ಮಾರಾಟವಾಗುತ್ತಿತ್ತು . ಆದರೆ, ಈಗ ಗೂಡಿನ ದರ ಇಳಿಕೆಯತ್ತ ಸಾಗಿದ್ದು, ಪ್ರತಿ ಕೆ.ಜಿ ಗೂಡು 350 ರಿಂದ 500 ರೂ.ವರೆಗೆ ಮಾರಾಟವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಬೆಳೆಗಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕವಿದೆ.

ನಿರ್ವಹಣೆಗೆ ದುಬಾರಿ ವೆಚ್ಚ:

     ಒಂದು ಕಡೆ ರೇಷ್ಮೆ ಗೂಡಿನ ಬೆಲೆ ಕುಸಿತವಾದರೆ ಮತ್ತೊಂದು ಕಡೆ ಹಿಪ್ಪುನೇರಳೆ ಸೊಪ್ಪು ದುಬಾರಿ ಯಾಗಿದೆ, ಅಲ್ಲದೇ ಚಾಕಿ ಹುಳವಿನ ಬೆಲೆ, ಕೆಲಸಗಾರರ ಕೂಲಿ, ಹುಳ ಮನೆ ಹಾಗೂ ಹಿಪ್ಪುನೇರಳೆಗೆ ಬಳಸುವ ರಾಸಾಯನಿಕ ಇನ್ನಿತರೆ ನಿರ್ವಹಣಾ ವೆಚ್ಚವೂ ಗಗನಕ್ಕೇರಿದೆ. ಹೀಗಾಗಿ ರೇಷ್ಮೆ ಗೂಡು ಉತ್ಪಾದಿಸಲು ಬೆಳೆಗಾರರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೇಷ್ಮೆ ಗೂಡಿನ ಬೆಲೆ ಇಳಿಕೆಯಾಗಿರುವುದು ಬೆಳೆಗಾರರು ನಷ್ಟದ ಹಾದಿ ಹಿಡಿಯುವಂತಾಗಿದೆ.

ಸರ್ಕಾರಕ್ಕೆ ಬೆಳೆಗಾರರ ಒತ್ತಾಯ:

    ಇತ್ತೀಚಿಗೆ ಲಾಭದಾಯಕ ಬೆಳೆಯಾಗಿ ಗುರ್ತಿಸಿಕೊಂಡಿದ್ದ ರೇಷ್ಮೆ ಬೆಳೆ ಇದೀಗ ರೇಷ್ಮೆ ಗೂಡಿನ ದರ ಇಳಿಕೆಯಾಗಿರುವುದರಿಂದ ಬೆಳೆಗಾರರು ನಷ್ಟಕ್ಕೆ ಸಿಲುಕುತ್ತಿದ್ದು, ರೇಷ್ಮೆ ಕೃಷಿ ಮಾಡಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಸರ್ಕಾರ ರೇಷ್ಮೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿ, ಮತ್ತೆ ರೇಷ್ಮೆ ಗೂಡಿನ ಬೆಲೆ ಉತ್ತಮ ಸ್ಥಿತಿಗೆ ತಲುಪಲು ಬೇಕಾದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಳೆಗಾರರು ಆಗ್ರಹಿಸಿದ್ದಾರೆ.

ವಾತಾವರಣದಲ್ಲೂ ಎಫೆಕ್ಟ್

     ಪ್ರಸ್ತುತ ವಾತಾವರಣದಲ್ಲಿ ಚಳಿ ಮತ್ತು ಬಿಸಿಲಿನಿಂದ ಕೂಡಿರುವುದರಿಂದ ರೇಷ್ಮೆ ಹುಳುವಿನಲ್ಲಿ ನಾನಾ ರೋಗ ಬಾಧೆ ಕಾಣಿಸಿಕೊಳ್ಳುತ್ತಿದೆ. ಹಾಲು ತೊಂಡೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೇಷ್ಮೆ ಬೆಳೆ ಸರಿಯಾಗಿ ಕಚ್ಚುತ್ತಿಲ್ಲ. ಒಂದು ಕಡೆ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ದರ ಕುಸಿತವಾಗಿದೆ, ಮತ್ತೊಂದು ಕಡೆ ಬೆಳೆ ಕಚ್ಚದಿರುವುದು ಬೆಳೆಗಾರರನ್ನು ಚಿಂತೆಗೆ ದೂಡಿದೆ.

ಹಿಪ್ಪುನೇರಳೆ ಸೊಪ್ಪು ಬೆಲೆ ದುಬಾರಿ

        ಪ್ರಸ್ತುತ ರೇಷ್ಮೆಹುಳ ಸಾಕಾಣೆದಾರರಿಗೆ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪಿಗಾಗಿ ಬೆಳೆಗಾರರು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಹಿಪ್ಪುನೇರಳೆ ಸೊಪ್ಪಿನ ಮೂಟೆ 800 ರೂ, ದರವಿದ್ದು, ಬೇಡಿಕೆಯೂ ಇದೆ. ಇದರಿಂದ ರೇಷ್ಮೆ ಗೂಡು ಉತ್ಪಾದಿಸಲು ಹಿಪ್ಪುನೇರಳೆ ಸೊಪ್ಪಿಗಾಗಿಯೇ ಬೆಳೆಗಾರರು ದುಬಾರಿ ಹಣ ಖರ್ಚು ಮಾಡುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link