ಕಾಮಗಾರಿ ಫೂರ್ಣಗೊಂಡರೂ ಬಿಡುಗಡೆಯಾಗದ ಹಣ :ಕೆಂಪಣ್ಣ

ಬೆಂಗಳೂರು

     ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆಯಾಗಿಲ್ಲ. ಒಟ್ಟು 22,000 ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಕಿ ಇದ್ದು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ಒತ್ತಾಯಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾನತಾಡಿದ ಅವರು, ಲೋಕೋಪಯೋಗಿ, ನೀರಾವರಿ, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಈ ಮೂರೂ ಇಲಾಖೆಗಳಲ್ಲಿ ಈ ಹಿಂದೆ ಪೂರ್ಣಗೊಳಿಸಿದ ಕಾಮಗಾರಿಗಳ ಬಾಕಿ 10,000 ಕೋಟಿ ರೂ ಮೀರುತ್ತದೆ. ಲೋಕೋಪಯೋಗಿ ಇಲಾಖೆಯೊಂದರ್ಲಿ 5000 ಕೋಟಿ ರೂ, ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ 8000 ಕೋಟಿ ರೂ, ಬಿಬಿಎಂಪಿ 3000 ಕೋಟಿ ರೂ ಬಾಕಿ ಉಳಿಸಿಕೊಂಡಿದೆ ಎಂದು ಹೇಳಿದರು.

     ಹಣ ಬಿಡುಗಡೆಯಲ್ಲಿ ಜ್ಯೇಷ್ಠತೆ ವಿಧಾನ ಪಾಲಿಸುತ್ತಿಲ್ಲ. ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸೂಚಿಸುವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆಯಾಗುತ್ತಿದೆ. ಲಂಷ ರುಷುವತ್ತುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷಗಳಾದರೂ ಹಣ ಬಿಡುಗಡೆ ಮಾಡಲು ಸರಕಾರ ಮೀನಾಮೇಷ ಎಣಿಸುತ್ತಿದೆ.

     ಹಣ ಕೊಟ್ಟವರಿಗೆ, ಸಚಿವರು, ಶಾಸಕರ ಹಿಂಬಾಲಕರಿಗೆ ಕಾಮಗಾರಿ ಪೂರ್ಣಗೊಳಿಸಿದ ಎರಡು ತಿಂಗಳ ಒಳಗಾಗಿ ಹಣ ಬಿಡುಗಡೆ ಮಾಡುತ್ತಿದೆ. ಶೇ.80ರಷ್ಟು ಮೊತ್ತವನ್ನು ಹಿರಿತನದ ಆಧಾರದ ಮೇಲೆ ಮತ್ತು ಶೇ.20ರಷ್ಟು ಮೊತ್ತವನ್ನು ವಿವೇಚನಾ ಕೋಟಾದಡಿಯಲ್ಲಿ ಬಿಡುಗಡೆ ಮಾಡಬೇಕು ಎಂಬ ನಿಯಮಗಳಿವೆ. ಆದರೆ ಇದು ವಾಸ್ತವದಲ್ಲಿ ತಿರುವು ಮರೆವು ಆಗಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದಾಗ ಬಾಕಿ ಮೊತ್ತ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

     ಬಾಕಿ ಮೊತ್ತ ಬಿಡುಗಡೆಗೆ ಲಂಚ ಕೇಳಲಾಗುತ್ತಿದ್ದು, ಬಾಕಿ ಕೊಡದೇ ಹೋದರೆ ಇಲ್ಲ ಸಲ್ಲದ ಕಾನೂನು ಕಟ್ಟಳೆಗಳ ಪಾಠ ಮಾಡುತ್ತಾರೆ. ಪ್ರಭಾವ ಬೀರುವವರಿಗೆ ಅನಾಯಾಸವಾಗಿ ಬಿಲ್ ಮಂಜೂರಾಗುತ್ತದೆ. ಪ್ರಾಮಾಣಿಕ ಮತ್ತು ನಿಷ್ಠಾವಂತ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಅದರಲ್ಲೂ ಎರಡು ಮತ್ತು ಮೂರನೇ ಹಂತದ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕೆಲಸ ಮಾಡುವ ಗುತ್ತಿಗೆದಾರರಿಗೆ ತೀವ್ರ ಅನ್ಯಾಯವಾಗುತ್ತಿದೆ ಎಂದರು.

    ಕೆಲವು ಜಿಲ್ಲೆಗಳಲ್ಲಿ ಹಣ ಬಿಡುಗಡೆಗೆ ಸರಕಾರದ ಖಾತೆಗಳಿಗೆ ಹಣ ಸಂದಾಯವಾಗಿದೆ. ಆದರೂ ಅಧಿಕಾರಿಗಳು ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ?. ಯಾವ ಕಾರಣಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಎರಡು ವರ್ಷಗಳಿಂದ ಬಾಕಿ ಉಳಿಸಿಕೊಳ್ಳುವ ಪರಿಪಾಠ ಹೆಚ್ಚಾಗಿದೆ.

    ಸರಕಾರ ಹಂತಹಂತವಾಗಿ ಹಿರಿತನದ ಆಧಾರದ ಮೇಲೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡುವಂತೆ ವಿನಂತಿಸುತ್ತೇವೆ. ಒಂದು ವೇಳೆ ಸರಕಾರ ಬಾಕಿ ಮೊತ್ತ ಪಾವತಿಸಲು ಕ್ರಮ ಕೈಗೊಳ್ಳದಿದ್ದರೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಮತ್ತು ಅಂತಿಮವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

    ಚುನಾವಣೆಗೆ ಯಾವುದೇ ಸಂದರ್ಭದಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ. ಒಮ್ಮೆ ಚುನಾವಣೆ ಘೋಷಣೆ ಆದರೆ ಸಬೂಬುಗಳನ್ನು ಹೇಳಲು ಸರಕಾರಕ್ಕೆ ಅವಕಾಶಗಳು ಲಭ್ಯವಾಗುತ್ತವೆ. ಆದ್ದರಿಂದ ಅಧಿಸೂಚನೆಗೂ ಮುನ್ನ ತ್ವರಿತವಾಗಿ ಗುತ್ತಿಗೆದಾರರ ಬಾಕಿ ಮೊತ್ತವನ್ನು ಹಿರಿತನದ ಆಧಾರದಲ್ಲಿ ಬಿಡುಗಡೆ ಮಾಡಬೇಕು ಎಂದು ಕೆಂಪಣ್ಣ ಆಗ್ರಹಿಸಿದರು.

     ಈ ಹಿಂದೆ ಕೊರೋನಾ ನೆಪವೊಡ್ಡಿ ಎರಡು ವರ್ಷಗಳಿಂದ ಯಾವುದೇ ಇಲಾಖೆಯಿಂದಲೂ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಿಲ್ಲ. ಆಗ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಂಘ ಯಾವುದೇ ರೀತಿಯಲ್ಲಿ ಒತ್ತಾಯ ಮಾಡಲಿಲ್ಲ. ಹೊಸ ತಂತ್ರಜ್ಞಾನ ರೂಪಿಸಿ: ಕಾಮಗಾರಿಗಳು ಪೂರ್ಣಗೊಂಡ ನಂತರ ಬಿಲ್ ಪಾವತಿಗೆ ಹೊಸ ತಂತ್ರಜ್ಞಾನ ಒಳಗೊಂಡ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಮತ್ತೊಮ್ಮೆ ಸರಕಾರವನ್ನು ಆಗ್ರಹಿಸುತ್ತೇವೆ. ಆಯಾ ಇಲಾಖೆಗಳ ಕಚೇರಿಗಳಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ನಾಮ ಫಲಕದಲ್ಲಿ ಹಾಕಬೇಕು.

    ಎಷ್ಟು ಮೊತ್ತ ಬಾಕಿ ಇದೆ, ಎಷ್ಟು ಹಣ ಬಿಡುಗಡೆ ಮಾಡಲಾಗುತ್ತಿದೆ ಎಂಬ ವಿವರಗಳನ್ನು ನೀಡಬೇಕು. ಆಗ ಮಾತ್ರ ಪಾರದರ್ಶಕತೆ ತರಲು ಸಾಧ್ಯ. ಎಲ್ಲ ಇಲಾಖೆಗಳಲ್ಲಿ ಪೂರ್ಣಗೊಳಿಸಿದ, ಚಾಲ್ತಿಯಲ್ಲಿರುವ ಮತ್ತು ಮುಂಬರುವ ಕಾಮಗಾರಿಗಳ ಮೊತ್ತದ ಅಂದಾಜು ಪಟ್ಟಿ ತಯಾರಿಸಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸುವುದು ಉತ್ತಮ. ಅನುದಾನದ ಲಭ್ಯತೆ ಆಧರಿಸಿ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿದರೆ ಸರಕಾರ ಮತ್ತು ಗುತ್ತಿಗೆದಾರರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಸರಕಾರಕ್ಕೂ ಹೊರೆ ತಪುö್ಪತ್ತದೆ ಎಂದರು.

     ಗುತ್ತಿಗೆದಾರರ ಬಳಿ ಹಣದ ಮಂತ್ರದಂಡ ಇಲ್ಲ. ಎಲ್ಲ ವೃತ್ತಿಗಳಂತೆ ಗುತ್ತಿಗೆದಾರ ಕೆಲಸವೂ ಒಂದಾಗಿದೆ. ಗುತ್ತಿಗೆದಾರರು ಬ್ಯಾಂಕ್ ಮತ್ತು ಖಾಸಗಿಯವರಿಂದ ಸಾಲ ತಂದು ಬಡ್ಡಿ ಕಟ್ಟುತ್ತಿರುತ್ತಾರೆ. ಕಚ್ಚಾವಸ್ತುಗಳ ಪೂರೈಕೆದಾರರಿಗೆ, ಕಾರ್ಮಿಕರಿಗೆ ವೇತನ ಪಾವತಿಸಲಾಗುತ್ತಿದೆ. ಎರಡು ಮೂರು ವರ್ಷಗಳ ಕಾಲ ಬಾಕಿ ಉಳಿಸಿಕೊಂಡರೆ ಗುತ್ತಿಗೆದಾರರು ಬದುಕುವುದಾದರೂ ಹೇಗೆ?. ಸಾಲಗಾರರ ಕಾಟ ತಡೆಯಲಾರದೆ, ಕಮೀಷನ್ ಕೊಡಲಾಗದೆ ಸಮಾಜಕ್ಕೆ ಅಂಜಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಮನೆ ಆಸ್ತಿ, ಪಾಸ್ತಿ ಮಾರಾಟ ಮಾಡಿಕೊಂಡು ಬೀದಿ ಪಾಲಾಗಿರುವ ಉದಾಹರಣೆಗಳು ಇವೆ ಎಂದು ಕಳವಳ ವ್ಯಕ್ತಪಡಿಸಿದರು.

     ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಉಪಾಧ್ಯಕ್ಷ ಆರ್. ಅಂಬಿಕಾಪತಿ, ಸಂಘಟನಾ ಕಾರ್ಯದರ್ಶಿ ಹನುಮಂತಯ್ಯ, ಸಂಘಟನಾ ಕಾರ್ಯದರ್ಶಿ ಎಂ.ಎಚ್. ಯತಿರಾಜ್ ಹಾಗೂ ಜಂಟಿ ಕಾರ್ಯದರ್ಶಿ ರಮೇಶ್ ಎಂ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link