ಮುಂಬೈ:
ಮಹಾರಾಷ್ಟ್ರದಲ್ಲಿ ದೆಹಲಿ ಮಾದರಿಯಲ್ಲಿ ಹೇಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು 55 ವರ್ಷದ ಮಹಿಳೆಯೊಬ್ಬರನ್ನು ಆಕೆಯ 23 ವರ್ಷದ ಮಗಳು ಹತ್ಯೆ ಮಾಡಿದ್ದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯಲ್ಲಿಟ್ಟುಕೊಂಡಿದ್ದ ಭಿಭತ್ಸ ಘಟನೆ ಮುಂಬೈ ನಲ್ಲಿ ವರದಿಯಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2022 ರ ಡಿಸೆಂಬರ್ ನಲ್ಲಿ ಮಹಿಳೆಯ ಹತ್ಯೆ ನಡೆದಿದೆ. ಅಂದಿನಿಂದ ಆಕೆಯ ದೇಹದ ತುಂಡುಗಳನ್ನು 23 ವರ್ಷದ ಮಹಿಳೆ ತನ್ನ ಕಪಾಟು ಹಾಗೂ ನೀರಿನ ಟ್ಯಾಂಕ್ ನಲ್ಲಿ ಇಟ್ಟಿದ್ದಳು ಎಂಬ ಮಾಹಿತಿ ಬಹಿರಂಗವಾಗಿದೆ.
ಇಷ್ಟು ತಿಂಗಳವರೆಗೆ ದೇಹದ ತುಂಡುಗಳನ್ನು ಹೇಗೆ ಸಂರಕ್ಷಿಸಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶವದ ಹೆಚ್ಚು ಕೊಳೆತ ಕೆಲವು ಭಾಗಗಳನ್ನು ಕಬೋರ್ಡ್ನೊಳಗೆ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಇರಿಸಲಾಗಿತ್ತು. ಉಳಿದ ಭಾಗಗಳನ್ನು ನೀರಿನ ಟ್ಯಾಂಕ್ ನಲ್ಲಿ ಹಾಕಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಶವಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಡಿಸೆಂಬರ್ 2022 ರಲ್ಲಿ ಮಹಿಳೆಯ ಕೊಲೆಯಾಗಿರುವುದು ಕಂಡುಬಂದಿದೆ. ಕೊಲೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ